ಡಾ. ಹಾಮಾನಾ ಕನ್ನಡ ಸಾಹಿತ್ಯದ ಸಂದರ್ಭದಲ್ಲಿ ಬಹುದೊಡ್ಡ ಹೆಸರು. ಮೈಸೂರಿನ ಕನ್ನಡ ಅಧ್ಯಯನ ಸಂಸ್ಥೆಯ ದೀರ್ಘಕಾಲಿಕ ನಿರ್ದೇಶಕರಾಗಿ ಕೆಲಸ ನಿರ್ವಹಿಸಿದ ಶ್ರೀಯುತರು ಪ್ರಸಿದ್ಧ ಅಂಕಣಕಾರರೂ ಹಾಗೂ ಉತ್ತಮ ವಾಗ್ಮಿಗಳೂ ಹೌದು. ಕುಲಪತಿಗಳಾಗಿಯೂ ಕೆಲಸ ನಿರ್ವಹಿಸಿ ಶಿಸ್ತು, ಪ್ರಾಮಾಣಿಕತೆ ಮತ್ತು ಬದ್ಧತೆಗೆ ತಮ್ಮನ್ನು ಅರ್ಪಿಸಿಕೊಂಡ ಶ್ರೀಯುತರು ಸಾವಿರಾರು ಮಂದಿಗೆ ಪ್ರೇರಣೆಯನ್ನೊದಗಿಸಿದ್ದಾರೆ. ಅಂಕಣ ಸಾಹಿತ್ಯಕ್ಕೊಂದು ಗಣನೀಯವಾದ ಗೌರವವನ್ನು ತಂದುಕೊಟ್ಟ ಡಾ. ಹಾಮಾನಾ ಕನ್ನಡ ನಾಡಿನಲ್ಲಿ ಮಾತ್ರವಲ್ಲದೇ, ನಾಡಿನ ಹೊರಗಿನ ವಿದ್ವತ್ ಪ್ರಪಂಚದಲ್ಲೂ ಗಟ್ಟಿ ಹೆಸರು ಮಾಡಿದವರು. ಇಂತಹವರ ಹೆಸರಿನಲ್ಲಿ ಶಿಷ್ಯರು , ಸ್ನೇಹಿತರು ಒಟ್ಟುಗೂಡಿ 2 ಪ್ರಶಸ್ತಿಗಳನ್ನು ಸ್ಥಾಪಿಸಿದ್ದಾರೆ. ಈ ಪ್ರಶಸ್ತಿಗಳನ್ನು 4 ಪ್ರಕಾರಗಳಿಗೆ ಕ್ರಮವಾಗಿ ನೀಡಲಾಗುತ್ತಿದೆ. ಅಂಕಣ, ಜಾನಪದ, ಭಾಷಾವಿಜ್ಞಾನ, ಕನ್ನಡ ಕಟ್ಟುವಿಕೆ ಕ್ಷೇತ್ರಗಳಲ್ಲಿನ ಆಯಾಯ ಪ್ರಕಾರಗಳಲ್ಲಿನ ಓರ್ವ ಹಿರಿಯ ಹಾಗೂ ಕಿರಿಯ ಸಾಧಕರನ್ನು ಗುರ್ತಿಸಿ ತಲಾ 50.000/- ರೂ. ಹಾಗೂ 25.000/- ರೂ. ನಗದು ಹಾಗೂ ಪ್ರಶಸ್ತಿ ಫಲಕಗಳನ್ನು ನೀಡಿ ಗೌರವಿಸಲು ವ್ಯವಸ್ಥೆ ಮಾಡಲಾಗಿದೆ.