ಎಚ್.ಮೊಳ್ಳೇಗೌಡ ಅವರು ಮಂಡ್ಯ ತಾಲ್ಲೂಕು, ಬಸರಾಳು ಹೋಬಳಿ, ಹುನುಗನಹಳ್ಳಿ ಗ್ರಾಮದವರು. ಶ್ರೀಯುತರು ರೈತರಾಗಿ, ಹೋಬಳಿ ಹಾಗೂ ತಾಲ್ಲೂಕು ಮಟ್ಟದಲ್ಲಿ ರಾಜಕೀಯ ಮುಖಂಡರಾಗಿ, ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ, ಪಿ.ಎಲ್.ಡಿ ಬ್ಯಾಂಕ್ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿ ಜನಪ್ರಿಯ ಮುಖಂಡರಾಗಿದ್ದರು. ಇವರ ಮೊಮ್ಮಗ ಶ್ರೀ ಎಂ.ಆರ್.ಮಂಜು, ಮಂಡ್ಯದ ಎಕ್ಸಲೆನ್ಸ್ ಪ.ಪೂ ಕಾಲೇಜಿನಲ್ಲಿ ಭೌತಶಾಸ್ತ್ರ ಉಪನ್ಯಾಸಕರಾಗಿದ್ದು, ತನ್ನ ತಾತನವರ ಹೆಸರಿನಲ್ಲಿ ಪ್ರತಿವರ್ಷ ವಿವಿಧ ಕಾವ್ಯಗಳ ಬಗ್ಗೆ ಮೂರು ದಿವಸ ಉಪನ್ಯಾಸ ಏರ್ಪಡಿಸಲು ದತ್ತಿಯನ್ನು ಸ್ಥಾಪಿಸಿ ನಮ್ಮೆಲ್ಲರ ಪ್ರೀತಿಗೆ ಪಾತ್ರರಾಗಿದ್ದಾರೆ.
ಕರ್ನಾಟಕ ಸಂಘದ ಒಂದು ವಿಶೇಷವಾದ ಕಾರ್ಯವನ್ನಿಲ್ಲಿ ಸಾರ್ವಜನಿಕರು ಗಮನಿಸಬೇಕು. ಪ್ರಶಸ್ತಿ ಸ್ಥಾಪನೆಗೆ ಸಿದ್ಧರು ಮತ್ತು ಪ್ರಸಿದ್ಧರ ಹೆಸರುಗಳನ್ನು ಮಾತ್ರ ಪರಿಗಣಿಸುವುದಲ್ಲ. ಗೌರವಯುತರಾಗಿ ಬಾಳಿದ ಬದುಕಿದ ಶ್ರೀ ಸಾಮಾನ್ಯರು ಸಿದ್ಧ ಪ್ರಸಿದ್ಧರಷ್ಟೇ ಕರ್ನಾಟಕ ಸಂಘಕ್ಕೆ ಮುಖ್ಯರಾಗುತ್ತಾರೆ. ಕುವೆಂಪು ಆಶಯದಂತೆ ಶ್ರೀ ಸಾಮಾನ್ಯನೇ ಭಗವತ್ ಮಾನ್ಯಃ ಶ್ರೀಸಾಮಾನ್ಯನೇ ಭಗವತ್ಧನ್ಯಃ, ಈ ಉಕ್ತಿಗೆ ಅನುಗುಣವಾಗಿ ಕರ್ನಾಟಕ ಸಂಘ ಜಾತ್ಯಾತೀತವಾಗಿ, ಧರ್ಮಾತೀತವಾಗಿ, ಪಕ್ಷಾತೀತವಾಗಿ ಹೆಸರುಗಳನ್ನು ಪರಿಗಣಿಸಿ ದತ್ತಿಗಳನ್ನು ಸ್ಥಾಪಿಸಿಕೊಂಡು ಬರುತ್ತಿದೆ. 2007ರ ಜನವರಿಯಿಂದ ಮೊದಲ್ಗೊಂಡು ಪ್ರತಿವರ್ಷದ ಜನವರಿಯಲ್ಲಿ ದೇವರನಾಮ ಗಾಯನ ಸ್ಪರ್ಧೆಯನ್ನು ಬೆಂಗಳೂರಿನ ರಮಣಶ್ರೀ ಕಂಫರ್ಟ್ನ ಪ್ರಸಿದ್ಧ ಹೋಟೆಲ್ ಉದ್ಯಮಿ ಹಾಗೂ ಅಂಕಣರಾದ ಶ್ರೀ ಎಸ್.ಷಡಕ್ಷರಿ ಅವರ ನೆರವಿನಿಂದ ಕರ್ನಾಟಕ ಸಂಘವು ಆಯೋಜಿಸುತ್ತಿದೆ. ಇದಕ್ಕೆ ಶ್ರೀಷಡಕ್ಷರಿ ಅವರು ಒಂದು ಪರ್ಯಾಯ ಪಾರಿತೋಷಕವನ್ನು ನೀಡಿದ್ದಾರೆ. ಜೊತೆಗೆ ಸ್ಪರ್ಧೆಯ ವಿಜೇತರಿಗೆ ಬಹುಮಾನದ ಮೊತ್ತವಾಗಿ 25,000 ರೂ.ಗಳನ್ನು ಪ್ರತಿವರ್ಷ ನೀಡುತ್ತಿದ್ದಾರೆ.