fashion img

ನಮ್ಮ ಬಗ್ಗೆ

ಕರ್ನಾಟಕ ಸಂಘದ ಬೈಲಾ.

ನಿಬಂಧನೆಗಳು

1.ಕರ್ನಾಟಕ ಸಂಘ(ರಿ), ಮಂಡ್ಯ ಎಂಬ ಹೆಸರಿರತಕ್ಕದ್ದು.

2.ಕಾರ್ಯಸ್ಥಾನ ಈ ಸಂಘದ ಕೇಂದ್ರವು ಮಂಡ್ಯ ನಗರದಲ್ಲಿರತಕ್ಕದ್ದು. ಮತ್ತು ಕನ್ನಡ ಮಾತನಾಡುವ ಮಂದಿ ಇರುವ ಎಲ್ಲ ಪ್ರದೇಶಕ್ಕೂ ಚಟುವಟಿಕೆಗಳ ವ್ಯಾಪ್ತಿಯನ್ನು ವಿಸ್ತರಿಸುವುದು.

3.ಉದ್ದೇಶಗಳು : ಕನ್ನಡ ಭಾಷೆ ಹಾಗೂ ಕನ್ನಡ ಮಾತನಾಡುವ ಜನರ ಬೆಳವಣಿಗೆಯೇ ಕರ್ನಾಟಕ ಸಂಘದ ಪೂರ್ಣ ಉದ್ದೇಶ. ಈ ಉದ್ದೇಶಗಳ ಸಾಧನೆಗಾಗಿ ಈ ಕೆಳಕಂಡ ಕಾರ್ಯಕಲಾಪಗಳ ಉದ್ದೇಶಗಳನ್ನು ಹೊಂದಿರುತ್ತದೆ.

  • ವಿವಿಧ ಶೈಕ್ಷಣಿಕ ಚಟುವಟಿಕೆಗಳನ್ನು ನಡೆಸುವುದು.
  • ಭಾಷೆ, ನೆಲ, ಜಲ, ಸಂಸ್ಕೃತಿಯ ರಕ್ಷಣೆಗಾಗಿ ಕಾರ್ಯಕ್ರಮಗಳನ್ನು ರೂಪಿಸುವುದು.
  • ಸಂಘವು ಜನಸಾಮಾನ್ಯರ ಏಳ್ಗೆಗೆ ಅಗತ್ಯವಾದ ಅರಿವು ಮತ್ತು ಜಾಗೃತಿಯನ್ನು ಬೆಳೆಸುವ ಕಾರ್ಯಕ್ರಮಗಳನ್ನು ರೂಪಿಸುವುದು. ಇದಕ್ಕಾಗಿ ಸ್ಥಳೀಯ ರಾಜ್ಯ ಹಾಗೂ ರಾಷ್ಟ್ರೀಯ ಸರ್ಕಾರಗಳ ಜೊತೆಗೆ ವಿವಿಧ ಸಂಘ ಸಂಸ್ಥೆಗಳ,ವಿಶ್ವವಿದ್ಯಾನಿಲಯಗಳ ನೆರವು, ಮಾನ್ಯತೆ - ಪ್ರಾಯೋಜಕತ್ವ ಪಡೆಯುವುದು.
  • ರಾಜ್ಯ - ರಾಷ್ಟ್ರೀಯ ಮಟ್ಟದ ವಿಶ್ವವಿದ್ಯಾಲಯಗಳ ’’ಅಧ್ಯಯನ ಕೇಂದ್ರ’’ ತೆರೆದು, ದೂರ ಶಿಕ್ಷಣದ ಪ್ರಯೋಜನವನ್ನು ನಮ್ಮ ಯುವಕರಿಗೆ ಒದಗಿಸಿಕೊಡುವುದು.
  • ವಿವಿಧ ನಿಯೋಗಿಗಳ ಸಹಯೋಗದಲ್ಲಿ ಜನೋಪಯೋಗಿ ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನಗೊಳಿಸುವುದು.

4. ಅಂಗರಚನೆ,ಸದಸ್ಯವರ್ಗಗಳು ಈ ಸಂಘದಲ್ಲಿ ಮುಂದೆ ಹೇಳುವ ಸದಸ್ಯವರ್ಗಗಳಿರತಕ್ಕದ್ದು

  • ಮಹಾಪೋಷಕರು - 50,000
  • ಪೋಷಕರು - 25,000
  • ಅಜೀವ ಸದಸ್ಯರು - 1,000
  • ಸಾಮಾನ್ಯ ಸದಸ್ಯರು - 300 (ವಾರ್ಷಿಕ)

  • 1. ಮಹಾಪೋಷಕರು : 50 ಸಾವಿರ ರೂ ದೇಣಿಗೆ ನೀಡುವ ಗಣ್ಯ ನಾಗರೀಕರನ್ನು ಮಹಾಪೋಷಕರೆಂದು ಪರಿಗಣಿಸುವುದು.
  • 2. ಪೋಷಕರು : 25 ಸಾವಿರ ರೂ ದೇಣಿಗೆ ನೀಡುವ ಗಣ್ಯ ನಾಗರೀಕರನ್ನು ಪೋಷಕರೆಂದು ಪರಿಗಣಿಸುವುದು.
  • 3. ಆಜೀವ ಸದಸ್ಯರು : ಒಂದು ಸಾವಿರ ರೂ ದೇಣಿಗೆ ನೀಡುವ ಗಣ್ಯ ನಾಗರೀಕರನ್ನು ಅಜೀವ ಸದಸ್ಯರೆಂದು ಪರಿಗಣಿಸುವುದು.
  • 4. 300 ರೂ. ನೀಡುವವರು - ವಾರ್ಷಿಕ ಸದಸ್ಯರಾಗಿರತಕ್ಕದ್ದು. ಮಹಾಪೋಷಕರು ಮತ್ತು ಪೋಷಕರನ್ನು ಗುರುತಿಸಿ ನಿಯೋಜಿಸಿಕೊಳ್ಳುವ ಅಧಿಕಾರವು ಕಾರ್ಯನಿರ್ವಾಹಕ ಮಂಡಳಿಗೆ ಇರುತ್ತದೆ. ಕಾರ್ಯನಿರ್ವಾಹಕ ಮಂಡಳಿಯ ಸರಳ ಬಹುಮತದಿಂದ ಮಹಾ ಪೋಷಕರು ಮತ್ತು ಪೋಷಕರನ್ನು ಆಯ್ಕೆಮಾಡಿ ನಿರ್ದಿಷ್ಟ ಮೊಬಲಗನ್ನು ಪಡೆದು ಆಯ್ಕೆಮಾಡಿಕೊಳ್ಳಬೇಕು. ಯೋಗ್ಯರೆಂದೂ, ಸಮರ್ಥರೆಂದೂ ಹೆಸರು ಪಡೆದು ಪಾಂಡಿತ್ಯವನ್ನು ಗಳಿಸಿರುವ ವಿದ್ವಾಂಸರನ್ನು ಸಂಘದ `ಅಜೀವಗೌರವ ಸದಸ್ಯ’ ರನ್ನಾಗಿಯೂ ಆರಿಸಬಹುದು. ಹೀಗೆ ಆರಿಸಿಬಂದವರು ಚಂದಾ ಕೊಡಬೇಕಾದ ನಿರ್ಬಂಧವಿಲ್ಲ ಅಜೀವ ಗೌರವ ಸದಸ್ಯರನ್ನು ಕಾರ್ಯನಿರ್ವಾಹಕ ಮಂಡಳಿಯು ಸರಳ ಬಹುಮತದಿಂದ ಆರಿಸಬೇಕು. ಗೌರವ ಸದಸ್ಯರಿಗೆ ಉಳಿದ ಇತರ ಸಾಧಾರಣ ಸದಸ್ಯರ ಹಕ್ಕುಬಾಧ್ಯತೆಗಳಿದ್ದು, ಚುನಾವಣೆಗೆ ಸ್ಪರ್ಧಿಸುವ ಮತ್ತು ಮತ ನೀಡುವ ಹಕ್ಕಿರುವುದಿಲ್ಲ.

5. ಸದಸ್ಯತ್ವ ಸಿದ್ಧಿ ಸಂಘಕ್ಕೆ ಸೇರಬೇಕೆನ್ನುವವರ ಅಪೇಕ್ಷಾ ಪತ್ರವನ್ನು ಸದಸ್ಯರಲ್ಲಿ ಒಬ್ಬರಾದರೂ ಅನುಮೋದಿಸಿರಬೇಕು. ಮತ್ತು ಕಾರ್ಯನಿರ್ವಾಹಕ ಮಂಡಲಿಯು ಅಂಗೀಕರಿಸಬೇಕು. ಕಾ.ನಿ.ಮಂಡಲಿಯ ಸಭೆಗೆ ಬಂದಿರುವ ಮೂರರಲ್ಲಿ ಒಂದು ಪಾಲಿಗಿಂತಲೂ ಹೆಚ್ಚು ಮಂದಿ ಅಪೇಕ್ಷಿಸಿದರೆ ಅಂಥವರನ್ನು, ಕಾರಣವನ್ನು ಲಿಖಿತ ಮೂಲಕ ತಿಳಿಸದೆಯೇ ಸಂಘಕ್ಕೆ ಸೇರಿಸದೆಯೇ ಇರಬಹುದು.

6. ಸದಸ್ಯರ ಹಕ್ಕುಗಳು : 1) ಸಂಘದಲ್ಲಿ ನಡೆಯುವ ಉಪನ್ಯಾಸಗಳು ಮೊದಲಾದ ಸಾರ್ವಜನಿಕ ಕಾರ್ಯಗಳು, ಅಲ್ಲಿಯ ಪುಸ್ತಕ ಭಂಡಾರ, ವಾಚನಾಲಯ ಮೊದಲಾದ ಸೌಕರ್ಯಗಳು - ಇವುಗಳ ಪ್ರಯೋಜನಗಳನ್ನು ನಿಯಮಾನುಸಾರ ಪಡೆದುಕೊಳ್ಳಲು ಎಲ್ಲಾ ಸದಸ್ಯರಿಗೂ ಸ್ವಾತಂತ್ರ್ಯವಿರುತ್ತದೆ.

7. ಹಣದ ಸಲ್ಲಿಕೆ

  • 1) ಯಾವ ತರಗತಿಯ ಸದಸ್ಯರೇ ಆಗಲೀ ತಮ್ಮಿಂದ ಸಂಘಕ್ಕೆ ಸಲ್ಲಬೇಕಾದ ಹಣವನ್ನು ಆರು ತಿಂಗಳ ಕಾಲಕ್ಕಿಂತ ಹೆಚ್ಚು ಕಾಲ ಸಲ್ಲಿಸದೆ ಉಳಿಸಿಕೊಂಡರೆ ಅಂಥವರನ್ನು ಸದಸ್ಯತ್ವದಿಂದ ಕಾರ್ಯನಿರ್ವಾಹಕ ಮಂಡಲಿಯು ತೆಗೆದುಹಾಕಬಹುದು.
  • 2) ಸಂಘದ ಸದಸ್ಯರಲ್ಲಿ ಯಾರಾದರೂ ಕ್ರಿಮಿನಲ್ ಕೋರ್ಟ್‍ನಲ್ಲಿ ಶಿಕ್ಷೆಗೊಳಗಾದರೂ, ಕೆಟ್ಟ ನಡತೆ ಯವರೆಂದು ನಿರ್ಣಿತರಾದರೂ, ಅಥವಾ ಇತರ ಕಾರಣಗಳಿಂದ ಸಂಘದ ಸದಸ್ಯರಾಗಿರಲು ಅನರ್ಹರೆಂದು ತೀರ್ಮಾನಿಸಿದರೂ, ಕಾರ್ಯನಿರ್ವಾಹಕ ಮಂಡಲಿಗೆ ಬಂದಿರುವ ಸದಸ್ಯರುಗಳಲ್ಲಿ ಹೆಚ್ಚು ಮಂದಿ ಅವರ ಹೆಸರು ತೆಗೆದುಹಾಕಬೇಕೆಂದು ಅಭಿಪ್ರಾಯಪಟ್ಟಲ್ಲಿ ಅಂಥವರ ಹೆಸರನ್ನೂ ಸಂಘದ ಸದಸ್ಯತ್ವದಿಂದ ತೆಗೆದುಹಾಕಬಹುದು. (ಇದು ರಾಜಕೀಯ ವಿಷಯದಲ್ಲಿ ಹೋರಾಡಿ ಅನುಭವಿಸಿದ ಕ್ರಿಮಿನಲ್ ಕೋರ್ಟು ಶಿಕ್ಷೆಗೆ ಅನ್ವಯಿಸತಕ್ಕದ್ದಲ್ಲ.)

8. ಕಾರ್ಯನಿರ್ವಾಹಕ ಮಂಡಲಿ ಸಂಘದ ಆಡಳಿತಗಳನ್ನೆಲ್ಲಾ ನಿಯಮಾನುಸಾರವಾಗಿ ರಚಿತವಾದ ಕಾರ್ಯನಿರ್ವಾಹಕ ಮಂಡಲಿಯು ನಡೆಸತಕ್ಕದ್ದು.

9. ಕಾರ್ಯನಿರ್ವಾಹಕ ಮಂಡಳಿಯ ರಚನೆ ಕಾರ್ಯನಿರ್ವಾಹಕ ಮಂಡಳಿಯ ಸದಸ್ಯರಾಗಲು ಕರ್ನಾಟಕ ಸಂಘದ ಸದಸ್ಯತ್ವವನ್ನು ಹೊಂದಿರಬೇಕು. ಸಂಘದ ಕಾರ್ಯಚಟುವಟಿಕೆಗಳನ್ನು ನಿಯಮಾನುಸಾರವಾಗಿ ರಚಿತವಾದ ಕಾರ್ಯನಿರ್ವಾಹಕ ಮಂಡಳಿಯು ನಡೆಸತಕ್ಕದ್ದು. ಕಾರ್ಯನಿರ್ವಾಹಕ ಮಂಡಳಿಯಲ್ಲಿ ಅಧ್ಯಕ್ಷರು ಮತ್ತು 14 ಜನರ ಸಮಿತಿಯಿರತಕ್ಕದ್ದು

  • 1. ಒಬ್ಬರು ಅಧ್ಯಕ್ಷರು
  • 2. ಒಬ್ಬರು ಉಪಾಧ್ಯಕ್ಷರು
  • 3. ಒಬ್ಬರು ಗೌರವ ಕಾರ್ಯದರ್ಶಿ
  • 4. ಇಬ್ಬರು ಸಹ - ಕಾರ್ಯದರ್ಶಿ
  • 5. ಒಬ್ಬರು ಖಜಾಂಚಿ

ಸರ್ವ ಸದಸ್ಯರ ಸಭೆಯಲ್ಲಿ ಅಧ್ಯಕ್ಷರನ್ನು ಹಾಗೂ 14 ಮಂದಿ ಸದಸ್ಯರನ್ನು ಚುನಾವಣೆಯ ಮೂಲಕ ಅಥವಾ ಸರ್ವಾನುಮತದಿಂದ 5 ವರ್ಷಗಳಿಗೊಮ್ಮೆ ಆರಿಸತಕ್ಕದ್ದು. 14 ಮಂದಿಯಲ್ಲಿ 3 ಮಂದಿ ಮಹಿಳೆಯರು ಇರಬೇಕು (ಈ 3 ಮಹಿಳೆಯರಲ್ಲಿ ಒಬ್ಬರು ಸಾಮಾನ್ಯ ವರ್ಗದಿಂದ ಒಬ್ಬರು ಹಿಂದುಳಿದ ವರ್ಗದಿಂದ ಒಬ್ಬರು ಪರಿಶಿಷ್ಟ ಜಾತಿಗೆ ಸೇರಿದವರಾಗಿರಬೇಕು.) ಒಂದು ಸ್ಥಾನ ಧಾರ್ಮಿಕ ಅಲ್ಪಸಂಖ್ಯಾತರಿಗೆ ಮೀಸಲಿರಬೇಕು. ಮತ್ತೊಂದು ಸ್ಥಾನ ಪರಿಶಿಷ್ಟ ಜಾತಿ/ ವರ್ಗಕ್ಕೆ ಮೀಸಲಿರಬೇಕು.

10. ಕಾಲಾವಧಿ 1. ಸರ್ವಸದಸ್ಯರ ಸಭೆಯಲ್ಲಿ ಚುನಾವಣೆಗೊಂಡ ಅಧ್ಯಕ್ಷರು ಹಾಗೂ 14 ಮಂದಿ ಸದಸ್ಯರು ಚುನಾವಣೆ ಆದ 15 ದಿನಗಳ ಒಳಗೆ ಪದಾಧಿಕಾರಿಗಳನ್ನು ಒಳಗೊಂಡ ಕಾರ್ಯಕಾರಿ ಸಮಿತಿಯನ್ನು ರಚಿಸತಕ್ಕದ್ದು, ಪದಾಧಿಕಾರಿಗಳನ್ನು ಸರಳ ಬಹುಮತ ಅಥವಾ ಸರ್ವಾನುಮತದ ಒಪ್ಪಿಗೆಯ ಮೂಲಕ ನೇಮಕಗೊಳ್ಳಬೇಕು. ಅಧ್ಯಕ್ಷರ ಹುದ್ದೆ ತೆರವಾದಲ್ಲಿ ಉಪಾಧ್ಯಕ್ಷರು ತಕ್ಷಣಕ್ಕೆ ಅಧ್ಯಕ್ಷರಾಗುತ್ತಾರೆ. ಮುಂದಿನ ಒಂದು ತಿಂಗಳೊಳಗೆ ಕಾರ್ಯಕಾರಿ ಸಮಿತಿಯ ಸದಸ್ಯರು, ಕಾರ್ಯಕಾರಿ ಸಮಿತಿಯ ಸದಸ್ಯರುಗಳಲ್ಲಿ ಒಬ್ಬರನ್ನು ಕಾರ್ಯನಿರ್ವಹಣ ಮಂಡಳಿಯ ಅಧ್ಯಕ್ಷರನ್ನಾಗಿ ಚುನಾಯಿಸಬೇಕು. ಆನಂತರ ಹೊಸ ಕಾರ್ಯನಿರ್ವಾಹಕ ಮಂಡಳಿಯು ಅಸ್ಥಿತ್ವಕ್ಕೆ ಬರುತ್ತದೆ. ಅಧ್ಯಕ್ಷರನ್ನು ಹೊರತುಪಡಿಸಿ. ಕಾರ್ಯನಿರ್ವಾಹಕ ಮಂಡಳಿಯ ಪದಾಧಿಕಾರಿಗಳ ಸದಸ್ಯರ ಸ್ಥಾನ ತೆರವಾದರೆ ಕಾರ್ಯನಿರ್ವಾಹಕ ಮಂಡಳಿಯ ಸಭೆಯಲ್ಲಿ ಅಧ್ಯಕ್ಷರು ಕಾರ್ಯಕಾರಿ ಸಮಿತಿ ಒಪ್ಪಿಗೆ ಮೇರೆಗೆ ತೆರವಾದ ಸ್ಥಾನಕ್ಕೆ ಕರ್ನಾಟಕ ಸಂಘದ ಸದಸ್ಯರಾಗಿರುವವರನ್ನು ಕಾರ್ಯಕಾರಿ ಸಮಿತಿಗೆ ನಾಮಕರಣ ಮಾಡುತ್ತಾರೆ.

11. ವಾದ ಕ್ರಮ : ತಿರ್ಮಾನ ಕಾರ್ಯನಿರ್ವಾಹಕ ಮಂಡಲಿಯಲ್ಲಿ ತೀರ್ಮಾನಕ್ಕೆ ಬರುವ ವಿಷಯಗಳು ಕೇವಲ ಅವಶ್ಯವಾದ ಸಂದರ್ಭಗಳಲ್ಲಿ ವಿನಾ ಆಯಾ ಸಭೆಯ ಆಲೋಚ್ಯ ವಿಷಯ ಪಟ್ಟಿಯಲ್ಲಿ ಮುಂದಾಗಿಯೇ ಸೇರಿರಬೇಕು. ಅಲ್ಲದೆ ಸಭೆಗೆ ಬಂದಿರುವ ಸದಸ್ಯರ ಬಹುಮತಾನುಸಾರವಾಗಿಯೇ ವಿಷಯಗಳೆಲ್ಲವೂ ತೀರ್ಮಾನವಾಗಬೇಕು. ಯಾವುದಾದರೂ ಒಂದು ಸಭೆಯಲ್ಲಿ ಭಿನ್ನಾಭಿಪ್ರಾಯ ಹುಟ್ಟಿ ಉಭಯ ಪಕ್ಷದ ಸದಸ್ಯರ ಸಂಖ್ಯೆಯು ಸಮವಾದಲ್ಲಿ ಆ ಸಭೆಯ ಅಗ್ರಾಸನಾಧಿಪತಿಗಳಿಗೆ ತಮ್ಮ ನಿರ್ಧಾರಕವಾದ ಅಭಿಮತವನ್ನು ಕೊಟ್ಟು ಈ ವಿಷಯವನ್ನು ನಿರ್ಣಯಿಸುವ ಅಧಿಕಾರವಿರುತ್ತದೆ.

12. ಕಾರ್ಯನಿರ್ವಾಹಕ ಮಂಡಲಿಯ ಸಭೆಯು ಕನಿಷ್ಠ ಪಕ್ಷ ಎರಡು ತಿಂಗಳಿಗೊಮ್ಮೆಯಾದರೂ ನಡೆಯಲೇ ಬೇಕು.

13. ನಿಯತ ಸಂಖ್ಯೆ

  • ಅ) ಕಾರ್ಯನಿರ್ವಾಹಕ ಮಂಡಲಿಯ ಕಾರ್ಯನಿರ್ವಹಣಾಧಿಕಾರವಿರುವುದಕ್ಕೆ ಏಳು ಸದಸ್ಯರಾದರೂ ಬಂದಿರಬೇಕು.ಈ ಏಳರಲ್ಲಿ ಒಬ್ಬರಾದರೂ ಸಂಘದ ಅಧಿಕಾರಿಗಳಲ್ಲದವರಾಗಿರಬೇಕು.
  • ಆ) ಈ ನಿಯತ ಸಂಖ್ಯೆಯಷ್ಟು ಮಂದಿ ಸದಸ್ಯರು ಬಾರದೇ ಇದ್ದರೆ, ಕಾರ್ಯನಿರ್ವಾಹಕ ಮಂಡಲಿಯ ಸಭೆಯನ್ನು ಮುಂದಾವುದಾದರೊಂದು ದಿನಕ್ಕೆ ಹಾಕಿ ಆಗ ನಿಯತ ಸಂಖ್ಯೆ ಇರಲಿ, ಅಥವಾ ಇಲ್ಲದಿರಲಿ ಆ ದಿನ ಸಭೆಗೆ ಗೊತ್ತಾಗಿದ್ದ ಕಾರ್ಯ ವಿವರವನ್ನು ಪರ್ಯಾಲೋಚಿಸಿ ತೀರ್ಮಾನಿಸಲು ಕಾರ್ಯ ನಿರ್ವಾಹಕ ಮಂಡಲಿಗೆ ಸ್ವಾತಂತ್ರ್ಯವಿರತಕ್ಕದ್ದು.

14. ಕಾರ್ಯವಿವರ ಕಾರ್ಯನಿರ್ವಾಹಕ ಮಂಡಲಿಯ ಪ್ರತಿ ಅಧಿವೇಶನದಲ್ಲಿಯೂ ಅದರ ಹಿಂದಿನ ಅಧಿವೇಶನದ ಕಾರ್ಯ ವಿವರವನ್ನೂ ತಿಂಗಳ ಆದಾಯ ವೆಚ್ಚವನ್ನೂ ಓದಿ ಸ್ಥಿರೀಕರಿಸತಕ್ಕದ್ದು.

15. ಉಪ ಸಮಿತಿಗಳು

  • 1. ಸಂಘದ ವಿವಿಧ ಕಾರ್ಯಗಳನ್ನು ನೆರವೇರಿಸುವುದಕ್ಕಾಗಿ ಕಾರ್ಯನಿರ್ವಾಹಕ ಮಂಡಲಿಯು ಸ್ಥಿರವಾದ ಅಥವಾ ತಾತ್ಕಾಲಿಕವಾದ ಉಪಸಮಿತಿಗಳನ್ನು ಗೊತ್ತುಮಾಡಬಹುದು.
  • 2. ತೀವ್ರ ಸಂದರ್ಭ ಅಧ್ಯಕ್ಷರಾಗಲೀ, ಕಾರ್ಯದರ್ಶಿಯವರಿಗಾಗಲೀ ತೀವ್ರವೆಂದು ತೋರಿದ ಸಂದರ್ಭದಲ್ಲಿ ಅಧ್ಯಕ್ಷರು, ಗೌರವ ಕಾರ್ಯದರ್ಶಿಗಳು, ಉಪಾಧ್ಯಕ್ಷರು, ಕೋಶಾಧ್ಯಕ್ಷರು, ಒಬ್ಬ ಕಾರ್ಯನಿರ್ವಾಹಕ ಮಂಡಲಿಯ ಸದಸ್ಯರು ಈ ಐವರಾದರೂ ಕಲೆತಾಗಲೀ, ಲಿಖಿತ ಮೂಲಕವಾಗಲೀ ಆಲೋಚನೆ ಮಾಡಿ ಸಂಘಕ್ಕೆ ಪ್ರಯೋಜನಕರವೆಂದು ತೋರುವ ಕಾರ್ಯಗಳನ್ನು ಕಾರ್ಯನಿರ್ವಾಹಕ ಮಂಡಲಿಯ ಪರವಾಗಿ ನಡೆಸಬಹುದು ಮತ್ತು ವಿವರಗಳನ್ನು ಕಾರ್ಯನಿರ್ವಾಹಕ ಮಂಡಲಿಗೆ ಅದರ ಮುಂದಿನ ತಿಂಗಳ ಸಭೆಯಲ್ಲಿ ಇಟ್ಟು ಒಪ್ಪಿಗೆ ಪಡೆಯತಕ್ಕದ್ದು. ಈ ರೀತಿ ಒಪ್ಪಿಗೆ ದೊರೆತ ಪಕ್ಷದಲ್ಲಿ ಆ ಬಗೆಯ ಕಾರ್ಯವನ್ನು ಮುಂದೆಯೂ ತೀವ್ರ ಸಂದರ್ಭವೆಂದು ಗಣಿಸಲಾಗದು.
  • 3. ತೀವ್ರ ಸಂದರ್ಭಗಳ ಬಗ್ಗೆ ತನ್ನ ಅಧಿಕಾರಿಗಳನ್ನಲ್ಲದ ಯಾರನ್ನಾದರೂ ಕಾರ್ಯನಿರ್ವಾಹಕ ಮಂಡಲಿಯು ಒಂದು ಉಪಸಮಿತಿಗೆ ವಹಿಸಿಕೊಡಬಹುದು.
  • 4. ಉಪಸಮಿತಿಯ ಸದಸ್ಯತ್ವ ಕಾರ್ಯನಿರ್ವಾಹಕ ಮಂಡಲಿಯು ನಿಯಮಿಸಿರುವ ಸ್ಥಿರವಾದ ಅಥವಾ ತಾತ್ಕಾಲಿಕವಾದ ಅಥವಾ ತೀವ್ರವಾದ ಉಪಸಮಿತಿಗಳಿಗೆ ತನ್ನೊಳಗಿನ ಸದಸ್ಯರನ್ನು ಮಾತ್ರವೇ ಅಲ್ಲದೆ ಸಂಘದ ಇತರ ಸದಸ್ಯರನ್ನೂ ಬೇಕಾದರೆ ಸೇರಿಸಿಕೊಳ್ಳಬಹುದು.
  • 5. ತೀವ್ರ ಸಂದರ್ಭದಲ್ಲಿ ಕಾರ್ಯನಿರ್ವಾಹಕ ಮಂಡಲಿಯಾಗಲೀ ಅದರ ಉಪಸಮಿತಿಗಳಾಗಲೀ ಸೇರುವ ಸಮಯವನ್ನು ಇಷ್ಟು ಮಟ್ಟಿಗೆ ಪೂರ್ವ ಭಾವಿಯಾಗಿ ತಿಳಿಯಪಡಿಸಬೇಕೆಂಬ ಕಾಲವ್ಯವಧಾನದ ನಿರ್ಬಂಧವಿರುವುದಿಲ್ಲ.

16. ಕಿಂಚಿತ್ಕಾಲದ ತೆರವು ಕಾರ್ಯನಿರ್ವಾಹಕ ಮಂಡಲಿಯ ಸದಸ್ಯರ ಸ್ಥಳಗಳಲ್ಲಿ ಯಾವುದಾದರೂ ತೆರವಾದರೆ ಅಂಥಹ ಸ್ಥಾನಕ್ಕೆ ಆ ಬಗೆಯ ಸದಸ್ಯರನ್ನೇ ಮುಂದಿನ ವಾರ್ಷಿಕಸಾಧಾರಣ ಅಧಿವೇಶನದವರೆಗೆ ನೇಮಿಸಿಕೊಳ್ಳುವ ಅಧಿಕಾರವು ಕಾರ್ಯನಿರ್ವಾಹಕ ಮಂಡಲಿಗೆ ಇರತಕ್ಕದ್ದು.

17. ಕಾರ್ಯನಿರ್ವಾಹಕ ಮಂಡಲಿಗೆ ಯಾವ ಸದಸ್ಯರಾಗಲೀ ಸಂಘದಲ್ಲಿ ತಾನು ಮಾಡತಕ್ಕ ಯಾವ ಕೆಲಸಕ್ಕೂ ಯಾವ ವಿಧವಾದ ವೇತನವನ್ನಾಗಲಿ ಪ್ರತಿಫಲವನ್ನಾಗಲೀ ಅಪೇಕ್ಷಿಸಕೂಡದು.

18. ಉಪನಿಬಂಧನೆಗಳು ಈ ನಿಬಂಧಗಳಿಗೆ ವಿರೋಧವಿಲ್ಲದಂತೆ ಅವಶ್ಯವಾದ ಉಪನಿಬಂಧನೆಗಳನ್ನು ಮಾಡಿಕೊಳ್ಳುವ ಅಧಿಕಾರವು ಕಾರ್ಯನಿರ್ವಾಹಕ ಮಂಡಲಿಗೆ ಇರತಕ್ಕದ್ದು. ಕಾರ್ಯನಿರ್ವಾಹಕಮಂಡಲಿಯ ಹೆಚ್ಚು ಸದಸ್ಯರು ಒಪ್ಪಿದ ಕೂಡಲೇ ಈ ಉಪನಿಬಂಧನೆಗಳು ಜಾರಿಗೆ ಬರತಕ್ಕದ್ದು.

19. ಅಧಿವೇಶನಗಳು ವರ್ಷಕ್ಕೊಮ್ಮೆ ಸಾಧಾರಣವಾಗಿ ವಾರ್ಷಿಕ ಅಧಿವೇಶನವನ್ನು ನಡೆಸಬೇಕು. ಈ ವಾರ್ಷಿಕ ಅಧಿವೇಶನವು ವಾರ್ಷಿಕ ಅವಧಿಯು ಮುಕ್ತಾಯವಾದ ಮಾರ್ಚ್ ತಿಂಗಳ ನಂತರ ಅದರ ಮುಂದಿನ ವಾರ್ಷಿಕ ಅವಧಿಯ ಆಗಸ್ಟ್ ತಿಂಗಳೊಳಗೆ ನಡೆಸಬೇಕು. ದ್ದು.

20. ಕಾರ್ಯವಿವರ ಈ ಅಧಿವೇಶನದಲ್ಲಿ ನಡೆಯತಕ್ಕ ಕಾರ್ಯವಿವರವೇನೆಂದರೆ -

  • 1. ಕಾರ್ಯನಿರ್ವಾಹಕಮಂಡಲಿಯು ಒಪ್ಪಿಸುವ ವಾರ್ಷಿಕವರದಿಯನ್ನೂ ಆಯವ್ಯಯ ಶೋಧಕರು ಒಪ್ಪಿಸುವ ಲೆಕ್ಕಪಟ್ಟಿಗಳನ್ನೂ ಅಂಗೀಕರಿಸುವ ವಿಚಾರ.
  • 2. ಮುಂದಿನ ವರ್ಷದ ಆಯವ್ಯಯದ ವ್ಯವಸ್ಥೆ.
  • 3. ಕಾರ್ಯಕಾರಿ ಸಮಿತಿಯ ಅವಧಿಯನ್ನು 5 ವರ್ಷಗಳಿಗೆ ನಿಗಧಿಪಡಿಸಲಾಗಿದ್ದು 5 ವರ್ಷ ಮುಗಿದ ನಂತರದ ಸಾಮಾನ್ಯ ಅಧಿವೇಶನದಲ್ಲಿ ಅಧ್ಯಕ್ಷರನ್ನು ಮತ್ತು ಕಾರ್ಯಕಾರಿ ಸಮಿತಿಯ ಸದಸ್ಯರನ್ನು ಆಯ್ಕೆ ಮಾಡಬೇಕು. (ಮೊದಲು ಅಧ್ಯಕ್ಷರನ್ನೂ ಅಮೇಲೆ ಸದಸ್ಯರನ್ನೂ ಆರಿಸುವುದು ಪದ್ಧತಿಯಾಗಬೇಕು.)
  • 4. ಬರವಣಿಗೆಯ ಮೂಲಕ ನಿಯಮಕ್ಕನುಸಾರವಾಗಿ ಸದಸ್ಯರು ತಿಳಿಸಿರುವ ಸಂಘದ ಇತರ ವಿಷಯಗಳ ವಿಚಾರ.

21. ಸಂಘದ ಸಾಧಾರಣ ಅಧಿವೇಶನಗಳ ಆಹ್ವಾನಪತ್ರಿಕೆಗಳನ್ನು ಅಂತಹ ಅಧಿವೇಶನಗಳು ಕೂಡುವುದಕ್ಕೆ 21 ದಿವಸಗಳು ಮುಂಚಿತವಾಗಿ ಸದಸ್ಯರಿಗೆ ಕಳುಹಿಸತಕ್ಕದ್ದು.

22. ಸಂಘದ ನಿಬಂಧನೆಗಳ ಮತ್ತು ಕಾರ್ಯಕ್ರಮಗಳ ಸಂಬಂಧವಾದ ಸೂಚನೆಗಳನ್ನೂ ಸಾಧಾರಣ ಸಭೆಯ ಅಧಿವೇಶನಕ್ಕೆಂದು ಗೊತ್ತಾಗಿರುವ ದಿನಕ್ಕೆ 7 ದಿನ (ಏಳು)ಗಳ ಮುಂಚೆ ಸಂಘದ ಕಾರ್ಯಾಲಯಕ್ಕೆ ತಲುಪುವಂತೆ ಸದಸ್ಯರು ಗೌರವಕಾರ್ಯದರ್ಶಿಗಳಿಗೆ ಲಿಖಿತ ಮೂಲಕ ಕಳುಹಿಸತಕ್ಕದ್ದು. ಅಂತಹ ಸೂಚನೆಗಳನ್ನು ಗೌರವ ಕಾರ್ಯದರ್ಶಿಗಳು ಅಧಿವೇಶನವು ನಡೆಯುವುದಕ್ಕೆ ಮೂರು ದಿನ ಮುಂಚೆ ಸಂಘದ ಪ್ರಕಟಣಾಫಲಕದಲ್ಲಿ ಹಾಕತಕ್ಕದ್ದು.

23. ನಿಯತ ಸಂಖ್ಯೆ ಸಂಘದ ಪ್ರತಿಯೊಂದು ಸಾಧಾರಣ ಸಭೆಯಲ್ಲಿಯೂ ಸಂಘದ ಒಟ್ಟು ಸದಸ್ಯರಲ್ಲಿ ಮೂರರಲ್ಲೊಂದು ಭಾಗದಷ್ಟು ಮಂದಿ ಸದಸ್ಯರು ಹಾಜರಿರತಕ್ಕದ್ದು. ಯಾವ ಅಧಿವೇಶನದಲ್ಲಿಯೇ ಆಗಲೀ ನಿಯತ ಕಾಲಾನಂತರ ಅರ್ಧ ಘಂಟೆಯೊಳಗಾಗಿ ಈ ನಿಯತ ಸಂಖ್ಯೆಯಷ್ಟು ಸದಸ್ಯರು ಸೇರದಿದ್ದರೆ ಅಂತಹ ಅಧಿವೇಶನನ್ನು ಮುಂದಕ್ಕೆ ಹಾಕಬಹುದು. ಹಾಗೆ ಒಂದು ಗೊತ್ತಾದ ಕಾಲಕ್ಕೆ ಹಾಕಿದ ಮುಂದಿನ ಅಧಿವೇಶನದಲ್ಲಿ ನಿಯತ ಸಂಖ್ಯೆ ಇರಬೇಕೆಂಬ ನಿರ್ಬಂಧವಿರುವುದಿಲ್ಲ.

24. ಈ ಅಧಿವೇಶನದಲ್ಲಿ ಚರ್ಚಿಸಲ್ಪಡುವ ವಿಷಯಗಳು ಅಧಿಕ ಸಂಖ್ಯೆ ಅಭಿಮತವನ್ನು ಹೊಂದಿರಬೇಕು. ಪ್ರತಿನಿಧಿಗಳಿಂದ ಅಭಿಮತಗಳ ಕೊಡಲ್ಪಡಕೊಡದು.

25. ಕಾರ್ಯನಿರ್ವಾಹಕ ಮಂಡಲಿ ಅವಶ್ಯವೆಂದು ಕಂಡು ಬಂದಾಗಾಗಲೀ ಅಥವಾ ತಮ್ಮ ಅಭಿಮತವನ್ನು ಸೂಚಿಸುವ ಹಕ್ಕುಳ್ಳ ಸದಸ್ಯರಲ್ಲಿ ಎಂಟರಲ್ಲೊಂದು ಪಾಲಿಗೆ ಕಡಿಮೆ ಇಲ್ಲದಷ್ಟು ಮಂದಿ ಸದಸ್ಯರು ಅಪೇಕ್ಷಿಸಿದಾಗಾಗಲೀ ಸಂಘದ ವಿಶೇಷ ಸಭೆಗಳನ್ನು ಏರ್ಪಡಿಸತಕ್ಕದ್ದು.

26. 1. ಕಾರ್ಯನಿರ್ವಾಹಕ ಮಂಡಲಿಯ ಎಲ್ಲಾ ಸಭೆಗಳನ್ನು ಕುರಿತ ಆಹ್ವಾನಪತ್ರಗಳು ಮೂರು ದಿನಗಳಿಗೆ ಕಡಿಮೆ ಇಲ್ಲದಷ್ಟು ವ್ಯವಧಾನವಿರುವಂತೆ ತಲುಪುವ ಹಾಗೆ ಸದಸ್ಯರಿಗೆ ಕಳುಹಿಸಕೊಡತಕ್ಕದ್ದು.

2. ಸಕಲ ಸದಸ್ಯರ ಸಾಧಾರಣ ವಾರ್ಷಿಕ ಅಧಿವೇಶನದ ಹೊರತು ಉಳಿದ ವಿಶೇಷ ಅಧಿವೇಶನಗಳೆಲ್ಲವನ್ನೂ ಕುರಿತ ಆಹ್ವಾನ ಪತ್ರಗಳನ್ನು ಒಂದು ವಾರಕ್ಕೆ ಕಡಿಮೆ ಇಲ್ಲದಷ್ಟು ವ್ಯವಧಾನವಿರುವಂತೆ ತಲುಪುವ ಹಾಗೆ ಸದಸ್ಯರಿಗೆ ಕಳುಹಿಸಿಕೊಡತಕ್ಕದ್ದು.

27 ದಂಡನೆ ; ಅಧಿಕಾರ ಸಂಘದ ಕೆಲಸಗಳನ್ನು ನಿರ್ವಹಿಸುವುದಕ್ಕಾಗಿ ಬೇಕಾಗುವ ಕರಣಿಕರನ್ನೂ, ಸೇವಕವರ್ಗದವರನ್ನೂ ನಿಯಮಿಸುವುದಕ್ಕೂ, ಶಿಕ್ಷಿಸುವುದಕ್ಕೂ, ಅವರ ವೇತನ ಬಹುಮಾನ ಪ್ರಮಾಣ ಮುಂತಾದವುಗಳ ವೆಚ್ಚದ ಮೊಬಲಗನ್ನು ನಿಶ್ಚಯಿಸುವುದಕ್ಕೂ ಕಾರ್ಯನಿರ್ವಾಹಕ ಮಂಡಲಿಗೆ ಅಧಿಕಾರವಿರುತ್ತೆ.

28. ಸಂಕೀರ್ಣ ವಿಚಾರಗಳು

  • ಅ) ಸಂಘದ ಉಪಯೋಗವು ಸಮಾಜದ ಎಲ್ಲಾ ವರ್ಗ ಜನಗಳಿಗೆ ಜಾತಿ ಭೇದ ರಹಿತವಾಗಿ ತಲುಪುವಂತೆ ನೋಡಿಕೊಳ್ಳುವುದು.
  • ಆ) ಸ್ಥಾಪಿತವಾಗಿರುವ ಸಂಘ ಯಾವುದೇ ಕಾರಣಕ್ಕೂ ರದ್ದಾಗುವಂತಿಲ್ಲ.
  • ಇ) ವರಮಾನ ತೆರಿಗೆ ಕಾಯ್ದೆ 1961ರ ಕಲಂ 11(5) ಮತ್ತು 13(1)(ಡಿ) ಅನ್ವಯ ಹಾಗೂ ಕಾಲಕಾಲಕ್ಕೆ ವಿಧಿಸುವ ಕಾನೂನು ಬದ್ಧ ಕಾಯ್ದೆಗಳ ಅನುಸಾರವಾಗಿ ಸಂಘ ಫಂಡ್ ಹೊಂದಲು ಅವಕಾಶವಿರುತ್ತದೆ.
  • ಈ) ಸಂಘವು ಮೇಲ್ಕಂಡ ಷರತ್ತುಗಳನ್ನು ಸಂದರ್ಭಕ್ಕೆ ಅನುಸಾರವಾಗಿ ಮಾರ್ಪಡುಮಾಡಿಕೊಳ್ಳಲು ಸಂಘದ ಕಾರ್ಯಕಾರಿ ಸಮಿತಿಗೆ ಅವಕಾಶವಿರುತ್ತದೆ. ಸದರಿ ಯಾವುದೇ ಮಾರ್ಪಾಡುಗಳನ್ನು ವರಮಾನ ತೆರಿಗೆ ಆಯುಕ್ತರಿಂದ ಪೂರ್ವಾನುಮತಿ ಪಡೆಯದೆ ಜಾರಿಗೆ ತರಲು ಅವಕಾಶವಿರುವುದಿಲ್ಲ. ಸದರಿ ಮಾರ್ಪಾಡುಗಳ ವರಮಾನ ತೆರಿಗೆ ಕಾಯ್ದೆ 1961ರ ಕಲಂ 2(15) 11 - 13 ಮತ್ತು 80 ಜಿ ಪರಿಚ್ಛೇದಗಳಿಗೆ ಕಾಲಕಾಲಕ್ಕೆ ಅನ್ವಯವಾಗುವಂತಿರತಕ್ಕದ್ದು. ಮೇಲ್ಕಂಡ ಮಾರ್ಪಾಡುಗಳನ್ನು ಸಂಘ ಅಥವಾ ಅವರಿಂದ ಅಧಿಕಾರಿ ಪಡೆದವರು ತೀರ್ಮಾನಿಸಲು ಅವಕಾಶವಿರುತ್ತದೆ.
  • ಉ) ವರಮಾನ ತೆರಿಗೆ ಕಾಯ್ದೆಯಡಿ ಕಾಲಕಾಲಕ್ಕೆ ಆಗಬಹುದಾದ 1961ರ ಸೆಕ್ಷನ್ 12,12ಎ ವಿಧಿಗಳನ್ನು ಸಂಘಗಳು ಚಲಾಯಿಸುವ ಹಕ್ಕುಳ್ಳವರಾಗಿರುತ್ತಾರೆ. ಸಂಘ ಹೊಂದಿರತಕ್ಕ ಎಲ್ಲಾ ದೇಣಿಗೆಗಳು, ವರಮಾನ ತೆರಿಗೆ ಕಾಯ್ದೆ 1961ರ ಸೆಕ್ಷನ್ 11(5)ರ ವಿಧಿಯನ್ನು ಮೀರುವಂತಿಲ್ಲ.
  • ಊ) ಒಂದು ವೇಳೆ ಸಂಘವನ್ನು ಸಮಾಪ್ತಿಗೊಳಿಸಲು ಕಾರ್ಯಕಾರಿ ಮಂಡಳಿ ಇಚ್ಚೆಪಟ್ಟಲ್ಲಿ ಸರ್ವ ಸದಸ್ಯರ ಸಭೆ ಕರೆದು ಬಹುಮತ ಒಪ್ಪಿಗೆ ಮೇರೆಗೆ ಸಂಘ ಹೊಂದಿರಬಹುದಾದ ಚರ ಹಾಗೂ ಸ್ಥಿರಾಸ್ತಿಗಳನ್ನು ಇನ್ನಾವುದೇ ಇದೇ ಉದ್ದೇಶವನ್ನು ಹೊಂದಿರುವ ಸಂಘಕ್ಕೆ ಆಸ್ತಿಯನ್ನು ವರ್ಗಾಯಿಸಲು ಅವಕಾಶವಿದ್ದು, ಆಸ್ತಿಯನ್ನು ವರ್ಗಾವಣೆ ಪಡೆಯುವ ಸಂಘ ಸಹಾ ವರಮಾನ ತೆರಿಗೆ ಕಾಯ್ದೆ 1961ರ ಕಲಂ 80 ಜಿ ಅಡಿಯಲ್ಲಿ ವರಮಾನ ತೆರಿಗೆ ರಿಯಾಯಿತಿಯನ್ನು ಹೊಂದಿರುವ ಸಂಸ್ಥೆಯಾಗಿರತಕ್ಕದ್ದು.

29. ಶಾಶ್ವತ ನಿಧಿ

  • 1. ಸಂಘದ ಸಾಧಾರಣ ಸದಸ್ಯರ ಹೊರತು ಎಂದರೆ ಮಹಾಪೋಷಕರು, ಪೋಷಕರು, ಅಜೀವ ಸದಸ್ಯರು ಎಂದು ಕೊಡತಕ್ಕ ದ್ರವ್ಯಗಳು.
  • 2. ಇತರ ವಿಧವಾದ ಧರ್ಮ ಸಹಾಯಗಳು : ಇವುಗಳನ್ನು ಶಾಶ್ವತ ನಿಧಿಯಾಗಿ ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಾಗಲಿ ಅಥವಾ ಸಹಕಾರೀ ಬ್ಯಾಂಕ್‍ಗಳಲ್ಲಾಗಲೀ ಇರಿಸಿ ಮೂಲಧನವನ್ನು ಸಂಘದ ಸಾಧಾರಣ ಸಮಿತಿಯ ಅನುಮತಿಯ ಹೊರತು ಮುಟ್ಟದೆ ಪ್ರತಿವರ್ಷ ಬರುವ ಬಡ್ಡಿಯನ್ನು ಸಂಘದ ಸಾಮಾನ್ಯ ವೆಚ್ಚಗಳಿಗಾಗಿ ಉಪಯೋಗಿಸತಕ್ಕದ್ದು.

30. ಸಂಘದ ದೈನಂದಿನ ವೆಚ್ಚಕ್ಕಾಗಿ ಐದು ಸಾವಿರ ರೂ.ಗಳವರೆಗೆ ನಗದನ್ನು ಒಂದು ವಾರ ಅವಧಿಗೆ ಅಧ್ಯಕ್ಷ, ಕಾರ್ಯದರ್ಶಿ ಅಥವಾ ಕಾರ್ಯಕ್ರಮ ನಿರ್ವಹಿಸುವ ಸದಸ್ಯರು ಹೊಂದಬಹುದು. ಹೀಗೆ ನಗದು ಶುಲ್ಕ ಮಿತಿಯನ್ನು ಅವಶ್ಯವೆನಿಸಿದರೆ ವ್ಯತ್ಯಯಗೊಳಿಸುವ ಅಧಿಕಾರವನ್ನು ಕಾರ್ಯಕಾರಿ ಸಮಿತಿ ಹೊಂದಿರುತ್ತದೆ. ಸಂಘದ ಆರ್ಥಿಕ ಕೊರತೆಯ ಸಂದರ್ಭದಲ್ಲಿ ಪ್ರಕಟಣೆ, ಕಾರ್ಯಕ್ರಮ ನಿರ್ವಹಣೆ, ಕಟ್ಟಡ ನಿರ್ಮಾಣ, ವಸ್ತುಗಳನ್ನು ಕೊಳ್ಳುವುದು ಇತ್ಯಾದಿ ಅಗತ್ಯವೆಚ್ಚದ ಸಂದರ್ಭದಲ್ಲಿ ಬ್ಯಾಂಕ್‍ಗಳಿಂದಾಗಲಿ ಸಾರ್ವಜನಿಕರಿಂದಾಗಲಿ, ಸಂಘದ ಕಾರ್ಯಕಾರಿ ಸಮಿತಿಯ ಸದಸ್ಯರಿಂದಾಗಲಿ, ಸಂಘದ ಸಾಮಾನ್ಯ ಸದಸ್ಯರಿಂದಾಗಲೀ ಅಥವಾ ಇನ್ನಿತರರಿಂದಾಗಲಿ ಸಾಲ ಪಡೆಯುವ ಮತ್ತು ಹಿಂತಿರುಗಿಸುವ ಅಧಿಕಾರ ಕಾರ್ಯನಿರ್ವಹಣಾ ಮಂಡಲಿಗೆ ಇರುತ್ತದೆ.

31. ಖಜಾನೆಯಿಂದ ಅಥವಾ ಮೈಸೂರು ಬ್ಯಾಂಕ್‍ಗಳಿಂದ ಹಣವನ್ನು ತೆಗೆಯುವಾಗ ಅಧ್ಯಕ್ಷರು ಮತ್ತು ಗೌರವ ಕೋಶಾಧ್ಯಕ್ಷರು, ಜಂಟಿಯಾಗಿ ಖಾತೆಗಳನ್ನು ನಿರ್ವಹಿಸುವುದು.

32 ಲೆಕ್ಕಗಳು ಸಂಘದ ಲೆಕ್ಕಗಳೆಲ್ಲವನ್ನೂ ಸಂಘದ ಸದಸ್ಯರಲ್ಲಿ ಯಾರಿಗೇ ಅಗಲೀ ನೋಡಲು ಅಧಿಕಾರವಿರತಕ್ಕದ್ದು. ಆರ್ಥಿಕ ವರ್ಷದ ಲೆಕ್ಕಪತ್ರಗಳನ್ನು ಚಾರ್ಟೆಟ್ ಅಂಕೌಟೆಂಟ್ ಅವರಿಂದ ಲೆಕ್ಕ ಪರಿಶೋಧನಾ ಕಾರ್ಯ ನಡೆಸಿ ಹಾಗೆ ಪಡೆದ ಆರ್ಥಿಕ ತಃಖ್ತೆಯನ್ನು, ವರದಿಯನ್ನು ಪ್ರಥಮವಾಗಿ ಕಾರ್ಯನಿರ್ವಾಹಕ ಮಂಡಳಿಯು ಒಪ್ಪಿ, ಸಮಜಾಯಿಸಿಗಳೊಡನೆ ಆ ವರ್ಷದ ವಾರ್ಷಿಕ ಸರ್ವ ಸದಸ್ಯರ ಸಭೆಗೆ ತಂದು ಅಂತಿಮ ಒಪ್ಪಿಗೆ ಪಡೆಯಬೇಕು.

33. ಸಂಘದ ಕಾರ್ಯನಿರ್ವಾಹಕ ಮಂಡಳಿಯ ಯಾರಾದರೂ ಸದಸ್ಯರು ಕಾರ್ಯ ನಿರ್ವಾಹಕ ಮಂಡಳಿಯ ಒಪ್ಪಿಗೆ ಪಡೆದು ನ್ಯಾಯಾಲಯದಲ್ಲಿ ವ್ಯವಹಾರ ಅಥವಾ ಇನ್ನಿತರೇ ಕೋರ್ಟ್ ವ್ಯವಹಾರಗಳನ್ನು ನಿರ್ವಹಿಸುವುದು.

34. 1.ಸಂಘದ ಕೆಲಸಗಳೆಲ್ಲವೂ ಅಧ್ಯಕ್ಷರ, ಉಪಾಧ್ಯಕ್ಷರ ಮತ್ತು ಗೌರವ ಕಾರ್ಯದರ್ಶಿಯವರ ಮೇಲ್ವಿಚಾರಣೆಯಲ್ಲಿ ನಡೆಯತಕ್ಕದ್ದು.

  • 2. ಈ ನಿಬಂಧನೆಗಳಲ್ಲಿ ಯಾವುದರ ಅರ್ಥವಾದರೂ ಸಂದೇಹವಾದರೆ ಅಥವಾ ಯಾವ ಸಂದರ್ಭಕ್ಕಾದರೂ ಇವು ಅನ್ವಯಿಸಲಾರವೆಂದು ತೋರಿದರೆ ಅಂಥಹ ಸಂದರ್ಭಗಳಲ್ಲಿ ಉಚಿತವೆನಿಸಿದಂತೆ ನಿರ್ಧಾರಮಾಡಿ ಕಾರ್ಯ ನಡೆಸುವ ಅಧಿಕಾರವು ಕಾರ್ಯನಿರ್ವಾಹಕ ಮಂಡಲಿಗೆ ಇರುತ್ತದೆ. ಆದರೆ ಹೀಗೆ ಮಾಡಿದ ವಿಶೇಷ ನಿರ್ಧಾರಗಳನ್ನೂ, ಕಾರ್ಯಗಳನ್ನೂ ಕಾರ್ಯನಿರ್ವಾಹಕ ಮಂಡಲಿಯು ಮುಂದಿನ ಅಧಿವೇಶನದಲ್ಲಿ ಆ ಸಭೆಗೆ ತಿಳಿಯಪಡಿಸತಕ್ಕದ್ದು. ಆ ನಿರ್ಧಾರಗಳನ್ನೂ ಕಾರ್ಯಕಲಾಪಗಳನ್ನೂ ತಿದ್ದುವ ಅಥವಾ ಬದಲಾಯಿಸುವ ಅಧಿಕಾರವು ಸಂಘದ ಅಧಿವೇಶನಕ್ಕೆ ಇರತಕ್ಕದ್ದು. ಅರ್ಥನಿಶ್ಚಯ
  • 3. ಈ ನಿಬಂಧಗಳಿಗೆ ಅರ್ಥ ವಿವರಣೆ ಮಾಡವುದರಲ್ಲಾಗಲೀ, ಇನ್ನಾವ ವಿಷಯದಲ್ಲಾಗಲೀ ಸದಸ್ಯರಲ್ಲಿ ಭಿನ್ನಾಭಿಪ್ರಾಯಗಳು ತೋರಿದರೆ ಆಗ ಅಧಿಕ ಸಂಖ್ಯೆಯ ಅಭಿಮತವೇನೆಂದು ತಿಳಿದು ಹೇಳುವುದಕ್ಕೂ, ಅಭಿಮತ ಸಂಖ್ಯೆಯು ಸಮಸಂಖ್ಯೆ ಯಾಗಿದ್ದರೆ ಆಗ ನಿರ್ಧಾರಕ ಅಭಿಮತ ಕೊಡುವುದಕ್ಕೂ ಸಭೆ ಅಧಿವೇಶನಗಳ ಎಲ್ಲಾ ಕಾರ್ಯಕ್ರಮಗಳನ್ನೂ ನಿರ್ಣಯಪಡಿಸುವುದಕ್ಕೂ ಸಭೆಗಳ ಅಧಿಪತಿಗಳಿಗೆ ಅಧಿಕಾರವಿರುತ್ತದೆ. ಸಂಘದ ಸರ್ವತೋಮುಖವಾದ ಮೇಲ್ವಿಚಾರಣೆ ಮಾಡಲೂ ಅಧಿಕಾರವಿರುತ್ತದೆ.

35.ಗೌರವ ಕಾರ್ಯದರ್ಶಿಗಳು,ಉಪಾಧ್ಯಕ್ಷರು,ಸಹ ಕಾರ್ಯದರ್ಶಿಗಳು,ಖಜಾಂಚಿ.

  • ಗೌರವ ಕಾರ್ಯದರ್ಶಿಗಳು ಎಲ್ಲಾ ಕಾರ್ಯಗಳನ್ನೂ ನಿರ್ವಹಿಸುವ ಅಧಿಕಾರವುಳ್ಳವರಾಗಿರತಕ್ಕದ್ದಲ್ಲದೆ ಕಾರ್ಯ ನಿರ್ವಾಹಕಮಂಡಲಿಗೂ, ಸದಸ್ಯರ ಸಭೆಗೂ ಜವಾಬ್ದಾರ ರಾಗಿರತಕ್ಕದ್ದು. ಕಾರ್ಯನಿರ್ವಾಹಕಮಂಡಲಿಯ ಅಧಿಕಾರಕ್ಕೆ ಒಳಪಟ್ಟು ಸಂಘದ ಸಿಬ್ಬಂದಿಯ ಮೇಲ್ವಿಚಾರಣೆ ನೋಡಿಕೊಳ್ಳತಕ್ಕದ್ದು. ಸಾಮಾನ್ಯವಾದ ಎಲ್ಲಾ ಪತ್ರವ್ಯವಹಾರವನ್ನೂ ಸಂಘದ ಇತರ ದೈನಂದಿನ ಕೆಲಸವನ್ನೂ ತಮ್ಮ ರುಜು ಹಾಕಿ ನಡೆಸತಕ್ಕದ್ದು.
  • ಉಪಾಧ್ಯಕ್ಷರು : ಸಂಘದ ಅಧ್ಯಕ್ಷರ ಗೈರು ಹಾಜರಿಯಲ್ಲಿ ಕಾರ್ಯನಿರ್ವಹಣಾ ಮಂಡಳಿಯ ಅಧ್ಯಕ್ಷತೆ ವಹಿಸಬೇಕು. ಹಾಗೂ ಅಧ್ಯಕ್ಷರ ಗೈರು ಹಾಜರಿಯಲ್ಲಿ ಸಂಘದ ಮೇಲುಸ್ತ್ತುವಾರಿಯನ್ನು ನೋಡಿಕೊಳ್ಳಬೇಕು.
  • ಸಹ ಕಾರ್ಯದರ್ಶಿಗಳು : ಅಧ್ಯಕ್ಷರು ಸೂಚನೆಗಳನ್ನು ಪಾಲಿಸುತ್ತಾ ಸಂಘದ ಕಾರ್ಯ ಚಟುವಟಿಕೆಗಳನ್ನು ಸುಸೂತ್ರವಾಗಿ ನಡೆಸಲು ನೆರವಾಗಬೇಕು.
  • ಖಜಾಂಚಿ : ಅಧ್ಯಕ್ಷರು - ಖಜಾಂಚಿ ಜಂಟಿಯಾಗಿ ಬ್ಯಾಂಕ್ ಖಾತೆಯನ್ನು ನಿರ್ವಹಿಸಬೇಕು. ಸಂಘದ ಜಮಾ-ಖರ್ಚು ತಃಖ್ತೆಯನ್ನು ನಿರ್ವಹಿಸಬೇಕು.

36. ಸಂಘದ ಆಡಳಿತದ ವರ್ಷಾವಧಿಯು ಆರ್ಥಿಕ ವರ್ಷಕ್ಕೆ ಅನುಗುಣವಾಗಿರುತ್ತದೆ. ಅಂದರೆ ಏಪ್ರಿಲ್ ಒಂದರಿಂದ ಮಾರ್ಚ್ 31 ರವರೆಗೆ ವರ್ಷಾವಧಿಯನ್ನು ಗಣನೆಗೆ ತೆಗೆದುಕೊಳ್ಳುವುದು.

37. ಪುಸ್ತಕಭಂಡಾರ, ವಾಚನಾಲಯ, ಅತಿಥಿಗಳ ಆದರಾತಿಥ್ಯದ ವೆಚ್ಚಗಳು, ಇವೆ ಮೊದಲಾದವುಗಳ ವಿಷಯದಲ್ಲಿ ಉಪನಿಬಂಧನೆಗಳನ್ನು ಕಾರ್ಯ ನಿರ್ವಾಹಕಮಂಡಲಿಯು ರಚಿಸತಕ್ಕದ್ದು. ಈ ನಿಬಂಧನೆಗಳು ಸರಿಯಾಗಿವೆ ಎಂದು ಒಪ್ಪಿರುತ್ತೇವೆ