fashion img

ನಮ್ಮ ಅಧ್ಯಕ್ಷರು

ಪ್ರೊ. ಬಿ ಜಯಪ್ರಕಾಶಗೌಡ : ವ್ಯಕ್ತಿ ಮತ್ತು ಸಾಧನೆ.

ಪ್ರೊ. ಜಯಪ್ರಕಾಶಗೌಡರದು ಪ್ರಧಾನವಾಗಿ ಸಂಘಟನಾ ಪ್ರತಿಭೆ. ಮಂಡ್ಯದ ನೆಲದಿಂದ ಆರಂಭವಾದ ಇವರ ಸಂಘಟನಾತ್ಮಕ ಚಟುವಟಿಕೆ ಇಂದು ಕರ್ನಾಟಕದಾದ್ಯಂತ ವಿಸ್ತರಿಸಿಕೊಂಡಿದೆ. ರಾಜ್ಯದ ಹೊರಗೂ, ರಾಷ್ಟ್ರದ ರಾಜಧಾನಿ ದೆಹಲಿಯಲ್ಲೂ ಇವರ ಚಟುವಟಿಕೆಗಳು ಜನಮನ್ನಣೆಗೆ ಪಾತ್ರವಾಗಿವೆ. ಪ್ರೊ. ಗೌಡರ ಆಸಕ್ತಿಯ ಮತ್ತೊಂದು ಕ್ಷೇತ್ರ ರಂಗಭೂಮಿ. ಮಂಡ್ಯದ ಆಧುನಿಕ ರಂಗಚಟುವಟಿಕೆಗಳ ಪಿತಾಮಹ ದಿವಂಗತ ಕೆ.ವಿ. ಶಂಕರಗೌಡರ ನಿಕಟವರ್ತಿಯಾಗಿ ಅವರ ವಿಶೇಷ ಪ್ರೀತಿ - ಆದರಗಳಿಗೆ ಪಾತ್ರರಾಗಿದ್ದರು. ಇಂದಿಗೂ ಮಂಡ್ಯದಲ್ಲಿ ಹೊಸ ಅಲೆಯ ನಾಟಕ ಪ್ರದರ್ಶನಗಳು ಹಾಗೂ ರಂಗಚಟುವಟಿಕೆಗಳು ಜೀವಂತವಾಗಿರುವಂತೆ ನೋಡಿಕೊಂಡಿದ್ದಾರೆ. ಮಂಡ್ಯದ ಕಲಾವಿದರ ಅಭಿನಯ ಕೌಶಲ ರಾಜ್ಯದ ಒಳಗೂ ಹೊರಗೂ-ದೆಹಲಿಯಲ್ಲೂ ಪ್ರದರ್ಶನಗೊಳ್ಳಲು ಯೋಗ್ಯ ವಾತಾವರಣವನ್ನು ಕಲ್ಪಿಸಿಕೊಡುತ್ತಾ ಬಂದಿದ್ದಾರೆ. ದಿವಂಗತ ಶಂಕರಗೌಡ ಅವರ ಪ್ರೇರಣೆ ಮತ್ತು ಪ್ರಭಾವದ ತೆಕ್ಕೆಗೆ ಸಿಲುಕಿದ ಜಯಪ್ರಕಾಶಗೌಡರು ಅವರ ಎಲ್ಲ ಗುಣಗಳನ್ನು ಮೈಗೂಡಿಸಿಕೊಂಡಿದ್ದಾರೆ. ಜಿಲ್ಲೆಯ ಹಾಗೂ ರಾಜ್ಯದ ಸಂಸ್ಕೃತಿ ಪ್ರಿಯ ಹಾಗೂ ಜನಪರ ರಾಜಕಾರಣಿಗಳೊಡನೆ ಒಡನಾಟ ಹೊಂದಿದ್ದಾರೆ ಮತ್ತು ಅವರ ಶಕ್ತಿ ಸಾಮರ್ಥ್ಯಗಳನ್ನು ಕನ್ನಡದ ಏಳಿಗೆಗೂ ಸಾಹಿತ್ಯ, ಸಂಸ್ಕೃತಿಯ ಪ್ರಕಾಶಕ್ಕೂ ದುಡಿಸಿಕೊಳ್ಳುವ ನೈಪುಣ್ಯ ಹೊಂದಿದ್ದಾರೆ. ಇವರ ಈ ನೈಪುಣ್ಯಕ್ಕೆ ಮಂಡ್ಯದ ಕರ್ನಾಟಕ ಸಂಘ ಹಿರಿಯ ಸಾಕ್ಷಿಯಾಗಿದೆ. ಒಂದು ಸಾಂಸ್ಕೃತಿಕ ಸಂಘಟನೆಯಾಗಿ ಸ್ವಾತಂತ್ರ್ಯ ಪೂರ್ವದಲ್ಲಿಯೇ ಸ್ಥಾಪಿತವಾದ ಕರ್ನಾಟಕ ಸಂಘ ಜಯಪ್ರಕಾಶಗೌಡರ ಪ್ರವೇಶದ ಫಲವಾಗಿ 2006 ರಿಂದೀಚೆಗೆ ವಿವಿಧ ಆಯಾಮಗಳಲ್ಲಿ ತನ್ನ ಕಾರ್ಯಕ್ಷೇತ್ರವನ್ನು ವಿಸ್ತರಿಸಿಕೊಂಡಿದೆ (ಸುಮಾರು ಒಂದುಕೋಟಿಗೂ ಅಧಿಕ ಅಂದಾಜು ವೆಚ್ಚದ ಐದು ಅಂತಸ್ತಿನ ಕಟ್ಟಡ ಹಾಗೂ ಸಂಘದ ಇತರ ಅಭಿವೃದ್ಧಿ ಕಾರ್ಯಗಳು ಪ್ರಗತಿಯಲ್ಲಿವೆ.) ನಾಡಿನ ಹೆಮ್ಮೆಯ ಸಾಂಸ್ಕೃತಿಕ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್ತಿನೊಡನೆ ಪ್ರೊ. ಜಯಪ್ರಕಾಶಗೌಡರದು ಕರುಳು - ಬಳ್ಳಿಯ ಸಂಬಂಧ. ತಾಲ್ಲೂಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು; ಜಿಲ್ಲಾ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದರು; ರಾಜ್ಯ ಸಾಹಿತ್ಯ ಪರಿಷತ್ತಿನ ಹಿರಿಯ ಸದಸ್ಯರು, ಹತ್ತಾರು ವರ್ಷಗಳಿಂದ ರಚನಾತ್ಮಕ ಸಂಬಂಧ ಇರಿಸಿ ಕೊಂಡವರು; ಜಿಲ್ಲಾ ಸಾಹಿತ್ಯ ಪರಿಷತ್ತಿನಲ್ಲೂ, ಕೇಂದ್ರ ಸಾಹಿತ್ಯ ಪರಿಷತ್ತಿನಲ್ಲೂ ಹಲವಾರು ದತ್ತಿಗಳನ್ನು ಸ್ಥಾಪಿಸಿ ಪರಿಷತ್ತಿನ ಚಟುವಟಿಕೆಗಳಿಗೆ ತಮ್ಮ ಧೀಮಂತ ಹಸ್ತಲಾಘವವನ್ನು ನಿರಂತರವಾಗಿ ನೀಡುತ್ತಾ ಬಂದಿದ್ದಾರೆ. ಹೋರಾಟ ಜಯಪ್ರಕಾಶಗೌಡರ ವ್ಯಕ್ತಿತ್ವದ ಇನ್ನೊಂದು ಬಹುಮುಖ್ಯವಾದ ಮುಖ. ಕನ್ನಡ ಜನತೆಯ ಮತ್ತು ಸಾಹಿತ್ಯ- ಸಂಸ್ಕೃತಿಯ ಹಿತಕ್ಕೆ ಧಕ್ಕೆ ಉಂಟಾದಾಗ, ಅನ್ಯಾಯ ಪರಾಕ್ರಮಣಗಳು ಜರುಗಿದಾಗ ಅವುಗಳ ವಿರುದ್ಧ ದನಿ ಎತ್ತುತ್ತಾ ಬಂದಿದ್ದಾರೆ. ಸಾಂಸ್ಕೃತಿಕ ಸಂಪನ್ನತೆಯ ಸಾಧನೆಗಾಗಿ ಸತ್ಯದ, ಸರಳ-ನೇರ-ನಿಷ್ಠುರದ ಮಾರ್ಗ ಹಿಡಿದು ಮುನ್ನಡೆಯುತ್ತಿದ್ದಾರೆ. ವಿಚಾರ ಪೂರಿತ ಅಂಕಣಗಳು, ಲೇಖನಗಳು ಹಾಗೂ ಗ್ರಂಥಗಳ ಮೂಲಕ ಜನಜಾಗೃತಿ ಮೂಡಿಸುತ್ತಿದ್ದಾರೆ.



ಪ್ರೊ. ಜಯಪ್ರಕಾಶಗೌಡರ ಹುಟ್ಟೂರು ಮಂಡ್ಯ ಜಿಲ್ಲೆಯ ದೊಡ್ಡಬಾಣಸವಾಡಿ. 1949ರ ಫೆಬ್ರವರಿ 15 ಜನ್ಮದಿನಾಂಕ. ತಂದೆ ಬೋರೇಗೌಡ; ತಾಯಿ ಪುಟ್ಟಲಿಂಗಮ್ಮ. ರೈತಾಪಿ ಕುಟುಂಬದಲ್ಲಿ ಜನಿಸಿದ ಜಯಪ್ರಕಾಶಗೌಡರದು ಗ್ರಾಮಸಂಸ್ಕೃತಿಯಿಂದ ಸಾಹಿತ್ಯ ಸಂಸ್ಕೃತಿಯವರೆಗೆ ವಿಸ್ತರಣೆಗೊಂಡ ಬದುಕು. ಈಗ 60ನ್ನು ಮೀರಿದ ವಯೋಮಾನ. ಹುಟ್ಟೂರಿನಲ್ಲೂ ಮಂಡ್ಯದಲ್ಲೂ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಪೂರೈಸಿದ ಹಳ್ಳಿಗಾಡಿನ ಮಗ ಜಯಪ್ರಕಾಶಗೌಡರು ಮಂಡ್ಯ ಸರ್ಕಾರಿ ಕಾಲೇಜಿನಲ್ಲಿ ಬಿ. ಎಸ್ಸಿ. ಪದವಿಯನ್ನೂ, ಮೈಸೂರು ವಿಶ್ವವಿದ್ಯಾನಿಲಯದ ಮಂಗಳೂರು ಸ್ನಾತಕೋತ್ತರ ಕೇಂದ್ರದಲ್ಲಿ ಕನ್ನಡ ಎಂ. ಎ. ಪದವಿಯನ್ನೂ ಪಡೆದಿದ್ದಾರೆ. ಗೌಡರು ವಿದ್ಯಾರ್ಥಿ ದಿಸೆಯಿಂದಲೂ ನಾಯಕತ್ವ ಗುಣವನ್ನು ಬೆಳೆಸಿಕೊಂಡು ಬಂದವರು.



img

ತರಗತಿಗಳಲ್ಲಿ ವಿದ್ಯಾರ್ಥಿ ಪ್ರತಿನಿಧಿಯಾಗಿ ಕಾಲೇಜುಗಳಲ್ಲಿ ವಿದ್ಯಾರ್ಥಿ ಸಂಘಟನೆಗಳ ನಾಯಕರಾಗಿ ಸಂಘಟನಾತ್ಮಕ ಚಟುವಟಿಕೆಗಳನ್ನು ಹೋರಾಟಗಳನ್ನು ನಡೆಸಿಕೊಂಡು ಬಂದಿದ್ದಾರೆ. ವಿದ್ಯಾರ್ಥಿಯಾಗಿದ್ದ ಕಾಲಕ್ಕೆ ಮಂಗಳೂರಿನ ಸ್ನಾತಕೋತ್ತರ ಕೇಂದ್ರದಲ್ಲಿದ್ದ ಪ್ರಾದೇಶಿಕ ಮನೋಭಾವದ ತಾರತಮ್ಯವನ್ನು ಹೋಗಲಾಡಿಸಲು ಹೋರಾಡಿ ಅಂದಿನ ಕುಲಪತಿಗಳ ಗಮನ ಸೆಳೆದ ಧೈರ್ಯ ಇವರದು. ಉನ್ನತ ಶಿಕ್ಷಣ ಪಡೆದು ಅಧ್ಯಾಪಕನಾಗಿ ವೃತ್ತಿ ಜೀವನ ಆರಂಭಿಸಿ ಜಿಲ್ಲಾ ಕೇಂದ್ರದಲ್ಲಿ ನೆಲೆಗೊಳ್ಳುವ ಅವಕಾಶವನ್ನು ಹೊಂದಿದ್ದರೂ ಗ್ರಾಮಜೀವನದ ಮೋಹವನ್ನು ಬಿಡದೆ ಇಂದಿಗೂ ಹುಟ್ಟೂರಿನಲ್ಲಿ ಕುಟುಂಬ ಸಮೇತ ವಾಸವಾಗಿದ್ದಾರೆ.




ಗ್ರಾಮೀಣರನ್ನು ಹೊಸ ರೀತಿಯಲ್ಲಿ ಸಂಘಟಿಸಿ ಸ್ವತಂತ್ರ ಭಾರತದ ಹೊಸ ಅಲೆಯ ಬದುಕಿಗೆ ಹೊಂದಿಸುವ ಹಂಬಲದಿಂದ ಜಯಪ್ರಕಾಶಗೌಡರು ಸ್ವಗ್ರಾಮದಲ್ಲಿ ‘ಶ್ರೀ ಸೋಮೇಶ್ವರ ಜನಕಲ್ಯಾಣ ಟ್ರಸ್ಟ್ಟ್’ನ್ನು ರೂಪಿಸಿದರು. ಜನ್ಮಸಂಸ್ಕಾರಗತವಾದ ರೈತಾಪಿ ಜೀವನದ ಜೊತೆಗೆ ಅಧ್ಯಾಪಕ ವೃತ್ತಿಯನ್ನು ಬೆಸೆದುಕೊಳ್ಳುತ್ತಾ ಗ್ರಾಮದ ಪ್ರಗತಿಗಾಗಿ ಜನಸಂಘಟನೆಗೆ ಮುಂದಾದರು. ತಾಲ್ಲೂಕು ಮತ್ತು ಜಿಲ್ಲಾಡಳಿತದ ಹಾಗೂ ಸ್ವಯಂಸೇವಾ ಸಂಘಟನೆಗಳ ನೆರವು ಪಡೆದು ಮೂವತ್ತು ವರ್ಷಗಳ ಹಿಂದೆಯೇ ಸ್ವಗ್ರಾಮದ ಎಲ್ಲ 138 ಮನೆಗಳಿಗೂ ಶೌಚಾಲಯಗಳನ್ನು ನಿರ್ಮಿಸಿಕೊಟ್ಟ ಹೆಗ್ಗಳಿಕೆ ಗೌಡರದು.

img

img

ಇಡೀ ಹಳ್ಳಿಗೆ ಕುಡಿಯುವ ಶುದ್ಧನೀರಿನ ಸೌಲಭ್ಯ ಕಲ್ಪಸಿದರು; ಪ್ರಾಥಮಿಕ ಶಾಲೆಯನ್ನು ಮಾಧ್ಯಮಿಕ ಶಾಲೆಗೆ ಉನ್ನತೀಕರಿಸಿದರು; ಆಸ್ಪತ್ರೆ, ನ್ಯಾಯಬೆಲೆ ಅಂಗಡಿ, ಸಮುದಾಯಭವನಗಳನ್ನು ತಂದರು; ಗ್ರಾಮದ ಪ್ರವೇಶಕ್ಕೂ ಊರಿನೊಳಗೂ ಅಚ್ಚುಕಟ್ಟಾದ ರಸ್ತೆಗಳನ್ನು ನಿರ್ಮಾಣ ಮಾಡಿಸಿದರು, ಸಾಲುಮರಗಳನ್ನು ನೆಡಿಸಿದರು. ನಂತರ ಜಯಪ್ರಕಾಶಗೌಡರ ಕಾರ್ಯಕ್ಷೇತ್ರ ಹಳ್ಳಿಯಿಂದ ಜಿಲ್ಲೆಗೆ ಜಿಲ್ಲೆಯಿಂದ ರಾಜ್ಯಕ್ಕೆ ವಿಸ್ತರಿಸಿತು. ಬೆಳಿಗ್ಗೆ ಹಳ್ಳಿಯಿಂದ ಹೊರಟು ಮಧ್ಯಾಹ್ನ ಜಿಲ್ಲೆಯಲ್ಲಿ ದುಡಿದು ಸಂಜೆಹೊತ್ತಿಗೆ ರಾಜ್ಯದ ತುಂಬ ಕಣ್ಣಾಡಿಸಿ ಕತ್ತಲಾಗುತ್ತಿದ್ದಂತೆ ರಾಜಧಾನಿಯ ದೀಪಗಳ ಬೆಳಕನ್ನು ತುಂಬಿಕೊಂಡು ಹಳ್ಳಿಯ ಮನೆ ಸೇರುವುದು, ಸೂರ್ಯನ ಮತ್ತೊಂದು ಉದಯಕ್ಕಾಗಿ ತವಕಿಸುತ್ತಾ ಕನಸು ಕಾಣುವುದು ಜಯಪ್ರಕಾಶಗೌಡರ ಇಂದಿನ ದೈನಂದಿನ ಕ್ರಿಯೆ.



1974ರಲ್ಲಿ ಮಂಡ್ಯದ ಜನತಾ ಶಿಕ್ಷಣ ಸಂಸ್ಥೆ (ಪಿ.ಇ.ಎಸ್.) ಯ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ ನೇಮಕಗೊಂಡು 1976ರಲ್ಲಿ ಅದೇ ಸಂಸ್ಥೆಯ ವಿಜ್ಞಾನ ಕಲಾ ಕಾಲೇಜಿನ ಉಪನ್ಯಾಸಕರಾಗಿ ಖಾಯಂಗೊಂಡು 1987 ರಿಂದ 1992ರ ವರೆಗೆ ಸಂಜೆ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಶೈಕ್ಷಣಿಕ ಮತ್ತು ಆಡಳಿತಾತ್ಮಕ ಕಾರ್ಯಗಳೆರಡನ್ನೂ ನಿರ್ವಹಿಸಿದರು. 1992ರಲ್ಲಿ ಕನ್ನಡ ಪ್ರಾಧ್ಯಾಪಕರಾಗಿ, 2007ರಲ್ಲಿ ನಿವೃತ್ತರಾದರು. ಸುಮಾರು ಮೂವತ್ಮೂರು ವರ್ಷಗಳ ಕಾಲ ಕನ್ನಡ ಪ್ರಾಧ್ಯಾಪಕರಾಗಿ, ಪ್ರಾಂಶುಪಾಲರಾಗಿ ದುಡಿಮೆ ಮಾಡಿದುದಲ್ಲದೆ ಜನ್ಮಗತವಾದ ತಮ್ಮ ಸಂಸ್ಕೃತಿ ಪ್ರಿಯತೆಯನ್ನು, ಸಂಘಟನಾ ಪ್ರವೃತ್ತಿಯನ್ನು ವೃತ್ತಿಯೊಡನೆ ಬೆಸೆದುಕೊಂಡು ಬಂದರು.

img

img

ಪಿ.ಇ.ಎಸ್. ಸಂಜೆ ಕಾಲೇಜನ್ನು ಸೇರಿದ ಕೆಲವೇ ತಿಂಗಳಲ್ಲಿ ಅಧ್ಯಾಪಕ ಕಾರ್ಯದರ್ಶಿಯಾಗಿ ಆ ಸಂಸ್ಥೆಯ ನೌಕರರ ಸಂಘಕ್ಕೆ ನೇಮಕಗೊಂಡರು. ಬಿಡುವಿನ ವೇಳೆಯಲ್ಲಿ ಸಂಘಟನೆಗೆ ತೊಡಗಿಕೊಂಡು ಪಿ.ಇ.ಎಸ್. ಕಾಲೇಜಿನ ಆಸಕ್ತ ಅಧ್ಯಾಪಕರನ್ನು ಕಲೆಹಾಕಿ ‘ಕುರುಕ್ಷೇತ್ರ’ ನಾಟಕ ಕಲಿತರು; ತಾವೇ ‘ದುರ್ಯೋಧನ’ನ ಪಾತ್ರ ಮಾಡಿದರು. ವಿಜ್ಞಾನ ಕಾಲೇಜಿನ ಕಟ್ಟಡ ನಿಧಿಯ ಸಹಾಯಾರ್ಥ ಪ್ರದರ್ಶನ ಏರ್ಪಡಿಸಿ ಒಂದು ಲಕ್ಷ ರೂ. ಸಂಗ್ರಹಿಸಿದರು. ಮತ್ತೆ 1976ರಲ್ಲಿ ಪ್ರದರ್ಶನ ಏರ್ಪಡಿಸಿ ಎರಡು ಲಕ್ಷ ರೂ. ಸಂಗ್ರಹಿಸಿದರು. ಕಾಲೇಜು ಅಧ್ಯಾಪಕರು ತಾವು ಕೆಲಸ ಮಾಡುತ್ತಿರುವ ಸಂಸ್ಥೆಯೊಂದರ ಶ್ರೇಯಸ್ಸಿಗೆ ಇಷ್ಟರ ಮಟ್ಟಿಗೆ ಬೆಂಬಲಿಗರಾಗಿ ನಿಂತದ್ದು ಒಂದು ಅಪರೂಪದ ಘಟನೆ.


ಜಯಪ್ರಕಾಶಗೌಡರ ನೇತೃತ್ವದಲ್ಲಿ ನಡೆದ ಈ ಘಟನೆ ಕೆ.ವಿ. ಶಂಕರಗೌಡರ ಹತ್ತಿರದ ಒಡನಾಟವನ್ನು ತಂದುಕೊಟ್ಟಿತು. ಮಂಡ್ಯದ ಹವ್ಯಾಸಿ ರಂಗಭೂಮಿಯನ್ನು ಹೊಸ ಆಯಾಮದೊಡನೆ ಶ್ರೀಮಂತಗೊಳಿಸುವ ಸಂಕಲ್ಪವನ್ನು ಮಾಡಿದರು. ಆ ಮೂಲಕ ವಿದ್ಯಾರ್ಥಿಗಳ ಪ್ರತಿಭಾ ವಿಕಾಸಕ್ಕೂ ಕಾರಣರಾದರು. ಇದಕ್ಕಾಗಿ ಹುಟ್ಟಿಕೊಂಡ ಸಂಸ್ಥೆ ‘ಗೆಳೆಯರ ಬಳಗ’(1980). ಈ ಸಂಘಟನೆಯ ಮೂಲಕ ಜಿಲ್ಲೆಯ ಕಲಾವಿದರನ್ನೂ ಪ್ರೇಕ್ಷಕರನ್ನೂ ಹೊಸ ಅಲೆಯ ನಾಟಕಗಳಿಗೆ ಸಜ್ಜುಗೊಳಿಸಿದ್ದಲ್ಲದೆ ರಾಜ್ಯದ ಹವ್ಯಾಸಿ ನಾಟಕ ತಂಡಗಳನ್ನು ಕರೆಸಿ ಪ್ರದರ್ಶನಗಳನ್ನು ಏರ್ಪಡಿಸಿದರು. ಎನ್.ಎಸ್.ಡಿ. ಪದವೀಧರರನ್ನು ಕರೆಸಿ ತರಬೇತಿ ಕೊಡಿಸಿದ್ದು ಮಂಡ್ಯದ ಜನತೆಗೆ ಒಂದು ಆಶ್ಚರ್ಯಕರ ಬೆಳವಣಿಗೆಯಾಯಿತು. ಮಂಡ್ಯದ ಕಲಾವಿದರಿಂದ ಹತ್ತಾರು ನಾಟಕಗಳು ಪ್ರದರ್ಶನಗೊಂಡವು. ಜಿಲ್ಲೆಯಲ್ಲೇ ಪ್ರಥಮ ಬಾರಿಗೆ ರಾಜ್ಯಮಟ್ಟದ ಭಾವಗೀತೆಗಳ ಗಾಯನ ಸ್ಪರ್ಧೆಯನ್ನು ಗೆಳೆಯರಬಳಗ ನಡೆಸಿತು.

img

ಇಡೀ ಹಗಲು ಹತ್ತಾರು ಗಂಟೆಗಳ ಕಾಲ ಪ್ರೇಕ್ಷಕರನ್ನು ಸೆರೆಹಿಡಿದು ಕೂರಿಸುವ ಮೂಲಕ ಮಂಡ್ಯ ನಗರದಲ್ಲಿ ಹಬ್ಬದ ವಾತಾವರಣವನ್ನು ಮೂಡಿಸಿದರು. ಇದಲ್ಲದೆ ಹುಬ್ಬಳ್ಳಿ - ಧಾರವಾಡದಲ್ಲಿ ಬೆಂಗಳೂರೇತರ ಸಂಘಟನೆಗಳ ಸಮಾವೇಶವನ್ನು ಏರ್ಪಡಿಸಿದ್ದು ಜಯಪ್ರಕಾಶಗೌಡರ ವಿಶೇಷ ಶ್ರಮದ ಫಲ. ಈ ಸಮಾವೇಶ ರಾಜ್ಯದ ಸಾಂಸ್ಕೃತಿಕ ಚಟುವಟಿಕೆಗಳ ವಿಕೇಂದ್ರೀಕರಣಕ್ಕೆ ನಾಂದಿಯಾಯಿತು. ಪಿಇಎಸ್ ವಿಜ್ಞಾನ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಜಾನಪದ ವಿಭಾಗವನ್ನು ತೆರೆದು ಪದವಿ ವಿದ್ಯಾರ್ಥಿಗಳು ಜಾನಪದವನ್ನು ಒಂದು ಐಚ್ಛಿಕ ವಿಷಯವಾಗಿ ಅಭ್ಯಾಸ ಮಾಡಲು ಜಯಪ್ರಕಾಶಗೌಡರು ಕಾರಣರಾದರು. ವಿಶ್ವವಿದ್ಯಾನಿಲಯದ ಸಂಯೋಜಿತ ಕಾಲೇಜುಗಳಲ್ಲಿ ಜಾನಪದ ಅಧ್ಯಯನದ ವಿಷಯವಾದುದು ಇದೇ ಮೊದಲು. ವಿದ್ಯಾರ್ಥಿಗಳ ಜನಪದ ಕಲಾ ತಂಡವನ್ನು ಕಟ್ಟಿ ಹಳ್ಳಿಹಳ್ಳಿಗಳಲ್ಲಿ ಕಲಾಪ್ರದರ್ಶನವನ್ನು ಏರ್ಪಡಿಸಿ ಒಂದು ಸಂಚಲನವನ್ನು ಸೃಷ್ಟಿಸಿದವರು ಜಯಪ್ರಕಾಶಗೌಡರು. ಈ ತಂಡ ದೆಹಲಿಯ ಗಣರಾಜ್ಯೋತ್ಸವದಲ್ಲೂ ವಿದೇಶಗಳಲ್ಲೂ ಕಲಾಪ್ರದರ್ಶನ ನಡೆಸಿದ ಹೆಗ್ಗಳಿಕೆ ಪಡೆಯಿತು.

ಶಂಕರಗೌಡರು ಸ್ಥಾಪಿಸಿದ ‘ಲೋಕಸೇವಕ ಕಲಾಬಳಗ’ದ ಕಾರ್ಯದರ್ಶಿಯಾಗಿ ಜಯಪ್ರಕಾಶಗೌಡರು ಅನೇಕ ನಾಟಕಗಳನ್ನು ರಂಗದ ಮೇಲೆ ತರುವಲ್ಲಿ ಶಂಕರಗೌಡರಿಗೆ ನೆರವಾಗಿದ್ದಾರೆ. ಶಂಕರಗೌಡರೇ ಸ್ಥಾಪಿಸಿದ ಇನ್ನೊಂದು ಸಂಘಟನೆ ‘ಜಿಲ್ಲಾ ಜನತಾ ಸೇವಾ ಸಂಘ’ದ ಕಾರ್ಯದರ್ಶಿಯಾಗಿ ದುಡಿದ ಅನುಭವವೂ ಇದೆ. ಕರ್ನಾಟಕ ರಾಜ್ಯ ಅಂಧರ ಕ್ಷೇಮಾಭಿವೃದ್ಧಿ ಸಂಸ್ಥೆಯ ಮಂಡ್ಯ ಘಟಕದ ಕಾರ್ಯದರ್ಶಿಯಾಗಿ, ಮಂಡ್ಯದಲ್ಲಿ ನಡೆದ ರಾಜ್ಯ ಗಮಕ ಸಮ್ಮೇಳನದ ಕಾರ್ಯದರ್ಶಿಯಾಗಿ, ರಾಷ್ಟ್ರೀಯ ಸೇವಾ ಯೋಜನೆಯ ಕಾಲೇಜು ಘಟಕದ ಅಧಿಕಾರಿಯಾಗಿ ಕೆಲಸಮಾಡಿ ಅನೇಕ ಸಾಮಾಜಿಕ ಕಾರ್ಯಗಳನ್ನು, ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸಿದ್ದಾರೆ. 1987 ರಿಂದ 1990ರ ವರೆಗೆ ಕರ್ನಾಟಕ ರಾಜ್ಯ ನಾಟಕ ಅಕಾಡೆಮಿಯ ಸದಸ್ಯರಾಗಿ ರಾಜ್ಯದ ರಂಗಭೂಮಿ ಸಮಸ್ಯೆಗಳ ಒಳಹೊರಗನ್ನು ಬಲ್ಲವರಾಗಿದ್ದಾರೆ. ಬೆಂಗಳೂರಿಗೆ ಕೇಂದ್ರೀಕೃತವಾಗಿದ್ದ ಅಕಾಡೆಮಿಯ ಚಟುವಟಿಕೆಗಳನ್ನು ಜಿಲ್ಲಾ ಕೇಂದ್ರಗಳಿಗೆ ತರುವಲ್ಲಿ ಹೋರಾಟಮಾಡಿ ಯಶಸ್ವಿಯಾಗಿದ್ದಾರೆ. ಪಿಇಎಸ್ ಸಂಜೆ ಕಾಲೇಜು ಪ್ರಾಂಶುಪಾಲರಾಗಿದ್ದಾಗ ‘ಸಂಧ್ಯಾ’ ಸಾಂಸ್ಕೃತಿಕ ತಂಡವನ್ನು ಸ್ಥಾಪಿಸಿ ಅದರ ಅಧ್ಯಕ್ಷರೂ ಆಗಿ ವಿದ್ಯಾರ್ಥಿಗಳ ವಿಭಿನ್ನ ಚಟುವಟಿಕೆಗಳಿಗೆ ಪ್ರೇರಕ ಶಕ್ತಿಯಾಗಿದ್ದರು. ಎನ್.ಎಸ್.ಡಿ. ಪದವೀಧರರಾದ ತಾತಾಚಾರ್ ಅವರಿಂದ ವಿದ್ಯಾರ್ಥಿಗಳಿಗೆ ತರಬೇತಿ ಕೊಡಿಸಿ ಶ್ರೀರಂಗರ ‘ರಂಗಭಾರತ’ ನಾಟಕವನ್ನು ಪ್ರದರ್ಶಿಸಿದರು. ಈ ಪ್ರದರ್ಶನದಿಂದ ಬಂದ ಹಣದಿಂದ ಸಂಜೆ ಕಾಲೇಜಿಗೆ ಜನರೇಟರ್ ಒಂದನ್ನು ತಂದು ವಿದ್ಯುತ್ತಿನ ತೊಂದರೆಯಿಂದ ಕಾಲೇಜನ್ನು ಮುಕ್ತಗೊಳಿಸಿದರು. ‘ಕೆ.ವಿ. ಶಂಕರಗೌಡ ಪ್ರಚಾರ ಪುಸ್ತಕಮಾಲೆ’ ಯನ್ನು ಸ್ಥಾಪಿಸಿ ವಿಚಾರ ಸಂಕಿರಣಗಳನ್ನು ನಡೆಸಿ ಮಂಡಿತ ಪ್ರಬಂಧಗಳನ್ನು ಪುಸ್ತಕಗಳಾಗಿ ಪ್ರಕಟಿಸಿದರು. ಜಿಲ್ಲೆಯ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಪಿ. ಎನ್. ಜವರಪ್ಪಗೌಡರಿಗೆ ಅಭಿನಂದನಾ ಸಮಾರಂಭವನ್ನು ಏರ್ಪಡಿಸಿ ಅಭಿನಂದನಾ ಗ್ರಂಥವನ್ನು ಸಮರ್ಪಿಸಿದರು. ಎಚ್. ಡಿ. ಚೌಡಯ್ಯನವರಿಗೆ 75 ತುಂಬಿದ ಸಂದರ್ಭದಲ್ಲಿ ಇಂಥದೇ ಅದ್ದೂರಿಯ ಸಮಾರಂಭ ಏರ್ಪಡಿಸಿ ಗೌರವ ಗ್ರಂಥವನ್ನು ಹೊರತಂದುದ್ದಲ್ಲದೆ ಪಿಇಎಸ್‍ನ ಆವರಣದಲ್ಲಿ ಅವರ ಪ್ರತಿಮೆಯನ್ನೂ ಸ್ಥಾಪಿಸಿದ್ದು ಮಂಡ್ಯದ ಸಾಂಸ್ಕೃತಿಕ ಇತಿಹಾಸದಲ್ಲಿ ಒಂದು ದಾಖಲೆ. ಈ ಸಮಾರಂಭದಲ್ಲಿ ಉಳಿದ ಒಂದು ಲಕ್ಷ ರೂ. ಹಣದಿಂದ ಅವರ ಹೆಸರಿನ ಟ್ರಸ್ಟ್ ಸ್ಥಾಪಿಸಿ, ಪ್ರಶಸ್ತಿ ನೀಡಲಾಗುತ್ತಿದೆ. 1994ರಲ್ಲಿ ಮಂಡ್ಯದಲ್ಲಿ ನಡೆದ 63ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿಯ ಕಾರ್ಯದರ್ಶಿಯಾಗಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಮೂರು ವರ್ಷಗಳ ಅವಧಿಗೆ ಮಂಡ್ಯ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿಗೆ ಅಧ್ಯಕ್ಷರಾಗಿ ಚುನಾಯಿತರಾಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತನ್ನು ಕಟ್ಟುವ ಕ್ರಿಯೆಯಲ್ಲಿ ಭಾಗಿಯಾಗಿದ್ದಾರೆ. ಇವರು ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಪರಿಷತ್ಭವನಕ್ಕೆ ಸಾರ್ವಜನಿಕರ ನೆರವಿನಿಂದ ಕಂಪ್ಯೂಟರ್, ಫ್ಯಾಕ್ಸ್, ಪೋನ್‍ಗಳನ್ನು ತಂದರು, ಅಟೆಂಡರ್ ಗಳ ನೇಮಕ ಮಾಡಿ ಅವರ ಸಂಬಳಕ್ಕೆ ವ್ಯವಸ್ಥೆ ಮಾಡಿದರು; ವಾಚನಾಲಯ ಪ್ರಾರಂಭಮಾಡಿದರು. ಹತ್ತು ದತ್ತಿಗಳನ್ನು ಸ್ಥಾಪಿಸಿದರು. ಕೇಂದ್ರ ಸಾಹಿತ್ಯ ಪರಿಷತ್ತಿನಲ್ಲಿ ಎಸ್. ಎಂ. ಕೃಷ್ಣ ಅವರ ತಂದೆ ತಾಯಿಗಳ ಹೆಸರಿನಲ್ಲಿ ಮೂರು ಲಕ್ಷ ರೂಪಾಯಿಗಳ ಠೇವಣಿ ಇಡಿಸಿ ಅದರ ಬಡ್ಡಿಯಲ್ಲಿ ಪ್ರತಿವರ್ಷ ಐದು ಜನ ಜನಪದಕಲಾವಿದರಿಗೆ ತಲಾ ಮೂರು ಸಾವಿರ ರೂ.ಗಳ ನಗದು ಪ್ರಶಸ್ತಿ ನೀಡುವ ಅವಕಾಶ ಕಲ್ಪಿಸಿದರು. ಎಚ್. ಎಲ್. ನಾಗೇಗೌಡರು ಸ್ಥಾಪಿಸಿರುವ ಕರ್ನಾಟಕ ಜಾನಪದ ಪರಿಷತ್ತಿನ ಟ್ರಸ್ಟಿಯಾಗಿರುವ ಗೌಡರು ಅದರ ರಚನಾತ್ಮಕ ಕಾರ್ಯಗಳಿಗೆ ತಮ್ಮ ಶ್ರಮವನ್ನು ಕೂಡಿಸುತ್ತಿದ್ದಾರೆ; 50 ಸಾವಿರ ರೂ.ಗಳ ದತ್ತಿಯನ್ನು ಸ್ಥಾಪಿಸಿದ್ದಾರೆ; ಸಾಕಷ್ಟು ಧನಸಂಗ್ರಹ ಮಾಡಿಕೊಟ್ಟಿದ್ದಾರೆ. ಬೆಂಗಳೂರಿನ ಗಮಕಕಲಾ ಪರಿಷತ್ತು 1990ರ ದಶಕದಲ್ಲಿ ಮಂಡ್ಯದಲ್ಲಿ ನಡೆಸಿದ ರಾಜ್ಯಮಟ್ಟದ ಗಮಕಕಲಾ ಸಮ್ಮೇಳನದ ಆಚರಣಾಸಮಿತಿಯ ಕಾರ್ಯದರ್ಶಿಯಾಗಿ ಗೌಡರು ನೇಮಕಗೊಂಡು ಸಮ್ಮೇಳನವನ್ನು ಯಶಸ್ವಿಯಾಗಿ ನಡೆಸಿದ್ದಾರೆ.

ಜಾನಪದವನ್ನು ತಮ್ಮ ವಿಶೇಷ ಆಸಕ್ತಿಯ ಕ್ಷೇತ್ರಗಳಲ್ಲಿ ಒಂದನ್ನಾಗಿ ಮಾಡಿಕೊಂಡು ನಶಿಸಿಹೋಗುತ್ತಿರುವ ಮೂಡಲಪಾಯ ಯಕ್ಷಗಾನವನ್ನು ಕಾಪಾಡಿಕೊಂಡು ವೃದ್ಧಿಸುವ ಪ್ರಯತ್ನದಲ್ಲಿ ನಿರತರಾಗಿದ್ದಾರೆ. ಜನಪದ ಕಲಾ ತಂಡಗಳನ್ನು ಪತ್ತೆಹಚ್ಚಿ ದಾಖಲೆಯ ಪ್ರದರ್ಶನಗಳನ್ನು ಏರ್ಪಡಿಸುತ್ತಿದ್ದಾರೆ. ಈ ದಿಸೆಯಲ್ಲಿ ಕೀಲಾರದ ‘ಕ್ಷೀರಸಾಗರ ಮಿತ್ರಕೂಟ’ ದೊಡನೆ ಮತ್ತು ಮಂಡ್ಯದ ಕ್ರೀಡೆ ಮತ್ತು ಯುವಜನಸೇವಾ ಇಲಾಖೆಯೊಡನೆ ನಿರಂತರ ಸಂಪರ್ಕ ಇರಿಸಿಕೊಂಡಿದ್ದಾರೆ.

ಸಂಘಟನೆ, ಸಾಹಿತ್ಯದಂತೆ ಜಯಪ್ರಕಾಶಗೌಡರ ಆಸಕ್ತಿಯ ಇನ್ನೊಂದು ಪ್ರಧಾನ ಕ್ಷೇತ್ರ ರಂಗಭೂಮಿ. ಹವ್ಯಾಸಿ ಕಲಾವಿದರು ಹಾಗೂ ತಜ್ಞರನ್ನು ಕಟ್ಟಿಕೊಂಡು ಹೊಸ ಅಲೆಯ ನಾಟಕಗಳನ್ನು ವೇದಿಕೆಗೆ ತಂದು ಮಂಡ್ಯದ ರಂಗಚಟುವಟಿಕೆಯನ್ನು ಜೀವಂತವಾಗಿಡುವುದೆಂದರೆ ಅವರಿಗೆ ಎಲ್ಲಿಲ್ಲದ ಉತ್ಸಾಹ. ಇದಕ್ಕಾಗಿ ಅವರು ರೂಪಿಸಿಕೊಳ್ಳುವ ಯೋಜನೆಗಳು, ಕಾರ್ಯಗತಗೊಳಿಸುವ ಆಲೋಚನೆಗಳು ಹಲವಾರು. ಅಶೋಕ ಬಾದರದಿನ್ನಿ, ಬಸವಲಿಂಗಯ್ಯ, ಜಯತೀರ್ಥ ಜೋಷಿ, ಅತುಲ್ ತಿವಾರಿ ಮುಂತಾದವರನ್ನು ಕರೆಸಿ ರಂಗಶಿಬಿರವನ್ನು ಏರ್ಪಡಿಸಿ ಯುವಜನರನ್ನೊಳಗೊಂಡ ಹವ್ಯಾಸಿ ರಂಗತಂಡವನ್ನು ಕಟ್ಟಿದುದು ಈಗ ಇತಿಹಾಸ. ಇದರ ಮುಂದುವರಿಕೆಯ ರೂಪವಾಗಿ ಯುವ ನಿರ್ದೇಶಕರಾದ ಮಾಲ್ತೇಶ್ ಬಡಿಗೇರ, ಪ್ರಮೋದ್ ಶಿಗ್ಗಾವ್, ಸಿಜಿಕೆ ಮುಂತಾದ ಹತ್ತಾರು ರಂಗನಿರ್ದೇಶಕರನ್ನು ಮಂಡ್ಯಕ್ಕೆ ಕರೆಸಿ ಸಂಕ್ರಾತಿ, ದನಿ ಇಲ್ಲದವರು, ಮೃಚ್ಛಕಟಿಕ, ತಬರನಕತೆ, ಅಂತಿಗೊನೆ, ಸುಲ್ತಾನ್ ಟಿಪ್ಪು, ಘಾಸಿರಾಂ ಕೊತ್ವಾಲ್, ಶ್ಮಶಾನಕುರುಕ್ಷೇತ್ರ ಮುಂತಾದ ಪ್ರಮುಖ ನಾಟಕಗಳನ್ನು ಯಶಸ್ವಿಯಾಗಿ ರಂಗದ ಮೇಲೆ ತಂದು ಇಂದಿಗೂ ‘ಜನದನಿ’ಯ ಮೂಲಕ ರಂಗಾಸಕ್ತಿಯನ್ನು ಉಳಿಸಿಕೊಂಡಿರುವುದು ಇವರ ವಿಶೇಷಗಳಲ್ಲೊಂದು. ಈ ತಂಡದಲ್ಲಿ ತಯಾರುಗೊಂಡ ಅನೇಕ ಮಂದಿ ಯುವಕರು ಸಿನಿಮಾ, ದೂರದರ್ಶನ ಕಲಾವಿದರಾಗಿ, ತಂತ್ರಜ್ಞರಾಗಿ ತಮ್ಮ ಬದುಕನ್ನು ಕಟ್ಟಿಕೊಳ್ಳಲು ನೆರವಾಗಿರುವುದು ಜಯಪ್ರಕಾಶಗೌಡರ ಹೆಗ್ಗಳಿಕೆ.

ಮಂಡ್ಯದ ಕರ್ನಾಟಕ ಸಂಘ 2006 ರಲ್ಲಿ 60 ಪ್ರಾಯವನ್ನು ಕಂಡಿದೆ. ಅದೇ ವರ್ಷ ಕಾರ್ಯದರ್ಶಿಯಾಗಿ ಸಂಘವನ್ನು ಪ್ರವೇಶಮಾಡಿದ ಜಯಪ್ರಕಾಶಗೌಡರು ಅದರ ವಿಶೇಷ ಏಳಿಗೆಯನ್ನು ಸಾಧಿಸುತ್ತಿದ್ದಾರೆ. ಜಿಲ್ಲೆಯ ಗಣ್ಯರ ಹೆಸರಿನಲ್ಲಿ ದತ್ತಿಗಳು ಮತ್ತು ಪ್ರಶಸ್ತಿಗಳನ್ನು ಸ್ಥಾಪಿಸಿದ್ದಾರೆ. ವಿಶೇಷ ಉಪನ್ಯಾಸ, ಇದು ಹತ್ತು ಸಾವಿರ ರೂ. ನಗದು, ಫಲಕ ಮತ್ತು ಪ್ರಶಸ್ತಿಪತ್ರವನ್ನು ಒಳಗೊಂಡಿರುತ್ತದೆ. ಕರ್ನಾಟಕ ಸಂಘಕ್ಕೆ ಹಂಪಿಯ ಕನ್ನಡ ವಿಶ್ವವಿದ್ಯಾಲಯ ಮತ್ತು ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಸಂಯೋಜನೆ ಪಡೆದು ಎಂ. ಎಲ್. ಶ್ರೀಕಂಠೇಶಗೌಡ ಸಂಶೋಧನಾ ಕೇಂದ್ರವನ್ನು, ಶಂಕರಗೌಡ ರಂಗತರಬೇತಿ ಶಾಲೆಯನ್ನು ತೆರೆದಿದ್ದಾರೆ. ಕನ್ನಡ, ಇತಿಹಾಸ ಹಾಗೂ ಪ್ರಾಚೀನ ಇತಿಹಾಸ ಮತ್ತು ಪುರಾತತ್ವಶಾಸ್ತ್ರ ಎಂ. ಫಿಲ್. ಪದವಿಕೋರ್ಸ್‍ಗಳನ್ನು, ಪಿಎಚ್.ಡಿ. ಅಧ್ಯಯನ, ದೂರಶಿಕ್ಷಣ ಸ್ನಾತಕೋತ್ತರ ಹಾಗೂ ಡಿಪ್ಲೋಮಾ ಕೋರ್ಸ್ ನಡೆಸುತ್ತಿದ್ದಾರೆ. ವಿವಿಗಳ ಧ್ಯೇಯದಂತೆ ಕರ್ನಾಟಕ ಸಂಘದಲ್ಲಿ ಕೂಡ ಪ್ರಕಟಣಾಂಗವನ್ನು ತೆರೆದು ಪುಸ್ತಕಗಳನ್ನು ಪ್ರಕಟಿಸುತ್ತಿದ್ದಾರೆ. ಸುಸಜ್ಜಿತ ಗ್ರಂಥಾಲಯ ಇದೆ. ಸುಮಾರು ಒಂದು ಕೋಟಿ ರೂಪಾಯಿ ವೆಚ್ಚದ ನಾಲ್ಕು ಅಂತಸ್ತಿನ ಕಟ್ಟಡ ನಿರ್ಮಾಣಗೊಳ್ಳುತ್ತಿದೆ, ಸಂಘದಿಂದ ಪ್ರಕಟವಾಗುತ್ತಿರುವ ‘ಅಭಿವ್ಯಕ್ತಿ’ ಸಾಹಿತ್ಯ ಮಾಸಿಕ ಕರ್ನಾಟಕದಾದ್ಯಂತ ಲೇಖಕ ಬಳಗವನ್ನು, ಓದುಗ ಸಮುದಾಯವನ್ನು ಗೌಡರ ವ್ಯವಸ್ಥಾಪಕ ಸಂಪಾದಕತ್ವದಲ್ಲಿ ಹೊಂದಿದೆ. ಇದೆಲ್ಲಕ್ಕೂ ಶೋಭೆಯನ್ನು ತರುವಂತೆ ಮಂಡ್ಯ ಜಿಲ್ಲೆಯ ಸಮಗ್ರ ದರ್ಶನವನ್ನು ನೀಡುವ ತಲಾ ಒಂದು ಸಾವಿರ ಪುಟಗಳ ಐದು ಸಂಪುಟಗಳನ್ನು ಸಂಘದಿಂದ ಪ್ರಕಟಿಸುವ ಯೋಜನೆಯನ್ನು ಜಯಪ್ರಕಾಶಗೌಡರು ಹೊಂದಿದ್ದಾರೆ. ಇದರ ಮೊದಲನೆಯ ಸಂಪುಟ ಕಲೆ ಮತ್ತು ಸಾಹಿತ್ಯಕ್ಕೆ ಸಂಬಂಧಪಟ್ಟಿದೆ. ಕರ್ನಾಟಕ ಸಂಘವನ್ನು ಕಲಾವಿದರಿಗೆ, ಜಿಲ್ಲೆಯ ಸಂಸ್ಕೃತಿ ಪ್ರಿಯರಿಗೆ ಒಂದು ಆಕರ್ಷಣೆಯ ಕೇಂದ್ರವಾಗುವಂತೆ ಮಾಡಿದ್ದಾರೆ. ಅಗತ್ಯ ಸಿಬ್ಬಂದಿಯನ್ನು ನೇಮಿಸಿಕೊಂಡು, ಸಂಘದ ಅಧ್ಯಕ್ಷರಾಗಿ ಗೌಡರು ಕರ್ನಾಟಕದ ಒಂದು ಪ್ರಾತಿನಿಧಿಕ ಸಂಸ್ಕೃತಿ ಕೇಂದ್ರವನ್ನಾಗಿ ರೂಪಿಸಿ ನಿರಂತರ ಚಟುವಟಿಕೆ ಯಿಂದಿರುವಂತೆ ನೋಡಿಕೊಳ್ಳುತ್ತಿದ್ದಾರೆ. ಇವರ ನೇತೃತ್ವದಲ್ಲಿ ಸಾಗುತ್ತಿರುವ ಸಂಘದ ಪ್ರಗತಿಯ ಹೆಜ್ಜೆಗಳನ್ನು ಗುರುತಿಸಿದ ಬೆಂಗಳೂರಿನ ‘ಸಮಾಜ ಸಂಪರ್ಕ ವೇದಿಕೆ’ ಯು 2010ರ ರಾಷ್ಟ್ರಕವಿ ಕುವೆಂಪು ಪ್ರಶಸ್ತಿಯನ್ನು ಸಂಘಕ್ಕೆ ನೀಡಿ ಗೌಡರನ್ನು ಸನ್ಮಾನಿಸಿದೆ. ಇವರ ಸಂಘಟನಾ ಶಕ್ತಿ- ಕ್ರಿಯಾಶೀಲತೆ-ರಂಗಚಟುವಟಿಕೆಗೆ ಸಾಹಿತ್ಯ ಸಂಸ್ಕೃತಿ ಜಾನಪದಕ್ಕೆ ಸಲ್ಲಿಸುತ್ತಿರುವ ಅವಿರತ ಸೇವೆಯನ್ನು ಗಮನಿಸಿ ಆಳ್ವಾಸ್ ಸಂಸ್ಥೆಯು ‘ಆಳ್ವಾಸ್ ನುಡಿಸಿರಿ’ ಪ್ರಶಸ್ತಿಯನ್ನು, ಕರ್ನಾಟಕ ಸರ್ಕಾರ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು 2010ರಲ್ಲಿ ನೀಡಿ ಗೌರವಿಸಿವೆ. ಇದೀಗ ಜಯಪ್ರಕಾಶಗೌಡರ ಕಾರ್ಯದಕ್ಷತೆ ರಾಜ್ಯದ ಹೆಮ್ಮೆಯ ಸಾಂಸ್ಕೃತಿಕ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್ತಿನಲ್ಲೂ ಕ್ರಿಯಾಶೀಲವಾಗಲು ಅಪೇಕ್ಷಿಸಿದೆ. ಅದರ ಅಧ್ಯಕ್ಷರಾಗಿ ನಾಡಿನ ಸಂಸ್ಕೃತಿ ಪ್ರಿಯರನ್ನು ಪ್ರತಿನಿಧಿಸುತ್ತಾ ರಚನಾತ್ಮಕ ಕಾರ್ಯಗಳನ್ನು ನಡೆಸುವ ಹಂಬಲ ಅವರದು. ಇದಕ್ಕಾಗಿ ಪರಿಷತ್ತಿನ ಸದಸ್ಯರ ಪ್ರೀತಿಯ ಬೆಂಬಲ ಅವರಿಗೆ ಬೇಕಾಗಿದೆ.


ಜೆ.ಪಿ. ಬಗ್ಗೆ ನಾಡಿನ ಗಣ್ಯರ ಅನಿಸಿಕೆಗಳು

ಡಾ. ರಾಗೌ

ಪ್ರಸಿದ್ಧ ವಿದ್ವಾಂಸರು, ಮೈಸೂರು

ಕರ್ನಾಟಕ ಸಂಘ ಶೈಕ್ಷಣಿಕ, ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಕಾರ್ಯಗಳಲ್ಲಿ ಹೊಸ ದಿಗಂತವನ್ನೇ ತೆರೆದಿದ್ದು, ಈ ಎಲ್ಲ ಕಾರ್ಯಸಾಧನೆಗಳ ಕೀರ್ತಿ ಪ್ರೊ. ಜಯಪ್ರಕಾಶಗೌಡರಿಗೆ ಸಲ್ಲುತ್ತದೆ. ಅವರು ಈ ಎಲ್ಲದರ ಅಪ್ರತಿಮ ರೂವಾರಿ. ಅವರ ದೂರದರ್ಶಿತ್ವ, ಕಾರ್ಯತತ್ಪರತೆ, ಕರ್ತತ್ವಶಕ್ತಿ, ಕರ್ತವ್ಯನಿಷ್ಠೆ, ಪರಿಶ್ರಮ, ಪ್ರಾಮಾಣಿಕತೆ, ಪಾರದರ್ಶಕತೆಗಳು ಇವುಗಳ ಹಿನ್ನೆಲೆಯಲ್ಲಿವೆ. ಹಲವಾರು ಯೋಜನೆಗಳನ್ನು ಮುಂದಿರಿಸಿಕೊಂಡು ಉಪಯುಕ್ತವಾದ ಕೆಲಸವನ್ನು ಕರ್ನಾಟಕ ಸಂಘ ಇವೊತ್ತು ಮಾಡುತ್ತಿದ್ದರೆ ಅದಕ್ಕೆ ಪ್ರೊ. ಜಯಪ್ರಕಾಶಗೌಡರ ನೇತೃತ್ವವೇ ಕಾರಣ. ಅವರು ಯಾವುದನ್ನೇ ಕೈಕೊಂಡರೂ ಅದಕ್ಕೊಂದು ಅರ್ಥವಿರುತ್ತದೆ, ಗುರಿಯಿರುತ್ತದೆ.

ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ

ಕುಲಪತಿಗಳು, ಸಂಸ್ಕೃತ ವಿಶ್ವವಿದ್ಯಾನಿಲಯ, ಬೆಂಗಳೂರು

ಕರ್ನಾಟಕದ ಕ್ರಿಯಾಶಕ್ತಿಯನ್ನು ಜಾಗೃತಗೊಳಿಸುವ ನಮ್ಮ ತಲೆಮಾರಿನ ಪ್ರಮುಖ ವ್ಯಕ್ತಿ ಜಯಪ್ರಕಾಶಗೌಡರು. ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ, ಜಾನಪದ ಮುಂತಾದ ಸಮಕಾಲೀನ ಸ್ಪಂದನಗಳಿಗೆ ತಕ್ಷಣ ಇವರು ಪ್ರತಿಕ್ರಿಯಿಸಿರುವ ರೀತಿ ಅನನ್ಯವಾದುದು. ಇವರಿಂದ ಮಂಡ್ಯದ ಕರ್ನಾಟಕ ಸಂಘವೇ ಮೊದಲಾದ ಸಾಂಸ್ಕೃತಿಕ ಸಂಸ್ಥೆಗಳು ಉನ್ನತ ರೀತಿಯಲ್ಲಿ ಬೆಳೆದಿವೆ. ನಾಡಿನ ಉನ್ನತ ಮಟ್ಟದ ಯಾವುದೇ ಸಂಸ್ಥೆಯ ಕ್ರಿಯಾಶೀಲತೆಗೆ ಮತ್ತು ಔನ್ನತ್ಯಕ್ಕೆ ಇವರ ಸೇವೆ ತುಂಬಾ ಅಗತ್ಯವಾಗಿದೆ.

ಏರ್ಯ ಲಕ್ಷ್ಮೀನಾರಾಯಣ ಆಳ್ವ್ವ

ಸಂಸ್ಕೃತಿ ಚಿಂತಕರು ಹಾಗೂ ಲೇಖಕರು, ದಕ್ಷಿಣ ಕನ್ನಡ

ಪ್ರೊ. ಜಯಪ್ರಕಾಶಗೌಡರೇ, ನೀವು ನಿಮ್ಮ ಕರ್ನಾಟಕ ಸಂಘದ ಆಶ್ರಯದಲ್ಲಿ, ಕಟ್ಟಿಕೊಂಡ ಹಲವು ಟ್ರಸ್ಟುಗಳ ಮೂಲಕ ಮಾಡುತ್ತಿರುವ ವಿವಿಧ ಕಾರ್ಯಕ್ರಮಗಳು, ಜೊತೆಗೆ ಪ್ರಕಟಿಸುತ್ತಿರುವ ‘ಅಭಿವ್ಯಕ್ತಿ’ ಮಾಸಿಕ, ಇವನ್ನೆಲ್ಲ ಕಂಡು ನಾನು ಆಶ್ಚರ್ಯಚಕಿತನಾಗಿದ್ದೇನೆ. ಸಾಹಿತಿಗಳ ಜೊತೆಜೊತೆಗೇ ರಾಜಕೀಯದವರನ್ನೂ, ಸಾಮಾಜಿಕರನ್ನೂ ಜೊತೆಗೂಡಿಸಿಕೊಂಡು ನೀವು ಎಳೆಯುತ್ತಿರುವ ಸಾಹಿತ್ಯ ಸಂಸ್ಕೃತಿಗಳ ಬ್ರಹ್ಮರಥವನ್ನು ಕಂಡು ನಾನು ಬೆರಗಾಗಿದ್ದೇನೆ! ಇಂತಹ ಕಾರ್ಯಕ್ರಮಗಳನ್ನು ನಿರಂತರ, ವ್ಯವಸ್ಥಿತವಾಗಿ ನಡೆಸಿಕೊಂಡು ಹೋಗುವುದು ಎಷ್ಟು ಶ್ರಮದ ಕೆಲಸ ಎನ್ನುವುದನ್ನು ನಾನು ಬಲ್ಲೆ. ಒಬ್ಬ ವ್ಯಕ್ತಿ ಪೂರ್ತಿಯಾಗಿ ಅದಕ್ಕೆ ತನ್ನನ್ನು ಸಮರ್ಪಿಸಿಕೊಂಡಾಗ ಮಾತ್ರ ಇಂತಹ ಕೆಲಸಗಳು ಸಾಧ್ಯವಾಗುತ್ತವೆ. ನಿಮ್ಮ ಚಲ ಸಾಹಸಗಳಿಂದ ಇಂದು ಮಂಡ್ಯದ ಕರ್ನಾಟಕ ಸಂಘದ ಮೂಲಕ ನಡೆಸುತ್ತಿರುವ ಕಾರ್ಯಕ್ರಮಗಳು ನಾಡಿನ ಎಲ್ಲ ಸಂಘ ಸಂಸ್ಥೆಗಳಿಗೆ ಮಾದರಿಯಾದುವು. ದೂರದ ಕಡಲತಡಿಯಲ್ಲಿ ನಿಂತ ನಾನು ನಿಮ್ಮ ಸಾಹಸ ಯಾತ್ರೆಗೆ “ಉಘೇ ಉಘೇ” ಎನ್ನುತ್ತೇನೆ.

ಲಿಂಗದೇವರು ಹಳೆಮನೆ

ನಿರ್ದೇಶಕರು, ರಂಗಾಯಣ ಮೈಸೂರು

ಜೆ.ಪಿ . ಅದ್ಭುತವಾದ ಸಂಘಟನಾಗಾರ, ಯಾವುದೇ ಜವಾಬ್ದಾರಿವಹಿಸಿಕೊಂಡರೆ ಅತ್ಯಂತ ನಿಷ್ಠೆಯಿಂದ, ಪ್ರಾಮಾಣಿಕತೆಯಿಂದ ಆ ಕೆಲಸ ಆಗಿಯೇ ತೀರುವಂತೆ ದುಡಿಯಬಲ್ಲ ಛಾತಿ ಉಳ್ಳವರು. ಸಾಹಿತ್ಯ - ಸಂಸ್ಕೃತಿ - ನಾಡು - ನುಡಿಗಳ ಹಿತರಕ್ಷಣೆ ಮಾಡಿ ವೃದ್ಧಿಸುವ ಯಾವುದೇ ಸಾಂಸ್ಕೃತಿಕ ಸಂಸ್ಥೆಗಳಿಗೆ ಇಂತವರ ಅಗತ್ಯ ತುಂಬಾ ಇದೆ.

ಡಾ. ಪದ್ಮಾಶೇಖರ್

ಪ್ರಾಧ್ಯಾಪಕರು, ಮೈಸೂರು

ಜೆ.ಪಿ. ನಾ ಕಂಡ ಅದ್ಭುತ ಸಂಘಟನಾಕಾರ. ಎಲ್ಲರನ್ನು ತೆಕ್ಕೆಗೆ ತೆಗೆದುಕೊಂಡು ಯೋಜಿತವಾಗಿ ಹಿಡಿದ ಕೆಲಸವನ್ನು ಸಾಧಿಸುವ ಇವರ ಪ್ರವೃತ್ತಿ ಅನುಕರಣೀಯ ಮಾತ್ರವಲ್ಲ, ಈವೊತ್ತಿನ ಅಗತ್ಯ ಕೂಡ. ಕನ್ನಡ ನಾಡು, ನುಡಿ, ಸಂಸ್ಕೃತಿಗಳ ಮೇಲೆ ಅವ್ಯಾಹತವಾಗಿ ದಾಳಿ ಆಗುತ್ತಿರುವ ಈ ಪರ್ವ ಕಾಲದಲ್ಲಿ ಸಾಹಿತ್ಯ ಪರಿಷತ್ತಿಗೆ ಇಂತವರ ಅಗತ್ಯ ಅಧಿಕವಾಗಿದೆ.

ಡಾ. ಎಚ್. ಜೆ. ಲಕ್ಕಪ್ಪಗೌಡ

ವಿಶ್ರಾಂತ ಕುಲಪತಿಗಳು, ಹಾಸನ

ಪ್ರೊ. ಜಯಪ್ರಕಾಶಗೌಡರು ವಿದ್ಯಾರ್ಥಿ ದಿಸೆಯಿಂದಲೇ ಸಾಹಿತ್ಯ ಸಂಸ್ಕೃತಿ ಸಮಾಜಗಳ ಬಗ್ಗೆ ಕಳಕಳಿ ಉಳ್ಳವರು. ಸಂಘಟಿಸುವ ವಿಶಿಷ್ಟ ವ್ಯಕ್ತಿ. ಸಾಧಕರನ್ನು ಗುರುತಿಸಿ ಗೌರವಿಸುವ ಇವರ ಸಮಮನಸ್ಥಿತಿಯನ್ನು ಕಂಡು ಬೆರಗಾಗಿದ್ದೇನೆ. ಅವರಲ್ಲಿ ಮಾತು ಕೃತಿ ಏಕೀಭವಿಸಿರುವುದನ್ನು ಕಂಡು ಸಂತೋಷಗೊಂಡಿದ್ದೇನೆ. ಇವರ ಕರ್ತೃತ್ವ ವಾಕ್‍ಶಕ್ತಿ ಮತ್ತು ಮೌಲಿಕವಾದುದನ್ನು ಥಟ್ಟನೆ ಗುರುತಿಸುವ ವಿಶಿಷ್ಟತೆ ನನ್ನನ್ನು ವಿಸ್ಮಯಗೊಳಿಸಿದೆ. ಸಂಘ - ಸಂಸ್ಥೆಗಳನ್ನು ಕಟ್ಟುವ ಅವುಗಳ ಧ್ಯೇಯೋದ್ದೇಶಗಳನ್ನು ಖಚಿತಗೊಳಿಸುವ ಹಾಗೂ ಅದನ್ನು ಚಾಚೂತಪ್ಪದೆ ನಿರ್ವಹಿಸುವ ಇವರ ಮನೋಧರ್ಮ ಅಪರೂಪದ್ದು. ಸಾಹಿತ್ಯ ಪ್ರೇಮಿಗಳ, ವಿದ್ಯಾರ್ಥಿಗಳ, ರೈತರ, ಪ್ರತಿಭಾವಂತರ ಸಾಹಚರ್ಯದಲ್ಲಿ ತಮ್ಮ ಬದುಕನ್ನು ಇಡಿಯಾಗಿ ಕಟ್ಟಿಕೊಂಡಿರುವ ಅಪರೂಪದ ವ್ಯಕ್ತಿಗಳಲ್ಲಿ ಇವರು ಮುಖ್ಯರಾದವರು. ಶ್ರೀಯುತರ ರಚನಾತ್ಮಕತೆಗೆ ಮಂಡ್ಯದ ಕರ್ನಾಟಕ ಸಂಘದ ದಶಕದ ಸಾಧನೆ ಸಾಕ್ಷಿಯಾಗಿದೆ. ಇವರ ಶಕ್ತಿ ಸಾಮರ್ಥ್ಯಗಳನ್ನು ಪುಟಕ್ಕಿಡುವ ಮತ್ತಷ್ಟು ಜವಾಬ್ದಾರಿ ಸ್ಥಾನಗಳು ಇವರಿಗೆ ದೊರೆತಲ್ಲಿ ಅವುಗಳಿಗೆ ಜೀವ ತುಂಬುವ, ಸರ್ವಜನಾಪೇಕ್ಷಣೀಯವಾಗಿ ಮಾಡುವ ಎಲ್ಲ ಇತ್ಯಾತ್ಮಕ ಗುಣಗಳೂ ಇವರಲ್ಲಿವೆ. ಇವರು ವ್ಯಕ್ತಿತ್ವವನ್ನು ಮತ್ತು ಶಕ್ತಿಯನ್ನು ದುಡಿಸಿಕೊಳ್ಳುವ ಹೊಣೆ ಸಾರ್ವಜನಿಕರದ್ದು ಮತ್ತು ಸಂಸ್ಥೆಗಳದ್ದು.

ಬಸವಲಿಂಗಯ್ಯ

ಖ್ಯಾತ ರಂಗನಿರ್ದೇಶಕರು

ಜಯಪ್ರಕಾಶಗೌಡರು ಒಬ್ಬ ಅದ್ಭುತ ಸಾಂಸ್ಕೃತಿಕ ಸಂಘಟಕರು. ಯುವಜನರನ್ನು ಸಾಹಿತ್ಯ ಮತ್ತು ರಂಗಭೂಮಿಯ ಮುಖೇಣ ನಿರಂತರ ಚಟುವಟಿಕೆಯಲ್ಲಿ ತೊಡಗಿಸುವ ಮಾರ್ಗದರ್ಶಕರು. ವೈಚಾರಿಕ ಚಿಂತನೆಗೆ, ಪ್ರಗತಿಪರ ಆಲೋಚನೆಗಳಿಗೆ ಜೆಪಿ ಮಂಡ್ಯದ ಒಂದು ಪರ್ಯಾಯ ಹೆಸರು. ಗೆಳೆಯರ ಬಳಗ, ಜನದನಿ, ಕರ್ನಾಟಕ ಸಂಘ ಮೊದಲಾದ ಸಂಘಟನೆಗಳ ಮೂಲಕ ರಾಜ್ಯದ ಗಮನ ಸೆಳೆದಿದ್ದಾರೆ. ಜಾನಪದ ಕಲೆ ಮತ್ತು ಕಲಾವಿದರಿಗೆ ಒತ್ತಾಸೆಯಾಗಿದ್ದಾರೆ. ಇನ್ನೂ ಹೆಚ್ಚಿನ ಸಾಧನೆಗೆ ಬೇಕಾದ ಎಲ್ಲ ಕ್ರಿಯಾಶೀಲತೆ ಮತ್ತು ಸಾಮರ್ಥ್ಯ ಅವರ ಜಾಯಮಾನದಲ್ಲಿ ಬೆರತುಹೋಗಿದೆ.

ಡಾ. ಸಬಿಹಾ ಭೂಮಿಗೌಡ

ಪ್ರಾಧ್ಯಾಪಕರು, ಮಂಗಳೂರು ವಿಶ್ವವಿದ್ಯಾನಿಲಯ

ಪ್ರೊ. ಜಯಪ್ರಕಾಶಗೌಡ ಎಂದೊಡನೆ ಅದ್ಭುತ ಸಂಘಟನಾಶಕ್ತಿಯ, ಪ್ರತಿಭೆಗಳನ್ನು ಹುಡುಕಿ ತೆಗೆಯುವ ಗುಣಗ್ರ್ರಾಹಿತ್ವದ, ಅಪಾರ ಮನುಷ್ಯ ಪ್ರೀತಿಯ ಅವರ ಅಪರೂಪದ ವ್ಯಕ್ತಿತ್ವ ನೆನಪಾಗುತ್ತದೆ. ಮಂಡ್ಯ ಜಿಲ್ಲೆಯ ಸಾಂಸ್ಕೃತಿಕ ಚಟುವಟಿಕೆಗಳಿಗೆ ಮರುಜನ್ಮ ನೀಡಿದ ಅವರ ಕರ್ತೃತ್ವ ಶಕ್ತಿ ಅನನ್ಯ. ಇಂಥದೇ ಶಕ್ತಿಯನ್ನು ನಾಡಿನ ಯಾವುದೇ ದೊಡ್ಡ ಸಂಸ್ಥೆಯ ಚಟುವಟಿಕೆಗಳ ಬಗೆಗೆ ಅವರು ಕ್ರಿಯಾಶೀಲಗೊಳಿಸಬಲ್ಲರೆಂಬುದು ನನ್ನ ದೃಢ ವಿಶ್ವಾಸ.

ಡಾ. ಎಂ.ಜಿ. ಈಶ್ವರಪ್ಪ

ಜಾನಪದ ತಜ್ಞರು, ದಾವಣಗೆರೆ

ಜೆ.ಪಿ. ಎಂದರೆ ಚಿರಪರಿಚಿತರಾಗಿರುವ ಜಯಪ್ರಕಾಶಗೌಡರದು ಮತ್ತು ನನ್ನದು ಮೂರು ದಶಕಗಳಿಗೂ ಮಿಕ್ಕಿದ ಸಾಂಸ್ಕೃತಿಕ ಒಡನಾಟ, ಅಕಾಡೆಮಿಗಳಲ್ಲಿ, ವಿಶ್ವವಿದ್ಯಾನಿಲಯದ ಸಭೆಗಳಲ್ಲಿ, ಪರಿಷತ್ತಿನ ಚಟುವಟಿಕೆಗಳಲ್ಲಿ, ವಿಚಾರ ಸಂಕಿರಣಗಳ ನೆಲೆಗಳಲ್ಲಿ ಹಾಗೂ ರಂಗಚಟುವಟಿಕೆಗಳಲ್ಲಿ ಅವರದು ಸೃಜನಶೀಲ ಸಂಘಟನಾತ್ಮಕ ಮನಸ್ಸು. ಮಂಡ್ಯದ ಕರ್ನಾಟಕ ಸಂಘಕ್ಕೆ ರಾಜ್ಯಮಟ್ಟದ ಮತ್ತು ಮೀರಿದ ಸಾಂಸ್ಥಿಕ ಸ್ವರೂಪ ತಂದುಕೊಟ್ಟ ಯಶಸ್ಸಿನ ವ್ಯಕ್ತಿ. ಪಕ್ವ ಹಾಗೂ ವಿಶಾಲ ಮನಸ್ಸಿನ ಈ ಸ್ನೇಹ ಜೀವಿಯಿಂದ ನಾನು ಇನ್ನೂ ಹೆಚ್ಚಿನದನ್ನೂ ನಿರೀಕ್ಷಿಸುತ್ತೇನೆ.

ಡಾ. ರಾಮಕೃಷ್ಣ ಮರಾಠೆ

ಪ್ರಸಿದ್ಧ ಲೇಖಕರು ಹಾಗೂ ಪ್ರಾಧ್ಯಾಪಕರು, ಬೆಳಗಾವಿ

ಅಖಂಡ ಕರ್ನಾಟಕ, ಕನ್ನಡ, ಕನ್ನಡಿಗರ ಶ್ರೇಯೋಭಿವೃದ್ಧಿಗಾಗಿ ತುಡಿಯುವ ಮನಸ್ಸು, ದುಡಿಯುವ ಹುಮ್ಮಸ್ಸು ಜಯಪ್ರಕಾಶಗೌಡ ಅವರದು. ಮಂಡ್ಯದಲ್ಲಿ ಎತ್ತರೇತ್ತರವಾಗಿ, ಎತ್ತರೆತ್ತರಕ್ಕೆ ಬೆಳೆಯುತ್ತಿರುವ ಕರ್ನಾಟಕ ಸಂಘ ಅವರ ಕ್ರಿಯಾಶೀಲತೆಗೊಂದು ನಿದರ್ಶನ. ಒಳನಾಡು, ಹೊರನಾಡು, ಗಡಿನಾಡಿನ ಕನ್ನಡ ಮನಸ್ಸುಗಳನ್ನು ಒಂದುಗೂಡಿಸುವ ಮೂಲಕ ಪ್ರಾದೇಶಿಕ ವಿಷಮತೆಯನ್ನು ತೊಡೆದುಹಾಕಿ ಸಾಮರಸ್ಯದ ಸಂಚಲನವನ್ನುಂಟು ಮಾಡುವ ದೆಸೆಯಲ್ಲಿ ಅವರು ಪ್ರಯತ್ನಶೀಲರಾಗಿರುವುದು ನಮಗೆಲ್ಲ ಅಭಿಮಾನದ ಸಂಗತಿ.

ಸುಬ್ರಾಯ ಚೊಕ್ಕಾಡಿ

ಪ್ರಸಿದ್ಧ ಕವಿಗಳು, ಸುಳ್ಯ

ಜೆ.ಪಿ ಎಂದೇ ಆತ್ಮೀಯರಿಂದ ಕರೆಯಲ್ಪಡುವ ಜಯಪ್ರಕಾಶಗೌಡರು ನಮ್ಮ ನಾಡಿನ ಸಾಂಸ್ಕೃತಿಕ ಲೋಕದ ಪ್ರಮುಖರಲ್ಲಿ ಒಬ್ಬರು. ಮಂಡ್ಯವನ್ನು ನಾಡಿನ ಬಹುಮುಖ್ಯ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಕೇಂದ್ರವಾಗಿ ಕಟ್ಟಿ ಬೆಳೆಸಿದ್ದರಲ್ಲಿ ಜೆಪಿ ಅವರ ಕ್ರಿಯಾಶೀಲ ವ್ಯಕ್ತಿತ್ವದ ಪಾಲು ದೊಡ್ಡದು. ಪ್ರಖರ ಸಾಹಿತ್ಯಕ ಒಳನೋಟಗಳುಳ್ಳ ಗೌಡರು ಅದ್ಭುತ ಸಂಘಟಕರೆಂದೇ ಪ್ರಸಿದ್ಧರಾಗಿದ್ದಾರೆ. ಸಾಹಿತ್ಯ, ಕಲೆಗಳ ಆಳ ತಿಳುವಳಿಕೆ ಹಾಗೂ ಸಂಘಟನಾ ಶಕ್ತಿ ಇವೆರಡೂ ಸೇರಿಕೊಂಡಿರುವ ಅಪರೂಪದ ವ್ಯಕ್ತಿ ಜಯಪ್ರಕಾಶಗೌಡರು. ವ್ಯಕ್ತಿ ಹಾಗೂ ವ್ಯಕ್ತಿತ್ವ ಎರಡೂ ದೃಷ್ಟಿಯಿಂದಲೂ ದೊಡ್ಡವರು.

ನಾ. ಮೊಗಸಾಲೆ

ಪ್ರಸಿದ್ಧ ಸಾಹಿತಿಗಳು, ಅಧ್ಯಕ್ಷರು, ಕಾಂತಾವರ ಕನ್ನಡಸಂಘ

ನಾನು ಬಲ್ಲಹಾಗೆ ಪ್ರೊ. ಜಯಪ್ರಕಾಶಗೌಡ ಅವರು ಒಬ್ಬ ಅದ್ಭುತ ಸಂಘಟಕರು. ಅಪರೂಪದ ಒಳನೋಟವುಳ್ಳ ಅತ್ಯಂತ ಜೀವನ ಪ್ರೀತಿಯ ಮಾನವೀಯ ಕಾಳಜಿಯ ಪ್ರೀತಿ ತುಂಬಿದ ಕೊಡ. ಅವರು ಇರುವ ಯಾವುದೇ ಸಂಘಟನೆಯನ್ನು ಆಕಾಶದೆತ್ತರಕ್ಕೆ ಕಟ್ಟಿ ನಿಲ್ಲಿಸಬಲ್ಲ ಸಾಮರ್ಥ್ಯವುಳ್ಳವರು. ಅಷ್ಟೇ ದೊಡ್ಡ ಕನಸುಗಾರರೂ ಕೂಡ. ಅವರಿಂದ ನಾನು ಕನ್ನಡಪರ ಕೆಲಸವನ್ನು ದೊಡ್ಡ ರೀತಿಯಲ್ಲಿ ಮತ್ತು ಇನ್ನಷ್ಟು ಹೆಚ್ಚಿನ ವ್ಯಾಪ್ತಿಯಲ್ಲಿ ನಿರೀಕ್ಷಿಸುತ್ತೇನೆ.

ಲಿಂಗಣ್ಣ ಬಂಧೂಕಾರ್

ಮಕ್ಕಳ ಸಾಹಿತಿ, ಮಂಡ್ಯ

ಜೆ.ಪಿ. ಸಾಂಸ್ಕೃತಿಕ ಕ್ಷೇತ್ರದಲ್ಲಿ ದೊಡ್ಡ ಹೆಸರು. ಸಂಘಟನೆಗೆ ಹೇಳಿಮಾಡಿಸಿದ ವ್ಯಕ್ತಿತ್ವ! ಸಾಹಿತ್ಯ, ಕಲೆ, ಸಂಸ್ಕೃತಿ, ಸಂಘಟನೆಗಳ ಸಾಹಚರ್ಯದಲ್ಲಿ ಬದುಕನ್ನು ರೂಪಿಸಿಕೊಂಡವರು; ಸಾರ್ಥಕಪಡಿಸಿಕೊಂಡ ಚೈತನ್ಯ. ಆಬಾಲವೃದ್ಧರಾದಿಯಾಗಿ ಎಲ್ಲರೊಡನೆ ಬೆರೆಯುವ, ಹೃದಯತೆರೆಯುವ ಕಾರ್ಯಚಟುವಟಿಕೆಗೆ ಸದಾ ಹಾತೊರೆಯುವ ಜಯಪ್ರಕಾಶಗೌಡರು ಎಂಥ ಸ್ಥಾನಕ್ಕೂ ಗೌರವ ಹಾಗೂ ಬೆಲೆ ತಂದುಕೊಡಬಲ್ಲವರು. ಸದಾ ನೆನಪುಳಿಯುವ ಕಾರ್ಯವನ್ನೇ ಮಾಡಿ ತೋರುವ ಧೀಮಂತ ! ಅಂಥವರ ಅಗತ್ಯ ಮತ್ತು ಸೇವೆ ಸಮಾಜಕ್ಕೆ ಸದಾ ಅನಿವಾರ್ಯ.

ಹ.ಕ. ರಾಜೇಗೌಡ

ಪಜಾನಪದ ತಜ್ಞ

ಜಯಪ್ರಕಾಶಗೌಡ ಒಬ್ಬ ದೈತ್ಯ ಸಂಘಟಕ. ಈ ಸಾಹಸಕ್ಕೆ ಕಳೆದ 3ದಶಕಗಳ ಕಾಲ ನಾನೇ ಸಾಕ್ಷಿಯಾಗಿದ್ದೇನೆ. ಉತ್ತಮ ಅಧ್ಯಾಪಕ, ಒಳ್ಳೆಯ ಬರಹಗಾರ, ಅಸಾಧಾರಣ ವಾಗ್ಮಿ ಮುಂತಾದ ಅವರ ಶಕ್ತಿಗಳು ಸಂಘಟನೆಯ ಶಕ್ತಿಯ ಎದುರು ಮಂಕಾಗಿ ಬಿಡುತ್ತವೆ. ಯಾವುದೇ ಒಂದು ಸಂಘಟನೆ, ಅದು ಎಂಥದ್ದೇ ಹೀನ ಸ್ಥಿತಿಯಲ್ಲಿರಲಿ ಜೆ.ಪಿ. ಕೈಗೆ ಸಿಕ್ಕಿದರೆ ಅದು ರಾಜ್ಯ, ರಾಷ್ಟ್ರೀಯ ಮಟ್ಟಕ್ಕೇರಲು ಸಾಧ್ಯ. ಮಂಡ್ಯದ ಕರ್ನಾಟಕ ಸಂಘ ಇದಕ್ಕೆ ಸಾಕ್ಷಿ. ಮಂಡ್ಯದ ರೂವಾರಿ ಕೆ.ವಿ. ಶಂಕರಗೌಡರು ಒಮ್ಮೆ ನನ್ನೊಂದಿಗೆ ಹೇಳಿದರು ‘ಈ ಜಯಪ್ರಕಾಶ ನನ್ನ ಸಾಂಸ್ಕೃತಿಕ ಉತ್ತರಾಧಿಕಾರಿ ಆಗಬಹುದು ಎಂದು’. ಅದು ಇಂದು ನಿಜವಾಗಿದೆ.

ಪಿ. ಸಿದ್ದಗಂಗಯ್ಯ ಕಂಬಾಳು

ಪ್ರಸಿದ್ಧ ನಾಟಕಕಾರರು, ಬೆಂಗಳೂರು

ಮಂಡ್ಯದ ಜೆ.ಪಿ. ಎಂದೇ ಹೆಸರಾಗಿರುವ ಜಯಪ್ರಕಾಶಗೌಡರು ಸಾಹಿತ್ಯ ಮತ್ತು ಸಂಘಟನೆಗಳೆರಡನ್ನೂ ನಿರ್ಮಲವಾಗಿ ನಿರ್ವಹಿಸಬಲ್ಲ ಸಾಹಿತಿ. ಕೆ.ವಿ. ಶಂಕರಗೌಡರು ಆಚರಿಸುತ್ತಾ ಬಂದಿದ್ದ ರಂಗಜಾಗರಣೆಯನ್ನು ಜೆ.ಪಿ.ಯವರು ಮುಂದುವರಿಸಿಕೊಂಡು ಬಂದಿದ್ದಾರೆ. ರಂಗಭೂಮಿ, ಸಾಹಿತ್ಯ ಮತ್ತು ಸಂಘಟನಾ ಚಾತುರ್ಯಕ್ಕೆ ಬಹು ಆಪ್ತವಾದ ಉದಾಹರಣೆ ಜಯಪ್ರಕಾಶಗೌಡರು. ಮಂಡ್ಯ ಜಿಲ್ಲೆಯ ಮತ್ತು ಮೈಸೂರು ಪ್ರಾಂತ್ಯದ ಸಾಂಸ್ಕೃತಿಕ ಸಂದರ್ಭಗಳಲ್ಲಿ ಜೆ.ಪಿ. ಯಶಸ್ವಿ ಪರಿಚಾರಕರೆಂದೇ ನನ್ನಂತವರಿಗೆ ಇಷ್ಟವಾಗುತ್ತಾರೆ. ರಂಗಭೂಮಿ ಮತ್ತು ಸಾಹಿತ್ಯದ ಹಳೆಯ ತಲೆಮಾರನ್ನು ಗೌರವಿಸುವ ಹೊಸ ಪೀಳಿಗೆಯನ್ನು ಪ್ರೀತಿಸುವ ಸಮನ್ವಯದಲ್ಲಿ ಜಯಪ್ರಕಾಶಗೌಡರು ಸದಾ ಮುಂದಿನ ಸಾಲಿನಲ್ಲಿಯೇ ನಿಲ್ಲುತ್ತಾರೆ.