ಕರ್ನಾಟಕ ಜಾನಪದ ವಿಶ್ವವಿದ್ಯಾನಿಲಯ ಕರ್ನಾಟಕ ಸಂಘಕ್ಕೆ ಸಂಶೋಧನಾ ಕೇಂದ್ರದ ಮಾನ್ಯತೆ ನೀಡಿದೆ. ವಿ.ವಿ.ಯ ಆಶ್ರಯದಲ್ಲಿ ಸುಮಾರು 10 ವರ್ಷಗಳ ಯೋಜನೆಯಾದ `ಕರ್ನಾಟಕ ಜಾನಪದ ಪದಸಂಸ್ಕೃತಿ ಕೋಶ’ (ಜಾನಪದ ನಿಘಂಟು) ರಚನಾ ಕಾರ್ಯವನ್ನು ಡಾ.ರಾಮೇಗೌಡ (ರಾಗೌ) ಅವರ ನೇತೃತ್ವದಲ್ಲಿ ಕೈಗೊಂಡಿದೆ. ಈ ಯೋಜನೆ ಸಾವಿರ ಪುಟಗಳ 10 ಸಂಪುಟಗಳನ್ನು ಒಳಗೊಂಡಿದ್ದು ಈಗಾಗಲೇ ಸಾವಿರ ಪುಟಗಳ 4 ಸಂಪುಟಗಳು ಪ್ರಕಟಗೊಂಡಿದ್ದು 5ನೇ ಸಂಪುಟ ಸಿದ್ಧತೆಯಲ್ಲಿದೆ. ಈ ಎಲ್ಲಾ ಸಂಪುಟಗಳು ಪೂರ್ಣಗೊಂಡಾಗ ಕರ್ನಾಟಕ ಜಾನಪದ ಕ್ಷೇತ್ರಕ್ಕೆ ಒಂದು ಅಮೂಲ್ಯವಾದ ಕೊಡುಗೆಯಾಗಿದ್ದು ಇತಿಹಾಸವನ್ನು ನಿರ್ಮಿಸುತ್ತದೆ. ಈ ಸಂಪುಟದ ಪ್ರಧಾನ ಸಂಪಾದಕರಾಗಿ ಕರ್ನಾಟಕ ಜಾನಪದ ವಿ.ವಿಯ ಕುಲಪತಿಗಳಿದ್ದು ಸಂಪಾದಕರಾಗಿ ಡಾ.ರಾಗೌ ಸಂಯೋಜಕ ಸಂಪಾದಕರಾಗಿ ಪ್ರೊ. ಬಿ ಜಯಪ್ರಕಾಶ ಗೌಡ ಸಹಸಂಪಾದಕರಾಗಿ ಡಾ.ಚಿಕ್ಕಮರಳಿ ಬೋರೇಗೌಡ ಡಾ.ಸಿ ನೀಲಕಂಠಗೌಡ ,ತಜ್ಞ ಸಹಾಯಕರಾಗಿ ಡಾ. ಉಮೇಂದ್ರದ್ರಕುಮಾರ್ ಕಾರ್ಯನಿರ್ವಹಿಸುತ್ತಿದ್ದಾರೆ. ಡಿಟಿಪಿ ಕಾರ್ಯವನ್ನು ಶ್ರೀಮತಿ ಶಿಲ್ಪ ಅವರು ಮಾಡಿದ್ದಾರೆ
ಮೂಡಲಪಾಯ ಯಕ್ಷಗಾನಕ್ಕೆ ಪ್ರತ್ಯೇಕ ಅಕಾಡೆಮಿಗೆ ಪ್ರಯತ್ನ ಹಾಗೂ ಕರ್ನಾಟಕ ಡಾ.ಗಂಗೂಬಾಯಿಹಾನಗಲ್ ಸಂಗೀತ ಹಾಗೂ ಪ್ರದರ್ಶಕ ಕಲೆಗಳ ವಿ.ವಿ. ಹಾಗೂ ಕರ್ನಾಟಕ ಸಂಘದ ಸಹಯೋಗದಲ್ಲಿ ಇಲ್ಲಿಯ ಯುವ ಜನತೆ ಹಾಗೂ ವಿದ್ಯಾರ್ಥಿಗಳಿಗೆ ಅನುವಾಗುವ ರೀತಿಯಲ್ಲಿ ಒಂದು ವರ್ಷದ ಸರ್ಟಿಫಿಕೇಟ್ ಕೋರ್ಸ್ (ಜನಪದ ಸಂಗೀತ, ಶಾಸ್ತ್ರೀಯ ಸಂಗೀತ, ವಾದ್ಯಸಂಗೀತ, ನೃತ್ಯ ಮುಂತಾದ ಪ್ರಕಾರಗಳಿಗೆ) ತೆಗೆಯಲು ಒಪ್ಪಂದ ಮಾಡಿಕೊಂಡಿದ್ದು 2020 ಆಗಸ್ಟ್ 6ರಲ್ಲಿ ಕೇಂದ್ರ ಉದ್ಘಾಟಿಸಲಾಯಿತು.
ಮಂಡ್ಯ ಜಿಲ್ಲಾ ಸಮಗ್ರ ದರ್ಶನ ನಾಡಿನ ಪ್ರಸಿದ್ಧ ಸಂಘಟಕ ಮತ್ತು ಚಿಂತಕ ಶ್ರೀ ಜಿ.ನಾರಾಯಣ ಅವರಿಗೆ ೮೫ ವರ್ಷಗಳು ತುಂಬಿದ ಸಂದರ್ಭದಲ್ಲಿ ಅವರ ಗೌರವಾರ್ಥ ಕರ್ನಾಟಕ ಸಂಘವು ಮಂಡ್ಯ ಜಿಲ್ಲೆಯನ್ನು ಬೌದ್ದಿಕ ಜಗತ್ತಿಗೆ ಸಮಗ್ರವಾಗಿ ಪರಿಚಯಿಸಿಕೊಡುವ ಉದ್ದೇಶದಿಂದ ತನ್ನ ಮಹತ್ವಾಕಾಂಕ್ಷೆಯ ಈ ಯೋಜನೆಯನ್ನು ಕೈಗೊಂಡಿದೆ. ವಿಶ್ವಕೋಶ ಮಾದರಿಯಲ್ಲಿ ತಲಾ ಒಂದು ಸಾವಿರ ಪುಟಗಳ ನಾಲ್ಕು ಬೃಹತ್ ಸಂಪುಟಗಳನ್ನು ಪ್ರಕಟಿಸುವ ಮೂಲಕ ಈ ಯೋಜನೆಯನ್ನು ಕಾರ್ಯಗತಗೊಳಿಸಲಾಗುತ್ತದೆ. ಮಂಡ್ಯ ಜಿಲ್ಲೆಯ ಸಾಹಿತ್ಯ ಮತ್ತು ಕಲೆ, ಶಿಕ್ಷಣ ಮತ್ತು ಅಭಿವೃದ್ಧಿ ಸಮುದಾಯ ಮತ್ತು ಸಂಸ್ಕೃತಿ, ಇತಿಹಾಸ ಮತ್ತು ರಾಜಕೀಯ ವಿಷಯಗಳನ್ನು ಕ್ರಮವಾಗಿ ಈ ಸಂಪುಟಗಳು ಒಳಗೊಂಡಿರುತ್ತವೆ. ಡಾ.ರಾಗೌ ಅವರ ಮಾರ್ಗದರ್ಶನದಲ್ಲಿ ಪ್ರೊ.ಬಿ.ಜಯಪ್ರಕಾಶಗೌಡರು ಪ್ರಧಾನ ಸಂಪಾದಕರಾಗಿ ಸಂಪುಟಗಳನ್ನು ಸಿದ್ಧಪಡಿಸುತ್ತಿದ್ದಾರೆ.
ಕರ್ನಾಟಕ ಸಂಘದ ಮತ್ತೊಂದು ಮಹತ್ವಪೂರ್ಣ ಯೋಜನೆ ಪ್ರಾಚೀನಕಲೆಯಾದ ಮೂಡಲಪಾಯ ಯಕ್ಷಗಾನ ಪುನರುಜ್ಜೀವನಗೊಳಿಸಿ ಪ್ರದರ್ಶನಗಳಲ್ಲಿ ಅನೇಕ ಸುಧಾರಣೆಗಳನ್ನು ತರುವ ಪ್ರಯತ್ನಕ್ಕೆ ಹೆಜ್ಜೆಯಿಟ್ಟಿದೆ. ಇದಕ್ಕೆ ಪ್ರಮುಖವಾಗಿ ನೆರವಾಗಿ ನಿಂತಿರುವವರು ಕರ್ನಾಟಕ ಡಾ. ಗಂಗೂಬಾಯಿಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿ.ವಿ. 10 ತಿಂಗಳ ಸರ್ಟಿಫಿಕೇಟ್ ಕೋರ್ಸನ್ನು ಕರ್ನಾಟಕ ಸಂಘದ ನೇತೃತ್ವದಲ್ಲಿ ಸಧ್ಯದಲ್ಲಿ ತೆರೆಯುತ್ತಿದೆ.
ಕರ್ನಾಟಕ ಜಾನಪದ ವಿಶ್ವವಿದ್ಯಾನಿಲಯ ಪ್ರಾದೇಶಿಕ ಜಾನಪದ ಅಧ್ಯಯನ ಮತ್ತು ಕಲಿಕಾ ಕೇಂದ್ರದ ಸಂಯೋಜನಾಧಿಕಾರಿಯಾಗಿ ಆಯ್ಕೆಯಾದ ಸಂದರ್ಭ
ಕರ್ನಾಟಕ ಸಂಘದ ಅಧ್ಯಕ್ಷರಾದ ಪ್ರೊ.ಜಯಪ್ರಕಾಶಗೌಡರು ಪ್ರಸ್ತುತ ಹಾವೇರಿಯ ಕರ್ನಾಟಕ ಜಾನಪದ ವಿಶ್ವವಿದ್ಯಾನಿಲಯದ ಮಂಡ್ಯದ ಪ್ರಾದೇಶಿಕ ಅಧ್ಯಯನ ಮತ್ತು ಕಲಿಕಾ ಕೇಂದ್ರದ ಸಂಯೋಜನಾಧಿಕಾರಿಯಾಗಿ ದಿನಾಂಕ : 10-08-2020 ಅಧಿಕಾರ ವಹಿಸಿಕೊಂಡಿದ್ದು ಜನಪದ ಸಂಗೀತ, ನೃತ್ಯ ಹಾಗೂ ಪ್ರದರ್ಶಕ ಕಲೆಗಳನ್ನು ಕಲಿಸುವಲ್ಲಿ ಮತ್ತು ಸಂಶೋಧನೆ ಮಾಡುವ ನಿಟ್ಟಿನಲ್ಲಿ ಮಹತ್ವದ ಉದ್ದೇಶಗಳನ್ನು ಹೊಂದಿರುತ್ತಾರೆ.
ಕರ್ನಾಟಕ ಸಂಘದ ಪ್ರಯತ್ನಗಳಲ್ಲಿ ಮೂಡಲಪಾಯ ಯಕ್ಷಗಾನ ಪುನಶ್ಚೇತನ ಕಾರ್ಯವೂ ಒಂದು. ಮೂಡಲಪಾಯ ಯಕ್ಷಗಾನದ ಸರ್ವಾಂಗೀಣ ಪ್ರಗತಿಗೆ ಕಾರಣವಾಗುವ ಅಂಶಗಳಲ್ಲಿ ಹೊಸ ಭಾಗವತರನ್ನು, ಮದ್ದಳೆಗಾರರನ್ನು, ಮುಖವೀಣೆ ಕಲಾವಿದರನ್ನು ತಯಾರು ಮಾಡುವ; ಯುವಕರಿಗೆ ಮೂಡಲಪಾಯ ಹೆಜ್ಜೆಗಳನ್ನು ಕಲಿಸುವ, ಸಾಹಿತ್ಯವನ್ನು ಪರಿಷ್ಕರಿಸುವ, ಪರಿಕರಗಳನ್ನು ಪರಿಷ್ಕರಿಸುವ ಕೆಲಸವನ್ನು ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಜಾನಪದ ಮತ್ತು ಮೂಡಲಪಾಯದ ಬಗ್ಗೆ ಅಪಾರವಾದ ಪ್ರೋತ್ಸಾಹವನ್ನು ಮತ್ತು ಪೋಷಕತ್ವವನ್ನು ನೀಡುತ್ತಿರುವ ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಹಾಸಂಸ್ಥಾನ ಮಠ. ಇದರ ಪೀಠಾಧ್ಯಕ್ಷರಾದ ಶ್ರೀ ಶ್ರೀ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರ ಪ್ರೋತ್ಸಾಹ ಮತ್ತು ಪೋಷಕತ್ವದಡಿ ಕರ್ನಾಟಕ ಸಂಘದ ಆಶ್ರಯದಲ್ಲಿ ‘ಆದಿಚುಂಚನಗಿರಿ ಮೂಡಲಪಾಯ ಯಕ್ಷಗಾನ ಕೇಂದ್ರ’ ಎಂಬ ಸಂಸ್ಥೆಯನ್ನು ಹುಟ್ಟು ಹಾಕಿ ಅದರಡಿಯಲ್ಲಿ ಮೇಲೆ ತಿಳಿಸಿರುವ ಎಲ್ಲಾ ವಿಷಯಗಳಲ್ಲಿ ತಯಾರು ಮಾಡುವ ಪ್ರಕ್ರಿಯೆಗಳನ್ನು ಆರಂಭಿಸಲಾಗಿದೆ. ಈ ಹಿನ್ನೆಲೆಯಲ್ಲಿ ವಾರಾಂತ್ಯ ಶಾಲೆಯನ್ನು ಸ್ಥಾಪಿಸಿ ಈಗಾಗಲೇ 20 ಜನ ವಿದ್ಯಾರ್ಥಿಗಳಿಗೆ ಮುಖವೀಣೆ, ಮದ್ದಳೆ, ಭಾಗವತಿಕೆಯನ್ನು ಕಲಿಸಲಾಗುತ್ತಿದೆ. ಪ್ರಸಂಗಳನ್ನು ಮೂಲಕ್ಕೆ ದಕ್ಕೆಬಾರದಂತೆ ವಿವಿಧ ರೀತಿಯಲ್ಲಿ ಪರಿಷ್ಕರಿಸಿ ರಂಗದ ಮೇಲೆ ತಂದ ಹೆಗ್ಗಳಿಕೆಯನ್ನು ಈ ಕೇಂದ್ರ ಹೊಂದಿದೆ. ಇದುವರೆಗೂ ಮಂಡ್ಯ ತಾಲ್ಲೂಕಿನ ಬೇಲೂರು ಸರ್ಕಾರಿ ಪ್ರೌಢಶಾಲೆ, ಹನಕೆರೆ ವಿವೇಕಾ ವಿದ್ಯಾಸಂಸ್ಥೆ ಹಾಗೂ ಮಂಡ್ಯ ನಗರದ ಸದ್ವಿದ್ಯಾ ಶಾಲೆಯ ಮಕ್ಕಳಿಗೆ ಕ್ರಮವಾಗಿ ‘ಕರ್ಣಾವಸಾನ’ ‘ದೇವಿ ಮಹಾತ್ಮೆ’ ಹಾಗೂ ‘ತ್ರಿಪುರ ದಹನÀ’ ಪ್ರಸಂಗಗಳನ್ನು ಮೂಲಭಾಗವತರು ಹಾಗೂ ಆಧುನಿಕ ರಂಗನಿರ್ದೇಶಕರ ಸಂಯೋಗದಲ್ಲಿ ಕಲಿಸಿ, ಪರಿಷ್ಕರಿಸಿ ನಾವೀನ್ಯತೆಯನ್ನು ತಂದು ವಿವಿಧ ಕಡೆ ಪ್ರದರ್ಶಿಸಲಾಗಿದೆ. ಕರ್ಣಾವಸಾನ ಪ್ರಸಂಗವು ಈಗಾಗಲೇ ದಿನಾಂಕ : 18-04-2021, 29-1-2020, 23-10-2021ರಂದು ಕರ್ನಾಟಕ ಸಂಘದ ಆವರಣದಲ್ಲಿ; 20-11-2021, 27-11-2021ರಂದು ಮಂಡ್ಯದ ಶಾರದಾ ವಿದ್ಯಾಸಂಸ್ಥೆ ಹಾಗೂ ಡ್ಯಾಪೋಡಿಲ್ಸ್ ಶಾಲೆಯಲ್ಲಿ; 10-10-2021ರಂದು ಶ್ರೀರಂಗಪಟ್ಟಣದ ದಸರಾ ಉತ್ಸವದಲ್ಲಿ ಯಶಸ್ವಿ ಪ್ರದರ್ಶನ ಕಂಡಿದೆ. ಅದೇ ರೀತಿ ‘ದೇವಿಮಹಾತ್ಮೆ’ ಪ್ರಸಂಗವು ದಿನಾಂಕ : 05-12-2021 ಹನಕೆರೆ ಗ್ರಾಮದಲ್ಲಿ ರಂದು 8-12-2021ರಂದು ಪಿಇಎಸ್ ಕಾಲೇಜು ವಿವೇಕಾನಂದ ರಂದಮಂದಿರದಲ್ಲಿ; 5-1-2022 ರಂದು ನಾಗಮಂಗಲದ ಆದಿಚುಂಚನಗಿರಿಯಲ್ಲಿ ಜರುಗಿದ ರಾಜ್ಯಮಟ್ಟದ ಯುವಜನೋತ್ಸವದಲ್ಲಿ, 10-1-2022ರಂದು ಬೆಂಗಳೂರಿನ ಎಡಿಎ ರಂಗಮಂದಿರಲ್ಲಿ ಯಶಸ್ವಿಯಾಗಿ ಪ್ರದರ್ಶಗೊಂಡಿದೆ. ಪ್ರಸ್ತುತ ಕರ್ನಾಟಕ ಸಂಘವು ಕೇಂದ್ರದವತಿಯಿಂದ ಮಂಡ್ಯ ನಗರದ ಸದ್ವಿದ್ಯಾ ಶಾಲೆಯ ಮಕ್ಕಳಿಗೆ ಎರಡು ತಿಂಗಳ ತರಬೇತಿ ನೀಡಿ ‘ತ್ರಿಪುರದಹನ’ ಪ್ರಸಂಗವನ್ನು ಕಲಿಸಿದೆ. ದಿನಾಂಕ : 4, 5, 6 ಪೆಬ್ರವರಿ 2022ರಂದು ಮೂರು ದಿನ ಮೂಡಲಪಾಯ ಯಕ್ಷಗಾನ ಉತ್ಸವವನ್ನು ಮಂಡ್ಯ ನಗರ ಪಿಇಎಸ್ ಕಾಲೇಜು ವಿವೇಕಾನಂದ ರಂಗಮಂದಿರದಲ್ಲಿ ಆಯೋಜಿಸಿ ಮೂರು ಪ್ರಸಂಗಗಳ ಆಮೋಘ ಪ್ರದರ್ಶನದೊಂದಿಗೆ ಮೂಡಲಪಾಯ ಕಲೆಯ ಜನಪ್ರಿಯತೆಗೆ ಕಾರಣವಾಗಿದೆ. ಉತ್ಸವದ ಉದ್ಘಾಟನೆಯಲ್ಲಿ ಮಂಡ್ಯ ಲಯನ್ ಮಾಜಿ ಜಿಲ್ಲಾ ರಾಜ್ಯಪಾಲರಾದ ನಾಗರಾಜು ವಿ.ಬೈರಿ, ಖ್ಯಾತ ಮನೋವೈದ್ಯರಾದ ಡಾ.ಟಿ.ಎಸ್.ಸತ್ಯನಾರಾಯಣರಾವ್, ಮೈಸೂರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕರಾದ ಶ್ರೀ ವಿ.ಎಸ್.ಮಲ್ಲಿಕಾರ್ಜುನಸ್ವಾಮಿ, ಜನತಾ ಶಿಕ್ಷಣ ಸಂಸ್ಥೆ ಅಧ್ಯಕ್ಷರಾದ ಶ್ರೀ ಕೆ.ಎಸ್.ವಿಜಯಾನಂದ ಅವರು ಮುಖ್ಯ ಅತಿಥಿಗಳಾಗಿ ಭಾಗಿಯಾಗಿದ್ದರು. ದಿನಾಂಕ: 14, 15, 16ನೇ ಪೆಬ್ರವರಿ 2022ರಂದು ಮಂಡ್ಯ ತಾಲ್ಲೂಕು, ಆನಸೋಸಲು ಗ್ರಾಮದಲ್ಲಿ ಶ್ರೀ ಆಂಜನೇಯಸ್ವಾಮಿ ಪ್ರತಿಷ್ಠಾಪನಾ ಮಹೋತ್ಸವದ ಅಂಗವಾಗಿ ಕೇಂದ್ರದ ವತಿಯಿಂದ ಕ್ರಮವಾಗಿ `ಕರ್ಣಾವಸಾನ’, `ತ್ರಿಪುರ ದಹನ’, `ದೇವಿಮಹಾತ್ಮೆ’ ಮೂಡಲಪಾಯ ಯಕ್ಷಗಾನ ಪ್ರಸಂಗಗಳನ್ನು ಪ್ರದರ್ಶಿಸುವ ಮೂಲಕ ಮೂಡಲಪಾಯ ಯಕ್ಷಗಾನ ಉತ್ಸವವನ್ನು ಆಯೋಜಿಸಲಾಗಿತ್ತು.