ಬೆಂಗಳೂರಿನ ಭೂಮಿ ಬಳಗ ಟ್ರಸ್ಟ್, ಕೃಷಿ ವಿಶ್ವವಿದ್ಯಾನಿಲಯ, ವಿ.ಸಿ.ಫಾರಂನ ಕೃಷಿ ವಿಜ್ಞಾನಕೇಂದ್ರ, ಮಂಡ್ಯ ಜಿಲ್ಲಾ ಪಂಚಾಯತ್ ಈ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಸಂಘವು ೨೪.೦೭.೨೦೧೧ ರಂದು ಮಂಡ್ಯ ಜಿಲ್ಲೆಯ ಕೃಷಿ ಅಭಿವೃದ್ಧಿ : ಒಂದು ಮುನ್ನೋಟ’’ ಎಂಬ ವಿಷಯ ಕುರಿತು ಒಂದು ದಿವಸದ ವಿಚಾರ ಸಂಕಿರಣವನ್ನು ನಡೆಸಿದೆ. ಉದ್ಘಾಟನೆ, ಸಮಾರೋಪ, ವಿಷಯ ಮಂಡನೆ, ರೈತರೊಡನೆ ಸಂವಾದ - ಹೀಗೆ ನಾಲ್ಕು ಅಧಿವೇಶನಗಳು ಸಂಕಿರಣದಲ್ಲಿ ಜರುಗಿವೆ. ಜಿಲ್ಲೆಯ ಎಲ್ಲ ರಾಜಕೀಯ ಮುಖಂಡರು ಹಾಗೂ ರೈತನಾಯಕರು ಉದ್ಘಾಟನೆ ಮತ್ತು ಸಮಾರೋಪದಲ್ಲಿ ಅತಿಥಿಗಳಾಗಿ ಭಾಗವಹಿಸಿದ್ದಾರೆ. ಕೃಷಿ ವಿವಿಯ ಕುಲಪತಿ ಡಾ.ಕೆ.ನಾರಾಯಣಗೌಡ, ವಿಶ್ರಾಂತ ಕುಲಪತಿ ಡಾ.ದ್ವಾರಕನಾಥ್ ವಿಷಯ ಮಂಡನೆ ಮಾಡಿದ್ದಾರೆ. ವಿ.ಸಿ.ಫಾರಂನ ಕೃಷಿ ತಜ್ಞರು, ಕೃಷಿ ಇಲಾಖೆಯ ಅಧಿಕಾರಿಗಳು, ಜಿಲ್ಲೆಯ ಪ್ರಗತಿಪರ ರೈತರು ಸಂವಾದಗೋಷ್ಠಿಯಲ್ಲಿ ಭಾಗವಹಿಸಿದ್ದಾರೆ.
ಪಾಂಡವಪುರದ ವಿಜಯ ಪ್ರಥಮ ದರ್ಜೆ ಕಾಲೇಜಿನ ಒಡಗೂಡಿ ಯುಜಿಸಿ ಪ್ರಾಯೋಜಿತ ವಿಚಾರ ಸಂಕಿರಣವನ್ನು ಎರಡು ದಿವಸಗಳ ಕಾಲ ಅಂದರೆ ೨೦೧೧ ರ ಆಗಸ್ಟ್ ೧೮ ಮತ್ತು ೧೯ರಂದು ನಡೆಸಲಾಗಿದೆ. ವಿಷಯ ಆಧುನಿಕ ಕನ್ನಡ ಕಾವ್ಯದಲ್ಲಿ ಪ್ರತಿಭಟನೆಯ ಸ್ವರೂಪ’’ ಮುಂಬೈ ವಿವಿಯ ವಿಶ್ರಾಂತ ಪ್ರಾಧ್ಯಾಪಕ ಡಾ.ತಾಳ್ತಜೆ ವಸಂತಕುಮಾರ್ ಉದ್ಘಾಟಿಸಿದರೆ, ಡಾ. ರಾಗೌ ಸಮಾರೋಪ ನಡೆಸಿದ್ದಾರೆ. ಈ ನಡುವೆ ಜರುಗಿದ ಆರು ಗೋಷ್ಠಿಗಳಲ್ಲಿ ೧೨ ವಿಷಯಗಳನ್ನು ಕುರಿತು ೧೨ ಜನ ವಿದ್ವಾಂಕರು ಪ್ರಬಂಧ ಮಂಡನೆ ಮಾಡಿದರು. ಸುಮಾರು 50 ಮಂದಿ ಅಧ್ಯಾಪಕರು ಅಷ್ಟೇ ಸಂಖ್ಯೆಯ ವಿದ್ಯಾರ್ಥಿಗಳು ಸಂಕಿರಣದಲ್ಲಿ ಪ್ರತಿನಿಧಿಗಳಾಗಿ ಭಾಗವಹಿಸಿದ್ದರು. ಪಾಂಡವಪುರದ ವಿದ್ಯಾಪ್ರಚಾರ ಸಂಘದ ಅಧ್ಯಕ್ಷರಾದ ಶ್ರೀ ಎಚ್.ಗೌಡಯ್ಯ ಹಾಗೂ ಕಾರ್ಯದರ್ಶಿ ಶ್ರೀ ಕೆ.ವಿ.ಬಸವರಾಜು ಅವರನ್ನು ಸನ್ಮಾನಿಸಲಾಯಿತು.
ಮಳವಳ್ಳಿಯ ಶಾಂತಿ ಕಲಾ ವಿಜ್ಞಾನ ವಾಣಿಜ್ಯ ಕಾಲೇಜಿನ ಒಡಗೂಡಿ ಅದೇ ಕಾಲೇಜಿನಲ್ಲಿ ಇನ್ನೊಂದು ಯುಜಿಸಿ ಪ್ರಾಯೋಜಿತ ವಿಚಾರಸಂಕಿರಣವನ್ನು ಸೆಪ್ಪೆಂಬರ್ ೨೦ರಂದು ನಡೆಸಲಾಯಿತು. ``ಪ್ರಾಚೀನ ಕನ್ನಡ ಕಾವ್ಯಗಳಲ್ಲಿ ಸಂಸ್ಕೃತಿಯ ಪಲ್ಲಟಗಳು’’ ಎಂಬುದು ಈ ಸಂಕಿರಣದ ವಿಷಯ, ಡಾ.ರಾಗೌ ಅವರ ಉದ್ಘಾಟನೆ ಹಾಗೂ ಡಾ.ಸಬಿಹಾಭೂಮಿಗೌಡ ಸಮಾರೋಪದಲ್ಲಿ ಕಾರ್ಯಕ್ರಮ ಜರುಗಿತು. ಎರಡು ಗೋಷ್ಠಿಗಳಲ್ಲಿ ನಾಲ್ಕು ವಿಷಯಗಳನ್ನು ಕುರಿತು ನಾಲ್ಕು ಜನ ವಿದ್ವಾಂಸರು ಪ್ರಬಂಧ ಮಂಡನೆ ಮಾಡಿದರು. ಪ್ರೊ.ಶಿವರಾಮು ಕಾಡನಕುಪ್ಪೆ ಹಾಗೂ ಡಾ. ಕೃಷ್ಣಮೂರ್ತಿ ಹನೂರು ಅವರು ಗೋಷ್ಠಿಗಳ ಅಧ್ಯಕ್ಷತೆ ವಹಿಸಿದ್ದರು. ನೂರಕ್ಕೂ ಹೆಚ್ಚು ಜನ ಅಧ್ಯಾಪಕರ ಹಾಗೂ ವಿದ್ಯಾರ್ಥಿಗಳು ಪ್ರತಿನಿಧಿಗಳಾಗಿ ಭಾಗವಹಿಸಿದ್ದರು.
ಮಂಡ್ಯದ ಜಿಲ್ಲಾಡಳಿತ, ಯುವಜನಸೇವೆ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ಜಾನಪದ ಪರಿಷತ್ತು ಇವುಗಳ ಸಹಯೋಗದಲ್ಲಿ ಸಂಘವು ೦೮.೧೧.೨೦೧೧ ರಂದು ``ಹಳೆಬೇರು - ಹೊಸಚಿಗುರು’’ ಎಂಬ ಹೆಸರಿನಲ್ಲಿ ಮೂಲ ಹಾಗೂ ಆಧುನಿಕ ಜನಪದ ಕಲಾವಿದರ ಹಾಗೂ ಜಾನಪದ ವಿದ್ವಾಂಸರ ಮುಖಾಮುಖಿ ಕಾರ್ಯಕ್ರಮವನ್ನು ನಡೆಸಿತು. ಗಾಯನ ಹಾಗೂ ಸಂವಾದಕ್ಕೆ ಡಾ.ಜಯಲಕ್ಷ್ಮಿ ಸೀತಾಪುರ ಚಾಲನೆ ನೀಡಿದರು. ವ.ನಂಶಿವರಾಮು ಸಮನ್ವಯಕಾರರಾಗಿದ್ದರು. ಶ್ರೀ ಎಂ.ಶ್ರೀನಿವಾಸ್ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಶಿವಣ್ಣ ಜಿಲ್ಲಾ ಪಂಚಾಯಿತಿ ಅಧ್ಯಕ್ಷರು ಉದ್ಘಾಟಿಸಿದ ಈ ಕಾರ್ಯಕ್ರಮದಲ್ಲಿ ಜಿಲ್ಲೆಯ ಐವತ್ತಕ್ಕೂ ಹೆಚ್ಚು ಮಂದಿ ಕಲಾವಿದರು ಹಾಗೂ ವಿದ್ವಾಂಸರು ಮುಖಾಮುಖಿಯಾಗಿ ಸಂವಾದ ನಡೆಸಿದರು.
ಬೆಂಗಳೂರಿನ `ಲೋಕ’ ಸಂಸ್ಕೃತಿಯ ಒಕ್ಕೂಟದ ಸಹಯೋಗದಲ್ಲಿ ೨೦೧೧ ರ ನವೆಂಬರ್ ೬ ಮತ್ತು ೭ ರಂದು ಪಾಂಡವಪುರದ ಶ್ರೀ ಶಂಭುಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಆವರಣದಲ್ಲಿ `ಸಂಸ್ಕೃತಿ ಚಿಂತನಾ ಶಿಬಿರ’ವನ್ನು ನಡೆಸಲಾಯಿತು. ಮೈಸೂರು ವಿ.ವಿ. ಕುಲಪತಿ ಡಾ.ಕೆ.ಎಸ್.ರಂಗಪ್ಪ ಉದ್ಘಾಟಿಸಿದರು. ಕೆ.ಎಸ್.ಪುಟ್ಟಣ್ಣಯ್ಯ ಅಧ್ಯಕ್ಷತೆವಹಿಸಿದರು. ಶಿಬಿರದಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಆಯ್ದ ಯುವ ಶಿಬಿರಾರ್ಥಿಗಳು ಭಾಗವಹಿಸಿದ್ದರು. ನಾಡಿನ ಹಿರಿಯ ಸಂಸ್ಕೃತಿಯ ಚಿಂತಕರು ಶಿಬಿರಾರ್ಥಿಗಳೊಡನೆ ಸಂವಾದ ನಡೆಸಿದರು.
೨೦೧೧ ರ ನವೆಂಬರ್ ೧೪ ರಂದು ಪ್ರತಿಭಾಂಜಲಿ ಸುಗಮಸಂಗೀತ ಅಕಾಡೆಮಿ ಮತ್ತು ಎಸ್.ಡಿ.ಜಯರಾಮ್ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಸಹಯೋಗದಲ್ಲಿ ಕನ್ನಡ ರಾಜ್ಯೋತ್ಸವ ಹಾಗೂ ಮಕ್ಕಳ ಗೀತೋತ್ಸವ ಕಾರ್ಯಕ್ರಮವನ್ನು ನಡೆಸಲಾಯಿತು. ಶಾಸಕ ಸಿ.ಎಸ್.ಪುಟ್ಟರಾಜು ಉದ್ಘಾಟಿಸಿದರು; ಡಾ.ಟಿ.ಎಸ್.ಸತ್ಯನಾರಾಯಣರಾವ್ ಅಧ್ಯಕ್ಷತೆವಹಿಸಿದ್ದರು. ನಗರದ ಹನ್ನೇರಡು ವಿದ್ಯಾಸಂಸ್ಥೆಗಳ ಮಕ್ಕಳು ಗೀತೋತ್ಸವದಲ್ಲಿ ಪಾಲ್ಗೊಂಡಿದ್ದರು. ಎಚ್.ಡಿ.ಚೌಡಯ್ಯ, ಡಾ.ಎಚ್.ಎಸ್.ವೆಂಕಟೇಶಮೂರ್ತಿ, ಬಿ.ಆರ್.ಲಕ್ಷ್ಮಣರಾವ್, ಎಚ್,ದುಂಡಿರಾಜ್ ವಿಶೇಷ ಆಹ್ವಾನಿತರಾಗಿ ಆಗಮಿಸಿದ್ದರು.