fashion img

ನಮ್ಮ ಬಗ್ಗೆ

ಕರ್ನಾಟಕ ಸಂಘದ ಪರಿಚಯ.

img

`ಕರ್ನಾಟಕ ಸಂಘ’ ಕರ್ನಾಟಕದ ಹಿರಿಯ ಸಾಂಸ್ಕೃತಿಕ ಸಂಘಟನೆಗಳಲ್ಲಿ ಒಂದು. ಮಂಡ್ಯ ಜಿಲ್ಲೆಯ ಹಿರಿಯ ಸಾಂಸ್ಕೃತಿಕ ನಾಯಕರ ಆಸಕ್ತಿಯಂತೆ ಸ್ವಾತಂತ್ರ್ಯ ಪೂರ್ವದಲ್ಲೇ, ಅಂದರೆ 1933ರಲ್ಲಿ ಮಂಡ್ಯ ನಗರದಲ್ಲಿ ಈ ಸಂಘವು ಸ್ಥಾಪನೆಯಾಯಿತು. ಸಂಘವು ಅಧಿಕೃತವಾಗಿ 1946ರಲ್ಲಿ ನೋಂದಣಿಗೊಂಡು, ಇದೀಗ 75 ವರ್ಷಗಳನ್ನು ಪೂರೈಸಿ. ಅಮೃತ ಮಹೋತ್ಸವದ ಸಂಭ್ರಮದಲ್ಲಿದೆ. 2007ರವರೆಗೆ ಅನೇಕ ಏಳುಬೀಳುಗಳನ್ನು ಕಂಡು ಇದೀಗ ದಾಪುಗಾಲಿಟ್ಟು ಮುಂದುವರಿಯುತ್ತಿದೆ. ಶೈಕ್ಷಣಿಕವಾಗಿ, ಸಾಂಸ್ಕೃತಿಕವಾಗಿ, ಸಂಶೋಧನಾತ್ಮಕವಾಗಿ ತನ್ನನ್ನು ವಿಸ್ತರಿಸಿಕೊಂಡಿರುವ ಈ ಸಂಘದ ಚಟುವಟಿಕೆಗಳ ಕಿರುಪರಿಚಯವನ್ನು ಈ ಕೆಳಗೆ ನೀಡಲಾಗಿದೆ.



ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸುವ ಉದ್ದೇಶದಿಂದ ಸಂಘಟಿತವಾದ ಈ ಸಂಸ್ಥೆಯು 75 ವರ್ಷಗಳ ಕಾಲ ತನ್ನ ಚೈತನ್ಯವನ್ನು ಉಳಿಸಿಕೊಂಡು ಕ್ರಿಯಾಶೀಲವಾಗಿದೆ ಎಂದರೆ ಅದೇನೂ ಕಡಿಮೆಯ ಸಾಧನೆಯಲ್ಲ. ಹೀಗಾಗಿ ಮಂಡ್ಯ ಜಿಲ್ಲೆಯಲ್ಲಿ ಹಿರಿಯದು ಮತ್ತು ಮಹತ್ವದ್ದು ಎನಿಸಿರುವ ಸಂಘವು ತನ್ನ ಚಟುವಟಿಕೆಗಳನ್ನು ವಿಸ್ತರಿಸಿಕೊಳ್ಳುತ್ತಿದೆ. ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆಗೆ ಶೈಕ್ಷಣಿಕ ಮತ್ತು ಸಾಮಾಜಿಕ ಆಯಾಮದ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳುತ್ತಿದ್ದು ಹೊಸ ವಿನ್ಯಾಸವನ್ನು ಸೃಷ್ಟಿಸಿಕೊಳ್ಳುತ್ತಿದೆ.


ಆ ಕಾಲಕ್ಕೆ ಮಂಡ್ಯದ ಪ್ರಸಿದ್ಧ ನ್ಯಾಯವಾದಿಗಳೂ ಸ್ವಾತಂತ್ರ್ಯ ಹೋರಾಟಗಾರರೂ ಆಗಿದ್ದ ಶ್ರೀಯುತರುಗಳಾದ ಇಂಡುವಾಳು ಎಚ್.ಹೊನ್ನಯ್ಯ, ಎಂ.ಮಹಾಬಲರಾವ್, ಎಂ.ಎನ್.ಲಕ್ಷ್ಮೀನಾರಾಯಣರಾವ್, ಚಿ.ನಾ.ವಿಶ್ವನಾಥ ಶಾಸ್ತ್ರಿ, ಬಿ.ಎಸ್.ನಾಗಪ್ಪ, ಎಂ.ಕೆ.ಸಿಂಗ್ಲಾಚಾರ್, ಜಿ.ಚೆನ್ನಬಸಪ್ಪ, ಕೆ.ವಿ.ನಾರಾಯಣರಾವ್ ಇವರಿಂದ ಸಂಘವು ನೋಂದಾಯಿಸಲ್ಪಟ್ಟು ಅಸ್ತಿತ್ವಕ್ಕೆ ಬಂದಿತು. ಶ್ರೀಯುತರುಗಳಾದ ಎಂ.ಮಹಾಬಲರಾವ್, ಜಿ.ಮಾದೇಗೌಡ, ಎಂ.ಬಿ.ಬೋರೇಗೌಡ, ವೈ.ಎಸ್.ರಾಮರಾವ್, ಜಿ.ಸಿದ್ದೇಗೌಡ, ನಾಗರಾಜಪ್ಪ, ಎನ್.ಎಚ್.ರಾಜು ಮಲ್ಲನಾಯಕನಕಟ್ಟೆ, ಎಂ.ಬಿ.ಬೋರೇಗೌಡ ಮುಂತಾದವರು ಸಂಘದ ಅಧ್ಯಕ್ಷರುಗಳಾಗಿ ಕಾಲಕಾಲಕ್ಕೆ ಹೊಸ ಚೈತನ್ಯ ತುಂಬುತ್ತಾ ಸಂಘವನ್ನು ಮುನ್ನಡೆಸಿಕೊಂಡು ಬಂದಿದ್ದಾರೆ.

img
img

ಬೆಳ್ಳಿಯ ಕರಂಡಕ

ಮಂಡ್ಯದ ಜನನಾಯಕರೂ ದೂರದರ್ಶಿಗಳೂ ಆದ ಶ್ರೀಯುತ ಕೆ.ವಿ.ಶಂಕರಗೌಡ, ಬಿ.ಪಿ.ನಾಗರಾಜಮೂರ್ತಿ, ಪಿ.ಎನ್.ಜವರಪ್ಪಗೌಡ ಮುಂತಾದವರು ಕರ್ನಾಟಕ ಸಂಘದ ನಿಕಟವರ್ತಿಗಳಾಗಿದ್ದು, ಇದರ ಪುರೋಭಿವೃದ್ಧಿಗೆ ಸಹಕರಿಸಿದ್ದಾರೆ. ಸಂಘಕ್ಕೆ ಬಹುದೀರ್ಘಕಾಲ ಅಧ್ಯಕ್ಷರಾಗಿ ಎಂ.ಮಹಾಬಲರಾಯರು, ಕಾರ್ಯದರ್ಶಿಯಾಗಿ ನಾಗಮಂಗಲದ ಶಾಸಕರಾಗಿದ್ದ ಶ್ರೀ ಕೆ.ಸಿಂಗಾರಿಗೌಡರು ಜವಾಬ್ದಾರಿ ನಿರ್ವಹಿಸಿದ್ದಾರೆ. ನಾಡಿನ ಹೆಸರಾಂತ ಹಿರಿಯ ವಿದ್ವಾಂಸರಾದ ಜಿ.ವೆಂಕಟಸುಬ್ಬಯ್ಯನವರು ಸಹ ಕೆಲವು ಕಾಲ ಕಾರ್ಯದರ್ಶಿಯಾಗಿ ಸಂಘದ ಏಳ್ಗೆಗೆ ದುಡಿದಿದ್ದಾರೆ. ಅಲ್ಲದೆ ಶ್ರೀಯುತರುಗಳಾದ ಎಸ್.ಎಲ್.ಪುಟ್ಟಮಾದಪ್ಪ, ಎಂ.ಕೆ.ಶಂಕರನಾರಾಯಣ ಭಟ್, ಗಿರೀಗೌಡ, ಸಿ.ಎನ್.ದಾಸರಾಜು, ಎಸ್.ಹೊನ್ನಯ್ಯ ಶಿವಲಿಂಗಯ್ಯ, ಬೆ.ನ.ಶ್ರೀನಿವಾಸಶೆಟ್ಟಿ, ಕೆ.ಪ್ರಹ್ಲಾದರಾವ್, ಎಚ್.ಪಿ.ರಮೇಶ್, ಅನಂತಕುಮಾರನ್, ಶ್ರೀಮತಿ ಅಂಬುಜಮ್ಮ, ಶ್ರೀ ಲಿಂಗಣ್ಣ ಬಂಧುಕಾರ್ ಅವರ ಸೇವೆಯೂ ಸಂದಿದೆ. ಮಾಜಿ ಸಚಿವ ದಿವಂಗತ ಎಸ್.ಡಿ.ಜಯರಾಂ ಹಾಗೂ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಮಾಜಿ ಅಧ್ಯಕ್ಷರಾದ ಶ್ರೀ ಎಂ.ಲಿಂಗಯ್ಯ ಅವರೂ ಈ ಸಂಘದ ಜೊತೆ ನಿಕಟ ಸಂಪರ್ಕವಿರಿಸಿಕೊಂಡಿದ್ದರು. ಮೊದಮೊದಲು ಸಂಘವು ಮಂಡ್ಯದ ಹಳೆಯ ತಾಲ್ಲೂಕು ಕಛೇರಿಯ ಕಟ್ಟಡದ ಕೊಠಡಿಯೊಂದರಲ್ಲಿ ತನ್ನ ಕಛೇರಿಯನ್ನು ಹೊಂದಿದ್ದು, ಸಭೆ ಸಮಾರಂಭ ಉಪನ್ಯಾಸ ಮೊದಲಾದ ಚಟುವಟಿಕೆಗಳನ್ನು ಮಂಡ್ಯದ ಮುನಿಸಿಪಲ್ ಪ್ರೌಢಶಾಲೆಯ ಆವರಣದಲ್ಲಿ ನಡೆಸುತ್ತಿತ್ತು. ನಂತರ ನಗರದ ಹೃದಯ ಭಾಗದಲ್ಲಿ, ಈಗಿನ ಕ್ರೀಡಾಂಗಣದ ಸನಿಹದಲ್ಲಿ, ಜಿ.ಮಾದೇಗೌಡರು ಅಧ್ಯಕ್ಷರಾಗಿದ್ದಾಗ ಸ್ವಂತ ನಿವೇಶನವನ್ನು ಪಡೆದುಕೊಂಡಿತು.


ಒಂದು ಪರಿಮಿತ ವಿಸ್ತೀರ್ಣದಲ್ಲಿ ಸ್ವಂತ ಕಟ್ಟಡವನ್ನೂ ನಿರ್ಮಿಸಿಕೊಂಡಿತು. ಕಟ್ಟಡ ನಿರ್ಮಾಣಕ್ಕೆ ಬೂದನೂರಿನ ದಾನಿಗಳಾದ ಶ್ರೀ ಮಂಗಯ್ಯನವರು ಧನ ಸಹಾಯ ಮಾಡಿದ್ದರು ಎಂದು ತಿಳಿದುಬರುತ್ತದೆ. ಸಂಘವು ಈಗಲೂ ತನ್ನ ಕಾರ್ಯಚಟುವಟಿಕೆಗಳನ್ನು ನಡೆಸುತ್ತಿರುವ ಈ ಕಟ್ಟಡದ ಶಿಲಾನ್ಯಾಸವು 1962ರಲ್ಲಿ, ಅಂದರೆ ಸಂಘವು ಆಸ್ತಿತ್ವಕ್ಕೆ ಬಂದ ಹದಿನಾರು ವರ್ಷಗಳಲ್ಲಿ ಕರ್ನಾಟಕ ರಾಜ್ಯದ ಆಗಿನ ಮುಖ್ಯಮಂತ್ರಿಗಳಾಗಿದ್ದ ಶ್ರೀ ಬಿ.ಡಿ.ಜತ್ತಿ ಅವರಿಂದ ನೆರವೇರಿದೆ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದವರು ಆಗಿನ ಮೈಸೂರು ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿದ್ದ ಶ್ರೀ ಎಸ್.ನಿಜಲಿಂಗಪ್ಪನವರು. 1965ರಲ್ಲಿ ಕಟ್ಟಡದ ನಿರ್ಮಾಣ ಕಾರ್ಯವು ಪೂರ್ಣಗೊಂಡು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದ ಶ್ರೀ ಜಿ.ವೆಂಕಟಸುಬ್ಬಯ್ಯ ಅವರಿಂದ ಉದ್ಘಾಟನೆಯಾಗಿದೆ. ನಾಡಿನ ರಾಜಕೀಯ ಮತ್ತು ಸಾಂಸ್ಕೃತಿಕ ಲೋಕದ ಈ ದಿಗ್ಗಜರು ಸಂಘದ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದರೆಂಬುದು ಆ ವೇಳೆಗೆ ಇದು ಪಡೆದುಕೊಂಡಿದ್ದ ಖ್ಯಾತಿಗೆ ಹಾಗೂ ಅಗ್ಗಳಿಕೆಗೆ ಸಾಕ್ಷಿಯಾಗಿದೆ. ಸಂಘದ ಉಜ್ವಲ ಭವಿಷ್ಯವನ್ನು ಸಾರುವ ಸಂಕೇತವೂ ಆಗಿದೆ. ಮಂಡ್ಯದ ಮಹತ್ವದ ಸಾಂಸ್ಕೃತಿಕ ಸಂಸ್ಥೆ `ಕರ್ನಾಟಕ ಸಂಘ’ದ ನವೋನ್ಮೇಷದ ದಿನಗಳಲ್ಲಿ ನಾಡಿನ ಬಹುತೇಕ ಹಿರಿಯ ಸಾಹಿತಿಗಳು, ಕಲಾವಿದರು ಹಾಗೂ ಚಿಂತಕರು ಮಂಡ್ಯಕ್ಕೆ ಆಗಮಿಸಿ ಸಂಘದ ಆಶ್ರಯದಲ್ಲಿ ಉಪನ್ಯಾಸ ಮೊದಲಾದ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಬಿ.ಎಂ.ಶ್ರೀ., ಕುವೆಂಪು, ಮಾಸ್ತಿ, ಜಿ.ಪಿ.ರಾಜರತ್ನಂ, ಶಿವರಾಮ ಕಾರಂತ ಮೊದಲಾದ ಸಾಹಿತಿಗಳು, ಸರ್.ಎಂ.ವಿ.ಗುಡಿಬಂಡೆ ರಾಮಾಚಾರ್ಯರು, ಮೈಸೂರಿನ ಭಾರತದ ಕೃಷ್ಣರಾಯರು ಮೊದಲಾದ ಗಮಕಿಗಳು ಸಂಘಕ್ಕೆ ಆಗಮಿಸಿ ಕಾರ್ಯಕ್ರಮಗಳನ್ನು ನೀಡಿ ಸಂಘದ ಸಾಂಸ್ಕೃತಿಕ ಮಹತ್ವವನ್ನು ಚಿರಸ್ಥಾಯಿಯಾಗಿಸಿದ್ದಾರೆ.


ಕುವೆಂಪು ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಾಗ ಕರ್ನಾಟಕ ಸಂಘವು ಅವರನ್ನು ಆದರಪೂರ್ವಕವಾಗಿ ಮಂಡ್ಯ ನಗರಕ್ಕೆ ಕರೆತಂದು ಅದ್ದೂರಿಯಾಗಿ ಸನ್ಮಾನಿಸಿದೆ. ಶ್ರೀ ಕುವೆಂಪು ಅವರು ಈ ಸಂಗತಿಯನ್ನು ತಮ್ಮ ಆತ್ಮಕಥೆ `ನೆನಪಿನ ದೋಣಿಯಲ್ಲಿ’ ದಾಖಲಿಸಿರುವುದು ನಿಜಕ್ಕೂ ಸಂತಸದ ವಿಷಯವಾಗಿದೆ. ಈ ಸಮಾರಂಭದಲ್ಲಿ ಕೆ.ವಿ.ಶಂಕರಗೌಡರ ಮುಖಂಡತ್ವದಲ್ಲಿ ಎಂ.ಬಿ.ಬೋರೇಗೌಡರವರು ಮಂಡ್ಯದ ಸಂಸ್ಕೃತಿ ಪ್ರಿಯರು ಮಹಾಕವಿಗೆ ಅರ್ಪಿಸಿದ ಬೆಳ್ಳಿಯ ಕರಂಡವನ್ನು ಕವಿಗಳು ಸಂಘಕ್ಕೇ ಹಿಂದಿರುಗಿಸಿ `ಶ್ರೀರಾಮಾಯಣದರ್ಶನಂ’ ಮಹಾಕಾವ್ಯದ ಗಮಕ ಸ್ಪರ್ಧೆಯನ್ನು ಪ್ರತಿವರ್ಷ ನಡೆಸುವಂತೆಯೂ, ಕರಂಡವನ್ನು ಪರ್ಯಾಯ ಪಾರಿತೋಷಕವಾಗಿ ಬಳಸುವಂತೆಯೂ ಸೂಚನೆ ನೀಡಿದ್ದಾರೆ. ಅದರಂತೆ ಸಂಘವು 1954ರಿಂದ ಪ್ರತಿವರ್ಷ ನಿರಂತರವಾಗಿ ಗಮಕವಾಚನ ಸ್ಪರ್ಧೆಯನ್ನು ನಡೆಸುತ್ತಾ ಬಂದಿದೆ. ಮಹಾಕವಿಯ ಆ ಅಭೂತಪೂರ್ವ ಸನ್ಮಾನ ಸಮಾರಂಭದ ನೆನಪನ್ನು ಸ್ಥಿರಗೊಳಿಸಿದೆ.

ನಮ್ಮ ಜಿಲ್ಲೆಯ ನಾಯಕರಲ್ಲೊಬ್ಬರಾಗಿದ್ದ ಶ್ರೀ ಬಿ.ಪಿ.ನಾಗರಾಜಮೂರ್ತಿ ಅವರು ಕರ್ನಾಟಕ ಸಂಘದಲ್ಲಿ ನಡೆಯುತ್ತಿದ್ದ ಚರ್ಚಾಸ್ಪರ್ಧೆಗಳ ಮಹತ್ವವನ್ನು ಶ್ರೀ ಪಿ.ಎನ್.ಜವರಪ್ಪಗೌಡರ ಅಭಿನಂದನಾ ಗ್ರಂಥ `ಸಾಹಸ ಯಾತ್ರಿ’ಯಲ್ಲಿ ದಾಖಲಿಸಿದ್ದಾರೆ. ಮಂಡ್ಯದ ಬಹುತೇಕ ಎಲ್ಲಾ ವರ್ಗದ ಜನ ಆ ಸಮಾರಂಭಗಳಿಗೆ ಆಗಮಿಸಿ ಇಡಿಕಿರಿದು ಆಲಿಸುತ್ತಿದ್ದುದನ್ನು, ವೀಕ್ಷಿಸುತ್ತಿದ್ದುದನ್ನು ವಿವರಿಸಿದ್ದಾರೆ. ಸಂಘವು ಒಂದು ಉತ್ತಮ ಗ್ರಂಥಾಲಯವನ್ನು ಹೊಂದಿತ್ತು. ಭಾರತದ ಹಾಗೂ ಜಗತ್ತಿನ ಇತಿಹಾಸ, ತತ್ತ್ವಶಾಸ್ತ್ರ, ಧರ್ಮಸಾಹಿತ್ಯ, ವಿಜ್ಞಾನ ಮೊದಲಾದ ಅನೇಕ ವಿಷಯಗಳಿಗೆ ಸಂಬಂಧಿಸಿದ ಸಮೃದ್ಧ ಗ್ರಂಥರಾಶಿ ಆ ಗ್ರಂಥಾಲಯದ ಸಂಗ್ರಹದಲ್ಲಿತ್ತು. ಆ ಸಂಗ್ರಹದಲ್ಲಿ ಬಹಳಷ್ಟು ಮಹತ್ವದ ಪುಸ್ತಕಗಳು ಇಂದಿಗೂ ಉಳಿದುಬಂದಿದ್ದು ಸಂಘದಲ್ಲಿ ಸಂರಕ್ಷಿಸಿ ಇಡಲಾಗಿದೆ. ಸಂಘದ ಸಂಘಟನಾಕಾರ್ಯದಲ್ಲಿ ತೊಡಗಿಕೊಂಡಿದ್ದ ಮಹನೀಯರ ವಿದ್ವತ್ ಪ್ರತಿಭೆಗೆ ಮತ್ತು ಆಶೋತ್ತರಕ್ಕೆ ಈ ಪುಸ್ತಕಗಳು ಸಾಕ್ಷಿಯಾಗಿವೆ. ಶ್ರೀ ನಾಗರಾಜಪ್ಪ ಅವರು ಅಧ್ಯಕ್ಷರಾಗಿದ್ದಾಗ, 1984 ರಲ್ಲಿ ಸಂಘದ ಕಟ್ಟಡದ ಎದುರಿಗಿನ ಖಾಲಿ ನಿವೇಶನದಲ್ಲಿ ಬಯಲು ರಂಗಮಂದಿರವನ್ನು ನಿರ್ಮಿಸಲಾಗಿದೆ. ಕನ್ನಡದ ಖ್ಯಾತ ಕಾದಂಬರಿಕಾರ, ಹಲವು ಹವ್ಯಾಸಗಳ ಹರಿಕಾರ ಶಿವರಾಮ ಕಾರಂತರು ರಂಗಮಂದಿರವನ್ನು ಉದ್ಘಾಟಿಸಿದ್ದಾರೆ. ಅನಂತರದ ಕೆಲವು ವರ್ಷಗಳಲ್ಲಿ ಅನೇಕ ಏಳು-ಬೀಳುಗಳನ್ನು ಕಂಡ ಕರ್ನಾಟಕ ಸಂಘವು ತನ್ನ ಎಲ್ಲ ತೊಂದರೆಗಳ ನಡುವೆಯೂ ಕಾರ್ಯಕ್ರಮಗಳನ್ನು ನಡೆಸುತ್ತಾ ತನ್ನ ಅಸ್ತಿತ್ವವನ್ನು ಕಾಪಾಡಿಕೊಂಡು ಬಂದಿತು.

ಕರ್ನಾಟಕ ಸಂಘವು ಕಲೆಯ ಪುನರುಜ್ಜೀವನಕ್ಕಾಗಿ ಈಗಾಗಲೇ ಕಲಿಕಾಕೇಂದ್ರದ ಮೂಲಕ ವಾರಾಂತ್ಯ ಶಾಲೆಯನ್ನು ತೆರೆದು ಯುವಕರಿಗೆ, ವಿದ್ಯಾರ್ಥಿಗಳಿಗೆ ಭಾಗವತಿಕೆ, ಹೆಜ್ಜೆ, ತಾಳ, ವಾದ್ಯಗಳನ್ನು ಕಲಿಸುವ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಈ ಕಲೆಯನ್ನು ಮತ್ತಷ್ಟು ಗಟ್ಟಿಗೊಳಿಸುವ ಹಲವು ಯೋಜನೆಗಳು ನಮ್ಮದಾಗಿದೆ. ಹಳೆ ಮೈಸೂರು ಭಾಗದಲ್ಲಿ ಸುತ್ತಾಡಿ ಕಲಾವಿದರನ್ನು ಸಂಘಟಿಸಿ ಪುನರುಜ್ಜೀವನಗೊಳಿಸಿ ತನ್ಮೂಲಕ ಮೂಡಲಪಾಯ ಕಲೆ ಕಲಾವಿದರಿಗೆ ಒಂದು ಭದ್ರ ನೆಲೆ ಒದಗಿಸುವ ನಿಟ್ಟಿನಲ್ಲಿ ಕರ್ನಾಟಕ ಸಂಘ ಸಕ್ರಿಯವಾಗಿ ಶ್ರಮಿಸುತ್ತಿದೆ.

ಕರ್ನಾಟಕ ಸಂಘ-75 ಅಮೃತ ಮಹೋತ್ಸವ ಸಂಭ್ರಮ:

ಡಾ.ಎಂ.ಕೆಂಪಮ್ಮ ಕಾರ್ಕಹಳ್ಳಿ

ಮಾನವನ ಪ್ರತಿಯೊಂದು ಚಟುವಟಿಕೆಗಳಲ್ಲಿ ಸಂಘ-ಸಂಸ್ಥೆಗಳು ಬಹುಮುಖ್ಯ ಪಾತ್ರವಹಿಸುತ್ತವೆ. ಹೀಗಾಗಿ ಹಿಂದಿನಿಂದಲೂ ಅಸ್ತಿತ್ವದಲ್ಲಿರುವ ಸಾಂಸ್ಕೃತಿಕ ಸಂಘಟನೆಗಳು ಪ್ರಸ್ತುತ ದಿನಗಳಲ್ಲಿ ಹೆಚ್ಚು ಅನಿವಾರ್ಯವೆನಿಸಿವೆ. ಆಧುನೀಕರಣ, ಜಾಗತೀಕರಣದ ಯಾಂತ್ರಿಕ ಯುಗದಲ್ಲಿರುವ ಮಾನವ ಯಂತ್ರಗಳ ಜೊತೆ, ಹಣದ ಜೊತೆ ಓಡುತ್ತಿದ್ದಾನೆ. ಸoಕುಚಿತವಾಗಿ ಬದುಕುತ್ತಿರುವ ಪ್ರತಿಯೊಬ್ಬ ಮನುಷ್ಯನಿಗೂ ಸಾಹಿತ್ಯಕ ಸಾಂಸ್ಕೃತಿಕ ವಾತಾವರಣ ಅನಿವಾರ್ಯವಾಗಿದೆ.

ನಲವತ್ತರ ದಶಕದಲ್ಲಿ ಕನ್ನಡಪರ ಚಟುವಟಿಕೆಗಳ ಕಾರಣಕ್ಕೆ ರಾಜ್ಯದಲ್ಲಿ ಹುಟ್ಟಿಕೊಂಡ ಹಲವು ಸಂಘ-ಸಂಸ್ಥೆಗಳ ಪೈಕಿ ಮಂಡ್ಯದ ‘ಕರ್ನಾಟಕ ಸಂಘ'ವೂ ಒಂದು. ಹಲವು ದಶಕಗಳವರೆಗೆ ಕಾರ್ಯ ಚಟುವಟಿಕೆಗಳಿಂದ ನಿರ್ಲಿಪ್ತವಾಗಿದ್ದ ಸಂಘ ಕಳೆದೊಂದು ದಶಕದಿಂದೀಚೆಗೆ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿದೆ. ಇಂಡುವಾಳು ಹೊನ್ನಯ್ಯ, ಎಂ.ಎನ್.ಶಿಂಗ್ಲಾಚಾರ್ ಮೊದಲಾದ ಸಮಾನ ಮನಸ್ಕರು ಸೇರಿ ಮಂಡ್ಯದಲ್ಲಿ ‘ಕರ್ನಾಟಕ ಸಂಘ’ ಸ್ಥಾಪಿಸಿದರು. ಮಾದವರಾಯರು, ಡಾ.ಜಿ.ಮಾದೇಗೌಡರು ಕೆ.ಸಿಂಗಾರಿಗೌಡರ ಆಡಳಿತಾವಧಿಯಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿತ್ತು. ಆ ಬಳಿಕ ಹಲವು ವರ್ಷಗಳು ಸಂಘದ ಚಟುವಟಿಕೆಗಳು ಕುಂಠಿತವಾದವು.

ಕೆ.ಟಿ.ಶಿವಲಿಂಗಯ್ಯನವರ ಒತ್ತಾಸೆಯ ಮೇರೆಗೆ ಜೆ.ಪಿ.ಅವರು ಕಾರ್ಯದರ್ಶಿಯಾಗಿ ಕರ್ನಾಟಕ ಸಂಘ ಪ್ರವೇಶಿಸಿ, ನಂತರ ಅದರ ಅಧ್ಯಕ್ಷರಾದ ಮೇಲೆ ಈ ಸಂಸ್ಥೆಗೆ ಪುನರುತ್ಥಾನದ ಶುಕ್ರದೆಸೆ ಪ್ರಾರಂಭವಾಯಿತೆನ್ನಬಹುದು. ಈ ಸಂಘದ ಬಹುಮುಖ ಪ್ರಗತಿಯ ಹಿಂದಿನ ಕರ್ತೃತ್ವಶಕ್ತಿ ಜೆಪಿ ಅವರು. ಇಡೀ ಕರ್ನಾಟಕದಲ್ಲಿಯೇ ಮಾದರಿಯಾಗಿ ಶಿಕ್ಷಣ ಕಲೆ, ಸಾಹಿತ್ಯ, ಸಂಗೀತ, ಜಾನಪದ, ರಂಗಭೂಮಿ, ಸಂಶೋಧನೆ, ಪ್ರಕಟಣೆ ಹೀಗೆ ಸರ್ವದಿಕ್ಕಿನಲ್ಲಿಯೂ ಮಂಡ್ಯ ಜಿಲ್ಲೆಯ ಹಿರಿಮೆ ಗರಿಮೆಗಳನ್ನು ಎತ್ತಿಹಿಡಿದಿರುವ ಸಂಸ್ಥೆಯಾಗಿ ಬೆಳೆಸುವಲ್ಲಿ ಶ್ರಮಿಸುತ್ತಿದ್ದಾರೆ. ಸುದೀರ್ಘ 75 ವರ್ಷಗಳ ಕಾಲ ಒಂದು ಸಂಘಟನೆ ಉಳಿದು ಏರುಗತಿಯಲ್ಲಿ ಮುನ್ನಡೆಯುವ ತನ್ನ ಚೈತನ್ಯ ಕ್ರಿಯಾಶೀಲತೆಯನ್ನು ಉಳಿಸಿಕೊಂಡು ಬಂದಿರುವುದು ಸಾಮಾನ್ಯ ಸಂಗತಿಯೇನಲ್ಲ. ಸಾಹಿತ್ಯ ಹಾಗೂ ಇತರ ಕ್ಷೇತ್ರದ ನಾಡಿನ ಗಣ್ಯಾತಿಗಣ್ಯರು ಇಲ್ಲಿ ಬಂದಿದ್ದಾರೆ, ಮಾತನಾಡಿದ್ದಾರೆ, ಗೌರವ ಪಡೆದು ಹರಸಿ ಹೋಗಿದ್ದಾರೆ. ರಾಷ್ಟ್ರಕವಿ ಕುವೆಂಪು ಅವರಿಗೆ ‘ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ' ಬಂದಾಗ ಕರ್ನಾಟಕ ಸಂಘ ಅವರನ್ನು ಆದರ ಪೂರ್ವಕವಾಗಿ ಸ್ವಾಗತಿಸಿ ಗೌರವಿಸಿದ್ದನ್ನು ತಮ್ಮ ‘ನೆನಪಿನ ದೋಣಿ'ಯಲ್ಲಿ ದಾಖಲಿಸಿದ್ದಾರೆ.

ಜೆ.ಪಿ. ಅವರ ದೂರದೃಷ್ಟಿಯ ಫಲವೆಂದರೆ ಕರ್ನಾಟಕ ಸಂಘವನ್ನು ಶೈಕ್ಷಣಿಕ ಹಾಗೂ ಸಂಶೋಧನಾತ್ಮಕ ಚಟುವಟಿಕೆಗಳಿಗೆ ವಿಸ್ತರಿಸಿದ್ದು. 2007-08ನೇ ಸಾಲಿನಿಂದ ‘ಹಂಪಿ ಕನ್ನಡ ವಿಶ್ವವಿದ್ಯಾನಿಲಯ'ದ ಸಂಯೋಜನೆ ಪಡೆದು ‘ದೂರಶಿಕ್ಷಣ ಕೇಂದ್ರ' ತೆರೆದು ಕನ್ನಡ, ಇತಿಹಾಸ, ಪತ್ರಿಕೋದ್ಯಮ ಮತ್ತು ಮಾಧ್ಯಮ ಅಧ್ಯಯನದಲ್ಲಿ ಸ್ನಾತಕೋತ್ತರ ಪದವಿ, ಕನ್ನಡ ಸಾಹಿತ್ಯ ಭಾಷಾಂತರ, ಜನಪದ ಕಲೆ, ನಾಟಕ ಕಲೆ ಮೊದಲಾದ ವಿಷಯಗಳಲ್ಲಿ ಡಿಪ್ಲೊಮೊ ಹಾಗೂ ಸರ್ಟಿಫಿಕೆಟ್ ಕೋರ್ಸ್ಗಳನ್ನು ನಡೆಸಲು ಅನುಮತಿ ಪಡೆದಿದೆ. ಅಲ್ಲದೆ ‘ಎಂ.ಎಲ್.ಶ್ರೀಕಂಠೇಶಗೌಡ ಸಂಶೋಧನಾ ಕೇಂದ್ರ' ಆರಂಭಿಸಿ ಡಾ. ರಾಗೌ ಅವರ ಮಾರ್ಗದರ್ಶನದಲ್ಲಿ ಹಲವು ವಿಷಯ ತಜ್ಞರೊಡನೆ ಎಂ.ಫಿಲ್, ಪಿಹೆಚ್.ಡಿ. ಪದವಿ ಕೋರ್ಸ್ಗಳನ್ನು ನಡೆಸಲಾಗುತ್ತಿದೆ. ಈ ಕೇಂದ್ರದಿಂದ ಇದುವರೆಗೆ ಕನ್ನಡದಲ್ಲಿ 91 ಮಂದಿ ಎಂ.ಫಿಲ್, 12 ಮಂದಿ ಪಿಎಚ್ಡಿ ಪದವಿಯನ್ನು; ಇತಿಹಾಸದಲ್ಲಿ 37 ಮಂದಿ ಎಂ.ಫಿಲ್, 8 ಮಂದಿ ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಈ ಕೇಂದ್ರದಲ್ಲಿ ಸುಸಜ್ಜಿತವಾದ ಗ್ರಂಥಾಲಯ, ವಾಚನಾಲಯ, ಸಿರಿಗನ್ನಡ ಪುಸ್ತಕ ಮಾರಾಟ ಮಳಿಗೆಯಿದ್ದು, ದಾನಿಗಳಿಂದ 20 ಸಾವಿರಕ್ಕೂ ಹೆಚ್ಚು ಪುಸ್ತಕಗಳನ್ನು ಕಲೆಹಾಕಲಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ಸರ್ಕಾರದ ಯಾವ ನೆರವೂ ಇಲ್ಲದೆ ಸಾರ್ವಜನಿಕರಿಂದ, ದಾನಿಗಳಿಂದ ನೆರವು ಪಡೆದು ಯಾವ ಸ್ವಾಯತ್ತ ಸಂಸ್ಥೆಯೂ ಮಾಡಲಾಗದಂತಹ 62 ಕ್ಕೂ ಹೆಚ್ಚು ಮೌಲ್ಯಯುತ ಪುಸ್ತಕಗಳನ್ನು ಪ್ರಕಟಿಸಿರುವುದು ಜೆ.ಪಿ. ಅವರ ಕಾರ್ಯಕ್ಷಮತೆಗೆ ಹಿಡಿದ ಕನ್ನಡಿ. ಅಲ್ಲದೆ ಕರ್ನಾಟಕ ಸಂಘದಲ್ಲಿ ದತ್ತಿ ಹಾಗೂ ಪ್ರಶಸ್ತಿಗಳನ್ನು ಸ್ಥಾಪಿಸಿದ್ದಾರೆ. ಇಂಡುವಾಳು ಹೆಚ್.ಹೊನ್ನಯ್ಯ, ಶ್ರೀ ಕೆ.ಸಿಂಗಾರಿಗೌಡ, ಶ್ರೀ ಎಂ.ಕೃಷ್ಣೇಗೌಡ, ಆಂದೋಲನ ಪತ್ರಿಕೆ ದತ್ತಿ, ಶ್ರೀ ಬಿ.ಹೆಚ್.ಮಂಗೇಗೌಡ ದತ್ತಿ, ಶ್ರೀ ಎಂ.ಸಿದ್ದರಾಮು ದತ್ತಿ, ಶ್ರೀ ಕವಿತಾ ಸ್ಮಾರಕ ದತ್ತಿ, ಶ್ರೀ ಜಿ.ನಾರಾಯಣ ಪ್ರಶಸ್ತಿ, ಶ್ರೀ ಎಂ.ಎಲ್.ಶ್ರೀಕಂಠೇಶಗೌಡ ಪ್ರಶಸ್ತಿ, ಶ್ರೀ ರಾಗೌ ಸಾಹಿತ್ಯ ಪ್ರಶಸ್ತಿ, ಶ್ರೀ ವೈ.ಕೆ.ರಾಮಯ್ಯ ಪ್ರಶಸ್ತಿ, ಡಾ. ಹಾ.ಮಾ.ನಾ ಪ್ರಶಸ್ತಿ, ಶ್ರೀ ಎಂ.ಶಿವಲಿಂಗಯ್ಯ ಪ್ರಶಸ್ತಿ ಸೇರಿದಂತೆ 38 ಲಕ್ಷಕ್ಕೂ ಹೆಚ್ಚು ಮೌಲ್ಯದ 22 ಕ್ಕೂ ಹೆಚ್ಚು ದತ್ತಿ ಉಪನ್ಯಾಸ ಮತ್ತು ಪ್ರಶಸ್ತಿಗಳನ್ನು ಸ್ಥಾಪಿಸಿರುವುದು ಹೆಗ್ಗಳಿಕೆಯ ಸಂಗತಿ. ಉತ್ತರ ಕರ್ನಾಟಕ ಭಾಗದಲ್ಲಿ ಪ್ರಾಚೀನತೆ ಮತ್ತು ಹಿರಿಮೆಗೆ ಸಾಕ್ಷಿಯೆಂಬಂತೆ ‘ಕರ್ನಾಟಕ ವಿದ್ಯಾವರ್ಧಕ ಸಂಘ’ ಇರುವಂತೆಯೇ ದಕ್ಷಿಣ ಕರ್ನಾಟಕದಲ್ಲಿ ಎಲ್ಲಾ ದೃಷ್ಟಿಕೋನದಲ್ಲೂ ಪ್ರವರ್ಧಮಾನಕ್ಕೆ ಬಂದು ರಾಜ್ಯದಲ್ಲಿಯೇ ಗಮನ ಸೆಳೆಯುವಂತಹ ಮಹಾನ್ ಸಾಧನೆಗಳತ್ತ ಮುನ್ನಡೆಯುತ್ತಿದೆ.

75ರ ‘ಅಮೃತ ಮಹೋತ್ಸವ'ವನ್ನು ಕಂಡಿರುವ ಕರ್ನಾಟಕ ಸಂಘ ಇಂದು ‘ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನ' ಎಂಬ ಹೆಸರಿನ ಸುಸಜ್ಜಿತ ಬೃಹತ್ ಕಟ್ಟಡವನ್ನು ಹೊಂದಿ ಸರ್ವಾಂಗ ಸುಂದರವಾಗಿ ನವವಧುವಿನಂತೆ ಅಲಂಕೃತವಾಗಿ ರೂಪುಗೊಂಡಿದೆ. ಮಂಡ್ಯದ ಕಾರ್ಯಸೌಧವೂ ಆಗಿದೆ. ಆಕರ್ಷಕವಾದ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರುವ ಮೂರು ಕೋಟಿ ವೆಚ್ಚದ 5 ಅಂತಸ್ತಿನ ಕಟ್ಟಡ, ಗ್ರಂಥಾಲಯ, ವಾಚನಾಲಯ, ಪುಸ್ತಕ ಮಾರಾಟ ಮಳಿಗೆ, ಕೊಠಡಿಗಳು, ಮೂರು ಸಭಾಂಗಣಗಳು ಅತಿಥಿ ಕೊಠಡಿ, ತರಗತಿ ಕೊಠಡಿಗಳು, ಡಾರ್ಮೆಂಟರಿಗಳು, ಅಡುಗೆ ಮನೆ, ಶೌಚಾಲಯ ಎಲ್ಲವೂ ಇವೆ. ಮಂಡ್ಯ ಜಿಲ್ಲೆ ಸಾಹಿತ್ಯ ಸಾಂಸ್ಕೃತಿಕ ರಂಗಚಟುವಟಿಕೆಗಳಿಂದ ಸದಾ ಸುದ್ದಿಯಲ್ಲಿದೆಯೆಂದರೆ ಅಂಥ ಬಹುಪಾಲು ಚಟುವಟಿಕೆಗಳ ಕೇಂದ್ರಸ್ಥಾನ ಕರ್ನಾಟಕ ಸಂಘ ಹಾಗೂ ಮುಖ್ಯ ರೂವಾರಿ ಜೆ.ಪಿ ಅವರು. ಜಿಲ್ಲೆಯ ಸಾಹಿತ್ಯ ಸಂಸ್ಕೃತಿ ಪ್ರಿಯರಿಗೆ ನಿರಂತರವಾಗಿ ರಸದೌತಣವನ್ನು ನೀಡುವುದರ ಮೂಲಕ ಸಂಘದ ಆವರಣವು ನಿತ್ಯವೂ ಜನ ಸಂಚಾರದ ಹಾಗೂ ಚಟುವಟಿಕೆಗಳ ಕೇಂದ್ರವಾಗಿದೆ. ಅಗತ್ಯ ಸಿಬ್ಬಂದಿಗಳನ್ನು ನೇಮಿಸಿಕೊಂಡು ಸ್ವಂತ ಶಕ್ತಿಯಿಂದ ತಿಂಗಳಿಗೆ 75 ಸಾವಿರಕ್ಕೂ ಹೆಚ್ಚು ಸಂಬಳವನ್ನು ನೀಡುತ್ತಿರುವ ಏಕೈಕ ಸಂಸ್ಥೆ. ಅಲ್ಲದೆ ನಿರಂತರವಾಗಿ ಇಲ್ಲಿನ ಸಿಬ್ಬಂದಿಗಳಿಗೆ, ಪದಾಧಿಕಾರಿಗಳಿಗೆ, ತರಬೇತಿ ಪಡೆಯುವ ಕಲಾವಿದರಿಗೆ, ತರಬೇತಿ ನೀಡುವ ಮಾಸ್ತರು, ಭಾಗವತರು, ನಿರ್ದೇಶಕರು, ಆಗಮಿಸುವ ತಜ್ಞರು, ವಿದ್ವಾಂಸರು, ಬರುವ ಅತಿಥಿ ಮಹೋದಯರು, ಇತರರು ಸೇರಿದಂತೆ ದಿನಕ್ಕೆ ನಲವತ್ತಕ್ಕಿಂತಲೂ ಹೆಚ್ಚು ಮಂದಿಗೆ ನಿತ್ಯ ಅನ್ನದಾಸೋಹ ನೀಡುತ್ತಿರುವ ಏಕೈಕ ಸಂಸ್ಥೆ ಇದೊಂದೇ ಸಾಂಸ್ಕೃತಿಕ. ಎಂದು ಕಾಣಿಸುತ್ತದೆ. ಇಂತಹ ಮಹತ್ಕಾರ್ಯಕ್ಕೆ ನೆರವಾದವರು ಮಾಜಿ ವಿಧಾನಪರಿಷತ್ ಸದಸ್ಯರಾದ ಶ್ರೀ ಬಿ.ರಾಮಕೃಷ್ಣ ಹಾಗೂ ಮಂಡ್ಯ ಶಾಸಕರಾದ ಶ್ರೀ ಎಂ.ಶ್ರೀನಿವಾಸ್ ಅವರು. ಇದರ ಹಿಂದಿನ ಪ್ರೇರಕರು ಜೆ.ಪಿ ಅವರು. ಹೀಗೆ ಎಲ್ಲಾ ಆಯಾಮದಲ್ಲಿಯೂ ಕರ್ನಾಟಕದ ಒಂದು ಪ್ರಾತಿನಿಧಿಕ ಸಂಸ್ಥೆಯಾಗಿ ಯಾವ ವಿಶ್ವವಿದ್ಯಾನಿಲಯಕ್ಕೂ ಕಡಿಮೆಯಿಲ್ಲದಂತೆ ಕಾರ್ಯ ನಿರ್ವಹಿಸುತ್ತಿರುವ ಸಂಘದ ಸಾಧನೆಯನ್ನು ಗುರುತಿಸಿ ಬೆಂಗಳೂರಿನ ‘ಸಮಾಜ ಸಂಪರ್ಕ ವೇದಿಕೆ’ 2010ರಲ್ಲಿ ‘ರಾಷ್ಟ್ರಕವಿ ಕುವೆಂಪು ಪ್ರಶಸ್ತಿ’ಯನ್ನು ನೀಡಿ ಗೌರವಿಸಿದೆ. ಸಂಘ ಸಂಸ್ಥೆಗಳಿಗೆ ಕರ್ನಾಟಕ ಸರ್ಕಾರ ನೀಡುವ ರಾಜ್ಯೋತ್ಸವ ಅಥವಾ ಅದಕ್ಕೂ ಉನ್ನತ ಮಟ್ಟದ ಪ್ರಶಸ್ತಿ ಪಡೆಯಲು ಸಂಘವು ಎಲ್ಲಾ ಅರ್ಹತೆಯನ್ನು ಹೊಂದಿದೆ.

75 ವರ್ಷಗಳನ್ನು ಪೂರೈಸಿರುವ ಕರ್ನಾಟಕ ಸಂಘ ಅಮೃತವರ್ಷವನ್ನು ಆಚರಿಸಿಕೊಂಡು ದಿಟ್ಟಹೆಜ್ಜೆಯನ್ನಿಡುತ್ತಿರುವುದು ಸ್ವಾಗತಾರ್ಹ ವಿಚಾರ. ಶಿಕ್ಷಣ, ಸಾಹಿತ್ಯ, ಕಲೆ, ಸಂಗೀತ, ರಂಗಭೂಮಿ, ಸಂಶೋಧನೆ, ಪ್ರಕಟಣೆ ಮುಂತಾದ ಪ್ರಕಾರಗಳಲ್ಲಿ ಸಾಧನೆಗೈಯುತ್ತಿರುವ ಕರ್ನಾಟಕ ಸಂಘ ಹತ್ತುಹನ್ನೆರಡು ವರ್ಷಗಳಿಂದೀಚೆಗೆ ಸವೆಸಿರುವ ಹಾದಿ ತುಂಬಾ ದೊಡ್ಡದು. ಈಗಾಗಲೇ 3 ಕೋಟಿ ರೂ.ಗಳ ವೆಚ್ಚದಲ್ಲಿ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನವನ್ನು ನಿರ್ಮಿಸಿ ಸಾಂಸ್ಕೃತಿಕ ಚಟುವಟಿಕೆಗಳಿಗೆ ನೆರವಾಗುವ ಸೌಲಭ್ಯಗಳನ್ನು ದೊರಕಿಸಿಕೊಟ್ಟಿರುವ ಹೆಗ್ಗಳಿಕೆ ಕರ್ನಾಟಕ ಸಂಘಕ್ಕಿದೆ. ಒಟ್ಟಾರೆ ಇಡೀ ಸಾಹಿತ್ಯಕ, ಸಾಂಸ್ಕೃತಿಕ ಚಟುವಟಿಕೆಗಳಿಗೆ ಅನುವಾಗುವ ಎಲ್ಲ ವ್ಯವಸ್ಥೆಯನ್ನು ಮಾಡಬೇಕೆಂಬ ಹೆಗ್ಗುರಿಯನ್ನು ಕರ್ನಾಟಕ ಸಂಘ ಹೊಂದಿದೆ. ದಿನಾಂಕ : 20-11-2021ರಂದು ಕರ್ನಾಟಕ ಸಂಘದ ಪದಾಧಿಕಾರಿಗಳ ಚುನಾವಣೆ ನಡೆಯಿತು. ಹಾಲಿ ಅಧ್ಯಕ್ಷರಾಗಿದ್ದ ಪ್ರೊ.ಜಯಪ್ರಕಾಶಗೌಡರು ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದದ್ದು ಅವರ ಕಾರ್ಯಕ್ಷಮತೆಗೆ ಸಾಕ್ಷಿಯಾಗಿದೆ. ಪದಾಧಿಕಾರಿಗಳ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಜೆ.ಪಿಯವರ ಸಿಂಡಿಕೇಟ್ ಗೆಲವು ಸಾಧಿಸಿ 14 ಸದಸ್ಯರು ಆಯ್ಕೆಯಾದರು. ಹೊಸ ಪಡೆಯೊಂದಿಗೆ ಮುಂದಿನ ಐದು ವರ್ಷಗಳಲ್ಲಿ ಸಂಘದ ಕಾರ್ಯ ಚಟುವಟಿಕೆಗಳನ್ನು ರಾಜ್ಯದಾದ್ಯಂತ ಮತ್ತಷ್ಟು ವಿಸ್ತರಿಸಿ ಹಲವು ಮುಖಗಳಲ್ಲಿ ಕಟ್ಟಿಬೆಳೆಸುವ ಗುರಿಯನ್ನಿಟ್ಟುಕೊಂಡು ಉತ್ಸುಕತೆಯಿಂದ ಮುನ್ನಡೆದಿದ್ದಾರೆ.


img
img

ಕೆ.ವಿ.ಶಂಕರಗೌಡ ಛಾಯಾಚಿತ್ರ ಗ್ಯಾಲರಿ

ಕೆ.ವಿ.ಶಂಕರಗೌಡ ಈ ಜಿಲ್ಲೆಯ ಆಧುನಿಕ ನಿರ್ಮಾಪಕರೆಂಬುದು ಲೋಕವಿಧಿತ, ಲೋಕಕಲ್ಯಾಣಕ್ಕಾಗಿ ತನ್ನನ್ನು ತಾನು ಇಲ್ಲಗೈಸಿಕೊಂಡ ಶಂಕರಗೌಡರ ನೆನಪನ್ನು ಮುಂದಿನ ಪೀಳಿಗೆಗೆ ಉಳಿಸಬೇಕೆಂಬ ದೃಷ್ಟಿಯಿಂದ ಈಗಿರುವ 'ಶಂಕರಗೌಡ ಶತಮಾನೋತ್ಸವ ಭವನ'ದ ಒಂದು ಕೊಠಡಿಯಲ್ಲಿ ಅವರ ವೈಯಕ್ತಿಕ ವಸ್ತುಗಳನ್ನು ಸಂಗ್ರಹಿಸಿ ಪ್ರದರ್ಶನಕ್ಕೆ ಇಡುವುದು, ಅವರು ಮಾಡಿದ ಸಾಧನೆಗಳನ್ನು ಭೇಟಿಯಾದ ಗಣ್ಯರನ್ನು ಒಳಗೊಂಡ ವಿಶೇಷ ರೀತಿಯ ಪೋಟೋಗಳನ್ನು ಸಂಗ್ರಹಿಸಿ ಪ್ರದರ್ಶಿಸುವುದಕ್ಕೆ ವ್ಯವಸ್ಥೆ ಕಲ್ಪಿಸುವುದು ಒಟ್ಟಾರೆ ಇದಕ್ಕೆ ಅಂದಾಜು 5 ಲಕ್ಷ ರೂ.ಗಳು ಖರ್ಚಾಗುವ ಸಂಭವವಿದೆ.

ಕೆವಿ ಶಂಕರಗೌಡರ ಜೀವನದ ಮಹತ್ವದ ಘಟನಾವಳಿಗಳನ್ನು ಒಳಗೊಂಡ ಚಿತ್ರ ಗ್ಯಾಲರಿಯನ್ನು ದಿನಾಂಕ 4.3. 2022 ರಂದು ಪೂಜ್ಯ ಶ್ರೀಶ್ರೀಶ್ರೀ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾದ ಮೂಡಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಸ್ಥಾಪಕರಾದ ಮೋಹನ್ ಆಳ್ವ, ಶಂಕರಗೌಡರ ಧರ್ಮಪತ್ನಿ ಶ್ರೀಮತಿ ಸುಶೀಲಮ್ಮ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.


ಆದಿಚುಂಚನಗಿರಿ ಮೂಡಲಪಾಯ ಯಕ್ಷಗಾನ ಕೇಂದ್ರ

ಕರ್ನಾಟಕ ಸಂಘವು ಕಲೆಯ ಪುನರುಜ್ಜೀವನಕ್ಕಾಗಿ ಈಗಾಗಲೇ ಕಲಿಕಾಕೇಂದ್ರದ ಮೂಲಕ ವಾರಾಂತ್ಯ ಶಾಲೆಯನ್ನು ತೆರೆದು ಯುವಕರಿಗೆ, ವಿದ್ಯಾರ್ಥಿಗಳಿಗೆ ಭಾಗವತಿಕೆ, ಹೆಜ್ಜೆ, ತಾಳ, ವಾದ್ಯಗಳನ್ನು ಕಲಿಸುವ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಈ ಕಲೆಯನ್ನು ಮತ್ತಷ್ಟು ಗಟ್ಟಿಗೊಳಿಸುವ ಹಲವು ಯೋಜನೆಗಳು ನಮ್ಮದಾಗಿದೆ. ಹಳೆ ಮೈಸೂರು ಭಾಗದಲ್ಲಿ ಸುತ್ತಾಡಿ ಕಲಾವಿದರನ್ನು ಸಂಘಟಿಸಿ ಪುನರುಜ್ಜೀವನಗೊಳಿಸಿ ತನ್ಮೂಲಕ ಮೂಡಲಪಾಯ ಕಲೆ ಕಲಾವಿದರಿಗೆ ಒಂದು ಭದ್ರ ನೆಲೆ ಒದಗಿಸುವ ನಿಟ್ಟಿನಲ್ಲಿ ಕರ್ನಾಟಕ ಸಂಘ ಸಕ್ರಿಯವಾಗಿ ಶ್ರಮಿಸುತ್ತಿದೆ.ಕೇಂದ್ರದ ಮೂಲಕ ವಾರಾಂತ್ಯ ಕಲಿಕಾ ಚಟುವಟಿಕೆಗಳು ಮುಂದುವರಿದಿದ್ದು ವಿವಿಧ ಪ್ರಸಂಗಗಳನ್ನು ಕಲಿಸಿ ಪ್ರದರ್ಶಿಸಲಾಗುತ್ತಿದೆ.

img

ಕರ್ನಾಟಕ ಸಂಘವು 75 ವರ್ಷಗಳನ್ನು ಪೂರೈಸಿ ಈಗ ತನ್ನ ಮನ್ವಂತರದ ಹಾದಿಯಲ್ಲಿದೆ ಎನ್ನಬಹುದು. ಪ್ರಸ್ತುತ ಕರ್ನಾಟಕ ಸಂಘವು ದಾನಿಗಳ ಅಭೂತಪೂರ್ವ ನೆರವಿನಿಂದ, ಜನಪ್ರತಿನಿಧಿಗಳ ಸಹಕಾರದಿಂದ ಈಗಿನ ಅಧ್ಯಕ್ಷರಾದ ಪ್ರೊ.ಜಯಪ್ರಕಾಶಗೌಡರ ಛಲಬಿಡದ ಸಂಘಟನೆ ಪರಿಶ್ರಮದಿಂದ ಸುಸಜ್ಜಿತವಾದ ಕೆ.ವಿ.ಶಂಕರಗೌಡರ ನೆನಪಿನ ಜಿ+4 ಬೃಹತ್ ಕಟ್ಟಡವನ್ನು ಒಳಗೊಂಡಿದ್ದು ವ್ಯವಸ್ಥಿತವಾದ ಸಭಾಂಗಣಗಳಲ್ಲಿ ಪ್ರತಿನಿತ್ಯ ಚಟುವಟಿಕೆಗಳ ತಾಣವಾಗಿದೆ. ಅತಿಥಿಗೃಹಗಳು ಡಾರ್ಮೆಂಟರಿಗಳು ಗ್ರಂಥಾಲಯ ಮೊದಲಾದ ಸೌಲಭ್ಯಗಳಿಂದ ಕರ್ನಾಟಕ ಸಂಘದ ಆವರಣ ಸುಂದರ ತಾಣವಾಗಿದೆ. ಈ ದಿಶೆಯಲ್ಲಿ ಹೊಸಹೊಸ ಕಾರ್ಯಕ್ರಮಗಳನ್ನೂ ಯೋಜನೆಗಳನ್ನೂ ಹಮ್ಮಿಕೊಂಡು ಅವುಗಳನ್ನು ಆಗುಮಾಡಲು ಸಂಘವು ಶಕ್ತಿ ಮೀರಿ ಶ್ರಮಿಸುತ್ತಿದೆ. ಸಂಘದ ಕಛೇರಿಯಲ್ಲಿ ಪ್ರತಿನಿತ್ಯವೂ ಕೆಲಸ ಮಾಡುವ ವಿವಿಧ ಹಂತದ ಕೆಲಸಗಾರರ ಅಗತ್ಯ ಬೀಳುತ್ತಿದ್ದು ಈಗಾಗಲೆ ಎಂಟು-ಹತ್ತು ಮಂದಿ ಕೆಲಸಗಾರರಿದ್ದಾರೆ. ಇವರ ಮಾಸಿಕ ವೇತನಕ್ಕೂ ಇತರ ನಿರ್ವಹಣೆಗಳಿಗೂ ಹಣದ ಅಗತ್ಯ ನಿತ್ಯವೂ ಬೀಳುತ್ತಿದೆ. ಇದಕ್ಕಾಗಿ ಸಂಘಕ್ಕೆ ಶಾಶ್ವತ ಆರ್ಥಿಕ ಸಂಪನ್ಮೂಲಗಳನ್ನು ದೊರಕಿಸಿಕೊಳ್ಳುವ ಉದ್ದೇಶವನ್ನು ಸಂಘವು ಹೊಂದಿದೆ.

ನೂತನ ಕಾರ್ಯಕಾರಿ ಸಮಿತಿಯ ಮುಂದಿನ ಯೋಜನೆಗಳೇನೆಂಬುದನ್ನು ಜೆ.ಪಿ. ಅವರು ಕೆಳಗಿನಂತೆ ತಿಳಿಸಿದ್ದಾರೆ

1. ಜನಪದ ವಾದ್ಯ ಪರಿಕರಗಳ ಸಂಗ್ರಹಾಲಯ : ಕರ್ನಾಟಕ ಜಾನಪದ ಕ್ಷೇತ್ರದಲ್ಲಿ ತನ್ನದೇ ಆದ ವೈಶಿಷ್ಟ್ಯವನ್ನು ಹೊಂದಿದೆ. ಇಡೀ ರಾಜ್ಯದ ತುಂಬೆಲ್ಲಾ ಆಯಾಯ ಪ್ರದೇಶಗಳಿಗೆ ಅನುಗುಣವಾಗಿ ಭಾಷೆ, ಸಂಸ್ಕೃತಿ, ಆಚಾರ ವಿಚಾರಗಳಲ್ಲಿ ವೈವಿಧ್ಯತೆಯಿರುವ ಜನಪದ ಸಂಗೀತ, ನೃತ್ಯ ಪ್ರಕಾರಗಳಲ್ಲಿ ವೈವಿಧ್ಯತೆಯಿದೆ. ಅದಕ್ಕನುಗುಣವಾದ ವಾದ್ಯಪರಿಕರಗಳೂ ಇವೆ. ಒಂದು ಪ್ರದೇಶದ ವಾದ್ಯಗಳ ಬಗ್ಗೆ ಮತ್ತೊಂದು ಪ್ರದೇಶದವರಿಗೆ ಮಾಹಿತಿಯೂ ಇಲ್ಲದ ಪರಿಚಯವೂ ಇಲ್ಲದ ಸಂದರ್ಭಗಳಿವೆ. ಇದನ್ನು ಮನಗಂಡ ಕರ್ನಾಟಕ ಸಂಘವು ತಾನಿರುವ ಪ್ರದೇಶದಲ್ಲಿಯೇ ಕರ್ನಾಟಕದ ಎಲ್ಲಾ ಭಾಗಗಳ ವಾದ್ಯ ಪರಿಕರಗಳನ್ನು ಸಂಗ್ರಹಿಸಿ ಸಂಗ್ರಹಾಲಯವೊಂದನ್ನು ಸ್ಥಾಪಿಸಬೇಕೆಂದಿದ್ದು ಈಗಾಗಲೇ ಈ ಕಾರ್ಯವನ್ನು ಕೈಗೊಳ್ಳಲಾಗಿದೆ. ಈ ಅವಧಿಯಲ್ಲಿ ಅದನ್ನು ಪೂರೈಸಿದಾಗ ಸಂಘಕ್ಕೊಂದು ದೊಡ್ಡ ಆಸ್ತಿಯಾಗುತ್ತದೆ.

2. ಪುಸ್ತಕಗಳ ಪ್ರಕಟಣೆ : ಜಿಲ್ಲೆಯ ಸಾಹಿತ್ಯ, ಸಂಸ್ಕೃತಿ, ಆಚಾರ, ವಿಚಾರ, ಜಾನಪದ, ರಾಜಕೀಯ, ಸಾಧಕರ ಮಾಹಿತಿಯನ್ನು ಒಳಗೊಂಡ ಪುಸ್ತಕಗಳನ್ನು ಪ್ರಕಟಿಸಬೇಕೆಂಬ ಉದ್ದೇಶವನ್ನು ಹೊಂದಿದೆ.

3.ರಂಗಮಂದಿರ ನಿರ್ಮಾಣ : ರಂಗಪ್ರದರ್ಶನಕ್ಕೆ ಸುಸಜ್ಜಿತವಾದ ರಂಗಮಂದಿರರ ಕೊರತೆಯಿದ್ದು ನಿರಂತರವಾಗಿ ರಂಗಪ್ರದರ್ಶನಗೊಳ್ಳಲು ಅವಕಾಶವಿಲ್ಲವಾಗಿದೆ. ಈಗಿರುವ ಹಳೆಯ ಕಟ್ಟಡವನ್ನು ಕೆಡವಿ ನೂತನವಾಗಿ ರಂಗಮಂದಿರವನ್ನು ನಿರ್ಮಿಸಲು ಸಂಘವು ಮುಂದಾಗಿದೆ. ನೆಲಅಂತಸ್ತಿನಲ್ಲಿ ಕಛೇರಿ ಮತ್ತು ಉಗ್ರಾಣಕ್ಕೆ ಅವಕಾಶವನ್ನು ಮಾಡಿಕೊಂಡು ಮೊದಲ ಅಂತಸ್ತಿನಲ್ಲಿ 205 ಆಸನವುಳ್ಳ ಸುಸಜ್ಜಿತವಾದ ರಂಗಮಂದಿರದ ನಿರ್ಮಾಣ, ಅದಕ್ಕೆ ಹೊಂದಿಕೊಂಡಂತೆ ಎರಡು ದೊಡ್ಡ ಕೊಠಡಿಗಳು. ಇದಕ್ಕೆ ಅಂದಾಜು ನಾಲ್ಕರಿಂದ ಐದುಕೋಟಿ ಖರ್ಚಾಗುವ ಸಂಭವವಿದ್ದು ಈಗಾಗಲೇ ಒಂದೂವರೆ ಕೋಟಿಯಷ್ಟು ಹಣದ ಆಶ್ವಾಸನೆ ದೊರೆತಿದೆ. ಇದನ್ನು ಮೂರ್ನಾಲ್ಕು ವರ್ಷಗಳ ಅವಧಿಯಲ್ಲಿ ಪೂರೈಸಬೇಕೆಂಬ ಆಶಯವಿದ್ದು ಪೂರ್ಣಗೊಂಡಾಗ ಜಿಲ್ಲೆಯಲ್ಲೇ ಅತ್ಯಂತ ಮಾದರಿಯಾದ ರಂಗ ಮಂದಿರ ನಿರ್ಮಾಣವಾಗಲಿದೆ.