ನೋಂದಾಯಿತ ಸಾಂಸ್ಕೃತಿಕ ಸಂಸ್ಥೆಯಾದ ಮಂಡ್ಯದ ಕರ್ನಾಟಕ ಸಂಘವು ೦೧.೦೪.೨೦೧೫ ರಿಂದ ೩೧.೦೩.೨೦೧೬ರವರೆಗಿನ ಒಂದು ವರ್ಷದ ಅವಧಿಯಲ್ಲಿ ನಡೆಸಿದ ಚಟುವಟಿಕೆಗಳ ಸಂಕ್ಷಿಪ್ತ ವರದಿ :
೧. ಕೆ. ಸಿಂಗಾರಿಗೌಡ ಪುಸ್ತಕ ಪ್ರಶಸ್ತಿ ಮತ್ತು ಡಾ. ರಾಗೌ ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭ : ೨೦೧೫ರ ಏಪ್ರಿಲ್ ೩ ರಂದು ಜರುಗಿತು. ಸಮಾರಂಭದ ಅಧ್ಯಕ್ಷತೆಯನ್ನು ಮದ್ದೂರು ಕ್ಷೇತ್ರದ ಶಾಸಕರಾದ ಶ್ರೀ ಡಿ.ಸಿ. ತಮ್ಮಣ್ಣ ಅವರು ವಹಿಸಿದ್ದರು. ಕೆ. ಸಿಂಗಾರಿಗೌಡ ಪುಸ್ತಕ ಪ್ರಶಸ್ತಿ’ಯನ್ನು ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಇತಿಹಾಸ ಪ್ರಾಧ್ಯಾಪಕರಾದ ಡಾ.ಎನ್. ಚಿನ್ನಸ್ವಾಮಿ ಸೋಸಲೆ ಅವರಿಗೆ ‘ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದ ಮೈಸೂರು’ ಕೃತಿಯನ್ನು ಲಕ್ಷ್ಯದಲ್ಲಿರಿಸಿಕೊಂಡು ಪ್ರದಾನ ಮಾಡಲಾಯಿತು. ‘ಡಾ. ರಾಗೌ ಸಾಹಿತ್ಯ ಪ್ರಶಸ್ತಿ’ಯನ್ನು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿಗಳಾಗಿದ್ದ ಡಾ. ಅಂಬಳಿಕೆ ಹಿರಿಯಣ್ಣ ಅವರಿಗೆ ಅವರು ಕನ್ನಡ ಜಾನಪದ ಅಧ್ಯಯನಕ್ಕೆ ನೀಡಿರುವ ಕೊಡುಗೆಯನ್ನು ಗಮನಿಸಿ ಪ್ರದಾನ ಮಾಡಲಾಯಿತು. ಎರಡೂ ಪ್ರಶಸ್ತಿಗಳನ್ನು ಮಾಜಿ ಶಾಸಕರಾದ ಶ್ರೀ ಜಿ.ವಿ. ಶ್ರೀರಾಮರೆಡ್ಡಿ ಅವರು ಪ್ರದಾನ ಮಾಡಿದರು. ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಸಚಿವರಾದ ಡಾ. ಡಿ.ಬಿ. ನಾಯಕ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಕಾರ್ಯಕ್ರಮವು ಕರ್ನಾಟಕ ಸಂಘದ ಆವರಣದಲ್ಲಿ ಜರುಗಿತು.
೨. ಕರ್ನಾಟಕ ಇತಿಹಾಸ - ಜನಸಾಮಾನ್ಯರೆಡೆಗೆ; ಮಾಸಿಕ ಉಪನ್ಯಾಸ ಮಾಲೆ - ೧೮ : ದಿನಾಂಕ ೦೪.೦೪.೨೦೧೫ರಂದು ಸಂಘದ ಆವರಣದಲ್ಲಿ ಜರುಗಿತು. ‘ಕರ್ನಾಟಕ ಸಂಸ್ಕೃತಿಗೆ ಜೈನಧರ್ಮದ ಕೊಡುಗೆಗಳು’ ಎಂಬ ವಿಷಯ ಕುರಿತು ಜೈನಶಾಸ್ತ್ರದ ಪ್ರಸಿದ್ಧ ವಿದ್ವಾಂಸರಾದ ಡಾ. ಎಂ.ಎ. ಜಯಚಂದ್ರ ಅವರು ಉಪನ್ಯಾಸ ನೀಡಿದರು. ಈ ಕಾರ್ಯಕ್ರಮದ ಪ್ರಾಯೋಜಕರಾದ ಡಾ. ಎಚ್.ಎಸ್. ಲಲಿತಾಂಗಕುಮಾರ್ ಅವರು ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರವನ್ನು ಈ ಕಾರ್ಯಕ್ರಮಕ್ಕೆ ಪಡೆಯಲಾಗಿತ್ತು.
೩. ಕೀಲಾರದ ಕ್ಷೀರಸಾಗರ ಮಿತ್ರಕೂಟದ ಸಹಯೋಗ ಪಡೆದು ದಿನಾಂಕ : ೦೮.೦೪.೨೦೧೫ರಂದು ಕೆ.ವಿ. ಶಂಕರಗೌಡ ಜನ್ಮಶತಮಾನೋತ್ಸವದ ಅಂಗವಾಗಿ ವಿಚಾರ ಸಂಕಿರಣ ಹಾಗೂ ಗೌರವ ಸಮರ್ಪಣ ಕಾರ್ಯಕ್ರಮವನ್ನು ನಾಗಮಂಗಲದ ಶ್ರೀ ಆದಿಚುಂಚನಗಿರಿ ಪ್ರಥಮದರ್ಜೆ ಕಾಲೇಜಿನಲ್ಲಿ ನಡೆಸಲಾಯಿತು. ಶ್ರೀ ಶ್ರೀ ಶ್ರೀ ಪ್ರಸನ್ನನಾಥಸ್ವಾಮೀಜಿ ಅವರು ಸಾನಿಧ್ಯ ವಹಿಸಿದ್ದರು. ಪ್ರೊ. ಜಿ.ಟಿ. ವೀರಪ್ಪ ಅವರು ‘ಕೆವಿಎಸ್ ಸ್ಮರಣೆ’ ಕುರಿತು ಉಪನ್ಯಾಸ ನೀಡಿದರು. ನಾಗಮಂಗಲದ ಮಾಜಿ ಶಾಸಕರಾದ ಶ್ರೀ ಎಚ್.ಟಿ. ಕೃಷ್ಣಪ್ಪ ಅವರನ್ನು ಗೌರವಿಸಲಾಯಿತು. ಶಾಸಕರಾದ ಶ್ರೀ ಎನ್. ಚಲುವರಾಯಸ್ವಾಮಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ವಿಧಾನಪರಿಷತ್ ಸದಸ್ಯರಾದ ಶ್ರೀ ಬಿ. ರಾಮಕೃಷ್ಣ ಅವರು ಗೌರವ ಸಮರ್ಪಣೆ ಮಾಡಿದರು. ಪ್ರಾಂಶುಪಾಲರಾದ ಪ್ರೊ. ಎನ್. ರಾಮು ಅವರು ಅಧ್ಯಕ್ಷತೆ ವಹಿಸಿದ್ದರು. ನಾಗಮಂಗಲ ತಾಲ್ಲೂಕು ಕಸಾಪ ಅಧ್ಯಕ್ಷ ಶ್ರೀ ಬಿ.ಸಿ. ಮೋಹನ್‍ಕುಮಾರ್ ಅವರು ಮುಖ್ಯ ಅತಿಥಿಗಳಾಗಿದ್ದರು.
೪. ಕುಡಿಯುವ ನೀರಿನ ಶುದ್ಧೀಕರಣ ಯಂತ್ರ ಸ್ವೀಕಾರ ಸಮಾರಂಭ : ಸರಳ ರೀತಿಯಲ್ಲಿ ಸಂಘದ ಆವರಣದಲ್ಲಿ ೨೦೧೫ರ ಏಪ್ರಿಲ್ ೧೩ರಂದು ಜರುಗಿತು. ಮಂಡ್ಯದ ‘ಕೃಷಿಕ ಲಯನ್ಸ್’ ಸಂಸ್ಥೆಯವರು ಸಂಘಕ್ಕೆ ಜಲಶುದ್ಧೀಕರಣ ಯಂತ್ರವನ್ನು ಕೊಡುಗೆ ನೀಡಿದರು. ಸಂಘದ ಅಧ್ಯಕ್ಷರಾದ ಪ್ರೊ. ಜಯಪ್ರಕಾಶಗೌಡರು ಯಂತ್ರವನ್ನು ಸ್ವೀಕರಿಸಿದರು.
೫.‘ಲೇಡಿ ಮ್ಯಾಕ್‍ಬೆತ್’ ಏಕವ್ಯಕ್ತಿ ನಾಟಕ ಪ್ರದರ್ಶನವನ್ನು ೧೭.೦೪.೨೦೧೫ರಂದು ಸಂಘದ ಆವರಣದಲ್ಲಿ ನಡೆಸಲಾಯಿತು. ಈ ಇಂಗ್ಲಿಷ್ ನಾಟಕವನ್ನು ಸ್ವತಃ ನಿರ್ದೇಶಿಸಿದ ಶ್ರೀಮತಿ ಆಬಂತಿ ಚಕ್ರಬೋರ್ತಿ (ಕಲ್ಕತ್ತ) ಅವರು ಅಭಿನಯಿಸಿ ಪ್ರಸ್ತುತ ಪಡಿಸಿದರು. ಸಂಗೀತ ನೀಡಿದವರು ಸುಕಾಂತ ಮಜುಮ್ದಾರ್; ಧ್ವನಿ ನಿರ್ವಹಣೆ ಅವಿತ್ ಚಕ್ರಬೋರ್ತಿ ಮತ್ತು ಅರಿಕ್ರ ಚಕ್ರಬೋರ್ತಿ; ಪುರುಷ ಧ್ವನಿ ನೀಡಿ ಸಾತ್ ಕೊಟ್ಟವರು ಶ್ರೀ ತಥಾಗತ ಚೌಧರಿ.
೬. ಕೃತಿಗಳ ಲೋಕಾರ್ಪಣೆ ಸಮಾರಂಭವು ದಿನಾಂಕ ೧೮.೦೪.೨೦೧೫ರಂದು ಜರುಗಿತು. ಡಾ. ಎನ್. ಉಮಾ ಅವರ ‘ಮನಸು ಬಾಡಿಗೆಗಿಲ್ಲ’, ಶ್ರೀಮತಿ ನಾಗರೇವಕ್ಕ ಅವರ ‘ಬೆಂಕಿಯಲ್ಲಿ ಅರಳಿದ ಹೂವು’, ‘ಬತ್ತಿದೆದೆಯಲ್ಲಿ ಬೆಳದಿಂಗಳು’ ಮತ್ತು ಶ್ರೀಮತಿ ಮಂಜುಳಾ ಅವರ ‘ಶ್ರೀ ರಾಮಾಯಣ ದರ್ಶನಂ - ಸ್ತ್ರೀ ಸಂವೇದನೆ’ ಕೃತಿಗಳನ್ನು ಲೋಕಾರ್ಪಣೆಗೊಳಿಸಿದವರು ಶಾಸಕರೂ ಪ್ರಸಿದ್ಧ ಚಿಂತಕರೂ ಆದ ಶ್ರೀ ವೈ.ಎಸ್. ದತ್ತ ಅವರು. ವಿಶ್ರಾಂತ ಪ್ರಾಂಶುಪಾಲರೂ, ಲೇಖಕರೂ ಆದ ಪ್ರೊ. ಸ.ನ. ಗಾಯತ್ರಿ ಅವರು ಕೃತಿಗಳನ್ನು ಕುರಿತು ಮಾತನಾಡಿದರು. ಸಂಘದ ಮಹಾಪೋಷಕರಾದ ಶ್ರೀ ಎಂ. ಶ್ರೀನಿವಾಸ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮವು ಮಂಡ್ಯದ ರೈತಸಭಾಂಗಣದಲ್ಲಿ ಜರುಗಿತು.
೭.ನಮ್ಮ ಸಂಘದ ಪ್ರಾಯೋಜನೆಯಲ್ಲಿ ನಡೆದ ಯಕ್ಷಗಾನ ತರಬೇತಿ ಶಿಬಿರದ ಉದ್ಘಾಟನಾ ಕಾರ್ಯಕ್ರಮವು ೨೦.೦೪.೨೦೧೫ರಂದು ಮಂಡ್ಯದ ಸದ್ವಿದ್ಯಾ ಪ್ರೌಢಶಾಲೆಯಲ್ಲಿ ಜರುಗಿತು. ತರಬೇತಿ ಶಿಬಿರ ಪೂರ್ಣಾವಧಿಯಲ್ಲಿ ಇಲ್ಲಿಯೇ ನಡೆಯಿತು. ಈ ಶಾಲೆಯೊಡನೆ ಸಾತ್ ನೀಡಿದ್ದು ಮಂಡ್ಯದ ಡ್ಯಾಪೋಡಿಲ್ಸ್ ಪಬ್ಲಿಕ್ ಸ್ಕೂಲ್. ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಕರ್ನಾಟಕ ಜಾನಪದ ಪರಿಷತ್‍ನ ಅಧ್ಯಕ್ಷರಾದ ಶ್ರೀ ಟಿ. ತಿಮ್ಮೇಗೌಡರು, ಜಿಲ್ಲಾಧಿಕಾರಿಗಳಾದ ಡಾ. ಎಂ.ಎನ್. ಅಜಯನಾಗಭೂಷಣ್ ಉದ್ಘಾಟಿಸಿದರು. ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಮತ್ತು ಕರ್ನಾಟಕ ಜಾನಪದ ಪರಿಷತ್‍ನ ಸಹಯೋಗದಲ್ಲಿ ಶಿಬಿರ ನಡೆಯಿತು. ಕಾರ್ಕಳದ ನಿವೃತ್ತ ಪ್ರಾಂಶುಪಾಲರಾದ ಶ್ರೀ ಬಿ. ಪದ್ಮನಾಭಗೌಡ ಮತ್ತು ಜೀವವಿಮಾ ಹಿರಿಯ ಅಭಿವೃದ್ಧಿ ಅಧಿಕಾರಿ ಡಾ. ಎಸ್. ಶ್ರೀನಿವಾಸಶೆಟ್ಟಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಕಾರ್ಕಳದ ಗುರು ಶ್ರೀ ಮಹಾವೀರ ಪಾಂಡೆ ಶಿಬಿರವನ್ನು ನಿರ್ದೇಶಿಸಿದರು.
೮. ವೈ.ಕೆ. ರಾಮಯ್ಯ ಪ್ರಶಸ್ತಿ ಪ್ರದಾನ ಸಮಾರಂಭವನ್ನು ನಮ್ಮ ಸಂಘವು ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್‍ನ ಕೃಷ್ಣರಾಜ ಪರಿಷನ್ಮಂದಿರದಲ್ಲಿ ದಿನಾಂಕ : ೨೨.೦೪.೨೦೧೫ರಂದು ನೆರವೇರಿತು. ಈ ಸಲದ ಪ್ರಶಸ್ತಿಯನ್ನು ಕೃಷ್ಣರಾಜ ಪೇಟೆಯ ಪ್ರಗತಿಪರ ರೇಷ್ಮೆ ಕೃಷಿಕರಾದ ಶ್ರೀ ಕೆ.ಎನ್. ಸೋಮಶೇಖರ್ ಮತ್ತು ಕುಣಿಗಲ್ ತಾಲ್ಲೂಕು ಪಲ್ಲೇನಹಳ್ಳಿಯ ಶ್ರೀ ರಾಜಣ್ಣ ಅವರಿಗೆ ನೀಡಲಾಯಿತು. ಜೆ ಡಿ ಎಸ್‍ನ ರಾಜ್ಯಾಧ್ಯಕ್ಷರೂ ಮಾಜಿ ಮುಖ್ಯಮಂತ್ರಿಗಳೂ ಆದ ಶ್ರೀ ಎಚ್.ಡಿ. ಕುಮಾರಸ್ವಾಮಿ ಅವರು ಪ್ರದಾನ ಮಾಡಿದರು. ಶಾಸಕರೂ ಮಾಜಿ ಸಚಿವರೂ ಆದ ಶ್ರೀ ಎನ್. ಚಲುವರಾಯಸ್ವಾಮಿ ಅವರು ಅಧ್ಯಕ್ಷತೆ ವಹಿಸಿದ್ದರು. ಡಾ. ಲಿಂಗರಾಜಯ್ಯ ಬೆಳಕೆರೆ ಅವರು ವೈ.ಕೆ. ರಾಮಯ್ಯ ಅವರ ಸ್ಮರಣೆ ಮಾಡಿದರು. ವೈ.ಕೆ. ರಾಮಯ್ಯ ಟ್ರಸ್ಟ್ನ ಅಧ್ಯಕ್ಷರಾದ ಶ್ರೀ ಎನ್. ಆರ್. ರಂಗಯ್ಯ ಉಪಸ್ಥಿತರಿದ್ದರು
೯. ಕೆ.ವಿ. ಶಂಕರಗೌಡ ನಾಟಕೋತ್ಸವವು ಕೆವಿಎಸ್ ಜನ್ಮ ಶತಮಾನೋತ್ಸವದ ಅಂಗವಾಗಿ ಮಂಡ್ಯದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ದಿನಾಂಕ : ೨೭.೦೪.೨೦೧೫ರಿಂದ ೦೨.೦೫.೨೦೧೫ರವರೆಗೆ ಜರುಗಿತು. ೨೭ರಂದು ಜರುಗಿದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಮೈಸೂರು ವಿಶ್ವವಿದ್ಯಾನಿಲಯದ ಪ್ರಸಾರಾಂಗದ ವಿಶ್ರಾಂತ ನಿರ್ದೇಶಕರಾದ ಶ್ರೀ ಕೆ.ಟಿ. ವೀರಪ್ಪ ವಹಿಸಿದ್ದರು. ಪ್ರಾಧ್ಯಾಪಕ ಡಾ. ಮಹದೇವ ಉದ್ಘಾಟಿಸಿದರು. ದೆಹಲಿಯ ರೇಣುಕಾ ನಿಡುಗುಂದಿ ರಚನೆಯ, ಮಂಡ್ಯದ ಶ್ರೀಮತಿ ಮಂಜುಳಾ ಉದಯಶಂಕರ್ ಅಭಿನಯಿಸಿ ಪ್ರಸ್ತುತಪಡಿಸಿದ, ರಂಗಪಠ್ಯ ಮತ್ತು ವಿನ್ಯಾಸ ನಿರ್ದೇಶನದಲ್ಲಿ ನಟರಾಜ್ ಹೊನ್ನವಳ್ಳಿ ಇದ್ದ ‘ನಾನು ಅಮೃತಾ ಪ್ರೀತಮ್’; ನಟರಾಜ್ ಹೊನ್ನವಳ್ಳಿ ಅವರೇ ಹಾಡುಗಳನ್ನು ರಚಿಸಿ ವಿನ್ಯಾಸಗೊಳಿಸಿ ನಿರ್ದೇಶಿಸಿದ, ಕೆ.ವಿ. ಸುಬ್ಬಣ್ಣ ಮತ್ತು ಕೆ.ವಿ. ಅಕ್ಷರ ಅವರು ರೂಪಾಂತರಿಸಿದ, ಜನದನಿ ಸಾಂಸ್ಕೃತಿಕ ಟ್ರಸ್ಟ್ನ ಕಲಾವಿದರು ಅಭಿನಯಿಸಿದ ನ. ಗೋಗಲ್ ಅವರ ‘ಸಾಹೇಬರು ಬರುತ್ತಾರೆ’; ಚಿದಂಬರರಾವ್ ಜಂಬೆ ನಿರ್ದೇಶಿಸಿದ, ಇಕ್ಬಾಲ್ ಅಹಮದ್ ವಿನ್ಯಾಸಗೊಳಿಸಿದ ಪ್ರಸನ್ನ ಡಿ. ಸಾಗರ ಸಂಗೀತ ನೀಡಿದ ಮೈಸೂರಿನ ನಿರಂತರ ಪೌಂಡೇಶನ್‍ನವರು ಅಭಿನಯಿಸಿದ, ಚಂದ್ರಶೇಖರ ಕಂಬಾರರ ‘ಶಿವರಾತ್ರಿ’; ಶಶಿಧರ ಭಾರಿಘಾಟ್ ನಿರ್ದೇಶಿಸಿದ, ಭೂಷಣ್ ಭಟ್ ಸಂಗೀತ ನೀಡಿದ, ಎಸ್. ರಾಮನಾಥ ರಚಿಸಿದ, ಬಿ.ಎನ್. ಶಶಿಕಲಾ ಅವರು ಅಭಿನಯಿಸಿ ಪ್ರಸ್ತುತ ಪಡಿಸಿದ ಏಕವ್ಯಕ್ತಿ ಪ್ರದರ್ಶನದ ‘ಕಸ್ತೂರಬಾ’ ನಾಟಕಗಳು ಈ ಉತ್ಸವದಲ್ಲಿ ಪ್ರದರ್ಶನಗೊಂಡವು. ೦೨.೦೫.೨೦೧೫ರಂದು ಸಮಾರೋಪ ಸಮಾರಂಭವು ಜರುಗಿತು. ವಿಧಾನ ಪರಿಷತ್‍ನ ಮಾಜಿ ಸದಸ್ಯ ಶ್ರೀ ಕೆ.ಟಿ. ಶ್ರೀಕಂಠೇಗೌಡ ಅವರು ಸಮಾರೋಪ ಭಾಷಣ ಮಾಡಿದರು; ಜನದನಿ ಟ್ರಸ್ಟ್ನ ಅಧ್ಯಕ್ಷರಾದ ಪ್ರೊ. ರಾಮೇಗೌಡರು ಅಧ್ಯಕ್ಷತೆ ವಹಿಸಿದ್ದರು. ಮಂಡ್ಯದ ಜನದನಿ ಸಾಂಸ್ಕೃತಿಕ ಟ್ರಸ್ಟ್ ನಮ್ಮ ಸಂಘದೊಡನೆ ಪ್ರಾಯೋಜಕತ್ವದ ಸಾತ್ ನೀಡಿತು.
೧೦. ಕರ್ನಾಟಕ ಇತಿಹಾಸ - ಜನಸಾಮಾನ್ಯರೆಡೆಗೆ; ಉಪನ್ಯಾಸಮಾಲೆ - ೧೯ ಕಾರ್ಯಕ್ರಮವು ೦೨.೦೫.೨೦೧೫ರಂದು ಸಂಘದ ಆವರಣದಲ್ಲಿ ಜರುಗಿತು. ಬೆಂಗಳೂರಿನ ಡಾ. ಹರಿಹರ ಶ್ರೀನಿವಾಸರಾವ್ ಅವರು ‘ಪ್ರಾಚೀನ ಕರ್ನಾಟಕದಲ್ಲಿ ಜಲಮಾಪನ ತಂತ್ರಜ್ಞಾನ’ ಕುರಿತು ಉಪನ್ಯಾಸ ನೀಡಿದರು. ಪ್ರಾಯೋಜಿಸಿದ ಪ್ರೊ. ಪಿ.ಬಿ. ಶಿವಪ್ರಸಾದ್ ಉಪಸ್ಥಿತರಿದ್ದರು.
೧೧. ಕವಿತಾ ಸ್ಮಾರಕ ದತ್ತಿ ಉಪನ್ಯಾಸ - ೮ ಮತ್ತು ಪುಸ್ತಕ ಬಿಡುಗಡೆ ಕಾರ್ಯಕ್ರಮವು ಸಂಘದ ಆವರಣದಲ್ಲಿ ೦೪.೦೫.೨೦೧೬ರಂದು ಜರುಗಿತು. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕನ್ನಡ ಪ್ರಾಧ್ಯಾಪಕಿ ಡಾ. ಕವಿತಾ ರೈ ಅವರು ‘ಆಧುನಿಕ ಮಹಿಳಾ ಚರಿತ್ರೆಯ ರೂಪಣೆ’ ಕುರಿತು ಉಪನ್ಯಾಸ ನೀಡಿದರು. ಡಾ. ಕವಿತಾ ರೈ ಅವರು ಈ ಉಪನ್ಯಾಸವನ್ನು ಕೃತಿ ರೂಪದಲ್ಲಿ ರಚಿಸಿಕೊಟ್ಟಿದ್ದು ಸಂಘವು ಅದನ್ನು ಪ್ರಕಟಿಸಿದೆ; ಈ ಕೃತಿ ಇದೇ ಸಂದರ್ಭದಲ್ಲಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ ಶ್ರೀಮತಿ ಮಂಜುಳಾ ಮಾನಸ ಅವರಿಂದ ಬಿಡುಗಡೆಗೊಂಡಿತು.
೧೨. ವಿಜ್ಞಾನ ಉಪನ್ಯಾಸಮಾಲೆ - ೧೫ ಕರ‍್ಯಕ್ರಮವು ೧೬.೦೫.೨೦೧೫ರಂದು ಸಂಘದ ಆವರಣದಲ್ಲಿ ಜರುಗಿತು. ‘ನೀರಿನ ಮಹತ್ವ’ ಎಂಬ ವಿಷಯ ಕುರಿತು ಮಂಡ್ಯದ ಪಿ.ಇ.ಎಸ್. ಕಾಲೇಜಿನ ಸಿವಿಲ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ. ಜಿ.ಪಿ. ಶಿವಶಂಕರ ಅವರು ಉಪನ್ಯಾಸ ನೀಡಿದರು. ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಶ್ರೀ ಜಿ.ವಿ. ನಾಗರಾಜು ಅಧ್ಯಕ್ಷತೆ ವಹಿಸಿದ್ದರು. ವಿಶ್ರಾಂತ ಪ್ರಾಧ್ಯಾಪಕ ಪ್ರೊ. ಎನ್.ಎಸ್. ರಮೇಶ್ ಮತ್ತು ಹಿರಿಯ ಪತ್ರಕರ್ತ ಶ್ರೀ ಸಿ.ಪಿ. ವಿದ್ಯಾಶಂಕರ್ ಉಪಸ್ಥಿತರಿದ್ದರು. ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್‍ನ ಜಿಲ್ಲಾ ಸಮಿತಿಯ ಪ್ರಾಯೋಜಕತ್ವದಲ್ಲಿ ಸಂಘವು ಈ ಕಾರ್ಯಕ್ರಮವನ್ನು ನಡೆಸುತ್ತಿದೆ.
೧೩. ಕರ್ನಾಟಕ ಇತಿಹಾಸ - ಜನಸಾಮಾನ್ಯರೆಡೆಗೆ : ಉಪನ್ಯಾಸಮಾಲೆ -೨೦ ಕರ‍್ಯಕ್ರಮವು ೦೬.೦೬.೨೦೧೫ರಂದು ಸಂಘದ ಆವರಣದಲ್ಲಿ ನಡೆಯಿತು. ಬೆಂಗಳೂರಿನ ಡಾ. ಟಿ.ವಿ. ನಾಗರಾಜು ಅವರು ‘ಪ್ರಾಚೀನ ಕರ್ನಾಟಕದಲ್ಲಿ ಕೆರೆ ನೀರಾವರಿ ವ್ಯವಸ್ಥೆ (ಆರಂಭದಿಂದ 8ನೇ ಶತಮಾನದವರೆಗೆ)’ ವಿಷಯ ಕುರಿತು ಉಪನ್ಯಾಸ ನೀಡಿದರು. ಕೃಷ್ಣರಾಜಪೇಟೆ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಶ್ರೀ ಲಿಂಗರಾಜು ಪ್ರಾಯೋಜಕರಾಗಿದ್ದು ಉಪಸ್ಥಿತರಿದ್ದರು.
೧೪. ಕೆ.ವಿ. ಶಂಕರಗೌಡ ಶತಮಾನೋತ್ಸವ ವರ್ಷದ ಅಂಗವಾಗಿ ‘ಭಕ್ತಮಾರ್ಕಂಡೇಯ ಚರಿತ್ರೆ’ ಯಕ್ಷಗಾನ ಪ್ರದರ್ಶನವನ್ನು ೧೪.೦೬.೨೦೧೫ರಂದು ನಾಲ್ವಡಿ ಷ್ಣರಾಜ ಒಡೆಯರ್ ಕಲಾ ಮಂದಿರದಲ್ಲಿ ನೆರವೇರಿಸಲಾಯಿತು. ಕಾರ್ಕಳದ ಶ್ರೀ ಮಹಾವೀರ ಪಾಂಡಿ ಕಾಂತಾವರ ಅವರು ನಿರ್ದೇಶಿಸಿದರು. ಸದ್ವಿದ್ಯಾ ಶಾಲೆ ಮತ್ತು ಡ್ಯಾಪೋಡಿಲ್ಸ್ ಪಬ್ಲಿಕ್ ಸ್ಕೂಲ್‍ನ ಮಕ್ಕಳು ಪ್ರಸ್ತುತಪಡಿಸಿದರು. ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಮತ್ತು ಕರ್ನಾಟಕ ಜಾನಪದ ಪರಿಷತ್‍ನ ನೆರವು ಪಡೆಯಲಾಗಿತ್ತು. ಸಂಗೀತ ವಿಶ್ವವಿದ್ಯಾಲಯದ ಕುಲಸಚಿವ ಡಾ. ವೈ.ಎಸ್. ಸಿದ್ದೇಗೌಡ ಉದ್ಘಾಟಿಸಿದರು. ಜಿಲ್ಲಾಧಿಕಾರಿ ಡಾ. ಅಜಯನಾಗಭೂಷಣ್ ಅಧ್ಯಕ್ಷತೆ ವಹಿಸಿದ್ದರು. ಜಾನಪದ ವಿವಿಯ ಡಾ. ಕೆ. ಪ್ರೇಮ್‍ಕುಮಾರ್, ಜೀವವಿಮಾ ಅಭಿವೃದ್ಧಿ ಅಧಿಕಾರಿ ಶ್ರೀ ಶ್ರೀನಿವಾಸಶೆಟ್ಟಿ, ನರ ಮತ್ತು ಮಾನಸಿಕ ರೋಗ ಚಿಕಿತ್ಸಾ ತಜ್ಞ ಡಾ. ಅನಿಲ್‍ಕುಮಾರ್ ಮುಖ್ಯ ಅತಿಥಿಗಳಾಗಿದ್ದರು.
೧೫. ಕೆ.ವಿ.ಶಂಕರಗೌಡ - ೧೦೦ : ನುಡಿ ನಮನ (ಅಂದಿನ ಹೆಜ್ಜೆಗಳ ಇಂದಿನ ನಿಲುವುಗಳು) ಎಂಬ ಒಂದು ವಿನೂತನ ಮಾದರಿಯ ಇಡೀ ದಿವಸದ ಕಾರ್ಯಕ್ರಮವನ್ನು ೨೦.೦೬.೨೦೧೫ರಂದು ಪಿಇಎಸ್ ಎಂಜಿನಿಯರಿಂಗ್ ಕಾಲೇಜಿನ ಪ್ಲೇಸ್‍ಮೆಂಟ್ ಸಭಾಂಗಣದಲ್ಲಿ ನಡೆಸಲಾಯಿತು. ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮತ್ತು ಕರ್ನಾಟಕ ಸಂಘದ ಸಂಯುಕ್ತ ಆಶ್ರಯವಿತ್ತು. ಉದ್ಘಾಟನೆ ಸಮಾರೋಪದ ಜೊತೆಗೆ ಒಂಬತ್ತು ಚಿಂತನಾ ಗೋಷ್ಠಿಗಳಿದ್ದವು. ಶಾಸಕ ಡಿ.ಸಿ. ತಮ್ಮಣ್ಣ ಉದ್ಘಾಟಿಸಿದರು. ಶ್ರೀಮತಿ ಸುಶೀಲಮ್ಮ ಶಂಕರಗೌಡ ದೀಪ ಬೆಳಗಿಸಿದರು. ಮೊದಲ ಚಿಂತನೆ : ಗಾಂಧಿವಾದದ ಪ್ರಸ್ತುತತೆ, ಚಿಂತಕರು ಡಾ. ಜಗದೀಶ್‍ಕೊಪ್ಪ, ಮೈಸೂರಿನ ಹವ್ಯಾಸಿ ರಂಗಕಲಾವಿದರು ಈ ಗೋಷ್ಠಿಯಲ್ಲಿ ಶಂಕರಗೌಡರ ನಾಟಕಗಳ ತುಣುಕುಗಳನ್ನು ಪ್ರಸ್ತುತಪಡಿಸಿದರು. ಚಿಂತನೆ - ೨ : ಸಿದ್ಧಾಂತಗಳ ಪ್ರತಿಪಾದನೆಗಾಗಿ ರಂಗಭೂಮಿ, ಚಿಂತಕರು : ಪ್ರೊ. ಎಸ್. ಆರ್. ರಮೇಶ; ಶ್ರೀ ಹರೀಶ್ ಪಾಂಡಲ್ ಅವರು ‘ಕರ್ನಾಟಕ ಶಾಸ್ತ್ರೀಯ ಸಂಗೀತ’ ವನ್ನು ಪ್ರಸ್ತುತಪಡಿಸಿದರು. ಚಿಂತನೆ -೩: ಕುವೆಂಪು ವೈಚಾರಿಕತೆ ಮತ್ತು ಆದರ್ಶ, ಚಿಂತಕರು : ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ; ಕುಮಾರಿ ನಿತ್ಯಶ್ರೀ ಮತ್ತು ದಿಶಾಜೈನ್ ಭಾವಗೀತೆಗಳನ್ನು ಹಾಡಿದರು. ಚಿಂತನೆ - ೪ : ಶ್ರೀ ದೀಪಕ್ ‘ನಾಟಕ ವಾಚನ’ ಮಾಡಿದರು. ಚಿಂತನೆ - ೫: ದೇಸಿಜ್ಞಾನದ ಸಬಲೀಕರಣದ ಮಾರ್ಗಗಳು, ಚಿಂತಕರು : ಪ್ರೊ. ಶ್ರೀಶೈಲ ಹುದ್ದಾರ, ಧಾರವಾಡ; ಕೀಲಾರ ಕೃಷ್ಣೇಗೌಡ ತಂಡ ಜನಪದ ಗೀತೆಗಳನ್ನು ಹಾಡಿದರು. ಚಿಂತನೆ - ೬ : ಇಂದಿನ ಗ್ರಾಮೀಣ ಸಾಂಸ್ಕೃತಿಕ ಆವರಣ, ಚಿಂತಕರು : ಸಕಲೇಶಪುರದ ರಂಗಕರ್ಮಿ ಶ್ರೀ ಪ್ರಸಾದ್ ರಕ್ಷಿದಿ; ಮೈಸೂರಿನ ಹವ್ಯಾಸಿ ರಂಗಕಲಾವಿದರು ಶಂಕರಗೌಡರ ನಾಟಕಗಳ ತುಣುಕುಗಳನ್ನು ಪ್ರಸ್ತುತಪಡಿಸಿದರು. ಚಿಂತನೆ - ೭ : ಸಾಹಿತ್ಯ ಮತ್ತು ಕ್ರಿಯಾಶೀಲ ವ್ಯಕ್ತಿತ್ವ, ಚಿಂತಕರು : ಡಾ. ಹಾಲತಿ ಸೋಮಶೇಖರ್; ಮೈಸೂರಿನ ಹಿಂದೂಸ್ಥಾನಿ ಗಾಯಕ ಎಂ. ಶಿವಕುಮಾರ್ ಅವರು ಹಿಂದೂಸ್ಥಾನಿ ಸಂಗೀತವನ್ನು ಪ್ರಸ್ತುತಪಡಿಸಿದರು. ಚಿಂತನೆ - ೮: ಚಲನಚಿತ್ರಗಳ ಸಾಮಾಜಿಕ ಹೊಣೆಗಾರಿಕೆ, ಚಿಂತಕರು : ಭಾರತಿ. ಚಿಂತನ - ೯ : ಸಹಕಾರ ಚಳುವಳಿಯ ಇಂದಿನ ಸ್ವರೂಪ, ಚಿಂತಕರು ಶ್ರೀ ಕೆ.ಟಿ. ಶ್ರೀಕಂಠೇಗೌಡ; ಕೃಷ್ಣರಾಜಪೇಟೆಯ ಗಾನಯೋಗಿ ಪುಟ್ಟರಾಜ ಗವಾಯಿಗಳ ಸಂಗೀತ ಶಾಲೆ ‘ಗೀತನಮನ’ ವನ್ನು ಪ್ರಸ್ತುತಪಡಿಸಿತು. ಪಿ.ಇ.ಎಸ್. ಅಧ್ಯಕ್ಷ ಡಾ. ಎಚ್.ಡಿ. ಚೌಡಯ್ಯ ಸಮಾರೋಪ ಭಾಷಣ ಮಾಡಿದರು. ಡಾ. ಎಚ್. ಉಮೇಶ್, ಮೈಸೂರು ಮತ್ತು ಡಾ. ಎಸ್.ಬಿ. ಶಂಕರಗೌಡ ಕಾರ್ಯಕ್ರಮವನ್ನು ಸಂಯೋಜಿಸಿದರು.
೧೬. ಕೆ.ವಿ. ಶಂಕರಗೌಡ ಶತಮಾನೋತ್ಸವ ಸಂಭ್ರಮದ ಅಂಗವಾಗಿ ಕೆವಿಎಸ್ ಸಂಸ್ಮರಣ ಸಮಾರಂಭವನ್ನು ಸಂಘವು ಬೆಂಗಳೂರಿನ ರಾಜ್ಯ ಒಕ್ಕಲಿಗರ ಸಂಘದ ಸಂಯುಕ್ತ ಆಶ್ರಯ ಪಡೆದು ಕುವೆಂಪು ಕಲಾಕ್ಷೇತ್ರ - ಬೆಂಗಳೂರು ಇಲ್ಲಿ ೩೦.೦೬.೨೦೧೫ರಂದು ಆಚರಿಸಿತು. ಕರ್ನಾಟಕ ಸಂಘದ ಇತಿಹಾಸದಲ್ಲೆ ಸ್ಮರಣೀಯವಾದ ಅದ್ದೂರಿ ಕಾರ್ಯಕ್ರಮ ಇದಾಗಿತ್ತು. ಮಾಜಿ ಪ್ರಧಾನಿ ಸನ್ಮಾನ್ಯ ಎಚ್.ಡಿ. ದೇವೇಗೌಡ ಅವರು ಅಧ್ಯಕ್ಷತೆ ವಹಿಸಿದ್ದರು. ಮಾಜಿ ಮುಖ್ಯಮಂತ್ರಿ ಸನ್ಮಾನ್ಯ ಎಸ್. ಎಂ. ಕೃಷ್ಣ ಅವರು ಉದ್ಘಾಟಿಸಿದರು. ನಾಡೋಜ ಡಾ. ದೇ. ಜವರೇಗೌಡ ಅವರು ಸ್ಮರಣೀಯ ಉಪನ್ಯಾಸ ಮಾಡಿದರು. ಒಕ್ಕಲಿಗರ ಸಂಘದ ಅಧ್ಯಕ್ಷ ಡಾ. ಅಪ್ಪಾಜಿಗೌಡ, ವಿಶ್ರಾಂತ ಪ್ರಾಧ್ಯಾಪಕ ಪ್ರೊ. ಟಿ. ಶಿವಣ್ಣ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.
೧೭. ಶಂಕರಗೌಡ ಶತಮಾನೋತ್ಸವದ ಅಂಗವಾಗಿ ನಾಲ್ಕು ದಿವಸಗಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಂಡ್ಯದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ೨೪.೦೭.೨೦೧೫ ರಿಂದ ೨೭.೦೭.೨೦೧೫ರವರೆಗೆ ನಡೆಸಲಾಯಿತು. ಜಿಲ್ಲಾಧಿಕಾರಿ ಡಾ. ಅಜಯ್‍ನಾಗಭೂಷಣ್ ಉದ್ಘಾಟಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀ ಭೂಷಣ್ ಬೊರಸೆ ಅವರು ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಮಂಡ್ಯದ ಗುರುದೇವ ಲಲಿತಕಲಾ ಅಕಾಡೆಮಿಯಿಂದ ಮೊದಲ ದಿವಸ ನೃತ್ಯವೈಭವ, ಎರಡನೆಯ ದಿವಸ ಸದ್ವಿದ್ಯಾ ಮತ್ತು ಡ್ಯಾಪೋಡಿಲ್ಸ್ ಶಾಲೆಗಳಿಂದ ಭಕ್ತಮಾರ್ಕಂಡೇಯ ನಾಟಕ, ಮೂರನೆಯ ದಿವಸ ಜನದನಿ ಸಾಂಸ್ಕೃತಿಕ ಟ್ರಸ್ಟ್ನಿಂದ ಭಾಸನ ದೂತಪರ್ವ ನಾಟಕ, ನಾಲ್ಕನೆಯ ದಿವಸ ಮೈಸೂರು ಆಕಾಶವಾಣಿಯ ಹಿರಿಯ ಕಲಾವಿದ ಶ್ರೀ ವಿದ್ವಾನ್ ಬಳ್ಳಾರಿ ಎಂ. ರಾಘವೇಂದ್ರ ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮಗಳು ಜರುಗಿದವು. ಈ ಕಾರ್ಯಕ್ರಮಕ್ಕೆ ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರ ಪಡೆಯಲಾಗಿತ್ತು.
೧೮. ಕೆ.ವಿ. ಶಂಕರಗೌಡ - ೧೦೦ : ಶತಮಾನೋತ್ಸವ ಸಂಭ್ರಮ ಕಾರ್ಯಕ್ರಮವನ್ನು ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ೨೫.೦೭.೨೦೧೫ರಂದು ನೆರವೇರಿಸಲಾಯಿತು. ಉಸ್ತುವಾರಿ ಸಚಿವರಾದ ಡಾ. ಎಂ.ಎಚ್. ಅಂಬರೀಶ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯಮಂತ್ರಿ ಸನ್ಮಾನ್ಯ ಶ್ರೀ ಸಿದ್ಧರಾಮಯ್ಯ ಅವರು ನೆನಪಿನ ಸಂಪುಟ ‘ಬಲ್ಲವರು ಕಂಡಂತೆ ಶಂಕರಗೌಡ’ ಕೃತಿ ಬಿಡುಗಡೆ ಮಾಡಿ ಶತಮಾನೋತ್ಸವ ಸಂಭ್ರಮಾಚರಣೆ ಕುರಿತು ಮಾತನಾಡಿದರು. ಮಾಜಿ ಸಚಿವರೂ ಹಾಲಿ ಶಾಸಕರೂ ಆದ ಶ್ರೀ ಎನ್. ಚಲುವರಾಯಸ್ವಾಮಿ ಅವರು ಶ್ರೀಮತಿ ಸುಶೀಲಮ್ಮ ಶಂಕರಗೌಡ ಅವರಿಗೆ ಗೌರವ ಸಮರ್ಪಣೆ ಮಾಡಿದರು. ಸಂಸ್ಕøತ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಪದ್ಮಾಶೇಖರ್ ಅವರು ಕೆವಿಎಸ್ ಸ್ಮರಣೆ ಮಾಡಿದರು. ಕೆವಿಎಸ್ ಅವರನ್ನು ಕುರಿತು ಕೃತಿ ರಚನೆ ಮಾಡಿದ ಡಾ. ದೇಜಗೌ, ಹಕ ರಾಜೇಗೌಡ, ಡಾ. ರಾಗೌ, ಡಾ. ಎಚ್.ಎಸ್. ಮುದ್ದೇಗೌಡ, ಡಾ. ಎಸ್. ಶಿವರಾಮು, ಡಾ. ಪ್ರದೀಪಕುಮಾರ್ ಹೆಬ್ರಿ, ಪಿ. ರಾಮಮೂರ್ತಿ, ಜಿ.ವಿ. ಚೇತನ್‍ಜುಂಜೇರ ಅವರಿಗೆ ಸಂಸದರಾದ ಶ್ರೀ ಸಿ. ಎಸ್. ಪುಟ್ಟರಾಜು ಅವರು ಗೌರವ ಸಮರ್ಪಣೆ ಮಾಡಿದರು. ಡಾ. ಜಿ. ಮಾದೇಗೌಡ, ಡಾ. ಎಚ್.ಡಿ. ಚೌಡಯ್ಯ, ಶ್ರೀ ಡಿ.ಸಿ. ತಮ್ಮಣ್ಣ, ಶ್ರೀ ಪಿ.ಎಂ. ನರೇಂದ್ರಸ್ವಾಮಿ ಮೊದಲಾದ ಗಣ್ಯರನ್ನು ಮುಖ್ಯ ಅತಿಥಿಗಳನ್ನಾಗಿ ಆಹ್ವಾನಿಸಲಾಗಿತ್ತು.
೧೯. ಶ್ರೀ ಸಿದ್ಧಾರೂಢ ದತ್ತಿ ಉಪನ್ಯಾಸವನ್ನು ದಿನಾಂಕ : ೨೯.೦೭.೨೦೧೫ರಂದು ಸಂಘದ ಆವರಣದಲ್ಲಿ ನಡೆಸಲಾಯಿತು. ಖ್ಯಾತ ಸಾಹಿತಿಗಳಾದ ಡಾ. ನಟರಾಜ ಬೂದಾಳು ಅವರು ‘ಶ್ರೀ ಸಿದ್ಧಾರೂಡರು ಮತ್ತು ಆರೂಡ ಪರಂಪರೆ’ ಕುರಿತು ಉಪನ್ಯಾಸ ನೀಡಿದರು. ದತ್ತಿದಾನಿಗಳಾದ ಡಾ. ಅರ್ಜುನಪುರಿ ಅಪ್ಪಾಜಿಗೌಡರು ಅಧ್ಯಕ್ಷತೆ ವಹಿಸಿದ್ದರು.
೨೦. ದಿನಾಂಕ : ೧೨.೦೮.೨೦೧೫ರಂದು ‘ವಿಶ್ವ ಜಾನಪದ ದಿವಸ’ ವನ್ನು ಆಚರಿಸಲಾಯಿತು. ಸಂಘದ ಆವರಣದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಮೇಲುಕೋಟೆ ಸಂಸ್ಕøತ ಕಾಲೇಜಿನ ವಿದ್ವಾನ್ ಶ್ರೀ ಉಮಾಕಾಂತ ಭಟ್ಟ ಅವರು ವಿಶೇಷ ಉಪನ್ಯಾಸ ನೀಡಿದರು. ಮೈಸೂರು ವಿವಿಯ ವಿಶ್ರಾಂತ ಪ್ರಾಧ್ಯಾಪಕರೂ ನಮ್ಮ ಸಂಶೋಧನಾ ಕೇಂದ್ರದ ಸಲಹೆಗಾರರೂ ಆದ ಡಾ. ರಾಗೌ ಉದ್ಘಾಟಿಸಿದರು. ಸಂಘದ ಅಧ್ಯಕ್ಷ ಪ್ರೊ. ಜಯಪ್ರಕಾಶಗೌಡರು ಅಧ್ಯಕ್ಷತೆ ವಹಿಸಿದ್ದರು.
೨೧. ಸ್ವಾತಂತ್ರ‍್ಯೋತ್ಸವ - ೬೯, ಕೆ.ಟಿ. ಶಿವಲಿಂಗಯ್ಯ ಸಂಸ್ಮರಣೆ, ಅನ್ನದಾಸೋಹ - ೫ ಕರ‍್ಯಕ್ರಮ ೧೫.೦೮.೨೦೧೫ರಂದು ಸಂಘದ ಆವರಣದಲ್ಲಿ ಜರುಗಿತು. ‘ಸ್ವಾತಂತ್ರ್ಯದ ಇತ್ತೀಚಿನ ಸವಾಲುಗಳು’ ವಿಷಯ ಕುರಿತು ಮೈಸೂರು ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಪ್ರೊ. ಮುಫರ್ ಅಸ್ಸಾದಿ ಅವರು ಮಾತನಾಡಿದರು. ಡಾ. ಎಸ್.ಬಿ. ಶಂಕರೇಗೌಡರು ಕೆ.ಟಿ. ಶಿವಲಿಂಗಯ್ಯ ಸಂಸ್ಮರಣ ಭಾಷಣ ಮಾಡಿದರು. ಸಂಘದ ಅನ್ನದಾಸೋಹ ವ್ಯವಸ್ಥೆ ಐದು ವರ್ಷಗಳನ್ನು ಪೂರೈಸಿದ ಸವಿಸಂದರ್ಭದಲ್ಲಿ ದಾಸೋಹಿಗಳಾದ ವಿಧಾನಪರಿಷತ್ ಸದಸ್ಯರಾಗಿದ್ದ ಶ್ರೀ ಬಿ. ರಾಮಕೃಷ್ಣ ಅವರಿಗೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀ ಎಂ. ಶ್ರೀನಿವಾಸ್ ಅವರು ಗೌರವ ಸಮರ್ಪಣೆ ಮಾಡಿದರು.
೨೨. ೨೦೧೪ ಮತ್ತು ೨೦೧೫ನೇ ಸಾಲಿನ ಪಾರ್ವತಮ್ಮ ಪಿ.ಎನ್. ಜವರಪ್ಪಗೌಡ ಮಹಿಳಾ ಪ್ರಶಸ್ತಿ ಹಾಗೂ ಪಿ.ಎನ್. ಜವರಪ್ಪಗೌಡರ ಆತ್ಮಕಥೆ ‘ನನ್ನ ಜೀವನ ಯಾತ್ರೆ’ ಕೃತಿ ಬಿಡುಗಡೆ ಸಮಾರಂಭ ೦೧.೦೯.೨೦೧೫ರಂದು ಮಂಡ್ಯದ ರೈತ ಸಭಾಂಗಣದಲ್ಲಿ ಜರುಗಿತು. ರೈತ ಹೋರಾಟಗಾರ್ತಿ, ರಾಜ್ಯ ರೈತ ಸಂಘದ ಮಹಿಳಾ ಘಟಕದ ಅಧ್ಯಕ್ಷೆ ಲೇಖಕಿ ಶ್ರೀಮತಿ ನಂದಿನಿ ಜಯರಾಂ ಅವರಿಗೆ ೨೦೧೪ರ ಪ್ರಶಸ್ತಿಯನ್ನೂ, ಮೈಸೂರಿನ ಕಿವುಡು ಮಕ್ಕಳು ಹಾಗೂ ತಾಯಂದಿರ ರೋಟರಿ ಶಾಲೆಯ ಶಿಕ್ಷಕಿ ಶ್ರೀಮತಿ ವಿಜಯ ಶಿವಣ್ಣಗೌಡ ಅವರಿಗೆ ೨೦೧೫ರ ಪ್ರಶಸ್ತಿಯನ್ನೂ ಮಾಜಿ ಸಚಿವರಾದ ಹಟ್ಟಿಯಂಗಡಿ ಚಿನ್ನದ ಗಣಿಯ ಅಧ್ಯಕ್ಷರಾಗಿರುವ ಶ್ರೀಮತಿ ರಾಣಿ ಸತೀಶ್ ಅವರು ಪ್ರದಾನ ಮಾಡಿದರು. ವಿಧಾನ ಪರಿಷತ್‍ನ ಉಪಸಭಾಪತಿ ಶ್ರೀ ಮರಿತಿಬ್ಬೇಗೌಡರು ಅಧ್ಯಕ್ಷತೆ ವಹಿಸಿ ಪುಸ್ತಕ ಬಿಡುಗಡೆ ಮಾಡಿದರು. ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನಮಠದ ಪೀಠಾಧ್ಯಕ್ಷರಾದ ಶ್ರೀ ಶ್ರೀ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಶ್ರೀಮತಿ ವಾಸಂತಿ ಶಿವಣ್ಣ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.
೨೩. ಮಂಡ್ಯದ ಸದ್ವಿದ್ಯಾ ಪ್ರೌಢಶಾಲೆ, ಡ್ಯಾಪೋಡಿಲ್ಸ್ ಪಬ್ಲಿಕ್ ಸ್ಕೂಲ್ ಮತ್ತು ಮದ್ದೂರಿನ ನಳಂದ ವಿದ್ಯಾಪೀಠದ ಸಂಯುಕ್ತ ಆಶ್ರಯ ಪಡೆದು ಕರ್ನಾಟಕ ಸಂಘವು ಒಂದು ತಿಂಗಳ ಕಾಲ ‘ಮಕ್ಕಳ ರಂಗತರಬೇತಿ ಶಿಬಿರ’ ವನ್ನು ಆಯೋಜಿಸಿತ್ತು. ಈ ಶಿಬಿರಕ್ಕೆ ಜನದನಿ ಸಾಂಸ್ಕೃತಿಕ ಟ್ರಸ್ಟ್ ಸಹಕಾರ ನೀಡಿತು. ೧೭.೧೦.೨೦೧೫ರಂದು ಶಿಬಿರದ ಉದ್ಘಾಟನಾ ಸಮಾರಂಭವು ಸದ್ವಿದ್ಯಾ ಪ್ರೌಢಶಾಲೆಯಲ್ಲಿ ಜರುಗಿತು. ತರಬೇತಿ ಸಹ ಅಲ್ಲೇ ನಡೆಯಿತು. ಜಿಲ್ಲಾಧಿಕಾರಿ ಡಾ. ಅಜಯ್‍ನಾಗಭೂಷಣ್ ಉದ್ಘಾಟಿಸಿದರು. ಪ್ರೊ. ಜಯಪ್ರಕಾಶಗೌಡರು ಅಧ್ಯಕ್ಷತೆ ವಹಿಸಿದ್ದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಡಾ. ಆರ್. ದಿವಾಕರ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಶ್ರೀ ಶಿವಮಾದಪ್ಪ, ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀ ಮಹದೇವ ಮುಖ್ಯ ಅತಿಥಿಗಳಾಗಿದ್ದರು.
೨೪. ಬೆಂಗಳೂರಿನ ಕರ್ನಾಟಕ ಇತಿಹಾಸ ಅಕಾಡೆಮಿಯು ೨೦೧೫ರ ಅಕ್ಟೋಬರ್ ೨೯, ೩೦ ಮತ್ತು ೩೧ರಂದು ಮೂರು ದಿವಸಗಳ ಕಾಲ ಜಿಲ್ಲಾ ತರಬೇತಿ ಕೇಂದ್ರದಲ್ಲಿ ನಡೆಸಿದ 29ನೇ ವಾರ್ಷಿಕ ಸಮ್ಮೇಳನಕ್ಕೆ ಕರ್ನಾಟಕ ಸಂಘವು ಸಹಯೋಗ ನೀಡಿತು. ಸಮ್ಮೇಳನದ ಉದ್ಘಾಟನೆ ೨೯ ರಂದು ನಡೆಯಿತು. ಪ್ರಾಚ್ಯವಸ್ತು ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಆಯುಕ್ತ ಡಾ. ಆರ್. ಗೋಪಾಲ್ ಉದ್ಘಾಟಿಸಿದರು. ಮಾಜಿ ಶಾಸಕರಾದ ಶ್ರೀ ಎಂ. ಶ್ರೀನಿವಾಸ್ ಅವರು ‘ಇತಿಹಾಸ ದರ್ಶನ ಸಂಪುಟ- 30’ ಕೃತಿಯನ್ನು ಬಿಡುಗಡೆ ಮಾಡಿದರು. ಖ್ಯಾತ ಸಂಶೋಧಕರಾದ ಡಾ. ಹಂ.ಪ.ನಾಗರಾಜಯ್ಯ ಸರ್ವಾಧ್ಯಕ್ಷತೆ ವಹಿಸಿದ್ದರು. ಖ್ಯಾತ ಸಂಶೋಧಕ - ಇತಿಹಾಸ ತಜ್ಞ ಡಾ. ಎಂ.ಜಿ. ನಾಗರಾಜ್ ಅವರಿಗೆ ‘ಇತಿಹಾಸ ಸಂಸ್ಕೃತಿ ಶ್ರೀ’ ಪ್ರಶಸ್ತಿಯನ್ನು ತುಮಕೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕ, ಶಾಸನತಜ್ಞ ಡಾ. ಡಿ.ವಿ. ಪರಮಶಿವಮೂರ್ತಿ ಅವರಿಗೆ ‘ಡಾ. ಬಾ.ರಾ. ಗೋಪಾಲ್ ಪ್ರಶಸ್ತಿ’ಯನ್ನು, ಮೈಸೂರಿನಲ್ಲಿರುವ ವಿಶ್ರಾಂತ ಪ್ರಾಧ್ಯಾಪಕ ಮತ್ತು ಸಂಶೋಧಕರಾದ ಡಾ. ಎಂ.ಎಸ್. ಕೃಷ್ಣಮೂರ್ತಿ ಅವರಿಗೆ ‘ಮೇಲಣ ಮಠದ ಶ್ರೀ ಎಸ್. ಸಿದ್ದಣ್ಣಯ್ಯ ಮತ್ತು ಶ್ರೀಮತಿ ಗಂಗಮ್ಮ ಸ್ಮಾರಕ ಟ್ರಸ್ಟ್ನ ‘ನೊಳಂಬ ಶ್ರೀ ಪ್ರಶಸ್ತಿ’ ಯನ್ನು ಪ್ರದಾನ ಮಾಡಲಾಯಿತು. ಕರ್ನಾಟಕ ಇತಿಹಾಸ ಅಕಾಡೆಮಿ ಅಧ್ಯಕ್ಷ ಡಾ. ದೇವರಕೊಂಡಾರೆಡ್ಡಿ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಈ ಮೂರು ದಿವಸಗಳ ಕಾಲ ಒಂದು ನೂರಕ್ಕೂ ಹೆಚ್ಚು ಮಂದಿ ಪ್ರಾಧ್ಯಾಪಕರು, ಸಂಶೋಧಕರು ವಿದ್ಯಾರ್ಥಿಗಳು ಪ್ರಬಂಧ ಮಂಡಿಸಿ ಚರ್ಚೆಯಲ್ಲಿ ಭಾಗವಹಿಸಿದ್ದರು. ಉದ್ಘಾಟನೆ ೨೯ ರಂದು ನಡೆಯಿತು ಮಧ್ಯಾಹ್ನದ ನಂತರ ಸಮಾರೋಪ ಸಮಾರಂಭ ಜರುಗಿತು. ವಿಶ್ರಾಂತ ಪ್ರಾಧ್ಯಾಪಕ, ಕವಿ, ಜಾನಪದ ತಜ್ಞ ಡಾ. ರಾಗೌ ಸಮಾರೋಪ ಭಾಷಣ ಮಾಡಿದರು. ಡಾ. ದೇವರ ಕೊಂಡಾರೆಡ್ಡಿ ಅಧ್ಯಕ್ಷತೆ ವಹಿಸಿದ್ದರು. ಡಾ. ಹಂ.ಪ. ನಾಗರಾಜಯ್ಯ ಮತ್ತು ಪ್ರೊ. ಜಯಪ್ರಕಾಶಗೌಡ ಉಪಸ್ಥಿತರಿದ್ದರು.
೨೫.ಕೆ.ವಿ. ಶಂಕರಗೌಡರ ನೆನಪಿನಲ್ಲಿ ಮಕ್ಕಳ ನಾಟಕೋತ್ಸವ ಕಾರ್ಯಕ್ರಮವು ೨೦೧೫ರ ನವೆಂಬರ್ ೧೬ರಿಂದ ೨೧ ರವರೆಗೆ ನಡೆಯಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ನಾಟಕ ಅಕಾಡೆಮಿ ನೆರವು ನೀಡಿದವು. ಮಂಡ್ಯದ ಸಾಂಸ್ಕೃತಿಕ ಸಂಘಟನೆಗಳ ಒಕ್ಕೂಟದ ಸಹಕಾರ ಪಡೆಯಲಾಗಿತ್ತು. ಕರ್ನಾಟಕ ಸಂಘ ಮತ್ತು ಜನದನಿ ಸಾಂಸ್ಕೃತಿಕ ಟ್ರಸ್ಟ್ ಅರ್ಪಿಸಿದ ಈ ಕಾರ್ಯಕ್ರಮಕ್ಕೆ ಸದ್ವಿದ್ಯಾ ಶಿಕ್ಷಣ ಟ್ರಸ್ಟ್, ಡ್ಯಾಪೋಡಿಲ್ಸ್ ಪಬ್ಲಿಕ್ ಸ್ಕೂಲ್ ಮತ್ತು ನಳಂದ ವಿದ್ಯಾಪೀಠ ಸಹಯೋಗ ನೀಡಿದವು. ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಈ ಆರೂ ದಿವಸಗಳ ನಾಟಕೋತ್ಸವ ನೆರವೇರಿತು. ಜಿಲ್ಲಾಧಿಕಾರಿ ಡಾ. ಎ.ಎನ್. ಅಜಯ್‍ನಾಗಭೂಷಣ್ ಉದ್ಘಾಟಿಸಿದರು; ಡಾ. ಎಚ್.ಡಿ. ಚೌಡಯ್ಯ ಉದ್ಘಾಟನೆಯ ಅಧ್ಯಕ್ಷತೆ ವಹಿಸಿದ್ದರು. ಪಾಂಡವಪುರ ಉಪವಿಭಾಗಾಧಿಕಾರಿ ಡಾ. ಎಚ್. ಎಲ್. ನಾಗರಾಜು, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಶ್ರೀ ಶಿವಮಾದಪ್ಪ ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಶ್ರೀ ರಾಮಚಂದ್ರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಡಾ. ಎಸ್. ದಿವಾಕರ್ ಮುಖ್ಯ ಅತಿಥಿಗಳಾಗಿದ್ದರು. ಮೊದಲನೆಯ ದಿವಸ ಡ್ಯಾಪೋಡಿಲ್ಸ್ ಶಾಲೆಯ ಮಕ್ಕಳು ‘ಮರದ ಗೊಂಬೆ ಪಾರಿತೋಷ’ ನಾಟಕವನ್ನು ಅಭಿನಯಿಸಿದರು. ನಾಟಕದ ರಚನೆ ಆರ್.ಕೆ. ಶ್ಯಾನ್‍ಬೋಗ; ನಿರ್ದೇಶನ ಸುನಂದಾ ಕೆ. ನಿಂಬನಗೌಡ; ಸಂಗೀತ ಚಂದ್ರಶೇಖರ ಆಚಾರ್; ಸಾಂಗತ್ಯ ರಾಜ್‍ಗುರು ಹೊಸಪೇಟೆ, ರಂಗಸಜ್ಜಿಕೆ ಪ್ರಶಾಂತ್, ಸುಮಂತ್, ಮನು; ವಸ್ತ್ರ ವಿನ್ಯಾಸ ನೀಲಾ ನಿಂಬನಗೌಡ; ಬೆಳಕು ನವೀನ್‍ಕುಮಾರ್ ಎಸ್.ಪಿ. ಸಾಣೇಹಳ್ಳಿ. ಎರಡನೆಯ ದಿವಸ ನಳಂದ ವಿದ್ಯಾಪೀಠದ ಮಕ್ಕಳು ‘ಸಿಂಧ್‍ಬಾದ್’ ನಾಟಕವನ್ನು ಅಭಿನಯಿಸಿದರು. ರಚನೆ ವೆಂಕಟರಾವ್; ನಿರ್ದೇಶನ ವಿಜಯಕುಮಾರ್ ದೊಡ್ಡಮನಿ; ಸಂಗೀತ ಚಂದ್ರಶೇಖರ ಆಚಾರ್; ರಂಗಸಜ್ಜಿಕೆ ಪ್ರಶಾಂತ್, ಸುಮಂತ್, ಮನು; ವಸ್ತ್ರವಿನ್ಯಾಸ ನೀಲಾ ನಿಂಬನಗೌಡರ; ಬೆಳಕು ನವೀನ್‍ಕುಮಾರ್ ಎಸ್.ಪಿ. ಸಾಣೇಹಳ್ಳಿ. ಮೂರನೆಯ ದಿವಸ ಸದ್ವಿದ್ಯಾ ಪ್ರೌಢಶಾಲೆಯ ಮಕ್ಕಳು ‘ರಾಜಕುಮಾರಿಯೂ ಪಂಡಿತ ಕಳ್ಳರೂ’ ನಾಟಕವನ್ನು ಅಭಿನಯಿಸಿದರು. ರಚನೆ ಬಾಸುಮ ಕೊಡಗು; ನಿರ್ದೇಶನ ಪದ್ಮ ಕೊಡಗು; ಸಂಗೀತ ಚಂದ್ರಶೇಖರ್ ಆಚಾರ್; ರಂಗಸಜ್ಜಿಕೆ ಪ್ರಶಾಂತ್, ಸುಮಂತ್, ಮನು; ವಸ್ತ್ರವಿನ್ಯಾಸ ನೀಲಾ ನಿಂಬನಗೌಡರ; ಬೆಳಕು ನವೀನ್‍ಕುಮಾರ್ ಎಸ್.ಪಿ. ಸಾಣೇಹಳ್ಳಿ. ನಾಲ್ಕನೆಯ ದಿವಸ ಬೆಂಗಳೂರಿನ ವಿಜಯನಗರ ಬಿಂಬ ತಂಡದ ಮಕ್ಕಳು ‘ಶುದ್ಧಗೆ’ ಎಂಬ ನಾಟಕವನ್ನು ಅಭಿನಯಿಸಿದರು; ರಚನೆ : ಡಾ. ಎಸ್.ವಿ. ಕಶ್ಯಪ; ವಿನ್ಯಾಸ, ನಿರ್ದೇಶನ ಎಸ್.ವಿ. ಸುಷ್ಮಾ; ಸಂಗೀತ ಪ್ರವೀಣ್ ಡಿ. ರಾವ್; ಬೆಳಕು ಮಹದೇವಸ್ವಾಮಿ; ರಂಗಸಜ್ಜಿಕೆ ವಿಶ್ವನಾಥ ಮಂಡಿ; ಪ್ರಸಾದನ ಮಾಲತೇಶ ಬಡಿಗೇರ. ಐದನೆಯ ದಿವಸ ಮೈಸೂರಿನ ‘ನಟನಾ’ ತಂಡದ ಮಕ್ಕಳು ಅಭಿನಯಿಸಿದ ನಾಟಕ ‘ರತ್ನಪಕ್ಷಿ’; ರಚನೆ ಕೆ. ರಾಮಯ್ಯ; ವಿನ್ಯಾಸ, ರಂಗಸಜ್ಜಿಕೆ ಮತ್ತು ನಿರ್ದೇಶನ ಮಂಡ್ಯ ರಮೇಶ್, ಸಂಗೀತ ಜನ್ನಿ. ಆರನೆಯ ದಿವಸ ಜನದನಿ ಅಭಿನಯಿಸಿದ ನಾಟಕ ‘ದೂತಪರ್ವ’; ಕನ್ನಡಕ್ಕೆ ಎಲ್. ಗುಂಡಪ್ಪ; ನಿರ್ದೇಶನ ಗಣಪತಿ ಬಿ. ಹೆಗಡೆ, ಹಿತ್ತಲ ಕೈ; ಸಂಗೀತ ಕೆ. ಎನ್. ನಾಗರಾಜ್ ಹೆಗ್ಗೋಡು; ವಸ್ತ್ರವಿನ್ಯಾಸ, ರಂಗವಿನ್ಯಾಸ ಪ್ರಮೋದ್ ಶಿಗ್ಗಾಂವ್; ನಿರ್ದೇಶನ ಮತ್ತು ಬೆಳಕು ನವೀನ್‍ಕುಮಾರ್ ಎಸ್.ಪಿ. ಸಾಣೇಹಳ್ಳಿ. ಇದೇ ದಿವಸ, ಅಂದರೆ ೨೧.೧೧.೨೦೧೫ರಂದು ನಡೆದ ‘ಮಕ್ಕಳ ನಾಟಕೋತ್ಸವ’ ದ ಸಮಾರೋಪ ಸಮಾರಂಭ ಜರುಗಿತು. ಬೆಂಗಳೂರಿನ ಪ್ರಾಧ್ಯಾಪಕ ಡಾ. ಲಿಂಗರಾಜಯ್ಯ ಬೆಳಕೆರೆ ಸಮಾರೋಪ ಭಾಷಣ ಮಾಡಿದರು. ಕನಕಪುರದ ಗ್ರಾಮ ವಿದ್ಯಾ ಪ್ರಚಾರಕ ಸಂಘದ ಅಧ್ಯಕ್ಷ ಶ್ರೀ ಲಕ್ಷ್ಮಣ್ ಅಧ್ಯಕ್ಷತೆ ವಹಿಸಿದ್ದರು. ಬೆಂಗಳೂರಿನ ಖ್ಯಾತ ರಂಗಕರ್ಮಿ ಶ್ರೀ ಶ್ರೀನಿವಾಸ್ ಜಿ. ಕಪ್ಪಣ್ಣ ನೆನಪಿನ ಸಂಚಿಕೆ ಬಿಡುಗಡೆ ಮಾಡಿದರು; ಕನಕಪುರ ರೂರಲ್ ಕಾಲೇಜಿನ ಪ್ರಾಂಶುಪಾಲ ಡಾ. ಮುನಿರಾಜಪ್ಪ, ಬೆಂಗಳೂರಿನ ಕಲಾವಿದ ಶ್ರೀ ನಾಗರಾಜಮೂರ್ತಿ, ಮಾಜಿ ಶಾಸಕ ಶ್ರೀ ಎಂ. ಶ್ರೀನಿವಾಸ್ ಮುಖ್ಯ ಅತಿಥಿಗಳಾಗಿದ್ದರು.
೨೬. ಸಂಕ್ರಾಂತಿ ಸಂಭ್ರಮ ಸಾಂಸ್ಕೃತಿಕ ಉತ್ಸವ ಮತ್ತು ಕೆ.ವಿ. ಶಂಕರಗೌಡ ಲಲಿತಕಲಾ ಪ್ರಶಸ್ತಿ ಪ್ರದಾನ ಸಮಾರಂಭ - 2015 ಕಾರ್ಯಕ್ರಮವನ್ನು ಸಾಂಸ್ಕೃತಿಕ ಸಂಘಟನೆಗಳ ಒಕ್ಕೂಟ (ರಿ), ಮಂಡ್ಯ ಇವರ ಪ್ರಾಯೋಜಕತ್ವದಲ್ಲಿ ಸಂಘವು ನೆರವೇರಿಸಿತು. ಅಂದರೆ ೨೧.೧೧.೨೦೧೫ರಂದು ಈ ಕಾರ್ಯಕ್ರಮ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಜರುಗಿತು; ಕರ್ನಾಟಕ ಸಂಗೀತ ಮತ್ತು ನೃತ್ಯ ಅಕಾಡೆಮಿ ಅಧ್ಯಕ್ಷೆ ಶ್ರೀಮತಿ ಗಂಗಮ್ಮ ಕೇಶವಮೂರ್ತಿ ಉದ್ಘಾಟಿಸಿದರು; ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶ್ರೀ ಎಂ.ಎಸ್. ಆತ್ಮಾನಂದ ಅಧ್ಯಕ್ಷತೆ ವಹಿಸಿದ್ದರು; ನಗರಸಭೆ ಅಧ್ಯಕ್ಷ ಶ್ರೀ ಲೋಕೇಶ್, ಸಂಗೀತ - ನೃತ್ಯ ಅಕಾಡೆಮಿ ರಿಜಿಸ್ಟ್ರಾರ್ ಶ್ರೋ ಟಿ.ಜಿ. ನರಸಿಂಹಮೂರ್ತಿ, ಆದರ್ಶ ಸಂಗೀತ ಅಕಾಡೆಮಿ ಅಧ್ಯಕ್ಷ ಶ್ರೀ ಕಿಕ್ಕೇರಿ ಕೃಷ್ಣಮೂರ್ತಿ ಮುಖ್ಯ ಅತಿಥಿಗಳಾಗಿದ್ದರು. ಪಂಡಿತ್ ಕೈವಲ್ಯಕುಮಾರ್ ಅವರಿಂದ ‘ವಚನ ಸಂಗೀತ’; ಎ. ಚಂದನ್‍ಕುಮಾರ್ ಅವರಿಂದ ‘ಕೊಳಲು ಪ್ಯೂಷನ್’; ವಿದೂಷಿ ಡಾ. ಸುಮಾ ಸುಧೀಂದ್ರ ಅವರಿಂದ ‘ವೀಣೆ ಪ್ಯೂಷನ್’, ವಿದೂಷಿ ಕೃಪಾ ಫಡಕೆ ಅವರಿಂದ ‘ನೃತ್ಯ ರೂಪಕ’, ಯರಹಳ್ಳಿ ಪುಟ್ಟಸ್ವಾಮಿ ಅವರಿಂದ ‘ಗೀತಗಾಯನ’, ಡಾ. ಚೇತನಾ ರಾಧಾಕೃಷ್ಣ ಮತ್ತು ವಿದ್ವಾನ್ ಪ್ರಕಾಶ್ ಅಯ್ಯರ್ ಅವರಿಂದ ‘ನೃತ್ಯವೈಭವ’, ಶರಣಶ್ರೀ ಡಾ. ಈಶ್ವರ ಮಂಟೂರ ಅವರಿಂದ ‘ವಚನ ವೈಭವ ಗೀತಗಾಯನ’, ಶ್ರೀಮತಿ ಎಚ್.ಆರ್. ಲೀಲಾವತಿ ಮತ್ತು ಮಂಡ್ಯ - ಮೈಸೂರಿನ ಯುವ ಗಾಯಕರಿಂದ ‘ಸುಗಮಸಂಗೀತ’ ಕಾರ್ಯಕ್ರಮಗಳು ಈ ಏಳೂ ದಿವಸಗಳ ಕಾಲ ಜರುಗಿದವು. ೦೨.೦೨.೨೦೧೬ರಂದು ಸಮಾರೋಪ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ ಜರುಗಿತು. ಈ ಸಲದ ಕೆ.ವಿ. ಶಂಕರಗೌಡ ಲಲಿತ ಕಲಾ ಪ್ರಶಸ್ತಿಯನ್ನು ಖ್ಯಾತ ಗಾಯಕಿ ಡಾ. ಎಚ್.ಆರ್. ಲೀಲಾವತಿ ಅವರಿಗೆ ಪ್ರದಾನ ಮಾಡಲಾಯಿತು. ಸಂಗೀತ ವಿಶ್ವವಿದ್ಯಾಲಯದ ಕುಲಸಚಿವ ಡಾ. ಎ. ರಂಗಸ್ವಾಮಿ ಪ್ರಶಸ್ತಿ ಪ್ರದಾನ ಮಾಡಿದರು. ಪಿ.ಇ.ಟಿ. ಅಧ್ಯಕ್ಷ ಡಾ. ಎಚ್.ಡಿ. ಚೌಡಯ್ಯ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಒಕ್ಕಲಿಗರ ಒಕ್ಕೂಟದ ಅಧ್ಯಕ್ಷ ಶ್ರೀ ಎಂ.ಆರ್. ವೆಂಕಟೇಶ್, ರಾಯಚೂರಿನ ನಿವೃತ್ತ ಪ್ರಾಂಶುಪಾಲ ಶ್ರೀ ವೈ.ಕೆ. ಚಂದ್ರಶೇಖರಪ್ಪ, ರಾಯಚೂರಿನ ಯುವ ಮುಖಂಡ ಶ್ರೀ ಮಹೇಶ್ ಪಾಟೀಲ್ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಶ್ರೀಮತಿ ಸುಶೀಲಮ್ಮ ಕೆ.ವಿ. ಶಂಕರಗೌಡ ಅವರು ಉಪಸ್ಥಿತರಿದ್ದರು. ಕರ್ನಾಟಕ ಸಂಘದ ಪ್ರಧಾನ ಕಾರ್ಯದರ್ಶಿಗಳಾಗಿದ್ದ ಎಸ್. ಮಲ್ಲರಾಧ್ಯ ಪ್ರಸನ್ನರವರು ನಿಧನ ಹೊಂದಿದ್ದರಿಂದ ಅವರಿಗೆ ಶ್ರದ್ದಾಂಜಲಿ ಸಭೆಯನ್ನು ಕರ್ನಾಟಕ ಸಂಘದ ಆವರಣದಲ್ಲಿ ಏರ್ಪಡಿಸಲಾಗಿತ್ತು. ಸಂಘದ ಉಪಾಧ್ಯಕ್ಷರಾದ ಎಚ್.ವಿ. ಜಯರಾಮ್ ರವರು ಅಧ್ಯಕ್ಷತೆ ವಹಿಸಿದ್ದರು. ಈ ಸಭೆಗೆ ಡಾ. ಹೆಚ್.ಡಿ.ಚೌಡಯ್ಯರವರು, ಎಂ.ಎಸ್. ಆತ್ಮಾನಂದರವರು ಮುಂತಾದ ಗಣ್ಯರು ಭಾಗವಹಿಸಿದ್ದರು.