ಮಂಡ್ಯದ ಕರ್ನಾಟಕ ಸಂಘಕ್ಕೆ ಆರವತ್ತು ವರ್ಷಗಳ ದೀರ್ಘ ಇತಿಹಾಸವಿದೆ. ರಾಜ್ಯದ ಅತಿಹಳೆಯ ಸಂಘಗಳಲ್ಲಿ ಕೂಡ ಇದು ಒಂದಾಗಿದೆ. ಇದರ ಸ್ಥಾಪನೆ ಮತ್ತು ಬೆಳವಣಿಗೆಯಲ್ಲಿ ಮಂಡ್ಯದ ಅನೇಕ ಪ್ರಮುಖರ ಪಾತ್ರವಿದೆ. ನಾಡಿನ ಹಲವಾರು ಹಿರಿಯ ಲೇಖಕರು ಸಂಘದ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ದಾಖಲೆಗಳಿವೆ. ಕುವೆಂಪು ಅವರಿಗೆ ಕೇಂದ್ರ, ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಬಂದಾಗ ಅವರನ್ನು ಮೊದಲಿಗೆ ಸನ್ಮಾನಿಸಿದ ಹೆಗ್ಗಳಿಕೆ ಇದರದು. ಇಂತಹ ಹಿನ್ನೆಲೆಯಿರುವ ಸಂಘ ಇದೀಗ ವಜ್ರಮಹೋತ್ಸವವನ್ನು ಆಚರಿಸಿಕೊಳ್ಳುತ್ತಿದ್ದು, ಹೊಸ ಚರಿತ್ರೆಯನ್ನು ಬರೆಯ ಹೊರಟಿದೆ. ಕಾರ್ಯದರ್ಶಿಯಾಗಿ ಪ್ರೊ. ಜಯಪ್ರಕಾಶಗೌಡರು ಪ್ರವೇಶಿಸುವುದರ ಮೂಲಕ ಸಂಘಕ್ಕೆ ಭೀಮಬಲ ಬಂದಂತಾಗಿದ್ದು, ಅನೇಕ ಕನಸುಗಳನ್ನು ನನಸು ಮಾಡುವುದರತ್ತ ದಾಪುಗಾಲು ಇಡುತ್ತಿದೆ. ಶಿಕ್ಷಣ ಕೋರ್ಸುಗಳು, ಸಂಶೋಧನ ಚಟುವಟಿಕೆಗಳು, ದತ್ತಿ ಉಪನ್ಯಾಸಗಳು, ಉನ್ನತ ವಿಚಾರ ಸಂಕಿರಣಗಳು, ಪುಸ್ತಕ ಪ್ರಕಟಣೆ, `ಮಂಡ್ಯ ಸಮಗ್ರ ದರ್ಶನ’ ರಚನೆ, `ಅಭಿವೃಕ್ತಿ’ ಸಾಹಿತ್ಯ ಮಾಸಿಕ ಪ್ರಕಾಶನ - ಹೀಗೆ ಹತ್ತು ಹಲವು ಆಯಾಮಗಳಿಂದ ಸಂಘ ತನ್ನ ಕಾರ್ಯಬಾಹುಳ್ಯವನ್ನು ವಿಸ್ತರಿಸಿಕೊಂಡಿದೆ. ಮಂಡ್ಯದ ಸಾಂಸ್ಕೃತಿಕ ವಲಯದಲ್ಲಿ ನೂತನ ಸಂಚಲನವನ್ನು ಸೃಷ್ಟಿಸಿರುವ ಕರ್ನಾಟಕ ಸಂಘ ಮುಂದೊಂದು ದಿನ ಮಹತ್ವದ ಸಂಸ್ಥೆಯಾಗಿ ಬೆಳೆಯುವ ಎಲ್ಲ ಸಲ್ಲಕ್ಷಣಗಳನ್ನು ತೋರಿದೆ.
ಕರ್ನಾಟಕ ಸಂಘ ಶೈಕ್ಷಣಿಕ, ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಕಾರ್ಯಗಳಲ್ಲಿ ಹೊಸ ದಿಗಂತವನ್ನೆ ತೆರೆದಿದ್ದು, ಈ ಎಲ್ಲ ಕಾರ್ಯಸಾಧನೆಗಳ ಕೀರ್ತಿ ಪ್ರೊ.ಜಯಪ್ರಕಾಶಗೌಡರಿಗೆ ಸಲ್ಲುತ್ತದೆ. ಅವರು ಈ ಎಲ್ಲದರ ಅಪ್ರತಿಮ ರೂವಾರಿ. ಅವರ ದೂರದರ್ಶಿತ್ವ, ಕಾರ್ಯತತ್ಪರತೆ, ಕರ್ತೃತ್ವಶಕ್ತಿ, ಕರ್ತವ್ಯ ನಿಷ್ಠೆ, ಪರಿಶ್ರಮ, ಪ್ರಾಮಾಣಿಕತೆ, ಪಾರದರ್ಶಕತೆಗಳು ಇವುಗಳ ಹಿನ್ನೆಲೆಯಲ್ಲಿವೆ. ಸಾರ್ವಜನಿಕ ಜೀವನದಲ್ಲಿ ಹೊಸ ಅಭಿರುಚಿಯ, ಭರವಸೆಯ ಬೆಳಕಾಗಿ ಕರ್ನಾಟಕ ಸಂಘವನ್ನು ಕಟ್ಟುವುದರಲ್ಲಿ ಅವರ ಪಾತ್ರ ಪ್ರಾಮುಖ್ಯದ್ದು, ಹಲವಾರು ಯೋಜನೆಗಳನ್ನು ಮುಂದಿರಿಸಿಕೊಂಡು ಉಪಯುಕ್ತವಾದ ಕೆಲಸವನ್ನು ಕರ್ನಾಟಕ ಸಂಘ ಇಂದು ಮಾಡುತ್ತಿದ್ದರೆ ಅದಕ್ಕೆ ಪ್ರೊ. ಜಯಪ್ರಕಾಶಗೌಡರ ನೇತೃತ್ವವೇ ಕಾರಣ. ಅವರು ಯಾವುದನ್ನೇ ಕೈಕೊಂಡರೂ ಅದಕ್ಕೊಂದು ಅರ್ಥವಿರುತ್ತದೆ. ಗುರಿಯಿರುತ್ತದೆ. ಕರ್ನಾಟಕ ಸಂಘವನ್ನು ಅರ್ಥಪೂರ್ಣವಾಗಿ ಕ್ರಿಯಾಶೀಲವಾಗಿ ಬೆಳೆಸಬೇಕೆಂಬ ಅವರ ಹಂಬಲ, ಅರ್ಪಣಾಭಾವ ನಿಜಕ್ಕೂ ಅಸದೃಶವಾದುದು. ಇದಕ್ಕೆ ಬೆಂಬಲವಾಗಿ ಕರ್ನಾಟಕ ಸಂಘದ ಎಲ್ಲ ಪದಾಧಿಕಾರಿಗಳೂ ಸಾಮೂಹಿಕವಾಗಿ ಬದ್ಧತೆಯಿಂದ ಕಾರ್ಯೋನ್ಮುಖವಾಗಿರುವುದು ಸ್ಪಷ್ಟವೇ ಇದೆ. ಕರ್ನಾಟಕ ಸಂಘದ ಸರ್ವ ಕಾರ್ಯಗಳಿಗೂ ರಚನಾತ್ಮಕವಾಗಿ ಮಂಡ್ಯದ ಶಾಸಕರಾದ ಶ್ರೀ ಎಂ.ಶ್ರೀನಿವಾಸ್ ಅವರು ಇರುವುದು ಸ್ಮರಣೀಯವಾದ ವಿಚಾರ.
ಕರ್ನಾಟಕ ಸಂಘ ಸೃಜನಶೀಲ ಮತ್ತು ಸಂಶೋಧನ ಕ್ಷೇತ್ರಗಳೆರಡನ್ನೂ ರಚನಾತ್ಮಕವಾಗಿ ಬೆಳೆಸಬೇಕೆಂಬ ಮಹದಾಶೆಯನ್ನು ಹೊಂದಿದೆ. ಅದಕ್ಕನುಗುಣವಾದ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸುವ ಉದ್ದೇಶ ಅದರದು. ಯಾವುದೇ ಪಂಥ, ಸಿದ್ಧಾಂತಗಳಿಗೆ ಒಳಗಾಗದೆ ಮುಕ್ತ ಮನಸ್ಸಿನ ವೈಚಾರಿಕ ನೆಲೆಯ ಸಮಗ್ರ ಸಮದರ್ಶಿತ್ವದ ಕೈಂಕರ್ಯ ಅದರ ಧೋರಣೆ, ನಾಡು ನುಡಿಗೆ ಪ್ರಾಮಾಣಿಕವಾಗಿ ತನ್ನನ್ನು ಸಮರ್ಪಿಸಿಕೊಂಡಿರುವ ಕರ್ನಾಟಕ ಸಂಘ ನಾಡಿನ ಗಮನವನ್ನು ಸೆಳೆಯುವುದರಲ್ಲಿ ಯಾವ ಸಂಶಯವೂ ಇಲ್ಲ.