ಯಾವುದೇ ಹಂತದ ಶೈಕ್ಷಣಿಕ ಚಟುವಟಿಕೆಯ ಸಫಲತೆಗೆ ಸುಸಜ್ಜಿತ ಗ್ರಂಥಾಲಯ ಅತ್ಯವಶ್ಯಕ, ಕರ್ನಾಟಕ ಸಂಘವು ತನ್ನ ಆರಂಭಕಾಲದಲ್ಲಿ ಉತ್ಕೃಷ್ಟ ಗ್ರಂಥ ಸಂಗ್ರಹವನ್ನು ಹೊಂದಿದ್ದು ಅವುಗಳಲ್ಲಿ ಉಳಿಸಿರುವ ಗ್ರಂಥಗಳನ್ನು ಸಂರಕ್ಷಿಸಿ ಇಡಲಾಗಿದೆ ಎಂದು ಈಗಾಗಲೇ ಪ್ರಸ್ತಾಪಿಸಿದೆ. ಈ ಗ್ರಂಥಗಳ ಜೊತೆಗೆ ಕನ್ನಡ, ಇಂಗ್ಲಿಷ್, ಸಂಸ್ಕೃತ ಮೊದಲಾದ ಭಾಷೆಗಳಲ್ಲಿ ವಿವಿಧ ಜ್ಞಾನಶಾಖೆಗೆ ಸಂಬಂಧಿಸಿದಂತೆ ರಚನೆಯಾಗುತ್ತಿರುವ ಅಧ್ಯಯನ ಯೋಗ್ಯವಾದ ಎಲ್ಲ ಪುಸ್ತಕಗಳನ್ನು ಸಂಘಕ್ಕೆ ತರಿಸಿಕೊಂಡು ಗ್ರಂಥಾಲಯವನ್ನು ಸಮೃದ್ಧಗೊಳಿಸುವ ಮತ್ತು ಸಕಾಲೀಕಗೊಳಿಸುವ ಧ್ಯೇಯ ನಮ್ಮ ಸಂಘದ್ದು, ಹಾಗಾಗಿ ೨೦೦೭-೦೮ರ ಶೈಕ್ಷಣಿಕ ವರ್ಷ ಒಂದರಲ್ಲೇ ಸುಮಾರು ಎರಡು ಲಕ್ಷ ರೂ, ಮೊತ್ತದ ಮೂರು ಸಾವಿರಕ್ಕೂ ಹೆಚ್ಚು ಪುಸ್ತಕಗಳನ್ನು ಗ್ರಂಥಾಲಯಕ್ಕೆಕೊಳ್ಳಲಾಗಿದೆ. ನಾಡಿನ ಹಿರಿಯ ಸಂಶೋಧಕರೂ, ಜಾನಪದ ವಿದ್ವಾಂಸರೂ ಆದ ಶ್ರೀ ಹ.ಕ.ರಾಜೇಗೌಡರು ತಮ್ಮ ಸಂಗ್ರಹದಿಂದ ಒಂದೂವರೆ ಸಾವಿರ ಅಮೂಲ್ಯ ಪುಸ್ತಕಗಳನ್ನು ದಾನವಾಗಿ ನೀಡಿದ್ದಾರೆ.
ಮಂಡ್ಯ ತಾಲೂಕು ಶಾಸಕರು ಕರ್ನಾಟಕ ಸಂಘದ ಪ್ರಧಾನ ಪೋಷಕರು ಆದ ಶ್ರೀ ಎಂ ಶ್ರೀನಿವಾಸ್ ಅವರು ತಮ್ಮ ಶಾಸಕರ ಅನುದಾನದಲ್ಲಿ ಗ್ರಂಥಾಲಯವನ್ನು ನಿರ್ಮಿಸಲು 15 ಲಕ್ಷ ರೂಗಳನ್ನು ಅನುದಾನ ಕೊಡಿಸಿ ಸಂಘದ ಶೈಕ್ಷಣಿಕ ಚಟುವಟಿಕೆಗೆ ಸಹಕರಿಸಿದ್ದಾರೆ.
`ಇ-ಗ್ರಂಥಾಲಯ’ವನ್ನು ಸಜ್ಜುಗೊಳಿಸುವ ಕಾರ್ಯದಲ್ಲಿ ಕರ್ನಾಟಕ ಸಂಘ ಮಹತ್ವದ ಹೆಜ್ಜೆಯಿಟ್ಟಿದೆ. ಇಂದು ಗ್ರಂಥಾಲಯದಲ್ಲಿ 20 ಸಾವಿರದ ಹತ್ತಿರ ಗ್ರಂಥಗಳಿವೆ. ಕರ್ನಾಟಕ ಸಂಘವು ಜಿಲ್ಲಾ ಸಾರ್ವಜನಿಕ ಗ್ರಂಥಾಲಯದ ನೆರವಿನೊಂದಿಗೆ ಮಂಡ್ಯದ ಜನತೆಗಾಗಿ ವಾಚನಾಲಯವನ್ನು ತೆರೆದಿದೆ. ಪ್ರಸಿದ್ಧ ದಿನಪತ್ರಿಕೆಗಳು, ನಿಯತಕಾಲಿಕೆಗಳು, ಹಾಗೂ ಸ್ಥಳಿಯ ದಿನಪತ್ರಿಕೆಗಳನ್ನು ಸಾರ್ವಜನಿಕ ಗ್ರಂಥಾಲಯವು ನಮ್ಮ ವಾಚನಾಲಯಕ್ಕೆ ಒದಗಿಸುತ್ತಿದೆ.ಪ್ರಸ್ತುತ ಕರ್ನಾಟಕ ಸಂಘದ ಗ್ರಂಥಾಲಯವು ಡಿಜಿಟಲ್ ವ್ಯವಸ್ಥೆಗೆ ಒಳಪಟ್ಟಿದ್ದು ಇನ್ನು ಮುಂದೆ ಹೆಚ್ಚಿನ ಸಂಖ್ಯೆಯಲ್ಲಿ ಓದುಗವರ್ಗವನ್ನು ತಲುಪಲಿದೆ