ಎಂ.ಎಲ್. ಶ್ರೀಕಂಠೇಶಗೌಡರು ಹೊಸಗನ್ನಡ ಸಾಹಿತ್ಯದ ಅರುಣೋದಯದ ಕಾಲದಲ್ಲಿ ವಿಶಿಷ್ಟ ಕೃತಿಗಳನ್ನು ನೀಡಿದ್ದಾರೆ. ನ್ಯಾಯಾಧೀಶರಾಗಿಯೂ ಪ್ರಸಿದ್ಧಿ ಪಡೆದಿದ್ದವರು. ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ದೇಶಹಳ್ಳಿಯವರಾದ ಇವರ ಹೆಸರಿನಲ್ಲಿ ಕರ್ನಾಟಕ ಸಂಘವು ಮದ್ದೂರಿನ ಎಂ.ಎಲ್.ಶ್ರೀಕಂಠೇಶಗೌಡ ಸಂಸ್ಮರಣ ಸಮಿತಿಯ ಒಡಗೂಡಿ ಐದು ಸಾವಿರ ರೂ.ಗಳ ಪ್ರಶಸ್ತಿಯೊಂದನ್ನು ಸ್ಥಾಪಿಸಿದೆ. ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ತಮ್ಮ ಕೃತಿಗಳ ಮೂಲಕ ಗಣನೀಯ ಸೇವೆ ಸಲ್ಲಿಸಿದ ಲೇಖಕರೊಬ್ಬರಿಗೆ ಪ್ರತಿವರ್ಷ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ.