`ಮಂಡ್ಯದ ಕರ್ನಾಟಕ ಸಂಘದ ಪ್ರಧಾನ ಪೋಷಕರಲ್ಲಿ ಒಬ್ಬರಾದ ಶ್ರೀಯುತ ಎಂ.ಶ್ರೀನಿವಾಸ್ ಅವರು ಮಂಡ್ಯ ತಾಲ್ಲೂಕು, ಹನಕೆರೆ ಗ್ರಾಮದವರು. ವಕೀಲರಾಗಿ ವೃತ್ತಿ ಪ್ರಾರಂಭಿಸಿದ ಇವರು, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶರಾಗಿ ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡವರು. ಶೈಕ್ಷಣಿಕ ಪ್ರಗತಿಯ ಬಗ್ಗೆ ಒಲವಿರುವ ಇವರು ತಮ್ಮ ಹುಟ್ಟೂರಿನಲ್ಲಿ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆಯಬೇಕೆಂದು ವಸತಿ ಸಹಿತ 'ವಿವೇಕ ವಿದ್ಯಾ ಸಂಸ್ಥೆ' ಸ್ಥಾಪಿಸಿ ಉಚಿತವಾಗಿ ಶಿಕ್ಷಣ ನೀಡುತ್ತಿದ್ದಾರೆ. ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಎಂ.ಶ್ರೀನಿವಾಸ್ ಅವರು ಸಂಸ್ಕೃತಿಪ್ರಿಯರು, ಸಾಹಿತ್ಯಾಸಕ್ತರಾಗಿದ್ದು ಕರ್ನಾಟಕ ಸಂಘದ ಅಭಿವೃದ್ಧಿಯಲ್ಲಿ ಅವರದು ಪ್ರಮುಖಪಾತ್ರ. ಕರ್ನಾಟಕ ಸಂಘದ ಮಹಾಪೋಷಕರಾಗಿ ಅದರ ಪ್ರತಿಯೊಂದು ಪ್ರಗತಿಯ ಹೆಜ್ಜೆ ಗುರುತುಗಳಲ್ಲಿ ಜೊತೆಯಾಗಿ ನಿಂತು ಅದರ ಬೆಳವಣಿಗೆಗೆ ಅಪಾರವಾಗಿ ಶ್ರಮಿಸುತ್ತಿದ್ದಾರೆ.
ಶ್ರೀ ಹೆಚ್.ಹೊನ್ನಪ್ಪ ಅವರು ಕರ್ನಾಟಕ ಸಂಘದ ಪ್ರಧಾನ ಪೋಷಕರಲ್ಲಿ ಒಬ್ಬರು. ಶ್ರೀಯುತರು ಮಂಡ್ಯ ತಾಲ್ಲೂಕಿನ ಇಂಡುವಾಳು ಗ್ರಾಮದವರು. ಅಲ್ಲಿಯ ಪ್ರಸಿದ್ಧ ದಿ|ಹೆಚ್.ಹೊನ್ನಯ್ಯ ಅವರ ಸುಪುತ್ರರು. ಹೆಚ್.ಹೊನ್ನಯ್ಯ ಅವರು ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಮಂಡ್ಯ ಪುರಸಭೆಯ ಅಧ್ಯಕ್ಷರಾಗಿದ್ದವರು. ಕರ್ನಾಟಕ ಸಂಘದ ಸ್ಥಾಪಕರಲ್ಲಿ ಒಬ್ಬರಾದವರು. ತಮ್ಮ ತಂದೆಯ ಹಾದಿಯಲ್ಲಿ ನಡೆದ ಹೊನ್ನಪ್ಪ ಅವರು ಕರ್ನಾಟಕ ಸಂಘವನ್ನು ತಂದೆಯ ನಂತರ ಪೋಷಿಸುತ್ತಾ ಬಂದಿದ್ದಾರೆ.
ಶ್ರೀಯುತ ಬಿ.ರಾಮಕೃಷ್ಣ ಅವರು ಮದ್ದೂರು ತಾಲ್ಲೂಕಿನ ಕೆ.ಹೊನ್ನಲಗೆರೆ ಗ್ರಾಮದವರು. ಬೆಂಗಳೂರಿನಲ್ಲಿ ನೆಲೆಸಿದ್ದು, ಉದ್ಯಮಿಗಳಾಗಿದ್ದಾರೆ. ಕೇವಲ ಉದ್ಯಮಿಗಳಷ್ಟೇ ಅಲ್ಲದೇ ಕಲೆ, ಸಾಹಿತ್ಯ, ಶಿಕ್ಷಣದಲ್ಲಿ ಬಹಳ ಆಸಕ್ತಿ ಇಟ್ಟುಕೊಂಡಿದ್ದಾರೆ. ತಮ್ಮ ಗ್ರಾಮದಲ್ಲಿ ವಸತಿ ಶಿಕ್ಷಣ ಸಂಸ್ಥೆ ಸ್ಥಾಪಿಸಿ ತಂಬಾ ಚೆನ್ನಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಒಮ್ಮೆ ವಿಧಾನ ಪರಿಷತ್ತಿನ ಸದಸ್ಯರಾಗಿ ಆಯ್ಕೆಯಾಗಿದ್ದು ಅಂದಿನಿಂದ ಕರ್ನಾಟಕ ಸಂಘದ ಸಂಪರ್ಕವನ್ನು ಬೆಳೆಸಿಕೊಂಡು ಕರ್ನಾಟಕ ಸಂಘದ ನಿತ್ಯ ಅನ್ನದಾಸೋಹಕ್ಕೆ ಹಣಕಾಸಿನ ನೆರವು ನೀಡುತ್ತಾ ಕರ್ನಾಟಕ ಸಂಘದ ಪ್ರಧಾನ ಪೋಷಕರಲ್ಲಿ ಒಬ್ಬರಾಗಿ ಇದರ ಅಭ್ಯುದಯದಲ್ಲಿ ಆಸಕ್ತಿಯಿಂದ ನೆರವು ನೀಡಿ ಬೆಳೆಸುತ್ತಿದ್ದಾರೆ.
ಶ್ರೀಯುತ ಕೆ.ಟಿ.ಶ್ರೀಕಂಠೇಗೌಡರು ಪ್ರಸ್ತುತ ವಿಧಾನ ಪರಿಷತ್ತಿನ ಸದಸ್ಯರು. ಮದ್ದೂರು ತಾಲ್ಲೂಕಿನ ಕೊಪ್ಪ ಗ್ರಾಮದವರಾದ ಶ್ರೀಯುತರು ಪ್ರಾಂಶುಪಾಲರಾಗಿ ನಿವೃತ್ತಿ ಹೊಂದಿದವರು. ಎರಡನೇ ಬಾರಿಗೆ ವಿಧಾನ ಪರಿಷತ್ತಿನ ಸದಸ್ಯರಾಗಿ ಸಾಹಿತ್ಯ, ಸಂಸ್ಕೃತಿ, ಶಿಕ್ಷಣದ ಬಗ್ಗೆ ಅಪಾರ ಒಲವಿಟ್ಟುಕೊಂಡು ಉತ್ತಮ ಕೆಲಸಗಳನ್ನು ಮಾಡುತ್ತಿದ್ದಾರೆ. ಸಾಹಿತ್ಯ ಶಿಕ್ಷಣ ಪ್ರಿಯರಾದ ಇವರು ಕರ್ನಾಟಕ ಸಂಘದ ಪ್ರಧಾನ ಪೋಷಕರಲ್ಲಿ ಒಬ್ಬರಾಗಿದ್ದು ಇದರ ಅಭ್ಯುದಯದಲ್ಲಿ ಸರ್ವರೀತಿಯಲ್ಲಿ ನೆರವು ನೀಡುತ್ತಿದ್ದಾರೆ.
ಸನ್ಮಾನ್ಯ ಮಧು ಜಿ.ಮಾದೇಗೌಡ ಅವರು ನಮ್ಮ ಜಿಲ್ಲೆಯ ಪ್ರಮುಖ ಹಿರಿಯ ರಾಜಕಾರಣಿಗಳು, ಶಿಕ್ಷಣ ಹರಿಕಾರರೂ ಆದ ಡಾ.ಜಿ.ಮಾದೇಗೌಡರ ಸುಪುತ್ರರು. ಮದ್ದೂರು ತಾಲ್ಲೂಕಿನ ಗುರುದೇವರಹಳ್ಳಿ ಗ್ರಾಮದಲ್ಲಿ ಜನಿಸಿದ ಮಧು ಅವರು ಮಂಡ್ಯ ಜಿಲ್ಲೆಯ ಪ್ರಸಿದ್ಧ ಶಿಕ್ಷಣ ಸಂಸ್ಥೆಯಾದ ಭಾರತೀ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾಗಿ ಎಲ್ಲಾ ರೀತಿಯ ಮಾದರಿಯ ಶಿಕ್ಷಣ ನೀಡುತ್ತಾ ಪ್ರಗತಿಯತ್ತ ಕೊಂಡೊಯ್ಯುತ್ತಿದ್ದಾರೆ. ಪ್ರಸ್ತುತ ವಿಧಾನ ಪರಿಷತ್ ಸದಸ್ಯರಾಗಿದ್ದು ಇವರು ಸಮಾಜ ಸೇವೆಯಲ್ಲಿ ಆಸಕ್ತಿ ಹೊಂದಿದ್ದಾರೆ. ಇಂಜಿನಿಯರಿಂಗ್ ಪದವೀಧರರಾದ ಶ್ರೀಯುತರು ಕರ್ನಾಟಕ ಸಂಘದ ಪ್ರಧಾನ ಪೋಷಕರಾಗಿದ್ದು, ಸಂಘದ ಅಭಿವೃದ್ಧಿಗೆ ಮಾರ್ಗದರ್ಶನ ಮಾಡುತ್ತಾ ಶ್ರಮಿಸುತ್ತಿದ್ದಾರೆ.
ಶ್ರೀಯುತ ಜಫ್ರುಲ್ಲಾಖಾನ್ ಮಂಡ್ಯದ ನಿವಾಸಿಯಾದರೂ ದುಬೈ ಅನ್ನು ತಮ್ಮ ಕರ್ಮಭೂಮಿಯನ್ನಾಗಿ ಮಾಡಿಕೊಂಡು ಅಲ್ಲಿಯೇ ನೆಲೆಸಿದ್ದಾರೆ. ದುಬೈ ಕನ್ನಡ ಸಂಘದ ಅಧ್ಯಕ್ಷರಾಗಿದ್ದವರು. ಪ್ರಸ್ತುತ ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಶ್ರೀಯುತರು ಕನ್ನಡದ ಬಗ್ಗೆ ಅಪಾರ ಒಲವನ್ನಿಟ್ಟುಕೊಂಡಿರುವವರು. ಮಂಡ್ಯವನ್ನು ಅಪಾರವಾಗಿ ಪ್ರೀತಿಸುತ್ತಾ ತಮ್ಮ ಬೇರುಗಳನ್ನು ಇಟ್ಟುಕೊಂಡಿದ್ದಾರೆ. ಕರ್ನಾಟಕ ಸಂಘದ ಪ್ರಧಾನ ಪೋಷಕರಾಗಿ ಇದರ ಬೆಳವಣಿಗೆಗೆ ಶ್ರಮಿಸುತ್ತಿದ್ದಾರೆ.