ಕರ್ನಾಟಕ ಸಂಘದ ನಿತ್ಯ ಅನ್ನದಾಸೋಹಕ್ಕೆ ಶ್ರೀ ಬಿ ರಾಮಕೃಷ್ಣ ಅವರು ಮೂರು ಲಕ್ಷ ರೂಗಳ ಚೆಕ್ಕನ್ನು ನೀಡುತ್ತಿರುವ ಸಂದರ್ಭ
2010ರಲ್ಲಿ ಕರ್ನಾಟಕ ಸಂಘದಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಸಹಯೋಗದಲ್ಲಿ ಪಿಎಚ್.ಡಿ ಮತ್ತು ಎಂ.ಫಿಲ್ ಕೋರ್ಸ್‍ಗಳನ್ನು ಪ್ರಾರಂಭಿಸಲಾಯಿತು. ಆ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಪಾಠಪ್ರವಚನ ಬೋಧಿಸಲು ಮತ್ತು ಮಾರ್ಗದರ್ಶನ ಮಾಡಲು ಮೈಸೂರಿನಿಂದ ಸಂಪನ್ಮೂಲ ವ್ಯಕ್ತಿಗಳು ಬರುತ್ತಿದ್ದರು. ಆ ವೇಳೆಯಲ್ಲಿ ಅವರ ಊಟದ ವ್ಯವಸ್ಥೆಗೆ ಹೋಟೆಲ್‍ನಿಂದ ತರಿಸಲಾಗುತ್ತಿತ್ತು. ಆದರೆ ಅದು ದುಬಾರಿ ಆಗುತ್ತಿತ್ತು. ಆ ಕಾರಣದಿಂದ ಅಡುಗೆ ಸಹಾಯಕನಿಂದ ಅನ್ನ ಮಾಡಿಸಿ ಸಾಂಬಾರನ್ನು ಮೆಸ್‍ನಿಂದ ತರಿಸಲಾಗುತ್ತಿತ್ತು. ಇಂಥ ಸಂದರ್ಭದಲ್ಲಿ ಕರ್ನಾಟಕ ಸಂಘದ ಪ್ರಧಾನ ಪೋಷಕರಾದಂತಹ ಶ್ರೀ ಎಂ.ಶ್ರೀನಿವಾಸ್ ಮತ್ತು ಶ್ರೀ ಬಿ.ರಾಮಕೃಷ್ಣ ಅವರು ಇಲ್ಲಿಗೆ ಒಂದು ದಿನ ಭೇಟಿ ನೀಡಿದಾಗ ಊಟದ ವ್ಯವಸ್ಥೆ ಬಗ್ಗೆ ವಿಚಾರಿಸಿದರು. ಹೀಗೆ ಹೋಟೆಲ್‍ನಿಂದ ತರಿಸುತ್ತಿದ್ದೇವೆ ಎಂದಾಗ ಶ್ರೀ ಬಿ.ರಾಮಕೃಷ್ಣ ಅವರು ಇಲ್ಲಿಯ ನೌಕರವರ್ಗದವರಿಗೆ, ಹೊರಗಡೆಯಿಂದ ಬಂದಂತಹ ಸಂಪನ್ಮೂಲ ವ್ಯಕ್ತಿಗಳಿಗೆ, ಸಾಹಿತಿ, ಕಲಾವಿದರಿಗೆ ಊಟ ಹಾಕಿ ಇದು ಒಳ್ಳೆಯ ಕಲ್ಪನೆ ಎಂದರು.
ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಿ ಅದರ ಖರ್ಚನ್ನು ನಾನು ಭರಿಸುತ್ತೇನೆಂದು ಅಂದಿನಿಂದ ನಿರಂತರವಾಗಿ ಪ್ರಾರಂಭದಲ್ಲಿ ಒಂದು ವರ್ಷಕ್ಕೆ ಎರಡು ಲಕ್ಷ ರೂಗಳನ್ನು ಪ್ರಸ್ತುತ ಮೂರು ಲಕ್ಷ ರೂಗಳನ್ನು ಕರ್ನಾಟಕ ಸಂಘದ ಅನ್ನ ದಾಸೋಹಕ್ಕೆ ನೀಡುವುದರ ಮೂಲಕ ತಮ್ಮ ಉದಾರತ್ವವನ್ನು ಮೆರೆದಿದ್ದಾರೆ. ಅವರೂ ಕೂಡ ಬೆಂಗಳೂರಿನಿಂದ ಇಲ್ಲಿಗೆ ಬರುತ್ತಿದ್ದರು, ಬಂದಾಗ ಅವರೂ ಕೂಡ ಇಲ್ಲಿ ಊಟ ಮಾಡುತ್ತಿದ್ದರು. ಹಾಗೆ ಅನೇಕ ಮಂದಿ ಶಾಸಕರು, ಸಚಿವರು, ವಿದ್ವಾಂಸರು, ಅಧಿಕಾರಿಗಳು, ಸಾಹಿತಿಗಳು ಎಲ್ಲರೂ ಊಟ ಮಾಡಿದ್ದಾರೆ. ಮಧ್ಯಾಹ್ನದ ವೇಳೆ ಯಾರೇ ಕರ್ನಾಟಕ ಸಂಘಕ್ಕೆ ಬಂದರೂ ಊಟ ಹಾಕುವ ವ್ಯವಸ್ಥೆಯಿದೆ. ಇಂಥ ದಾಸೋಹ ವ್ಯವಸ್ಥೆ ಮಾಡಿರುವ ರಾಮಕೃಷ್ಣ ಅವರಿಗೆ ಅದಕ್ಕೆ ಬೆಂಬಲವಾಗಿರುವ ಎಂ.ಶ್ರೀನಿವಾಸ್ ಅವರಿಗೆ ಕರ್ನಾಟಕ ಸಂಘವು ಋಣಿಯಾಗಿದೆ.
ಕರ್ನಾಟಕ ಸಂಘದ ನಿತ್ಯ ಅನ್ನದಾಸೋಹ ಕೊಠಡಿ ಉದ್ಘಾಟನೆಯ ಸಂದರ್ಭ
ಇಲ್ಲಿ ಬಂದು ಊಟ ಮಾಡಿದ ಅನೇಕರು ಸ್ವತಃ ಧನಸಹಾಯವನ್ನು ಮಾಡಿದ್ದಾರೆ. ಹಾಗೇ ವಸ್ತುರೂಪದಲ್ಲಿ ಕೊಡುಗೆ ನೀಡಿದ್ದಾರೆ. ಸಾಹಿತಿ ಪಾಟೀಲ ಪುಟ್ಟಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕರು ಅನೇಕ ಮಂದಿ ರಾಜ್ಯ ಸಭಾ ಸದಸ್ಯರು ರುಚಿ ನೋಡಿದ್ದಾರೆ. ಮುದ್ದೆ, ಉಪ್ಸಾರು ಸೇರಿದಂತೆ ಮಂಡ್ಯ ಜಿಲ್ಲೆಯ ವಿಶೇಷ ಊಟದ ಸವಿಯನ್ನು ನಾಡಿನ ಅನೇಕ ಗಣ್ಯರು ಸವಿದಿದ್ದಾರೆ. ಇದರ ಜೊತೆಗೆ ಕರ್ನಾಟಕ ಸಂಘವು ಜನದನಿ ಸಾಂಸ್ಕೃತಿಕ ಸಂಘಟನೆಯೊಡನೆ ನಿರಂತರವಾಗಿ ರಂಗ ಚಟುವಟಿಕೆಗಳನ್ನು ನಡೆಸುತ್ತಾ ಬಂದಿದೆ. ನಿರಂತರವಾಗಿ ತಿಂಗಳುಗಟ್ಟಲೆ ಒಂದಲ್ಲ ಒಂದು ನಾಟಕಗಳ ಅಭ್ಯಾಸ ಇಲ್ಲಿ ನಡೆಯುತ್ತಿರುತ್ತದೆ. ತರಬೇತಿಗೆ ಬಂದ ವಿದ್ಯಾರ್ಥಿಗಳು, ನಿರ್ದೇಶಕರು, ಪಕ್ಕವಾದ್ಯ ನುಡಿಸುವ ಎಲ್ಲರಿಗೂ ಮಧ್ಯಾಹ್ನದ ಊಟ ನೀಡಲು ಈ ಅನ್ನ ದಾಸೋಹದಿಂದ ಅನುಕೂಲವಾಯಿತು. ಹಾಗೆ ತರಬೇತಿ ಸಂದರ್ಭದಲ್ಲಿ ಅನೇಕರು ಉಳಿದುಕೊಳ್ಳಬೇಕಾದ ಅನಿವಾರ್ಯತೆಯಿತ್ತು. ಆ ಸಂದರ್ಭದಲ್ಲಿ ಅವರಿಗೆ ಬೆಳಿಗ್ಗೆ, ಮಧ್ಯಾಹ್ನ, ರಾತ್ರಿ ಊಟ ಈ ಅನ್ನದಾಸೋಹದಿಂದ ನೀಡಲಾಗುತ್ತಿತ್ತು. ಪ್ರತಿ ನಿತ್ಯ ಇಪ್ಪತ್ತೈದರಿಂದ ಮೂವತ್ತು ಮಂದಿ ತರಬೇತಿಗಳು ನಡೆಯುವಾಗ ಐವತ್ತರಿಂದ ನೂರಕ್ಕೂ ಹೆಚ್ಚು ಮಂದಿಗೆ ಅನ್ನದಾಸೋಹ ನಡೆಯುತ್ತದೆ. ಅಡುಗೆ ಮಾಡಲು ವೇತನ ನೀಡಿ ಸಿಬ್ಬಂದಿಯನ್ನು ನೇಮಿಸಲಾಗಿದೆ. 300ಕ್ಕೂ ಹೆಚ್ಚು ಪಾತ್ರೆಗಳಿವೆ. ಸಾಂಸ್ಕೃತಿಕ ಸಂಘಟನೆಯೊಂದು ಈ ರೀತಿ ಬಂದ ಅತಿಥಿ ಅಭ್ಯಾಗತರಿಗೆ, ಕಲಾವಿದರಿಗೆ, ಅಲ್ಲಿಯ ನಿತ್ಯ ಒಡನಾಟದ ಸಂಪನ್ಮೂಲ ವ್ಯಕ್ತಿಗಳಿಗೆ, ನೌಕರರಿಗೆ, ಆಡಳಿತ ಮಂಡಳಿಯವರಿಗೆ ನಿತ್ಯ ಅನ್ನದಾಸೋಹ ನೀಡುವ ಕಾರ್ಯವನ್ನು ಮಾಡುತ್ತಿರುವ ಕರ್ನಾಟಕÀದ ಏಕೈಕ ಸಂಘಟನೆಯೆಂದರೆ ಅದು ಮಂಡ್ಯದ ಕರ್ನಾಟಕ ಸಂಘ ಒಂದೇ ಎನಿಸುತ್ತದೆ. ಇದರಿಂದ ಮಂಡ್ಯದ ಜನರು ಹೊರನೋಟಕ್ಕೆ ಕಬ್ಬಿನಂತೆ ಒರಟಾದರೂ ಅಂತರಂಗದಲ್ಲಿ ಬೆಣ್ಣೆಯಂತಹ ಮನಸುಳ್ಳ ಉದಾರಗುಣವಿರುವ ಜನರೆಂಬುದು ಸಾಬೀತಾಗಿದೆ.