fashion img

ಕಾರ್ಯಕ್ರಮಗಳ ವರದಿ

ಕರ್ನಾಟಕ ಸಂಘದ ಕಾರ್ಯಕ್ರಮಗಳ ವರದಿ.೨೦೧೨-೨೦೧೩

ಕರ್ನಾಟಕ ಪತ್ರಾಗಾರ ಇಲಾಖೆ ಬೆಂಗಳೂರು, ಶಾಂತಿ ಕಲಾ ವಿಜ್ಞಾನ ಮತ್ತು ವಾಣಿಜ್ಯ ಕಾಲೇಜು ಮಳವಳ್ಳಿ ಇವರ ಸಹಯೋಗದೊಡನೆ ಮಳವಳ್ಳಿಯ ಶಾಂತಿ ಕಾಲೇಜಿನಲ್ಲಿ ದಿನಾಂಕ : ೨೭-೨೮ ಸೆಪ್ಪೆಂಬರ್ ೨೦೧೨ರ ೨ ದಿನಗಳು ``ಗಂಗರು: ಚರಿತ್ರೆ ಮತ್ತು ಕೊಡುಗೆಗಳು’’ ಎಂಬ ರಾಜ್ಯಮಟ್ಟದ ವಿಚಾರ ಸಂಕಿರಣವನ್ನು ಹಮ್ಮಿಕೊಳ್ಳಲಾಗಿತ್ತು. ಈ ಎರಡು ದಿನಗಳು ನಾಡಿನ ಹಲವಾರು ಇತಿಹಾಸ ತಜ್ಞರು ಕಾರ್ಯಕ್ರಮದಲ್ಲಿ ಭಾಗವಹಿಸಿ ಹಲವಾರು ವಿಷಯಗಳ ಮೇಲೆ ಪ್ರಬಂಧವನ್ನು ಮಂಡಿಸಿದರು.

ತಿಂಗಳ ಉಪನ್ಯಾಸಮಾಲೆಯ ಅಡಿಯಲ್ಲಿ ೨೯-೦೯-೨೦೧೨ರಂದು ಡಾ. ಎಂ.ಎ.ಜಯಚಂದ್ರ ವಡ್ಡಾರಾಧನೆ ಕೃತಿಯ ಬಗ್ಗೆ ಉಪನ್ಯಾಸ ನೀಡಿದರು.

ದಿನಾಂಕ : ೦೧-೧೦-೨೦೧೨ರಂದು ಕನ್ನಡ ಪುಸ್ತಕ ಪ್ರಾಧಿಕಾರ ಹಾಗೂ ಭಾರತಿ ಕಾಲೇಜು ಕೆ.ಎಂ.ದೊಡ್ಡಿ ಇವರ ಸಹಯೋಗದೊಡನೆ ಭಾರತೀ ಕಾಲೇಜಿನ ವಿದ್ಯಾರ್ಥಿಗಳಿಗಾಗಿ ಪ್ರಾಚೀನ ಕಾವ್ಯ: ರಸಗ್ರಹಣ ಶಿಬಿರವನ್ನು ಏರ್ಪಡಿಸಲಾಗಿತ್ತು. ಈ ಶಿಬಿರದಲ್ಲಿ ಡಾ.ಪದ್ಮಾಶೇಖರ್, ಡಾ.ಎಚ್.ಎಲ್.ಮಲ್ಲೇಶ್‍ಗೌಡ, ಡಾ.ಮ.ವರದರಾಜು, ಡಾ.ಪಿ.ಬೆಟ್ಟೇಗೌಡ, ಡಾ.ರಾಗೌ ಮುಂತಾದ ವಿದ್ವಾಂಸಕರು ಪ್ರಾಚೀನ ಕಾವ್ಯಗಳ ಮಹತ್ವವನ್ನು ಕುರಿತು ಪ್ರಬಂಧಗಳನ್ನು ಮಂಡಿಸಿದರು.

ದಿನಾಂಕ : ೧೯-೧೦-೨೦೧೨ರಂದು ಮಂಡ್ಯದ ಮಹಿಳಾ ಕಾಲೇಜಿನಲ್ಲಿ ಕಾಲೇಜು ವಿದ್ಯಾರ್ಥಿಗಳಲ್ಲಿ ಕನ್ನಡ ಜಾಗೃತಿ ಎಂಬ ಸಮಾವೇಶವನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹಾಗೂ ಮಂಡ್ಯ ಮಹಿಳಾ ಸರ್ಕಾರಿ ಕಾಲೇಜಿನ ಸಹಯೋಗದಲ್ಲಿ ಆಯೋಜಿಸಲಾಗಿತ್ತು. ಡಾ.ಮುಖ್ಯಮಂತ್ರಿ ಚಂದ್ರು, ಡಾ.ಅರ್ಜುನಪುರಿ ಅಪ್ಪಾಜಿಗೌಡ, ಡಾ.ಲೀಲಾ ಅಪ್ಪಾಜಿ ಮುಂತಾದವರು ವಿದ್ಯಾರ್ಥಿಗಳಲ್ಲಿ ಕನ್ನಡ ಜಾಗೃತಿಯ ಬಗ್ಗೆ ತಿಳುವಳಿಕೆಯನ್ನು ಮೂಡಿಸುವ ವಿಷಯಗಳನ್ನು ತಿಳಿಸಿದರು. ಈ ಸಂದರ್ಭದಲ್ಲಿ ಬೆಂಗಳೂರಿನ ರಾಜಗುರು ತಂಡ ಕನ್ನಡ ಗೀತಗಾಯನ ಕಾರ್ಯಕ್ರಮವನ್ನು ನಡೆಸಿಕೊಟ್ಟಿತು.

ನವೆಂಬರ್ ೦೫-೦೬-೨೦೧೨ರ ೨ ದಿನಗಳು ದಕ್ಷಿಣ ಪ್ರಾದೇಶಿಕ ಭಾಷಾ ಕೇಂದ್ರ ಮೈಸೂರು ಇದರ ಸಹಯೋಗದಡಿಯಲ್ಲಿ ಮಂಡ್ಯದ ಮಹಿಳಾ ಸರ್ಕಾರಿ ಕಾಲೇಜಿನಲ್ಲಿ ಮಾಧ್ಯಮಗಳಲ್ಲಿ ಕನ್ನಡ ಭಾಷಾ ಬಳಕೆ - ರಾಷ್ಟ್ರೀಯ ವಿಚಾರ ಸಂಕಿರಣವನ್ನು ಹಮ್ಮಿಕೊಳ್ಳಲಾಗಿತ್ತು. ನಾಡಿನ ಅನೇಕ ವಿದ್ವಾಂಸರು ಸಂವಹನ ವಿಭಾಗದ ಪ್ರಾಧ್ಯಾಪಕರು ಮಾಧ್ಯಮಗಳ ಪರಿಣಿತರು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾಧ್ಯಮಗಳಲ್ಲಿ ಕನ್ನಡವನ್ನು ಸಶಕ್ತವಾಗಿ ಬಳಸುವುದರ ಬಗ್ಗೆ ತಮ್ಮ ವಿಚಾರಗಳನ್ನು ಅತ್ಯಂತ ಮನೋಜ್ಞವಾಗಿ ಮಂಡಿಸಿದರು.

ಜನವರಿ ೮-೯ ೨೦೧೩ರಂದು ೨ ದಿನಗಳ ಕಾಲ ಕರ್ನಾಟಕ ಪ್ರಾಚ್ಯ ವಸ್ತು ಮತ್ತು ಸಂಗ್ರಹಾಲಯಗಳು ಇಲಾಖೆಯ ಸಹಯೋಗದೊಡನೆ ಪ್ರಾಥಮಿಕ ಶಾಲಾ ಶಿಕ್ಷಕರಿಗಾಗಿ ಸಂಸ್ಕೃತಿ - ಪರಂಪರೆ - ಅರಿವು ಎಂಬ ವಿಷಯದಲ್ಲಿ 2 ದಿನಗಳ ಕಮ್ಮಟವನ್ನು ಆಯೋಜಿಸಲಾಗಿತ್ತು. ಈ ಕಮ್ಮಟದಲ್ಲಿ 70ಕ್ಕೂ ಹೆಚ್ಚು ಮಂಡ್ಯ ತಾಲ್ಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರು ಭಾಗವಹಿಸಿದ್ದರು. ೮-೧೦ ಮಂದಿ ಸಂಪನ್ಮೂಲ ವ್ಯಕ್ತಿಗಳು ಮೇಲಿನ ವಿಷಯದ ಮೇಲೆ ಪ್ರಾತ್ಯಕ್ಷಿತೆಯ ಮೂಲಕ ಬೆಳಕು ಚೆಲ್ಲಿದರು.

೫-೩-೨೦೧೩ರಂದು ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ಬೆಂಗಳೂರು ಇವರ ಸಹಯೋಗದಲ್ಲಿ ಮಂಡ್ಯದ ಮಹಿಳಾ ಸರ್ಕಾರಿ ಕಾಲೇಜಿನಲ್ಲಿ ``ಸಂತಕವಿ ಕನಕದಾಸರು - ವರ್ತಮಾನದ ಯುವನೋಟ’’ ಎಂಬ ಶೀರ್ಷಿಕೆಯಡಿಯಲ್ಲಿ ಸಂಕೀರ್ಣ ಸಂವಾದ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಕರ್ನಾಟಕ ಮುಕ್ತವಿಶ್ವವಿದ್ಯಾನಿಲಯದ ಕುಲಪತಿ ಡಾ.ಎಂ.ಜಿ.ಕೃಷ್ಣನ್ ಹಾಗೂ ಸಾಹಿತಿಗಳಾದ ಕಾ.ತ.ಚಿಕ್ಕಣ್ಣ ಮುಂತಾದ ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಸುಮಾರು 100 ಜನ ವಿದ್ಯಾರ್ಥಿಗಳು ಸಂವಾದದಲ್ಲಿ ಪಾಲುದಾರರಾಗಿದ್ದುದು ಕಾರ್ಯಕ್ರಮದ ಹೆಗ್ಗಳಿಕೆ.

ದಿನಾಂಕ : ೦೮-೦೭-೨೦೧೩ರಂದು ಕರ್ನಾಟಕ ಜಾನಪದ ವಿಶ್ವವಿದ್ಯಾನಿಲಯದ ಜೊತೆಗೂಡಿ ಮಂಡ್ಯದ ಸ್ನಾತಕೋತ್ತರ ಕೇಂದ್ರದಲ್ಲಿ ಡಾ.ಹಾಮಾನಾ ಅವರ ಸಂಸ್ಮರಣೆ ಹಾಗೂ ವಿಚಾರ ಸಂಕಿರಣವನ್ನು ಏರ್ಪಡಿಸಲಾಗಿತ್ತು. ಕರ್ನಾಟಕ ಜಾನಪದ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಡಾ.ಅಂಬಳಿಕೆ ಹಿರಿಯಣ್ಣ, ಖ್ಯಾತ ವಿದ್ವಾಂಸರಾದ ಡಾ.ರಾಗೌ, ಪ್ರೊ.ಪಿ.ಕೆ.ರಾಜಶೇಖರ, ಡಾ. ಎಂ.ಎಸ್.ಶೇಖರ್ ಮುಂತಾದವರು ಭಾಗವಹಿಸಿದ್ದರು.

೧೮-೦೩-೨೦೧೩ರಿಂದ ೨೧-೦೩-೨೦೧೩ರವರೆಗೆ ೪ ದಿನಗಳ ಕಾಲ ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಜೊತೆಗೂಡಿ ರಾಷ್ಟ್ರೀಯ ಶಾಸನಶಾಸ್ತ್ರ ಕಾರ್ಯಾಗಾರವನ್ನು ಮಂಡ್ಯದಲ್ಲಿ ಆಯ್ದ ಅಧ್ಯಾಪಕರುಗಳಿಗೆ ಹಾಗೂ ವಿದ್ಯಾರ್ಥಿಗಳಿಗೆ ಏರ್ಪಡಿಸಲಾಗಿತ್ತು. ಈ ಕಾರ್ಯಾಗಾರದಲ್ಲಿ ಖ್ಯಾತ ಇತಿಹಾಸಜ್ಞರಾದ ಡಾ.ಎ.ವಿ.ನರಸಿಂಹಮೂರ್ತಿ, ಡಾ.ಕೆ.ಎಸ್.ರಮೇಶ್, ಡಾ.ಅ. ಸುಂದರ, ಡಾ.ಪಿ.ಎನ್.ನರಸಿಂಹಮೂರ್ತಿ, ಶ್ರೀ ಸೀತಾರಾಮ್ ಜಾಗೀರ್‍ದಾರ, ಡಾ.ಕೆ.ಜಿ.ಭಟ್ಟ್‍ಸೂರಿ ಮುಂತಾದ ೨೦ಕ್ಕೂ ಹೆಚ್ಚು ವಿದ್ವಾಂಸರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ವಿಶೇಷ ತಿಳುವಳಿಕೆಯನ್ನು ಹೆಚ್ಚಿಸುವಲ್ಲಿ ನೆರವಾದುದು ವಿಶೇಷ.