fashion img

ಕಾರ್ಯಕ್ರಮಗಳ ವರದಿ

೨೦೧೯ - ೨೦ನೇ ಸಾಲಿನಲ್ಲಿ ನಡೆಸಿರುವ ಕಾರ್ಯಕ್ರಮಗಳ ಸಂಕ್ಷಿಪ್ತ ವರದಿ

ದಿನಾಂಕ : ೦೧-೦೪-೨೦೧೯ ರಿಂದ ೩೧-೦೩-೨೦೨೦ ರವರೆಗೆ ನಡೆಸಿರುವ ಕಾರ್ಯಕ್ರಮಗಳ ಸಂಕ್ಷಿಪ್ತ ವರದಿ.

೧. ಕೆ.ಸಿಂಗಾರಿಗೌಡ ಪುಸ್ತಕ ಪ್ರಶಸ್ತಿ ಮತ್ತು ಡಾ.ರಾಗೌ ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭ : ದಿನಾಂಕ : ೧೪-೦೪-೨೦೧೯ರ ಭಾನುವಾರ ಬೆಳಗಿನ ಅವಧಿ ಕರ್ನಾಟಕ ಸಂಘದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಜಿ ಶಾಸಕರಾದ ಶ್ರೀ ಎಚ್.ಹೊನ್ನಪ್ಪ ಅವರು ವಹಿಸಿದರೆ, ಪ್ರಶಸ್ತಿ ಪ್ರದಾನವನ್ನು ನಿವೃತ್ತ ಕುಲಪತಿಗಳಾದ ಶ್ರೀ ಕೆ.ಎಸ್.ರಂಗಪ್ಪ ಅವರು ನೆರವೇರಿಸಿದರು. ತಲಾ ೧೫ ಸಾವಿರ ರೂ ನಗದು ಹಾಗೂ ಫಲಕವನ್ನು ಒಳಗೊಂಡಿರುವ ಈ ಪ್ರಶಸ್ತಿಗಳನ್ನು ಪ್ರತಿವರ್ಷದಂತೆ ಈ ವರ್ಷವೂ ನಾಡಿನ ಇಬ್ಬರು ಸಾಧಕರಿಗೆ ನೀಡಲಾಯಿತು. ಕೆ. ಸಿಂಗಾರಿಗೌಡ ಪುಸ್ತಕ ಪ್ರಶಸ್ತಿಯನ್ನು ಖ್ಯಾತ ಸಾಹಿತಿಗಳಾದ ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ ಅವರಿಗೂ, ಡಾ.ರಾಗೌ ಸಾಹಿತ್ಯ ಪ್ರಶಸ್ತಿಯನ್ನು ಜಾನಪದ ವಿದ್ವಾಂಸರಾದ ಡಾ.ಪಿ.ಕೆ.ರಾಜಶೇಖರ ಅವರಿಗೂ ಕೊಡಮಾಡಲಾಯಿತು. ಕಾರ್ಯಕ್ರಮದಲ್ಲಿ ಖ್ಯಾತ ಸಾಹಿತಿ ಡಾ.ರಾಗೌ, ಸಂಘದ ಅಧ್ಯಕ್ಷರಾದ ಪ್ರೊ.ಜಯಪ್ರಕಾಶಗೌಡ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

೨. `ಆಲಾಪ’, `ಜಲಗಾರ’ ನಾಟಕಗಳ ಪ್ರದರ್ಶನ : ದಿನಾಂಕ : ೦೬-೦೫-೨೦೧೯ ಮತ್ತು ೦೭-೦೫-೨೦೧೯ರ ಸಂಜೆ ೭ರ ಸಮಯಕ್ಕೆ ಕರ್ನಾಟಕ ಸಂಘದ ಕುವೆಂಪು ಬಯಲುರಂಗ ಮಂದಿರದಲ್ಲಿ ಎರಡು ನಾಟಕಗಳನ್ನು ಅಭಿನಯಿಸಲಾಯಿತು. ಮೊದಲ ದಿನ ಸಂಸ್ಕೃತಿ ಕಾಲೇಜು, ಹುಬ್ಬಳ್ಳಿ- ಪ್ರಸ್ತುತಪಡಿಸಿ ಮಹಾಬೆಳಕು (ರಿ), ಮೈಸೂರು ಇವರ ಸಹಯೋಗದಲ್ಲಿ ಮಹಾದೇವ ಹಡಪದ ಅವರ ವಿನ್ಯಾಸ ಹಾಗೂ ನಿರ್ದೇಶನವಿದ್ದ ಪತ್ರಕರ್ತ ಗಣೇಶ ಅಮೀನಗಡ ಅವರ `ಆಲಾಪ’ ನಾಟಕವನ್ನು ಅಭಿನಯಿಸಿಲಾಯಿತು. ಎರಡನೇ ದಿನ ಜನದನಿ ಪ್ರಸ್ತುತಪಡಿಸಿ ಸದ್ವಿದ್ಯಾ ರಂಗತAಡ ಅಭಿನಯಿಸಿದ ಕುವೆಂಪು ಅವರ `ಜಲಗಾರ’ ನಾಟಕ ಪ್ರದರ್ಶನಗೊಂಡಿತು. ಈ ನಾಟಕಕ್ಕೆ ಪಿ.ಗಂಗಾಧರಸ್ವಾಮಿ ಅವರ ವಿನ್ಯಾಸ ಹಾಗೂ ನಿರ್ದೇಶನವಿತ್ತು. ಈ ಎರಡು ನಾಟಕಗಳು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಂಡ್ಯ - ಇವರ ಸಹಕಾರದಲ್ಲಿ ಅದ್ಭುತ ಪ್ರದರ್ಶನ ಕಂಡು ಜನಮನ ಸೂರೆಗೊಂಡವು.

೩. ಜಾನಪದ : ಅರಿವು ಶಿಬಿರ : ಮಂಡ್ಯದ ಕರ್ನಾಟಕ ಸಂಘದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ದಿನಾಂಕ : ೧೧-೦೫-೨೦೧೯ನೇ ಶನಿವಾರ ಬೆಳಿಗ್ಗೆ ೧೦.೩೦ರ ಸಮಯಕ್ಕೆ ಕರ್ನಾಟಕ ಜಾನಪದ ಪರಿಷತ್ತಿನ ಮಂಡ್ಯ ಜಿಲ್ಲಾ ಘಟಕ ಹಾಗೂ ಕರ್ನಾಟಕ ಸಂಘದ ಸಹಯೋಗದಲ್ಲಿ ಕಾರ್ಯಕ್ರಮ ಜರುಗಿತು. ಕರ್ನಾಟಕ ಜಾನಪದ ಪರಿಷತ್ತಿನ ರಾಜ್ಯಾಧ್ಯಕ್ಷರಾದ ಶ್ರೀ ಟಿ.ತಿಮ್ಮೇಗೌಡ ಅವರು ಕಾರ್ಯಕ್ರಮ ಉದ್ಘಾಟಿಸಿದರು. ಕರ್ನಾಟಕ ಸಂಘದ ಅಧ್ಯಕ್ಷರಾದ ಪ್ರೊ.ಜಯಪ್ರಕಾಶಗೌಡ ಅವರು ಅಧ್ಯಕ್ಷತೆ ವಹಿಸಿದ್ದರು. ಜಾನಪದ ವಿದ್ವಾಂಸರು ಹಾಗೂ ಶಿಬಿರದ ನಿರ್ದೇಶಕರಾದ ಡಾ.ಹಿ.ಶಿ.ರಾಮಚಂದ್ರೇಗೌಡ ಅವರು ವಿಶೇಷ ಆಹ್ವಾನಿತರಾಗಿ ಪಾಲ್ಗೊಂಡಿದ್ದರು. ಜಾನಪದ ಅರಿವು - ವಿಚಾರವಾಗಿ ಎರಡು ಗೋಷ್ಠಿಗಳು ನೆರವೇರಿದವು. ಒಂದನೇ ಗೋಷ್ಠಿಯಲ್ಲಿ ಡಾ.ಬೋರೇಗೌಡ ಚಿಕ್ಕಮರಳಿ ಅವರು `ಜಾನಪದ ಪುನರುಜ್ಜೀವನ’ ಪ್ರೊ.ಜಯಪ್ರಕಾಶಗೌಡ ಅವರು `ಕರ್ನಾಟಕ ಜಾನಪದ ಪರಿಷತ್ತು’ ವಿಷಯಗಳನ್ನು ಕುರಿತಂತೆ ವಿಷಯ ಮಂಡನೆ ಮಾಡಿದರು. ಕರ್ನಾಟಕ ಜಾನಪದ ಪರಿಷತ್ತಿನ ಮಂಡ್ಯ ಜಿಲ್ಲಾ ಘಟಕದ ಅಧ್ಯಕ್ಷರಾದ ಶ್ರೀ ಡಿ.ಪಿ.ಸ್ವಾಮಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

೪. ಕವಿತಾ ಸ್ಮಾರಕ ದತ್ತಿ ಉಪನ್ಯಾಸ - ೧೨ ಹಾಗೂ ಪುಸ್ತಕ ಬಿಡುಗಡೆ ಸಮಾರಂಭ : ಮಂಡ್ಯದ ಕರ್ನಾಟಕ ಸಂಘದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ದಿನಾಂಕ : ೧೮-೦೫-೨೦೧೯ರ ಶನಿವಾರ ಬುದ್ಧಪೂರ್ಣಿಮೆಯಂದು ಸಂಜೆ ೫.೩೦ ಗಂಟೆಗೆ ಕಾರ್ಯಕ್ರಮ ನೆರವೇರಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಡ್ಯದ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಸನ್ಮಾನ್ಯ ಜೆ.ಪಿ.ಆರ್ಚನ ಅವರು ವಹಿಸಿದ್ದರು. ೨೦೧೭ನೇ ಸಾಲಿನ ಉಪನ್ಯಾಸದ ವಿಷಯವನ್ನು ಒಳಗೊಂಡ `ಮಹಿಳೆ ಮತ್ತು ದೇಹರಾಜಕಾರಣ’ ಹಾಗೂ ೨೦೧೯ನೇ ಸಾಲಿನ ಉಪನ್ಯಾಸದ ವಿಚಾರಗಳು ಅಂತರ್ಗತವಾಗಿರುವ `ಸ್ತ್ರೀಮನದ ಬಿಂಬ-ಪ್ರತಿಬಿಂಬ’ ಎಂಬ ಡಾ.ಕೆ.ಆರ್.ಸಂಧ್ಯಾರೆಡ್ಡಿ ಅವರ ಎರಡೂ ಪುಸ್ತಕಗಳನ್ನು ಕರ್ನಾಟಕ ಉಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿಗಳಾದ ಶ್ರೀ ಎಚ್.ಎನ್.ನಾಗಮೋಹನ್‌ದಾಸ್ ಅವರು ಬಿಡುಗಡೆಗೊಳಿಸಿದರು. ಬೆಂಗಳೂರಿನ ಪ್ರಸಿದ್ಧ ಸಾಹಿತಿಗಳಾದ ಡಾ.ಕೆ.ಆರ್.ಸಂಧ್ಯಾರೆಡ್ಡಿ ಅವರು `ಸ್ತ್ರೀಮನದ ಬಿಂಬ - ಪ್ರತಿಬಿಂಬ’ ವಿಷಯವನ್ನು ಕುರಿತಂತೆ ವಿಶೇಷ ಉಪನ್ಯಾಸ ನೀಡಿದರು. ಡ್ಯಾಪೋಡಿಲ್ಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ಸುಜಾತಕೃಷ್ಣ ಅವರು ಮುಖ್ಯಅತಿಥಿಗಳಾಗಿ ಭಾಗವಹಿಸಿದ್ದರು. ಸಹಾಯಕ ಪ್ರಾಧ್ಯಾಪಕರಾದ ಡಾ.ಪಿ.ಭಾರತಿದೇವಿ, ಸಂಘದ ಅಧ್ಯಕ್ಷರಾದ ಪ್ರೊ.ಜಯಪ್ರಕಾಶಗೌಡ ಹಾಗೂ ಮತ್ತಿತರು ಉಪಸ್ಥಿತರಿದ್ದರು.

೫. ಅಭಿನಂದನಾ ಸಮಾರಂಭ : ಮಂಡ್ಯ ಕರ್ನಾಟಕ ಸಂಘದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ದಿನಾಂಕ : ೧೯-೦೫-೨೦೧೯ರ ಭಾನುವಾರ ಸಂಜೆ ೫.೩೦ ಗಂಟೆಗೆ ಕಾರ್ಯಕ್ರಮ ನೆರವೇರಿತು. ನಿವೃತ್ತ ಮುಖ್ಯ ಇಂಜಿನಿಯರ್ ಶ್ರೀ ಎಸ್.ನಾರಾಯಣ್, ಬಿ.ಬಿಎಂ.ಪಿ. ಮುಖ್ಯ ಇಂಜಿನಿಯರ್ ಶ್ರೀ ಎಸ್.ಡಿ.ನಾಗರಾಜು, ಬಿಡಬ್ಲು್ಯಎಸ್‌ಎಸ್‌ಬಿ ಪ್ರಧಾನ ಇಂಜಿನಿಯರ್ ಶ್ರೀ ಎಸ್.ವಿ.ರಮೇಶ್, ನಿವೃತ್ತ ಕಾರ್ಯಪಾಲಕ ಇಂಜಿನಿಯರ್ ಶ್ರೀ ಕೆ.ಎಸ್.ಚಂದ್ರಶೇಖರ್ ಹಾಗೂ ಭಾರತೀಯ ಜೀವವಿಮಾ ನಿಗಮದ ಅಭಿವೃದ್ಧಿ ಅಧಿಕಾರಿ ಶ್ರೀ ಎನ್.ಎಲ್.ಶೇಖರ್ ಅವರನ್ನು ಅವರ ಸಮಾಜಮುಖಿ ಕಾರ್ಯಚಟುವಟಿಗಳನ್ನು ಪ್ರೋತ್ಸಾಹಿಸಿ ಒಂದೇ ವೇದಿಕೆಯಲ್ಲಿ ಅಭಿನಂದಿಸಲಾಯಿತು. ಮೈಸೂರಿನ ಲೋಕೋಪಯೋಗಿ ಇಲಾಖೆಯ ಸೂಪರಿಂಟೆಂಡೆಂಟ್ ಇಂಜಿನಿಯರ್ ಶ್ರೀ ಕೆ.ಬಿ.ಪ್ರಕಾಶ್ ಅವರು ಸನ್ಮಾನವನ್ನು ನೆರವೇರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾನ್ಯ ಶಾಸಕರಾದ ಶ್ರೀ ಎಂ.ಶ್ರೀನಿವಾಸ್‌ಅವರು ವಹಿಸಿದ್ದರು. ಸಂಘದ ಅಧ್ಯಕ್ಷರಾದ ಪ್ರೊ.ಜಯಪ್ರಕಾಶಗೌಡ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

೬. ಮೂಡಲಪಾಯ ಯಕ್ಷಗಾನ ಕಮ್ಮಟ : ಕರ್ನಾಟಕ ಸಂಘ, ಮಂಡ್ಯ - ಕರ್ನಾಟಕ ಜಾನಪದ ಪರಿಷತ್ತು, ಬೆಂಗಳೂರು-ಸಮಾಜ ಮುಖಿ ಗೆಳೆಯರ ಬಳಗ, ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಮೂರು ದಿನಗಳ ಮೂಡಲಪಾಯ ಯಕ್ಷಗಾನ ಕಮ್ಮಟ ದಿನಾಂಕ : ೨೪-೦೫-೨೦೧೯ ರಿಂದ ೨೬-೦೫-೨೦೧೯ರವರೆಗೆ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಜರುಗಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಜಾನಪದ ವಿದ್ವಾಂಸರಾದ ಡಾ.ಹಿ.ಶಿ.ರಾಮಚಂದ್ರೇಗೌಡ ಅವರು ನೆರವೇರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಟಿ.ತಿಮ್ಮೇಗೌಡ ಅವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮಂಡ್ಯ ಜಿಲ್ಲೆ ಯುವಜನ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ.ಬಿ.ವಿ.ನಂದೀಶ್ ಅವರು ಭಾಗವಹಿಸಿದ್ದರು. ಲೇಖಕರು ಹಾಗೂ ಕಲಾ ಪೋಷಕರೂ ಆದ ಶ್ರೀ ಜಯರಾಮ್‌ರಾಯಪುರ ಅವರು ಸಮಾರೋಪಭಾಷಣ ನೆರವೇರಿಸಿದರು. ಸಾಹಿತಿಗಳಾದ ಡಾ.ರಾಜೇಗೌಡ ಹೊಸಹಳ್ಳಿ ಅವರು ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕರ್ನಾಟಕ ಜಾನಪದ ಪರಿಷತ್ತಿನ ಮಂಡ್ಯ ಜಿಲ್ಲಾ ಘಟಕದ ಅಧ್ಯಕ್ಷರಾದ ಶ್ರೀ ಡಿ.ಪಿ.ಸ್ವಾಮಿ ಅವರು ಹಾಜರಿದ್ದರು. ಶ್ರೀ ಪ್ರಮೋದ್‌ಶಿಗ್ಗಾಂವ್, ಶ್ರೀ ಕುರ್ವಬಸವರಾಜು, ಶ್ರೀ ಭರ‍್ನಳ್ಳಿ ಶಿವರಾಜ್, ಪ್ರೊ.ಜಯಪ್ರಕಾಶಗೌಡ, ಶ್ರೀ ಕೆ.ಎಂ.ಕೃಷ್ಣೇಗೌಡ ಕೀಲಾರ ಮತ್ತಿತರರು ಉಪಸ್ಥಿತರಿದ್ದರು. ಜಿಲ್ಲಾ ಯುವಜನ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಸಹಕಾರದೊಂದಿಗೆ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.

೭. ಕರ್ನಾಟಕ ಶಾಸ್ತ್ರೀಯ ಹಾಗೂ ಭಕ್ತಿ ಸಂಗೀತ ಕಾರ್ಯಕ್ರಮ : ದಿನಾಂಕ : ೦೪-೦೬-೨೦೧೯ರ ಮಂಗಳವಾರ ಸಂಜೆ ೬-೩೦ ಗಂಟೆಗೆ ಕರ್ನಾಟಕ ಸಂಘದ ಕುವೆಂಪು ಬಯಲು ರಂಗಮಂದಿರದಲ್ಲಿ ಶ್ರೀ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥಸ್ವಾಮೀಜಿ ಅವರ ದಿವ್ಯಸಾನಿಧ್ಯ, ಶ್ರೀ ಶ್ರೀ ಪುರುಷೋತ್ತಮಾನಂದಸ್ವಾಮೀಜಿ ವಿಶ್ವಮಾನದ ಕ್ಷೇತ್ರ, ಕೊಮ್ಮೇರಹಳ್ಳಿ, ಶ್ರೀ ಶ್ರೀ ಅನ್ನದಾನೀಶ್ವರನಾಥ ಸ್ವಾಮೀಜಿ, ರಾಮನಗರ ಶಾಖಾಮಠ ಇವರ ದಿವ್ಯ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನೆರವೇರಿತು. ನೆಲಮಂಗಲ ತಾಲ್ಲೂಕು ಆದಿಚುಂಚನಗಿರಿ ಶಾಖಾ ಮಠದ ನಾರಾಯಣಧಾಮದ ಬ್ರಹ್ಮಚಾರಿ ಸಾಯಿಕೀರ್ತಿನಾಥ್‌ಜೀ ಅವರಿಂದ ಕರ್ನಾಟಕ ಶಾಸ್ತ್ರೀಯ ಹಾಗೂ ಭಕ್ತಿ ಸಂಗೀತ ಕಾರ್ಯಕ್ರಮ ಜರುಗಿ ಭಕ್ತಿಸುಧೆ ಹರಿದು ಜನಮನ ತಣಿಸಿತು. ಕಾರ್ಯಕ್ರಮದಲ್ಲಿ ಡಾ.ಎಚ್.ಡಿ.ಚೌಡಯ್ಯ, ಶ್ರೀ ಹೆಚ್.ಹೊನ್ನಪ್ಪ, ಶ್ರೀ ಎಂ.ಎಸ್. ಆತ್ಮಾನಂದ, ಶ್ರೀ ಕೆ.ಟಿ.ಶ್ರೀಕಂಠೇಗೌಡ, ಶ್ರೀ ಜಿ.ಬಿ.ಶಿವಕುಮಾರ್, ಶ್ರೀ ಮಧು ಜಿ.ಮಾದೇಗೌಡ ಶ್ರೀ ಎಂ.ಶ್ರೀನಿವಾಸ್, ಪ್ರೊ.ಜಯಪ್ರಕಾಶಗೌಡ ಅವರನ್ನು ಒಳಗೊಂಡಂತೆ ನಾಡಿನ ಹಲವು ಮಂದಿ ಗಣ್ಯರು ಉಪಸ್ಥಿತರಿದ್ದರು.

೮. ಮೂಡಲಪಾಯ ಯಕ್ಷಗಾನ ಕಮ್ಮಟ : ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಗೊಟಗೋಡಿ, ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು. ಕರ್ನಾಟಕ ಸಂಘ (ರಿ), ಮಂಡ್ಯ ಇವರುಗಳ ಸಂಯುಕ್ತಾಶ್ರಯದಲ್ಲಿ ದಿನಾಂಕ : ೨೧-೦೬-೨೦೧೯ರಿಂದ ೨೪-೦೬-೨೦೧೯ರವರೆಗೆ ಮಂಡ್ಯ ಕರ್ನಾಟಕ ಸಂಘದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ನಾಲ್ಕು ದಿನಗಳ ಕಾಲ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾದ ಪ್ರೊ.ಎಂ.ಎ.ಹೆಗಡೆ ಅವರು ನೆರವೇರಿಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಶ್ರೀಮನುಬಳಿಗಾರ್ ಅವರು ಅಧ್ಯಕ್ಷತೆ ವಹಿಸಿದ್ದರು. ಮುಖ್ಯಅತಿಥಿಗಳಾಗಿ ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯರಾದ ಶ್ರೀ ಪುರುಷೋತ್ತಮಗೌಡ, ಮಂಡ್ಯ ಜಿಲ್ಲಾ ಕಸಾಪ ಅಧ್ಯಕ್ಷರಾದ ಶ್ರೀ ಸಿ.ಕೆ.ರವಿಕುಮಾರ್ ಚಾಮಲಾಪುರ ಅವರು ಪಾಲ್ಗೊಂಡಿದ್ದರು. ನಾಲ್ಕು ದಿವಸಗಳ ಕಾಲ ಯಶಸ್ವಿಯಾಗಿ ನಡೆದ ಮೂಡಲಪಾಯ ಯಕ್ಷಗಾನ ಕಮ್ಮಟದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಖ್ಯಾತ ಜಾನಪದ ವಿದ್ವಾಂಸರಾದ ಡಾ.ರಾಗೌ ವಹಿಸಿದ್ದರು. ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಮಾನ್ಯ ಕುಲಪತಿಗಳಾದ ಪ್ರೊ.ಡಿ.ಬಿ.ನಾಯಕ ಅವರು ಸಮಾರೋಪನ ಭಾಷಣ ನೆರವೇರಿಸಿದರು. ಕರ್ನಾಟಕ ಸಂಘದ ಅಧ್ಯಕ್ಷರಾದ ಪ್ರೊ.ಜಯಪ್ರಕಾಶಗೌಡ, ಕರ್ನಾಟಕ ಯಕ್ಷಗಾನ ಅಕಾಡೆಮಿ ರಿಜಿಸ್ಟ್ರಾರ್ ಶ್ರೀ ಎಸ್.ಎಚ್.ಶಿವರುದ್ರಪ್ಪ, ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಕುಲಸಚಿವರಾದ ಪ್ರೊ. ಚಂದ್ರಶೇಖರ್ ಅವರು ಉಪಸ್ಥಿತರಿದ್ದರು.

೯. ಆಫ್ರಿಕನ್ ಕಥೆಗಳ ಕನ್ನಡ ಅನುವಾದ ಕಾರ್ಯಾಗಾರ : ಕುವೆಂಪು ಭಾಷಾ ಭಾರತಿ ಪ್ರಾಧಿಕಾರ, ಬೆಂಗಳೂರು - ಕರ್ನಾಟಕ ಸಂಘ (ರಿ), ಮಂಡ್ಯ ಇವರ ಸಹಯೋಗದಲ್ಲಿ ದಿನಾಂಕ : ೦೪-೦೭-೨೦೧೯ರಿಂದ ೦೬-೦೭-೨೦೧೯ರವರೆಗೆ ಮೂರು ದಿನಗಳ ಕಾಲ `ಆಫ್ರಿಕನ್ ಕಥೆಗಳ ಕನ್ನಡ ಅನುವಾದ ಕಾರ್ಯಾಗಾರ’ ವು ಕರ್ನಾಟಕ ಸಂಘದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ನೆರವೇರಿತು. ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷರಾದ ಡಾ.ಕೆ.ಮರುಳಸಿದ್ದಪ್ಪ ಅವರು ಕಾರ್ಯಾಗಾರವನ್ನು ಉದ್ಘಾಟಿಸಿದರು. ವಿಶ್ರಾಂತ ಪ್ರಾಧ್ಯಾಪಕರಾದ ಡಾ.ರಾಗೌ ಅವರು ಅಧ್ಯಕ್ಷತೆ ವಹಿಸಿದ್ದರು. ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ರಿಜಿಸ್ಟ್ರಾರ್ ಈಶ್ವರ್ ಕು. ಮಿರ್ಜಿ ಹಾಗೂ ಸದಸ್ಯರು, ಕರ್ನಾಟಕ ಸಂಘದ ಅಧ್ಯಕ್ಷರಾದ ಪ್ರೊ.ಜಯಪ್ರಕಾಶಗೌಡ ಅವರು ಉಪಸ್ಥಿತರಿದ್ದರು. ದಿನಾಂಕ : ೦೬-೦೭-೨೦೧೯ರ ಗುರುವಾರ ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಗಳಿಂದ ಸಮಾರೋಪ ಸಮಾರಂಭ ನೆರವೇರಿತು. ವಿಶ್ರಾಂತ ಪ್ರಾಧ್ಯಾಪಕರುಗಳಾದ ಡಾ.ಎನ್.ಎಸ್.ರಘುನಾಥ್, ಡಾ.ಲಕ್ಷಿ್ಮ ನಾರಾಯಣ ಅರೋರÀ, ಡಾ.ಬೋರೇಗೌಡ ಚಿಕ್ಕಮರಳಿ, ಡಾ.ಸಿ.ನಾಗಣ್ಣ, ಡಾ.ಚಂದ್ರಶೇಖರಯ್ಯ, ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ತಜ್ಞರಾದ ಶ್ರೀ ಕೆ.ಪಿ.ಸುರೇಶ್, ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಸದಸ್ಯರಾದ ಡಾ.ಟಿ.ಎಸ್.ವಿವೇಕಾನಂದ ಅವರು ಸಮಾರೋಪ ನುಡಿಗಳನ್ನು ನುಡಿದರು. ಕರ್ನಾಟಕ ಸಂಘದ ಅಧ್ಯಕ್ಷರಾದ ಪ್ರೊ.ಜಯಪ್ರಕಾಶಗೌಡ ಅವರು ಅಧ್ಯಕ್ಷತೆ ವಹಿಸಿದ್ದರು. ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಸದಸ್ಯರುಗಳಾದ ಡಾ.ಎನ್.ದೇವರಾಜು ಹಾಗೂ ಡಾ.ಎಂ.ಎಸ್.ಶಶಿಕಲಾಗೌಡ ಅವರ ಸಂಚಾಲಕತ್ವದಲ್ಲಿ ಕಾರ್ಯಾಗಾರ ಯಶಸ್ವಿಯಾಗಿ ನೆರವೇರಿತು.

೧೦. ಸಾಣೇಹಳ್ಳಿಯ ಶ್ರೀಮಠದ `ಮತ್ತೆ ಕಲ್ಯಾಣ’ ಕಾರ್ಯಕ್ರಮ : ದಿನಾಂಕ : ೦೭-೦೭-೨೦೧೯ರ ಭಾನುವಾರ ಸಂಜೆ: ೬-೦೦ ಗಂಟೆಗೆ ಮಂಡ್ಯದ ಕರ್ನಾಟಕ ಸಂಘದ ಆವರಣದಲ್ಲಿ ಡಾ.ಮೈಸೂರು ಜಿ.ಗುರುರಾಜು ಮತ್ತು ತಂಡದವರಿಂದ ಮಂಟೇಸ್ವಾಮಿ ಕಾವ್ಯದಲ್ಲಿನ `ಕಲ್ಯಾಣ ಪಟ್ಟಣದ ಸಾಲು’ ಗೀತಗಾಯನ ಕಾರ್ಯಕ್ರಮ ನೆರವೇರಿತು. ಮೈಸೂರಿನ ಆಕಾಶವಾಣಿ ಕಲಾವಿದರಾದ ಡಾ.ಮೈಸೂರು ಉಮೇಶ್‌ಅವರು ಕಾರ್ಯಕ್ರಮವನ್ನು ನಿರೂಪಿಸಿದರು. ಕರ್ನಾಟಕ ಸಂಘದ ಅಧ್ಯಕ್ಷರು ಹಾಗೂ ಸದಸ್ಯರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.

೧೧. `ಕನ್ನಡ ಜಾನಪದ ನಿಘಂಟು : ಪದಸಂಸ್ಕೃತಿ ಕೋಶ;’ ಸಂಪುಟ-೪ ಬಿಡುಗಡೆ : ದಿನಾಂಕ : ೧೫-೦೭-೨೦೧೯ರ ಸೋಮವಾರ ಬೆಳಿಗ್ಗೆ ೧೧.೦೦ ಗಂಟೆಗೆ ಕರ್ನಾಟಕ ಸಂಘದ ಆವರಣದಲ್ಲಿ ಮಾನ್ಯ ಶಾಸಕರಾದ ಶ್ರೀ ಎಂ.ಶ್ರೀನಿವಾಸ್‌ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನೆರವೇರಿತು. ಮಾನ್ಯ ಸಣ್ಣ ನೀರಾವರಿ ಸಚಿವರು ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರು ಆದ ಶ್ರೀ ಸಿ.ಎಸ್.ಪುಟ್ಟರಾಜು ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮಂಡ್ಯದ ಧೀಮಂತ ನಾಯಕರಾದ ಕೆ.ವಿ.ಶಂಕರಗೌಡ ಜನ್ಮೋತ್ಸವ - ೧೦೪ರ ಅಂಗವಾಗಿ ಮಾನ್ಯ ಉನ್ನತ ಶಿಕ್ಷಣ ಸಚಿವರಾದ ಶ್ರೀ ಜಿ.ಟಿ.ದೇವೇಗೌಡ ಅವರು ಕೆ.ವಿ.ಶಂಕರಗೌಡರ ಸಂಸ್ಮರಣೆಯೊಂದಿಗೆ ನಿಘಂಟು ಬಿಡುಗಡೆಗೊಳಿಸಿದರು. ಈ ಕಾರ್ಯಕ್ರಮದಲ್ಲಿ ಮುಖ್ಯಅತಿಥಿಗಳಾಗಿ ಮಾನ್ಯ ವಿಧಾನ ಪರಿಷತ್ ಸದಸ್ಯರುಗಳಾದ ಶ್ರೀ ಮರಿತಿಬ್ಬೇಗೌಡ, ಶ್ರೀ ಕೆ.ಟಿ.ಶ್ರೀಕಂಠೇಗೌಡ ಅವರುಗಳು ಪಾಲ್ಗೊಂಡಿದ್ದರು. ಕನ್ನಡ ಜಾನಪದ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ಡಿ.ಬಿ.ನಾಯಕ, ಕರ್ನಾಟಕ ಸಂಘದ ಮಾನ್ಯ ಅಧ್ಯಕ್ಷರಾದ ಪ್ರೊ.ಜಯಪ್ರಕಾಶಗೌಡ ಹಾಗೂ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಸಚಿವರಾದ ಪ್ರೊ.ಚಂದ್ರಶೇಖರ್ ಅವರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ `ಜೀವಂತ ದಂತಕಥೆ’ ಪುಸ್ತಕ ದಾಸೋಹಿ ಶ್ರೀ ಎಚ್.ಇ.ನಾಗರಾಜು (ಕಾಫಿಡೇ, ಮಂಡ್ಯ) ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.

೧೨. `ಸಿರಿಗೆ ಸೆರೆ’ - ಬೆಂಗಳೂರು ನಿರ್ಮಾತೃ ಕೆಂಪೇಗೌಡರನ್ನು ಕುರಿತಾದ ನಾಟಕ ಪ್ರದರ್ಶನ : ದಿನಾಂಕ : ೨೦,೨೧ ಜುಲೈ ೨೦೧೯ರ ಎರಡು ದಿನಗಳ ಸಂಜೆ ೭ ರ ಸಮಯಕ್ಕೆ ಮಂಡ್ಯದ ಸ್ವಾಮಿ ವಿವೇಕಾನಂದ ರಂಗಮಂದಿರದಲ್ಲಿ `ಸಿರಿಗೆ ಸೆರೆ’ ನಾಟಕವನ್ನು ಮಂಡ್ಯ ಕರ್ನಾಟಕ ಸಂಘದ ತಂಡ ಅಭಿನಯಿಸಿತು. ಜಯರಾಮ್ ರಾಯ್‌ಪುರ ಅವರ ರಚನೆ, ಉಮೇಶ್‌ಪಾಟೀಲ, ಧಾರವಾಡ ಅವರ ನಿರ್ದೇಶನ ಹಾಗೂ ವಿನ್ಯಾಸ, ತಬಲಕೃಷ್ಣಮೂರ್ತಿ, ಹುರುಗಲವಾಡಿ ರಾಮಯ್ಯ ಹಾಗೂ ನಿಶ್ಚಯ್ ಅವರ ಸಂಗೀತ, ಮಹೇಶ್ ಹೆಬ್ಬಾಳ ಅವರ ವಸ್ತ್ರವಿನ್ಯಾಸ, ಮಂಜುನಾಥ ಶಿಂಧೆ ಅವರ ರಂಗಸಜ್ಜಿಕೆ ಇದ್ದ ಈ ನಾಟಕಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಂಡ್ಯ - ಇವರ ಸಹಕಾರವಿತ್ತು

೧೩. ಮುಖ್ಯ ನ್ಯಾಯಮೂರ್ತಿ ಎಚ್.ಹೊಂಬೇಗೌಡ ೫೦ನೇ ವರ್ಷದ ಸಂಸ್ಮರಣೆ : ಮಂಡ್ಯದ ಕರ್ನಾಟಕ ಸಂಘದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ದಿನಾಂಕ : ೦೧-೦೮-೨೦೧೯ರ ಗುರುವಾರ ಸಂಜೆ : ೬.೩೦ರ ಸಮಯಕ್ಕೆ ಮಾನ್ಯ ಶಾಸಕರಾದ ಶ್ರೀ ಎಂ.ಶ್ರೀನಿವಾಸ್ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನೆರವೇರಿತು. ಸಾಹಿತಿಗಳು ಹಾಗೂ ನಿವೃತ್ತ ಪ್ರಾಧ್ಯಾಪಕರು ಆದ ಡಾ.ಎಚ್.ಎಸ್.ಮುದ್ದೇಗೌಡ ಅವರು ಸಂಸ್ಮರಣಾ ಭಾಷಣ ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಮಂಡ್ಯ ವಕೀಲರ ಸಂಘದ ಅಧ್ಯಕ್ಷರಾದ ಶ್ರೀ ಸಿ.ಎಲ್.ಶಿವಕುಮಾರ್ ಅವರು ಭಾಗವಹಿಸಿದ್ದರು.

೧೪. ಜನಪದ ಕಲಾಪ್ರದರ್ಶನ ಹಾಗೂ ಕರ್ನಾಟಕ ಸಂಘದ ಮಾಜಿ ಅಧ್ಯಕ್ಷ ಕೆ.ಟಿ.ಶಿವಲಿಂಗಯ್ಯ ಅವರ ಸಂಸ್ಮರಣೆ : ಮಂಡ್ಯದ ಕರ್ನಾಟಕ ಸಂಘ ಅರ್ಪಿಸಿ ಸದ್ವಿದ್ಯಾ ರಂಗತಂಡ ಪ್ರಸ್ತುತ ಪಡಿಸಿದ ಈ ಕಾರ್ಯಕ್ರಮ ದಿನಾಂಕ : ೧೪-೦೮-೨೦೧೯ರ ಬುಧವಾರ ಸಂಜೆ : ೪.೩೦ ಗಂಟೆಗೆ ಮಂಡ್ಯದ ಕರ್ನಾಟಕ ಸಂಘದ ಕುವೆಂಪು ಬಯಲು ರಂಗಮಂದಿರದಲ್ಲಿ ಮಾನ್ಯ ಶಾಸಕರಾದ ಶ್ರೀ ಎಂ.ಶ್ರೀನಿವಾಸ್‌ಅವರ ಅಧ್ಯಕ್ಷತೆಯಲ್ಲಿ ನೆರವೇರಿತು. ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಟಿ.ತಿಮ್ಮೇಗೌಡ ಅವರು ಕಲಾಪ್ರದರ್ಶನವನ್ನು ಉದ್ಘಾಟಿಸಿದರು. ವಿಧಾನ ಪರಿಷತ್ತಿನ ಮಾನ್ಯ ಶಾಸಕರಾದ ಶ್ರೀ ಕೆ.ಟಿ.ಶ್ರೀಕಂಠೇಗೌಡ ಅವರು ಕೆ.ಟಿ.ಶಿವಲಿಂಗಯ್ಯ ಅವರ ಸಂಸ್ಮರಣಾ ನುಡಿಗಳನ್ನು ನುಡಿದರು. ಮುಖ್ಯಕಾರ್ಯನಿರ್ವಹಣಾಧಿಕಾರಿಗಳಾದ ಶ್ರೀ ಕೆ.ಯಾಲಕ್ಕಿಗೌಡ, ಮಂಡ್ಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಶ್ರೀ ಆರ್.ರಘುನಂದನ್ ಅವರು ಮುಖ್ಯ ಅತಿಥಿಗಳಾಗಿದ್ದರು. ಕರ್ನಾಟಕ ಸಂಘದ ಅಧ್ಯಕ್ಷರಾದ ಪ್ರೊ.ಜಯಪ್ರಕಾಶಗೌಡ ಅವರ ಉಪಸ್ಥಿತಿಯಲ್ಲಿ ಕರ್ನಾಟಕ ಜಾನಪದ ಪರಿಷತ್ತಿನ ನೆರವಿನೊಂದಿಗೆ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು.

೧೫. ವಿಶ್ವ ಜಾನಪದ ದಿನಾಚರಣೆ ಪ್ರಯುಕ್ತ ಒಂದು ದಿನದ ಜಾನಪದ ಕಲಾ ಪ್ರದರ್ಶನ : ಕರ್ನಾಟಕ ಜಾನಪದ ಪರಿಷತ್ತು, ಬೆಂಗಳೂರು ಮತ್ತು ಮಂಡ್ಯ, ಅಖಿಲ ಕರ್ನಾಟಕ ಜಾನಪದ ಕಲಾವಿದರ ಒಕ್ಕೂಟ, ಬೆಂಗಳೂರು, ಕರ್ನಾಟಕ ಸಂಘ, ಮಂಡ್ಯ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಂಡ್ಯ ಇವರ ಸಂಯುಕ್ತಾಶ್ರಯದಲ್ಲಿ ದಿನಾಂಕ : ೨೪-೦೮-೨೦೧೯ನೇ ಶನಿವಾರ, ಸಂಜೆ: ೬.೩೦ ಗಂಟೆಗೆ ಮಂಡ್ಯದ ಅಂಬೇಡ್ಕರ್ ಭವನದಲ್ಲಿ ಪೂರ್ವ-ಉತ್ತರ ಭಾರತದ ಜನಪದ ಕಲೆಗಳ ಉತ್ಸವವನ್ನು ನಡೆಸಲಾಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾನ್ಯ ಶಾಸಕರಾದ ಶ್ರೀ ಎಂ.ಶ್ರೀನಿವಾಸ್‌ಅವರು ವಹಿಸಿದ್ದರು. ಕಾರ್ಯಕ್ರಮದ ಉದ್ಘಾಟನೆಯನ್ನು ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಟಿ.ತಿಮ್ಮೇಗೌಡ ಅವರು ನೆರವೇರಿಸಿದರು. ಮುಖ್ಯಅತಿಥಿಗಳಾಗಿ ಮಾನ್ಯ ವಿಧಾನ ಪರಿಷತ್ ಸದಸ್ಯರಾದ ಶ್ರೀ ಕೆ.ಟಿ.ಶ್ರೀಕಂಠೇಗೌಡ, ಮಾನ್ಯ ಜಿಲ್ಲಾಧಿಕಾರಿಗಳಾದ ಡಾ.ಎಂ.ವಿ.ವೆಂಕಟೇಶ್, ಮಾನ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಶ್ರಿ ಕೆ.ಪರಶುರಾಮ್, ಕರ್ನಾಟಕ ಸಂಘದ ಅಧ್ಯಕ್ಷರಾದ ಪ್ರೊ.ಜಯಪ್ರಕಾಶಗೌಡ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ.ಬಿ.ವಿ.ನಂದೀಶ್ ಅವರು ಪಾಲ್ಗೊಂಡಿದ್ದರು.

೧೬. `ಸಿರಿಗೆ ಸೆರೆ’ - ಐತಿಹಾಸಿಕ ನಾಟಕ ಪ್ರದರ್ಶನ : ದಿನಾಂಕ : ೧೪-೦೯-೨೦೧೯ರ ಶನಿವಾರ ಸಂಜೆ : ೪.೩೦ ಗಂಟೆಗೆ ಚನ್ನಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಶತಮಾನೋತ್ಸವ ಭವನದಲ್ಲಿ ಚನ್ನಪಟ್ಟಣ ರಂಗಾಸಕ್ತರ ಬಳಗ ಅರ್ಪಿಸಿ ಮಂಡ್ಯದ ಕರ್ನಾಟಕ ಸಂಘ ಅಭಿನಯಿಸಿದ ಬೆಂಗಳೂರು ನಿರ್ಮಾತೃ ಕೆಂಪೇಗೌಡರ ಜೀವನ ಚರಿತ್ರೆ ಆಧಾರಿತ `ಸಿರಿಗೆ ಸೆರೆ’ ಎಂಬ ಐತಿಹಾಸಿಕ ನಾಟಕವನ್ನು ಪ್ರದರ್ಶಿಸಲಾಯಿತು. ಶ್ರೀಜಯರಾಮ್ ರಾಯಪುರ ಅವರ ರಚನೆ, ಶ್ರೀಉಮೇಶ್ ಪಾಟೀಲ-ಬೀದರ್ ಅವರ ನಿರ್ದೇಶನವಿದ್ದ ಈ ನಾಟಕ ಪ್ರದರ್ಶನವನ್ನು ಪ್ರತಿಭಾವಂತ ಬಡ ವಿದ್ಯಾರ್ಥಿಗಳ ಸಹಾಯಾರ್ಥ ಧನ ಸಂಗ್ರಹಕ್ಕಾಗಿ ಆಯೋಜಿಸಲಾಗಿತ್ತು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ರಾಮನಗರ, ಭಾರತ ವಿಕಾಸ ಪರಿಷತ್ತು, ಚನ್ನಪಟ್ಟಣ, ಡಾ.ರಾಜ್ ಕಲಾ ಬಳಗ (ರಿ), ಚನ್ನಪಟ್ಟಣ ಹೀಗೆ ಒಟ್ಟು ಹದಿಮೂರು ಸ್ಥಳೀಯ ಸಂಘಸಂಸ್ಥೆಗಳ ಸಹಕಾರದೊಂದಿಗೆ ನಾಟಕ ಪ್ರದರ್ಶನ ನೆರವೇರಿತು.

೧೭. ಗಾಂಧಿವಾದಿ ಬಿ.ಎಚ್.ಮಂಗೇಗೌಡ ಶಿಕ್ಷಕ ಮತ್ತು ಕೃಷಿಕ ಪ್ರಶಸ್ತಿ ಪ್ರದಾನ ಸಮಾರಂಭ : ದಿನಾಂಕ : ೦೨-೧೦-೨೦೧೯ರ ಬುಧವಾರ ಸಂಜೆ ೫.೩೦ ಗಂಟೆಗೆ ಮಂಡ್ಯ ಕರ್ನಾಟಕ ಸಂಘದ ಆವರಣದಲ್ಲಿ ಮಾನ್ಯ ವಿಧಾನ ಪರಿಷತ್ ಸದಸ್ಯರಾದ ಶ್ರೀ ಮರಿತಿಬ್ಬೇಗೌಡ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನೆರವೇರಿತು. ಮತ್ತೊಬ್ಬ ಮಾನ್ಯ ವಿಧಾನ ಪರಿಷತ್ ಸದಸ್ಯರಾದ ಶ್ರೀ ಬಸವರಾಜ ಹೊರಟ್ಟಿ ಅವರು ಪ್ರಶಸ್ತಿ ಪ್ರದಾನ ಮಾಡಿದರು. ಮಾರಗೌಡನಹಳ್ಳಿ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ಶ್ರೀ ಎ.ಎಸ್.ದೇವರಾಜ್ ಅವರಿಗೆ ಶಿಕ್ಷಕ ಪ್ರಶಸ್ತಿ, ಆಣ್ಣೇದೊಡ್ಡಿಯ ನಿವೃತ್ತ ವಲಯ ಅರಣ್ಯಾಧಿಕಾರಿ ಶ್ರೀ ಎ.ಎಂ.ಮಾಯಿಗಯ್ಯ ಅವರಿಗೆ ಕೃಷಿಕ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಮುಖ್ಯಅತಿಥಿಗಳಾಗಿ ಕನ್ನಡಪರ ಹೋರಾಟಗಾರರಾದ ಶ್ರೀ ಸಿ.ಕೆ.ಮೂರ್ತಿ, ಕರ್ನಾಟಕ ಕೈ ಮತ್ತು ವಾ.ಕ.ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಶ್ರೀ ಎಂ.ತಿಮ್ಮಯ್ಯ ಅವರು ಭಾಗವಹಿಸಿದ್ದರು. ಮಾನ್ಯ ವಿಧಾನ ಪರಿಷತ್ ಸದಸ್ಯರಾದ ಶ್ರೀ ಕೆ.ಟಿ.ಶ್ರೀಕಂಠೇಗೌಡ, ಬೆಕ್ಕಳಲೆ ಗ್ರಾಮ ವಿದ್ಯಾಭಿವೃದ್ಧಿ ಟ್ರಸ್ಟ್ ಅಧ್ಯಕ್ಷರಾದ ಶ್ರೀ ಬಿ.ಎಂ.ರಘು ಅವರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನೆರವೇರಿತು.

೧೮. ಸಿ.ಗೌರಮ್ಮ ಸಮಾಜಸೇವಾ ಪ್ರಶಸ್ತಿ ಪ್ರದಾನ ಸಮಾರಂಭ : ದಿನಾಂಕ : ೧೨-೧೦-೨೦೧೯ರ ಶನಿವಾರ ಬೆಳಿಗ್ಗೆ ೧೧.೩೦ ಗಂಟೆಗೆ ಮಂಡ್ಯ ಕರ್ನಾಟಕ ಸಂಘದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಕವಯಿತ್ರಿ ಹಾಗೂ ಬೆಂಗಳೂರು ಕೃಷಿ ಮಾರುಕಟ್ಟೆ ಇಲಾಖೆಯ ಉಪನಿರ್ದೇಶಕರಾದ ಶ್ರೀಮತಿ ಕೆ.ಎಂ.ವಸುಂಧರಾ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಜರುಗಿತು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ನಿರ್ದೇಶಕರಾದ ಶ್ರೀ ಕೆ.ವಿ.ದಯಾನಂದ ಅವರು ಪ್ರಶಸ್ತಿ ಪ್ರದಾನ ಮಾಡಿದರು. ಹೊಸ ಹೊಳಲಿನ ಪ್ರತಿಭಾ ಮಹಿಳಾ ವಿವಿದೋದ್ದೇಶ ಸಹಕಾರ ಸಂಘದ ಅಧ್ಯಕ್ಷರಾದ ಶ್ರೀಮತಿ ಕೆ.ಮಂಜುಳಾ ಅವರಿಗೆ ಪ್ರಶಸ್ತಿ ನೀಡಲಾಯಿತು. ಮುಖ್ಯ ಅತಿಥಿಗಳಾಗಿ ನಿವೃತ್ತ ಪ್ರಾಂಶುಪಾಲರಾದ ಪ್ರೊ.ಉಮಾಶಂಕರ್ ಹಾಗೂ ಗೌಡಯ್ಯನದೊಡ್ಡಿಯ ಶ್ರೀ ಚಿಕ್ಕಣ್ಣ ಉ|| ಚಿಕ್ಕಮೊಗಣ್ಣ, ಬೇಲೂರು ವ್ಯವಸಾಯ ಸಹಕಾರ ಸಂಘದ ಅಧ್ಯಕ್ಷರಾದ ಶ್ರೀ ಸಿ.ಕೃಷ್ಣೇಗೌಡ, ನಿವೃತ್ತ ಉಪಪ್ರಾಂಶುಪಾಲರಾದ ಶ್ರೀ ಎಂ.ಪುಟ್ಟಸ್ವಾಮಿ ಅವರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ಜರುಗಿತು.

೧೯. ಮೂಡಲಪಾಯ ಯಕ್ಷಗಾನ : ಅಂದು - ಇಂದು : ರಾಜ್ಯಮಟ್ಟದ ವಿಚಾರ ಸಂಕಿರಣ : ಕರ್ನಾಟಕ ಜಾನಪದ ಪರಿಷತ್ತು, ಬೆಂಗಳೂರು ಮತ್ತು ಕರ್ನಾಟಕ ಸಂಘ, ಮಂಡ್ಯ - ಇವರ ವತಿಯಿಂದ ಒಂದು ದಿನದ ರಾಜ್ಯಮಟ್ಟದ ವಿಚಾರ ಸಂಕಿರಣವನ್ನು ದಿನಾಂಕ : ೧೭-೧೦-೨೦೧೯ ರಂದು ಬೆಂಗಳೂರಿನ ಕನ್ನಡ ಭವನದ ಆವರಣದಲ್ಲಿರುವ ನಯನ ಸಭಾಂಗಣದಲ್ಲಿ ನಡೆಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿವೃತ್ತ ನ್ಯಾಯಾಧೀಶರಾದ ನ್ಯಾಯಮೂರ್ತಿ ಎ.ಜೆ.ಸದಾಶಿವ ವಹಿಸಿದರೆ ಉದ್ಘಾಟನೆಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆಯ ಮಾನ್ಯ ಸಚಿವರಾದ ಶ್ರೀ ಸಿ.ಟಿ.ರವಿ ಅವರು ನೆರವೇರಿಸಿದರು. ಕರ್ನಾಟಕ ಜಾನಪದ ಪರಿಷತ್ತಿನ ಶೈಕ್ಷಣಿಕ ನಿರ್ದೇಶಕರಾದ ಡಾ.ಹಿ.ಶಿ.ರಾಮಚಂದ್ರೇಗೌಡ ಅವರು ಆಶಯನುಡಿಗಳನ್ನು ನುಡಿದರು. ಕಾರ್ಯಕ್ರಮದಲ್ಲಿ ಕನ್ನಡ ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿ ಶ್ರೀ ಆರ್.ಆರ್.ಜನ್ನು, ಕರ್ನಾಟಕ ವಿಧಾನ ಪರಿಷತ್ತಿನ ಮಾಜಿ ಸದಸ್ಯರಾದ ಶ್ರೀ ಅಶ್ವತ್ಥನಾರಾಯಣ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.

೨೦. ನೂರು ಶಾಲೆಗಳಿಗೆ ನೂರು-ನೂರು ಪುಸ್ತಕ ವಿತರಣೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ- ೨೦೧೯ : ದಿನಾಂಕ : ೨೫-೧೦-೨೦೧೯ರ ಶುಕ್ರವಾರ ಮಧ್ಯಾಹ್ನ ೧೨-೦೦ ಗಂಟೆಗೆ ಮಂಡ್ಯ ಕರ್ನಾಟಕ ಸಂಘದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಕಾರ್ಯಕ್ರಮ ಜರುಗಿತು. ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘ(ರಿ), ಅವರ ಈ ಕಾರ್ಯಕ್ರಮ ಕರ್ನಾಟಕ ಸಂಘದ ಸಹಯೋಗ ಹಾಗೂ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯದ ನೆರವಿನೊಂದಿಗೆ ನೆರವೇರಿತು. ಕಾರ್ಯಕ್ರಮದ ಉದ್ಘಾಟನೆ, ಪ್ರಶಸ್ತಿ ಪ್ರದಾನ, ಪುಸ್ತಕ ವಿತರಣೆಯನ್ನು ಮಾನ್ಯ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ, ಕಾರ್ಮಿಕ ಮತ್ತು ಸಕಾಲ ಸಚಿವರು ಆದ ಶ್ರೀ ಬಿ.ಸುರೇಶ್‌ಕುಮಾರ್ ಅವರು ನೆರವೇರಿಸಿದರು. ಹಿರಿಯ ಕವಿಗಳು ಸಂಘದ ಗೌರವಾಧ್ಯಕ್ಷರು ಆದ ಪದ್ಮಶ್ರೀ ಡಾ.ದೊಡ್ಡರಂಗೇಗೌಡ ಅವರು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮಾನ್ಯ ಶಾಸಕರಾದ ಶ್ರೀ ಎಂ.ಶ್ರೀನಿವಾಸ್, ಮಾಜಿ ವಿಧಾನ ಪರಿಷತ್ ಸದಸ್ಯರಾದ ಶ್ರೀ ಎಚ್.ಹೊನ್ನಪ್ಪ, ಕರ್ನಾಟಕ ಸಂಘದ ಅಧ್ಯಕ್ಷರಾದ ಪ್ರೊ.ಜಯಪ್ರಕಾಶಗೌಡ, ಸಾರ್ವಜನಿಕ ಶಿಕ್ಷಣ ಇಲಾಖೆಯ ಮಂಡ್ಯ ಜಿಲ್ಲಾ ಉಪನಿರ್ದೇಶಕರಾದ ಶ್ರೀ ಆರ್.ರಘುನಂದನ್ ಅವರು ಭಾಗವಹಿಸಿದ್ದರು. ಶ್ರೀ ಎಸ್.ಗಂಗಾಧರಯ್ಯ, ಶ್ರೀಫಕೀರ (ಶ್ರೀಧರ ಬನವಾಸಿ), ಶ್ರೀ ಬಿ.ಎನ್.ಶ್ರೀನಿವಾಸ್ - ಭಾರತೀ ಪ್ರಕಾಶನ ಇವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

೨೧. ವೈ.ಕೆ.ರಾಮಯ್ಯ `ಕೃಷಿಕ’, `ಕೃಷಿ ವಿಜ್ಞಾನಿ’, `ಸಹಜ ಬೇಸಾಯ ವಿಶೇಷ ತಜ್ಞ’ ಪ್ರಶಸ್ತಿ ಪ್ರದಾನ ಹಾಗೂ ಸನ್ಮಾನ ಮತ್ತು ನಾಟಕ ಪ್ರದರ್ಶನ ಸಮಾರಂಭ : ದಿನಾಂಕ : ೨೩-೧೧-೨೦೧೯ರ ಶನಿವಾರ ಸಂಜೆ ೪.೦೦ ಗಂಟೆಗೆ ತುಮಕೂರು ಗುಬ್ಬಿವೀರಣ್ಣ ರಂಗಮಂದಿರದಲ್ಲಿ ಶ್ರೀಗುರುಗುಂಡ ಬ್ರಹ್ಮೇಶ್ವರ ಮಠದ ಪರಮಪೂಜ್ಯ ಶ್ರೀ ಶ್ರೀ ನಂಜಾವಧೂತ ಸ್ವಾಮೀಜಿಗಳ ದಿವ್ಯಸಾನಿಧ್ಯದಲ್ಲಿ ಕಾರ್ಯಕ್ರಮ ನೆರವೇರಿತು. ತುಮಕೂರಿನ ಮಾನ್ಯ ಶಾಸಕರಾದ ಶ್ರೀ ಜಿ.ಬಿ. ಜ್ಯೋತಿಗಣೇಶ್ ಅವರು ಅಧ್ಯಕ್ಷತೆ ವಹಿಸಿದ್ದರು. ತುಮಕೂರು ಗ್ರಾಮಾಂತರ ಕ್ಷೇತ್ರದ ಮಾನ್ಯ ಶಾಸಕರಾದ ಶ್ರೀ ಡಿ.ಸಿ.ಗೌರಿಶಂಕರ್ ಅವರು ಕಾರ್ಯಕ್ರಮ ಉದ್ಘಾಟನೆಯನ್ನು ನೆರವೇರಿಸಿದರು. ಮಾನ್ಯ ಕಾನೂನು, ಸಂಸದೀಯ ವ್ಯವಹಾರ ಹಾಗೂ ಸಣ್ಣ ನೀರಾವರಿ ಸಚಿವರಾದ ಶ್ರೀ ಜೆ.ಸಿ.ಮಾಧುಸ್ವಾಮಿ ಅವರು ಪ್ರಶಸ್ತಿ ಪ್ರದಾನ ಮಾಡಿದರು. ಕಾರ್ಯಕ್ರಮದಲ್ಲಿ ಮುಖ್ಯಅತಿಥಿಗಳಾಗಿ ಕರ್ನಾಟಕ ವಿಧಾನ ಪರಿಷತ್ತಿನ ಮಾನ್ಯ ಶಾಸಕರಾದ ಶ್ರೀ ಚೌಡಾರೆಡ್ಡಿ ತೂಪಲ್ಲಿ, ತುಮಕೂರು ಮಾನ್ಯ ಜಿಲ್ಲಾಧಿಕಾರಿಗಳಾದ ಡಾ.ಕೆ.ರಾಕೇಶ್‌ಕುಮಾರ್, ಚೆನ್ನೈ ಆದಾಯ ತೆರಿಗೆ ಇಲಾಖೆ ಆಯುಕ್ತರಾದ ಶ್ರೀ ಜಯರಾಮ್ ರಾಯಪುರ, ತುಮಕೂರು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಶ್ರೀ ಎಚ್.ನಿಂಗಯ್ಯ ಸಹಕಾರ ಸಂಘಗಳ ನಿವೃತ್ತ ಹೆಚ್ಚುವರಿ ನಿರ್ದೇಶಕರಾದ ಶ್ರೀ ಎನ್.ಆರ್.ರಂಗಯ್ಯ, ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀಮತಿ ಬಾ.ಹ.ರಮಾಕುಮಾರಿ, ತುಮಕೂರು ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಶ್ರೀಎನ್.ನರಸಿಂಹರಾಜು ಅವರು ಭಾಗವಹಿಸಿದ್ದರು. ವೈ.ಕೆ.ರಾಮಯ್ಯ `ಕೃಷಿ ವಿಜ್ಞಾನಿ’ ಪ್ರಶಸ್ತಿಯನ್ನು ಬೆಂಗಳೂರು ಕೃಷಿ ವಿವಿ ಕುಲಪತಿಗಳಾದ ಡಾ.ಎಸ್.ರಾಜೇಂದ್ರಪ್ರಸಾದ್ ಅವರಿಗೂ ವೈ.ಕೆ.ರಾಮಯ್ಯ `ಸಹಜ ಬೇಸಾಯ ವಿಶೇಷ ತಜ್ಞ’ ಪ್ರಶಸ್ತಿಯನ್ನು ಸಹಜ ಬೇಸಾಯ ತಜ್ಞರಾದ ಶ್ರೀ ಎಚ್.ಮಂಜುನಾಥ್ ಅವರಿಗೂ, ವೈ.ಕೆ.ರಾಮಯ್ಯ `ಕೃಷಿಕ’ ಪ್ರಶಸ್ತಿಯನ್ನು ಹುಲಿಯಾಪುರದ ರೇಷ್ಮೆ ಕೃಷಿಕರಾದ ಶ್ರೀ ಸೋಮಶೇಖರ್ ಹುಲಿಯಾಪುರ ಅವರಿಗೂ ಪ್ರದಾನ ಮಾಡಲಾಯಿತು. ಇದೇ ಸಂದರ್ಭದಲ್ಲಿ ಹಿರಿಯ ವಕೀಲರಾದ ಶ್ರೀ ಎಚ್.ಎಸ್.ಶೇಷಾದ್ರಿ ಅವರನ್ನು ಸನ್ಮಾನಿಸಲಾಯಿತು.

೨೨. ಬೆಂಗಳೂರು ನಿರ್ಮಾತೃ ಕೆಂಪೇಗೌಡ ಅವರನ್ನು ಕುರಿತ `ಸಿರಿಗೆ ಸೆರೆ’ ನಾಟಕ ಪ್ರದರ್ಶನ : ಜಯರಾಮ್ ರಾಯಪುರ ಅವರ ರಚನೆಯ `ಸಿರಿಗೆ ಸೆರೆ’ ನಾಟಕವನ್ನು ದಿನಾಂಕ : ೨೩-೧೧-೨೦೧೯ರ ಶನಿವಾರ ಸಂಜೆ ೬.೦೦ ಗಂಟೆಗೆ ತುಮಕೂರಿನ ಗುಬ್ಬಿವೀರಣ್ಣ ರಂಗಮಂದಿರದಲ್ಲಿ ಪ್ರದರ್ಶಿಸಲಾಯಿತು. ತುಮಕೂರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನೆರವಿನೊಂದಿಗೆ ಮಂಡ್ಯದ ಕರ್ನಾಟಕ ಸಂಘದ ತಂಡ ಅತ್ಯಮೋಘವಾಗಿ ಅಭಿನಯಿಸಿತು. ಉಮೇಶ್ ಪಾಟೀಲ ಧಾರವಾಡ ಅವರು ನಾಟಕವನ್ನು ನಿರ್ದೇಶಿಸಿದ್ದರು.

೨೩. ಸಿದ್ದಯ್ಯನ ಕೊಪ್ಪಲು ನಂಜಯ್ಯ ಕೃಷಿಕ ಪ್ರಶಸ್ತಿ ಪ್ರದಾನ ಹಾಗೂ ಸಂವಾದ ಸಮಾರಂಭ : ದಿನಾಂಕ : ೧೨-೧೨-೨೦೧೯ರ ಗುರುವಾರ ಮಧ್ಯಾಹ್ನ ೩.೦೦ ಗಂಟೆಗೆ ಮಂಡ್ಯದ ಕರ್ನಾಟಕ ಸಂಘದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಮಾನ್ಯ ಶಾಸಕರಾದ ಶ್ರೀ ಎಂ.ಶ್ರೀನಿವಾಸ್ ಅವರ ಅಧ್ಯಕ್ಷತೆಯಲ್ಲಿ ನೆರವೇರಿತು. ಮಾನ್ಯ ಶಾಸಕರಾದ ಶ್ರೀ ಕೆ.ಟಿ.ಶ್ರೀಕಂಠೇಗೌಡ ಅವರು ಆಶಯ ನುಡಿಗಳನ್ನು ನುಡಿದರು. ಕೆನರಾ ಬ್ಯಾಂಕ್ ನಿವೃತ್ತ ಜನರಲ್ ಮ್ಯಾನೇಜರ್ ಡಾ.ಎಸ್.ಟಿ.ರಾಮಚಂದ್ರ ಅವರು ಪ್ರಶಸ್ತಿ ಪ್ರದಾನ ಮಾಡಿದರು. ಮಂಡ್ಯ ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಡಾ.ಬಿ.ಎಸ್.ಚಂದ್ರಶೇಖರ್ ಅವರು ಮುಖ್ಯ ಅತಿಥಿಗಳಾಗಿದ್ದರು. ನಿವೃತ್ತ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಶ್ರೀ ಎಸ್.ಎನ್.ದೇವರಾಜು ಅವರು ಉಪಸ್ಥಿತರಿದ್ದರು. ತುಮಕೂರು ತಾಲ್ಲೂಕಿನ ದೊಡ್ಡಹೊಸೂರಿನ ಶ್ರೀ ಎಲ್.ರವೀಶ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಹಾಗೂ ಮಂಡ್ಯ ಜಿಲ್ಲೆಯ ಸಾವಯವ ಹಾಗೂ ಪ್ರಗತಿಪರ ಕೃಷಿಕರೊಂದಿಗೆ ಶ್ರೀಯುತರು ಸಂವಾದ ನಡೆಸಿದರು.

೨೪ ಯಕ್ಷಗಾನ ಸಂಭ್ರಮ-೨೦೧೯, ಉಪನ್ಯಾಸ - ಸಂವಾದ - ಪ್ರದರ್ಶನ : ದಿನಾಂಕ : ೧೮-೧೨-೨೦೧೯ನೇ ಬುಧವಾರ ಮಂಡ್ಯ ಕರ್ನಾಟಕ ಸಂಘದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ನೆರವೇರಿತು. ಕರ್ನಾಟಕ ಯಕ್ಷಗಾನ ಅಕಾಡೆಮಿ, ಬೆಂಗಳೂರು- ಕರ್ನಾಟಕ ಸಂಘ(ರಿ), ಮಂಡ್ಯ ಕ್ಷೀರ ಸಾಗರ ಮಿತ್ರಕೂಟ(ರಿ), ಕೀಲಾರ- ಜಾನಪದ ಜನ್ನೆಯರು (ರಿ), ಮಂಡ್ಯ ಇವರ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮ ಜರುಗಿತು. ಈ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದ ಉದ್ಘಾಟನೆಯನ್ನು ಕನ್ನಡ ಮತ್ತು ಸಂಸ್ಕೃತಿ ನಿರ್ದೇಶಕರಾದ ಶ್ರೀ ಎಸ್.ರಂಗಪ್ಪ ಅವರು ನೆರವೇರಿಸಿದರೆ ಅಧ್ಯಕ್ಷತೆಯನ್ನು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾದ ಪ್ರೊ.ಎಂ.ಎ.ಹೆಗಡೆ ಅವರು ವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಮಂಡ್ಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಶ್ರೀಮತಿ ಆರ್.ಅನಿತಾ, ಕರ್ನಾಟಕ ಜಾನಪದ ಪರಿಷತ್ತಿನ ಮಂಡ್ಯ ಜಿಲ್ಲಾ ಘಟಕದ ಅಧ್ಯಕ್ಷರಾದ ಶ್ರೀ ಡಿ.ಪಿ.ಸ್ವಾಮಿ, ಕೀಲಾರ ಕ್ಷೀರಸಾಗರ ಮಿತ್ರಕೂಟದ ಪೋಷಕರುಗಳಾದ ಶ್ರೀ ಡಿ.ಶಿವರಾಜು, ಶ್ರೀ ಕೆ.ಎಸ್.ಚಂದ್ರಶೇಖರ್, ಪ್ರಗತಿಪರ ಯುವ ಲೇಖಕರಾದ ಶ್ರೀ ನಾರಾಯಣ ತಿರುಮಲಾಪುರ ಉಪಸ್ಥಿತರಿದ್ದರು. ಒಂದನೇ ಗೋಷ್ಠಿ ಬೆಳಿಗ್ಗೆ ೧೧ ಗಂಟೆಗೆ ಹಿರಿಯ ಜಾನಪದ ವಿದ್ವಾಂಸರಾದ ಡಾ.ಚಕ್ಕೆರೆ ಶಿವಶಂಕರ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. `ಮೂಡಲಪಾಯ - ಸಂಗೀತ ವೈಶಿಷ್ಟ್ಯಗಳು’ ವಿಷಯ ಕುರಿತು ಮಧುಗಿರಿ ಮೂಡಲಪಾಯ ಯಕ್ಷಗಾನ ಭಾಗವತರಾದ ಶ್ರೀ ಎಚ್.ಡಿ.ನರಸೇಗೌಡ ಅವರು, `ಮೂಡಲಪಾಯ ಯಕ್ಷಗಾನದ ಹೊಸ ಸಾಧ್ಯತೆಗಳು’ ವಿಷಯ ಕುರಿತು ಕನ್ನಡ ಉಪನ್ಯಾಸಕರಾದ ಡಾ.ಎಸ್.ಬಿ.ನಂದೀಶಪ್ಪ ಅವರು ವಿಷಯಮಂಡನೆ ಮಾಡಿದರು. ಕಜಾಪ ಕೃಷ್ಣರಾಜಪೇಟೆ ತಾಲ್ಲೂಕು ಘಟಕ ಅಧ್ಯಕ್ಷರಾದ ಶ್ರೀ ಕೆ.ಎಸ್.ಸೋಮಶೇಖರ್, ಕಜಾಪ ಮಳವಳ್ಳಿ ತಾಲ್ಲೂಕು ಘಟಕ ಅಧ್ಯಕ್ಷರಾದ ಶ್ರೀ ಎಂ.ಬಸಪ್ಪ ನೆಲಮಾಕನಹಳ್ಳಿ ಉಪಸ್ಥಿತರಿದ್ದರು. ಮಧ್ಯಾಹ್ನ ೧.೩೦ ರಿಂದ ೨.೩೦ ಗಂಟೆ ಅವಧಿಯಲ್ಲಿ ತಲಕಾಡಿನ ಹೇಮಾಂಬಿಕ ಯಕ್ಷಗಾನ ಕಲಾ ಸಂಘದಿಂದ `ಮೂಡಲಪಾಯ ತಾಳ-ಮೇಳ’ ಕಾರ್ಯಕ್ರಮ ನೆರವೇರಿತು. ಸಂವಾದ ಗೋಷ್ಠಿ ಹಾಗೂ ಸಮಾರೋಪ ಸಮಾರಂಭ ಸಂಜೆ : ೩.೩೦ಕ್ಕೆ sಕರ್ನಾಟಕ ಸಂಘದ ಅಧ್ಯಕ್ಷರಾದ ಪ್ರೊ.ಜಯಪ್ರಕಾಶಗೌಡ ಅವÀರ ಅಧ್ಯಕ್ಷತೆಯಲ್ಲಿ ನಡೆಯಿತು. ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾದ ಪ್ರೊ.ಎಂ.ಎ.ಹೆಗಡೆ ಅವರು ಉಪಸ್ಥಿತಿರಿದ್ದ ಈ ಕಾರ್ಯಕ್ರಮದಲ್ಲಿ ಜಾನಪದ ವಿದ್ವಾಂಸರಾದ ಡಾ.ಚಿಕ್ಕಣ್ಣ ಎಣ್ಣೆಕಟ್ಟೆ ಅವರು ಆಶಯ ನುಡಿಗಳನ್ನು ನುಡಿದರು. ಜಾನಪದ ವಿದ್ವಾಂಸರಾದ ಡಾ.ಕುರುವ ಬಸವರಾಜು ಸಮನ್ವಯಕಾರರಾಗಿ ಪಾಲ್ಗೊಂಡಿದ್ದರು. ಸಂವಾದದಲ್ಲಿ ಡಾ.ಜಯಲಕ್ಷಿ್ಮ ಸೀತಾಪುರ, ಡಾ.ಮೀರಾಸಾಬಿಹಳ್ಳಿ ಶಿವಣ್ಣ, ಡಾ.ರಂಗಾರೆಡ್ಡಿ ಕೋಡಿರಾಂಪುರ, ಶ್ರೀ ಕೆ.ಬಿ.ಮಲ್ಲಿಕಾರ್ಜುನ ಮಹಾಮಾನೆ, ಬಾ.ಹ.ರಮಾಕುಮಾರಿ, ಡಾ.ವೈ.ಡಿ.ಲೀಲಾ ಮೊದಲಾದವರು ಭಾಗವಹಿಸಿದ್ದರು. ಸಂಜೆ ೫.೩೦ರಿಂದ ರಾತ್ರಿ ೮.೩೦ರವರೆಗೆ ಬಳ್ಳಾರಿ ಜಿಲ್ಲೆಯ ಹರಪ್ಪನಹಳ್ಳಿಯ ಸಮಸ್ತರು (ರಿ), ಸಂಘಟನೆಯ ಕಲಾವಿದರಿಂದ `ಏಕಲವ್ಯ’ ಮೂಡಲಪಾಯ ಯಕ್ಷಗಾನ, ಬಿಳಿದೇಗಲು ಶ್ರೀ ಭೈರವೇಶ್ವರ ಗ್ರಾಮಾಂತರ ಪ್ರೌಢಶಾಲೆ ವಿದ್ಯಾರ್ಥಿಗಳಿಂದ `ಕರಿಭಂಟನ ಕಾಳಗ’ ಯಕ್ಷಗಾನ ಪ್ರಸಂಗದ ಪ್ರದರ್ಶನ ನಡೆಯಿತು.

೨೫. ಅಭಿನಂದನಾ ಸಮಾರಂಭ : ದಿನಾಂಕ : ೨೧-೧೨-೨೦೧೯ರ ಶನಿವಾರ ಸಂಜೆ ೫ ಗಂಟೆಗೆ ಕರ್ನಾಟಕ ಸಂಘದ ಕೆ.ವಿ.ಶಂಕರಗೌಡ ಶತಮಾನೊತ್ಸವ ಭವನದಲ್ಲಿ ಯುವಕವಿ ಶ್ರೀ ನಂದೀಶ್‌ಕುಮಾರ್ ಅವರ `ಕಾಲದ ಹಾದಿ’ ಕವನ ಸಂಕಲನ ಬಿಡುಗಡೆ ಹಾಗೂ ಪ್ರಜಾವಾಣಿ ದೀಪಾವಳಿ ಕಥಾ ಸ್ಪರ್ಧೆಯ ವಿಜೇತ ಕಥೆಗಾರ ಡಾ.ಜಿ.ಆರ್.ಚಂದ್ರಶೇಖರ್ ಅವರ ಅಭಿನಂದನಾ ಸಮಾರಂಭ ನೆರವೇರಿತು. ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ ಡಾ.ನಂದೀಶ್ ಹಂಚೆ ಅವರು ಕವನ ಸಂಕಲನ ಹಾಗೂ ವಿಜೇತ ಕಥೆಯನ್ನು ಕುರಿತು ವಿಸ್ತೃತವಾಗಿ ಮಾತನಾಡಿದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಶ್ರಾಂತ ಪ್ರಾಧ್ಯಾಪಕರಾದ ಡಾ.ಎಸ್.ಬಿ.ಶಂಕರಗೌಡ ಅವರು ವಹಿಸಿದ್ದರು.

೨೬. ಶ್ರೀ ರಾಮಾಯಣ ದರ್ಶನಂ ಗಮಕ ಸಪ್ತಾಹ ಮತ್ತು ಕುವೆಂಪು ಜನ್ಮೋತ್ಸವ ಸಮಾರಂಭ : ದಿನಾಂಕ : ೨೩-೧೨-೨೦೧೯ ರಿಂದ ೨೯-೧೨-೨೦೧೯ ರವರೆಗೆ ಕರ್ನಾಟಕ ಸಂಘದ ಆವರಣದಲ್ಲಿ ಕಾರ್ಯಕ್ರಮ ಜರುಗಿತು. ದಿನಾಂಕ : ೨೩-೧೨-೨೦೧೯ರ ಸೋಮವಾರ ಸಂಜೆ ೬.೦೦ ಗಂಟೆಗೆ ಮಂಡ್ಯ ಜಿಲ್ಲಾ ಪಂಚಾಯಿತಿಯ ಮುಖ್ಯಕಾರ್ಯನಿರ್ವಹಣಾಧಿಕಾರಿ ಶ್ರಿ ಕೆ.ಯಾಲಕ್ಕಿಗೌಡ ಅವರು ಶ್ರೀರಾಮಾಯಣದರ್ಶನಂ ಗಮಕ ಮತ್ತು ವ್ಯಾಖ್ಯಾನ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕರ್ನಾಟಕ ಸಂಘದ ಅಧ್ಯಕ್ಷರಾದ ಪ್ರೊ.ಜಯಪ್ರಕಾಶಗೌಡ ಅವರು ಅಧ್ಯಕ್ಷತೆ ವಹಿಸಿದ್ದರು. ಏಳುದಿನಗಳ ಗಮಕ ಕಾರ್ಯಕ್ರಮವನ್ನು ನಾಡಿನ ಪ್ರಸಿದ್ಧ ಗಮಕಿಗಳಾದ ಮೈಸೂರಿನ ಶ್ರೀ ಕೃ.ರಾಮಚಂದ್ರ ಹಾಗೂ ವ್ಯಾಖ್ಯಾನವನ್ನು ಸಾಹಿತಿ ಹಾಗೂ ಸಹ ಪ್ರಾಧ್ಯಾಪಕ ಡಾ.ಮ.ರಾಮಕೃಷ್ಣ ಅವರು ನಡೆಸಿಕೊಟ್ಟರು. ದಿನಾಂಕ : ೨೯-೧೨-೨೦೧೯ರ ಭಾನುವಾರ ಬೆಳಿಗ್ಗೆ ೧೧.೦೦ ಗಂಟೆಗೆ `ಕುವೆಂಪು ವ್ಯಕ್ತಿ ಮತ್ತು ಸಾಹಿತ್ಯ ದರ್ಶನಂ’ ಎಂಬ ದಿನಪೂರ್ತಿ ಕಾರ್ಯಕ್ರಮವನ್ನು ಸಾಹಿತಿಗಳು ಮತ್ತು ವಿಶ್ರಾಂತ ಪ್ರಾಧ್ಯಾಪಕರು ಆದ ಡಾ.ಬಸವರಾಜ ಸಬರದ ಅವರು ಉದ್ಘಾಟಿಸಿದರು. ಮೇಲ್ಮನೆಯ ಮಾನ್ಯ ಶಾಸಕರಾದ ಶ್ರೀ ಕೆ.ಟಿ.ಶ್ರೀಕಂಠೇಗೌಡ ಅವರು ಅಧ್ಯಕ್ಷತೆ ವಹಿಸಿದ್ದರು. ಮಧ್ಯಾಹ್ನದ ಅವಧಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಂದ ಕುವೆಂಪು ಗೀತೆಗಳ ಗಾಯನ, ಕವಿತೆ ಕಥೆಯ ವಾಚನ, ನಾಟಕದ ತುಣುಕುಗಳ ಅಭಿನಯ, ಕವಿಯ ವಿಚಾರಗಳನ್ನು ಕುರಿತು ಭಾಷಣ - ಸಂವಾದ ಇವೇ ಮೊದಲಾದ ಕಾರ್ಯಕ್ರಮಗಳು ಜರುಗಿದವು. ಕುವೆಂಪು ಜನ್ಮೋತ್ಸವ ಅಭಿನಂದನೆ ಮತ್ತು ಬಹುಮಾನ ವಿತರಣಾ ಕಾರ್ಯಕ್ರಮ ಸಂಜೆ : ೫.೩೦ ಗಂಟೆಗೆ ಶ್ರೀ ಆದಿಚುಂಚನಗಿರಿ ಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ಶ್ರೀಶ್ರೀ ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿ ಅವರ ದಿವ್ಯಸಾನಿಧ್ಯ, ವಿಶ್ವಮಾನವ ಕ್ಷೇತ್ರ, ಕೊಮ್ಮೇರಹಳ್ಳಿಯ ಶ್ರೀ ಶ್ರೀ ಶ್ರೀ ಪುರುಷೋತ್ತಮಾನಂದನಾಥಸ್ವಾಮೀಜಿ ಅವರ ಸಾನಿಧÀ್ಯದಲ್ಲಿ ಕಾರ್ಯಕ್ರಮ ನೆರವೇರಿತು. ಮಾನ್ಯ ಶಾಸಕರಾದ ಶ್ರೀ ಎಂ.ಶ್ರೀನಿವಾಸ್ ಅವರು ಅಧ್ಯಕ್ಷತೆ ವಹಿಸಿದ್ದರು. ಡಾ.ರಾಗೌ ಅವರ `ಕುವೆಂಪು ವಿಚಾರ ಜಾಗೃತಿ’ ಪುಸ್ತಕವನ್ನು ವಿಜಯವಾಣಿ ದಿನಪತ್ರಿಕೆಯ ಸಂಪಾದಕರಾದ ಶ್ರೀ ಕೆ.ಎನ್.ಚನ್ನೇಗೌಡ ಅವರು ಬಿಡುಗಡೆಗೊಳಿಸಿದರು. ಕುವೆಂಪು ರಸಋಷಿ ರಸಪ್ರಶ್ನೆ ಬಹುಮಾನ ವಿತರಣೆಯನ್ನು ಮನ್‌ಮುಲ್ ಅಧ್ಯಕ್ಷರಾದ ಶ್ರೀ ಬಿ.ಆರ್.ರಾಮಚಂದ್ರ ಅವರು ನೆರವೇರಿಸಿದರು. `ಕುವೆಂಪು ವಿಚಾರ ಜಾಗೃತಿ’ ಕೃತಿಯ ಲೇಖಕರಾದ ಡಾ.ರಾಗೌ ಅವರನ್ನು ವಿಧಾನ ಪರಿಷತ್ ಸದಸ್ಯರಾದ ಶ್ರೀ ಅ.ದೇವೇಗೌಡ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಪ್ರೊ.ಟಿ.ಶಿವಣ್ಣ ಅವರು ಅಭಿನಂದಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾಜಿ ವಿಧಾನ ಪರಿಷತ್ ಸದಸ್ಯರಾದ ಶ್ರೀ ಎಚ್.ಹೊನ್ನಪ್ಪ, ಮನ್‌ಮುಲ್ ಉಪಾಧ್ಯಕ್ಷರಾದ ಶ್ರೀ ಎಂ.ಎಸ್.ರಘುನಂದನ್ ಅವರು ಪಾಲ್ಗೊಂಡಿದ್ದರು. ರಾಷ್ಟ್ರಕವಿ ಕುವೆಂಪು ಅವರ ಜನ್ಮೋತ್ಸವದ ಅಂಗವಾಗಿ ದಿನಾಂಕ : ೧೧-೧೧-೨೦೧೯ ರಿಂದ ೦೫-೧೨-೨೦೧೯ ರವರೆಗೆ ವಿಜಯವಾಣಿ ದಿನ ಪತ್ರಿಕೆಯಲ್ಲಿ ಪ್ರತಿದಿನ ೧೦ ಪ್ರಶ್ನೆಗಳನ್ನು ಪ್ರಕಟಿಸಿ ಕುವೆಂಪು ರಸಋಷಿ ರಸಪ್ರಶ್ನೆ ಸ್ಪರ್ಧೆಯನ್ನು ನಡೆಸಲಾಗಿತ್ತು. ಸಾಮಾನ್ಯ ವಿಭಾಗದಲ್ಲಿ ೬೦ ಸ್ಪರ್ಧಿಗಳು, ವಿದ್ಯಾರ್ಥಿ ವಿಭಾಗದಲ್ಲಿ ೪೧ ಸ್ಪರ್ಧಿಗಳು ಭಾಗವಹಿಸಿದ್ದರು. ಎರಡೂ ವಿಭಾಗಗಳಿಗೆ ಪ್ರತ್ಯೇಕವಾಗಿ ಪ್ರಥಮ ಬಹುಮಾನ ೧೫೦೦೦/- ರೂ, ದ್ವಿತೀಯ ಬಹುಮಾನ ೧೦೦೦೦/- ರೂ, ತೃತೀಯ ಬಹುಮಾನ ೮೦೦೦/-ರೂ, ಸಮಾಧಾನಕರ ಬಹುಮಾನ ತಲಾ ೧೦೦೦/- ರೂಗಳಂತೆ ೭ ಜನರಿಗೆ ನೀಡಲಾಯಿತು. ಈ ಎಲ್ಲಾ ಬಹುಮಾನದ ಪೂರ್ಣಮೊತ್ತವನ್ನು ಹಾಲು ಉತ್ಪಾದಕರ ಒಕ್ಕೂಟ, (ಮನ್‌ಮುಲ್) ಮಂಡ್ಯ. ಇವರ ವತಿಯಿಂದ ನೀಡಲಾಗಿತ್ತು. ಪ್ರಶ್ನೆಪತ್ರಿಕೆ ಸಿದ್ಧತೆ ಮತ್ತು ಮೌಲ್ಯಮಾಪನದ ಹೊಣೆಗಾರಿಕೆಯನ್ನು ಡಾ.ಕೆಂಪಮ್ಮ, ಡಾ.ತೇಜಸ್ವಿನಿ ಟಿ.ವಿ ಮತ್ತು ಡಾ.ಮ.ರಾಮಕೃಷ್ಣ ಅವರು ವಹಿಸಿದ್ದರು.

೨೭ ಮೂಡಲಪಾಯ ಯಕ್ಷಗಾನ ಪರಂಪರೆ, ಪುನರ್ ಚೇತನ ವಿಚಾರ ಸಂಕಿರಣ ಮತ್ತು ಭಾಗವತರ ಸಮಾವೇಶ : ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು, ಸಹಯೋಗದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ತುಮಕೂರು, ಕರ್ನಾಟಕ ಸಂಘ, ಮಂಡ್ಯ, ಕರ್ನಾಟಕ ಜಾನಪದ ಪರಿಷತ್ತು, ತುಮಕೂರು ಜಿಲ್ಲಾ ಘಟಕ ಇವರ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮ ಜರುಗಿತು. ತುಮಕೂರಿನ ಕನ್ನಡ ಭವನದಲ್ಲಿ ದಿನಾಂಕ : ೦೯-೦೧-೨೦೨೦ನೇ ಗುರುವಾರ ಬೆಳಿಗ್ಗೆ ೧೦.೩೦ ಗಂಟೆಗೆ ಉದ್ಘಾಟನಾ ಸಮಾರಂಭ ನೆರವೇರಿತು. ಉದ್ಘಾಟನೆಯನ್ನು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರು ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರು ಆದ ಶ್ರೀ ಜೆ.ಸಿ.ಮಾಧುಸ್ವಾಮಿ ಅವರು ನೆರವೇರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಟಿ.ತಿಮ್ಮೇಗೌಡ ಅವರು ವಹಿಸಿದ್ದರು. ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾದ ಪ್ರೊ.ಎಂ.ಎ. ಹೆಗಡೆ ಅವರು ಉಪಸ್ಥಿತರಿದ್ದರು. ಕರ್ನಾಟಕ ಸಂಘದ ಅಧ್ಯಕ್ಷರಾದ ಪ್ರೊ.ಜಯಪ್ರಕಾಶಗೌಡ ಅವರು ಆಶಯನುಡಿಗಳನ್ನು ನುಡಿದರು. ಬೆಂಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀಮತಿ ಬಾ.ಹ. ರಮಾಕುಮಾರಿ ಅವರು ಅತಿಥಿಗಳಾಗಿ ಪಾಲ್ಗೊಂಡಿದ್ದರು. ಮಧ್ಯಾಹ್ನ ೧೨.೩೦ ಗಂಟೆಗೆ ಜಾನಪದ ವಿದ್ವಾಂಸರಾದ ಡಾ.ರಂಗಾರೆಡ್ಡಿ ಕೋಡಿರಾಂಪುರ ಅಧ್ಯಕ್ಷತೆಯಲ್ಲಿ ವಿಚಾರಗೋಷ್ಠಿ ಜರುಗಿತು. `ಮೂಡಲಪಾಯ ಯಕ್ಷಗಾನದ ಪುನರ್ ಚೇತನದ ಸಾಧ್ಯತೆಗಳು’ ವಿಷಯ ಕುರಿತು ಹಿರಿಯ ಜಾನಪದ ವಿದ್ವಾಂಸರಾದ ಡಾ.ಚಂದ್ರುಕಾಳೇನಹಳ್ಳಿ ವಿಷಯ ಮಂಡನೆ ಮಾಡಿದರು. `ಮೂಡಲಪಾಯ ಯಕ್ಷಗಾನದ ಪ್ರಾದೇಶಿಕತೆ ಅನನ್ಯತೆ’ ವಿಷಯ ಕುರಿತು ಮೂಡಲಪಾಯ ಯಕ್ಷಗಾನ ಸಂಶೋಧಕರಾದ ಡಾ.ಚಿಕ್ಕಣ್ಣ ಎಣ್ಣೆಕಟ್ಟೆ ಅವರು ವಿಷಯ ಮಂಡಿಸಿದರು. ಡಾ.ಡಿ.ವಿ.ಪರಮಶಿವಮೂರ್ತಿ, ಪ್ರೊ.ಕೆ.ಹನುಮಂತರಾಯಪ್ಪÀ, ಡಾ.ಜಿ.ವಿ.ಆನಂದಮೂರ್ತಿ, ಡಾ.ಕುರುವ ಬಸವರಾಜು ಮೊದಲಾದವರು ಪ್ರತಿಕ್ರಿಯೆ ನೀಡಿದರು. ಮಧ್ಯಾಹ್ನ ೨.೩೦ ಗಂಟೆಗೆ ಈಡಿಗರ ದಾಸರಹಳ್ಳಿ, ಭಾ.ರಮಾನಂದ ತಂಡದವರಿಂದ ವಿಶೇಷ ಕಾರ್ಯಕ್ರಮವಾಗಿ `ಇಂದ್ರಜಿತ್ ಕಾಳಗ’ ಎಂಬ ಮೂಡಲಪಾಯ ಯಕ್ಷಗಾನ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಸಂಜೆ ೪.೦೦ ಗಂಟೆಗೆ ಜರುಗಿದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾದ ಪ್ರೊ. ಎಂ.ಎ.ಹೆಗಡೆ ಅವರು ವಹಿಸಿದ್ದರು. ಹಾಗೂ ಅರಳಕುಪ್ಪೆ ಕಲ್ಮನೆ ಎ.ಎಸ್.ನಂಜಪ್ಪ ಅವರ `ಮೂಡಲಪಾಯ ಯಕ್ಷಗಾನ ಭಾಗವತಿಕೆಯ ಪ್ರವೇಶಿಕೆ’ ಪುಸ್ತಕವನ್ನು ಬಿಡುಗಡೆಗೊಳಿಸಿದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರಾದ ಶ್ರೀ ಟಿ.ಎಸ್.ನಾಗಾಭರಣ ಅವರು ಸಮಾರೋಪ ಭಾಷಣ ಮಾಡಿದರು. ಇದೇ ಸಂದರ್ಭದಲ್ಲಿ ಭಾಗವತರಾದ ಡಾ.ವೇಮಗಲ್ ನಾರಾಯಣಸ್ವಾಮಿ ಕೇಳಿಕೆ, ಯಕ್ಷಗಾನ ಅಭಿವೃದ್ಧಿ ಪ್ರಾಧಿಕಾರ, ಬೆಂಗಳೂರು - ಶ್ರೀ ಅರಳಕುಪ್ಪೆ ಕಲ್ಮನೆ ಎ.ಎಸ್.ನಂಜಪ್ಪ ತಿಪಟೂರು ತಾಲ್ಲೂಕು - ಶ್ರೀ ಹನುಮಂತರಾಯಪ್ಪ, ಕರೇರಾಮನಹಳ್ಳಿ ಸಿರಾ ತಾಲ್ಲೂಕು-ಶ್ರೀ ಬಸವರಾಜು ಬೆಳಮಾರನಹಳ್ಳಿ, ಕೋಲಾರ ತಾಲ್ಲೂಕು ಈ ಎಲ್ಲಾ ಶ್ರೀಯುತರನ್ನು ಸನ್ಮಾನಿಸಲಾಯಿತು. ಈ ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ಶ್ರೀಮುನಿಯೂರು ಬಸವಾಚಾರ್, ಸಿ.ಲಿಂಗಪ್ಪ ಅರಸನಹಳ್ಳಿ, ಶ್ರೀನಾಥ್ ದೊಡ್ಡಬಳ್ಳಾಪುರ, ಧನಂಜಯ ಹೊನ್ನವಳ್ಳಿ ಇವರೇ ಮೊದಲಾದ ನೂರಾರು ಮಂದಿ ನಾಡಿನೆಲ್ಲೆಡೆಯಿಂದ ಆಗಮಿಸಿ ಪಾಲ್ಗೊಂಡಿದ್ದರು.

೨೮. ಪ್ರೊ.ರಾಗೌ ಕಾವ್ಯ ಅನುಸಂಧಾನ - ಒಂದು ದಿನದ ವಿಚಾರ ಸಂಕಿರಣ : ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಮಾನಸಗಂಗೋತ್ರಿ, ಮೈಸೂರು- ಕರ್ನಾಟಕ ಸಂಘ, ಮಂಡ್ಯ ಇವರ ಸಂಯುಕ್ತ ಆಶ್ರಯದಲ್ಲಿ ದಿನಾಂಕ : ೨೪.೦೧.೨೦೨೦ರಂದು ಬೆಳಿಗ್ಗೆ ೧೦.೩೦ಕ್ಕೆ ಬಿಎಂಶ್ರೀ ಸಭಾಂಗಣದಲ್ಲಿ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಕರ್ನಾಟಕ ಉಚ್ಛನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿಗಳಾದ ಶ್ರೀ ಎ.ಜೆ.ಸದಾಶಿವ ಅವರು ನೆರವೇರಿಸಿದರು. ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕÀರಾದ ಪ್ರೊ. ಎನ್.ಎಂ.ತಳವಾರ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕವಿ ರಾಗೌ ಅವರ ಆಯ್ದ ಕವನಗಳÀ `ಕಾಲಾತೀತ’ ಕೃತಿಯನ್ನು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಡಾ.ಬಿ.ವಿ.ವಸಂತಕುಮಾರ್ ಅವರು ಬಿಡುಗಡೆಗೊಳಿಸಿದರು. ಮುಖ್ಯಅತಿಥಿಗಳಾಗಿ ಮೈಸೂರು ವಿವಿ ಕುಲಸಚಿವರಾದ ಶ್ರೀ ಆರ್.ಶಿವಪ್ಪ ಭಾಗವಹಿಸಿದ್ದರು. ಕರ್ನಾಟಕ ಸಂಘದ ಅಧ್ಯಕ್ಷರಾದ ಪ್ರೊ.ಜಯಪ್ರಕಾಶಗೌಡ ಅವರು ಉಪಸ್ಥಿತರಿದ್ದರು. ಒಂದನೇ ವಿಚಾರಣೆ ಗೋಷ್ಠಿಯಲ್ಲಿ ರಾಗೌ ಕಾವ್ಯ : ಜೀವನ ಮೀಮಾಂಸೆ, ವಿಷಯ ಕುರಿತು ಡಾಪ್ರೀತಿ ಶ್ರೀಮಂಧರ ಕುಮಾರ್, ರಾಗೌಕಾವ್ಯ: ಸಾಮಾಜಿಕ ಕಾಳಜಿ ವಿಷಯ ಕುರಿತಾಗಿ ಡಾ.ಪ್ರಶಾಂತ್ ನಾಯಕ, ರಾಗೌ ಕಾವ್ಯ : ಸ್ತ್ರೀ ಸಂವೇದನೆ ವಿಷಯಕ್ಕೆ ಸಂಬಂಧಿಸಿದಂತೆ ಡಾ.ಭಾರತಿದೇವಿ ಪಿ. ಅವರು ವಿಷಯಮಂಡನೆ ಮಾಡಿದರು. ಮಧ್ಯಾಹ್ನ ೧.೩೦ರಿಂದ ೨.೩೦ರವರೆಗೆ ಊಟಕ್ಕೆ ವಿರಾಮ ನೀಡಲಾಗಿತ್ತು. ಎರಡನೇ ವಿಚಾರ ಗೋಷ್ಠಿಯಲ್ಲಿ ರಾಗೌ ಕಾವ್ಯ: ಕಾವ್ಯಮೀಮಾಂಸೆ - ವಿಷಯ ಕುರಿತಾಗಿ ಡಾ.ಗೀತಾವಸಂತ, ರಾಗೌ ಕಾವ್ಯ: ಆಧ್ಯಾತ್ಮಿಕತೆ ವಿಷಯ ಕುರಿತಾಗಿ ಡಾ.ಗುರುಪಾದ ಮರಿಗುದ್ದಿ, ರಾಗೌಕಾವ್ಯ : ಭಾಷೆ-ಶೈಲಿ, ಪ್ರಯೋಗಶೀÀಲತೆ ವಿಷಯಕುರಿತಾಗಿ ಡಾ.ಎನ್.ಕೆ. ಲೋಲಾಕ್ಷಿ ವಿಷಯ ಮಂಡನೆ ಮಾಡಿದರು. ಸಂಜೆ ೪.೦೦ ಗಂಟೆಗೆ ಸಮಾರೋಪ ಸಮಾರಂಭ ಹಾಗೂ ರಾಗೌ ದಂಪತಿಗಳಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕರ್ನಾಟಕ ಸಂಘದ ಅಧ್ಯಕ್ಷರಾದ ಪ್ರೊ.ಜಯಪ್ರಕಾಶಗೌಡ ಅವರು ಅಧ್ಯಕ್ಷತೆಯನ್ನು ವಹಿಸಿ ಅಧ್ಯಕ್ಷೀಯ ನುಡಿಗಳನ್ನು ಹಾಗೂ ಅಭಿನಂದನಾ ನುಡಿಗಳನ್ನು ನುಡಿದರು. ಚಾಮರಾಜನಗರ ಸಂಸದರಾದ ಶ್ರೀ ವಿ.ಶ್ರೀನಿವಾಸ್ ಪ್ರಸಾದ್ ಅವರು ರಾಗೌ ದಂಪತಿಗಳನ್ನು ಅಭಿನಂದಿಸಿದರು. ಕನ್ನಡ ವಿಶ್ವವಿದ್ಯಾನಿಲಯದ ಮಾನ್ಯಕುಲಪತಿಗಳಾದ ಪ್ರೊ.ಸ.ಚಿ.ರಮೇಶ್ ಅವರು ಸಮಾರೋಪ ಭಾಷಣ ಮಾಡಿದರು. ಕಾರ್ಯಕ್ರಮದಲ್ಲಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕÀರಾದ ಪ್ರೊ.ಎನ್.ಎಂ.ತಳವಾರ ಅವರು ಉಪಸ್ಥಿತರಿದ್ದರು. ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು ಅವರ ಸಹಕಾರದಲ್ಲಿ ಕಾರ್ಯಕ್ರಮ ನೆರವೇರಿತು.

೨೯. `ಎಂ.ಶ್ರೀನಿವಾಸ್ ಗ್ರಂಥಾಲಯ’ ಲೋಕಾರ್ಪಣೆ ಸಮಾರಂಭ: ಶಾಸಕ ಎಂ.ಶ್ರೀನಿವಾಸ್ ಅವರ ಶಾಸಕರ ಅನುದಾನದಡಿಯಲ್ಲಿ ಪುನರ್ ನವೀಕರಿಸಿರುವ ಸಂಘದ ಗ್ರಂಥಾಲಯವನ್ನು `ಎಂ.ಶ್ರೀನಿವಾಸ್ ಗ್ರಂಥಾಲಯ’ ಎಂದು ನಾಮಕರಣಗೊಳಿಸಿ ಎಂ.ಶ್ರೀನಿವಾಸ್ ಅವರ ಜನ್ಮ ದಿನವಾದ ೦೨.೦೨.೨೦೨೦ರ ಭಾನುವಾರ ಬೆಳಿಗ್ಗೆ ೧೧ ಗಂಟೆಗೆ ಲೋಕಾರ್ಪಣೆಗೊಳಿಸಲಾಯಿತು. ಈ ಸಂದರ್ಭದಲ್ಲಿ ಮಾನ್ಯ ಜಿಲ್ಲಾಧಿಕಾರಿಗಳಾದ ಡಾ.ಎಂ.ವಿ.ವೆಂಕಟೇಶ್, ಮಾನ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಶ್ರೀ ಕೆ. ಪರಶುರಾಮ, ಮಾನ್ಯ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ ಕೆ.ಯಾಲಕ್ಕಿಗೌಡ ಅವರು ಹಾಜರಿದ್ದರು

೩೦. ೮ನೇ ವರ್ಷದ ಡಾ.ಹಾಮಾನಾ ಪ್ರಶಸ್ತಿ ಪ್ರದಾನ ಸಮಾರಂಭ - ೨೦೨೦ : ದಿನಾಂಕ : ೦೫-೦೨-೨೦೧೯ರ ಬುಧವಾರ ಬೆಳಿಗ್ಗೆ ೧೧-೦೦ ಗಂಟೆಗೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ತುಂಗಾ ಕಾಲೇಜಿನ ಸಭಾಂಗಣದಲ್ಲಿ ತೀರ್ಥಹಳ್ಳಿ ಶಾಸಕರಾದ ಮಾನ್ಯ ಶ್ರೀ ಅರಗ ಜ್ಞಾನೇಂದ್ರ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಜರುಗಿತು. ೨೦೨೦ನೇ ಸಾಲಿಗೆ ಕೊಡಮಾಡುವ ೫೦,೦೦೦ರೂ ನಗದನ್ನು ಒಳಗೊಂಡಿರುವ ಡಾ.ಹಾಮಾನಾ ಹಿರಿಯ ವಿದ್ವಾಂಸ ಪ್ರಶಸ್ತಿಯನ್ನು ಕನ್ನಡದ ಹಿರಿಯ ಜಾನಪದ ವಿದ್ವಾಂಸರೂ ಹಂಪಿ ಕನ್ನಡ ವಿವಿ ಕುಲಪತಿಗಳೂ ಆದ ಡಾ.ಸ.ಚಿ.ರಮೇಶ ಅವರಿಗೆ, ೨೫,೦೦೦ರೂ ನಗದನ್ನು ಒಳಗೊಂಡಿರುವ ಡಾ.ಹಾಮಾನಾ ಕಿರಿಯ ಜಾನಪದ ವಿದ್ವಾಂಸ ಪ್ರಶಸ್ತಿಯನ್ನು ಕನ್ನಡ ಜಾನಪದ ಹಾಗೂ ವಿಮರ್ಶಾ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿರುವ ಅಧ್ಯಾಪಕ ಡಾ.ಬಿ.ಸಿ.ಕುಶಾಲ ಅವರಿಗೆ ಪ್ರದಾನ ಮಾಡಲಾಯಿತು. ಪ್ರಶಸ್ತಿ ಪ್ರದಾನವನ್ನು ಪ್ರವಾಸೋದ್ಯಮ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮಾನ್ಯಸಚಿವರಾದ ಶ್ರೀ ಸಿ.ಟಿ.ರವಿ ಅವರು ನೆರವೇರಿಸಿದರು. ಮಾಜಿ ಸಚಿವರಾದ ಶ್ರೀ ಕಿಮ್ಮನೆರತ್ನಾಕರ್ ಅವರು ಡಾ.ರಾಗೌ ರಚಿತ `ಹಾಮಾನಾ ಮಾದರಿ’ ಪುಸ್ತಕ ಬಿಡುಗಡೆಗೊಳಿಸಿದರು. ಕಾರ್ಯಕ್ರಮದಲ್ಲಿ ಮುಖ್ಯಅತಿಥಿಗಳಾಗಿ ಮಾಜಿ ಸಚಿವರಾದ ಶ್ರೀ ಡಿ.ಎನ್.ಜೀವರಾಜ, ತುಂಗಾಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಕೌಲಾನಿಧರ್ಮಯ್ಯ, ನಿವೃತ್ತ ಪ್ರಾಚಾರ್ಯರಾದ ಪ್ರೊ. ಬಿ.ಟಿ.ಚಂದ್ರಪ್ಪಗೌಡ, ತುಂಗಾ ಪದವಿ ಕಾಲೇಜಿನ ಪ್ರಾಚಾರ್ಯರಾದ ಶ್ರೀರಾಮಪ್ಪ, ತುಂಗಾ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ಶ್ರೀ ಕೆ.ಎಲ್.ಪ್ರಕಾಶ್ ಪಾಲ್ಗೊಂಡಿದ್ದರು. ಕನ್ನಡ ಪ್ರಾಧ್ಯಾಪಕರಾದ ಡಾ.ಬಿ.ಗಣಪತಿ ಅವರು ಅಭಿನಂದನಾ ನುಡಿಗಳನ್ನು ನುಡಿದರು. ಬೆಂಗಳೂರಿನ ಉದ್ಯಮಿಗಳಾದ ಶ್ರೀ ವಿವೇಕ ಹೆಗಡೆ, ಕರ್ನಾಟಕ ಸಂಘದ ಅಧ್ಯಕ್ಷರಾದ ಪ್ರೊ.ಜಯಪ್ರಕಾಶಗೌಡ ಅವರು ಉಪಸ್ಥಿತರಿದ್ದರು.

೩೧. ರಂಗಗೀತೆಗಳ ಗಾಯನ ರಸಸಂಜೆ : ದಿನಾಂಕ : ೨೯-೦೨-೨೦೨೦ರ ಶನಿವಾರ ಸಂಜೆ ೫.೩೦ಗಂಟೆಗೆ ಕರ್ನಾಟಕ ಸಂಘದ ಆವರಣದಲ್ಲಿ ಕಾರ್ಯಕ್ರಮ ನೆರವೇರಿತು. ಮಾನ್ಯಶಾಸಕರಾದ ಶ್ರೀ ಎಂ.ಶ್ರೀನಿವಾಸ್ ಅವರು ಉದ್ಘಾಟನೆ ನೆರವೇರಿಸಿದರು. ಖ್ಯಾತ ರಂಗಸಂಗೀತ ಹಾಗೂ ಹರ‍್ಮೋನಿಯಂ ವಾದಕರಾದ ವಿದ್ವಾನ್ ವೈ.ಎಂ.ಪುಟ್ಟಣ್ಣಯ್ಯ ಮೈಸೂರು ಅವರನ್ನು ಸನ್ಮಾನಿಸಲಾಯಿತು. ಬಿಬಿಎಂಪಿ ನಿವೃತ್ತ ಮುಖ್ಯ ಇಂಜಿನಿಯರ್ ಶ್ರೀ ಎಸ್.ಡಿ.ನಾಗರಾಜು ಅವರು ಸನ್ಮಾನಿಸಿದರು. ನಿವೃತ್ತ ಪ್ರಾಂಶುಪಾಲರಾದ ಶ್ರೀ ಕೆ.ಟಿ.ಕೆಂಪೇಗೌಡ ಅವರು ಅಭಿನಂದನಾ ನುಡಿಗಳನ್ನು ನುಡಿದರು. ಕರ್ನಾಟಕ ಸಂಘದ ಅಧ್ಯಕ್ಷರಾದ ಪ್ರೊ.ಜಯಪ್ರಕಾಶಗೌಡ ಅವರು ಉಪಸ್ಥಿತರಿದ್ದರು.

೩೨. ಶ್ರೀ ಕೆ.ಟಿ.ಶಿವಲಿಂಗಯ್ಯ ಕಿರುಸಭಾಂಗಣ ಅನಾವರಣ : ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನ ಲೋಕಾರ್ಪಣೆಗೊಂಡ ನೆನಪಿಗಾಗಿ ಶಿಲಾನ್ಯಾಸ ಹಾಗೂ ಕರ್ನಾಟಕ ಸಂಘದ ಮಾಜಿ ಅಧ್ಯಕ್ಷರಾದ ಶ್ರೀ ಕೆ.ಟಿ.ಶಿವಲಿಂಗಯ್ಯ ಅವರ ಹೆಸರಿನಲ್ಲಿ ಶತಮಾನೋತ್ಸವ ಭವನದಲ್ಲಿ ಆಧುನಿಕ ಕಿರುಸಭಾಭವನವನ್ನು ಸಿದ್ಧಪಡಿಸಿದ್ದು ಕೆ.ವಿ.ಶಂಕರಗೌಡರ ಸಂಸ್ಮರಣಾ ದಿನವಾದ ೦೪.೦೩.೨೦೨೦ರ ಬುಧವಾರ ಬೆಳಿಗ್ಗೆ ೧೧.೦೦ ಗಂಟೆಗೆ ಸಂಘದ ಆವರಣದಲ್ಲಿ ಅನಾವರಣ ಕಾರ್ಯಕ್ರಮ ನೆರವೇರಿತು. ಈ ಕಾರ್ಯಕ್ರಮದಲ್ಲಿ ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಶ್ರೀ ಜಫ್ರುಲ್ಲಾಖಾನ್, ಜನತಾದಳದ ನಾಯಕರೂ, ವಾಣಿಜ್ಯೋದ್ಯಮಿಗಳೂ ಆದ ಬೆಂಗಳೂರಿನ ಶ್ರೀ ಟಿ.ಎಸ್.ಚಿಕ್ಕರಾಮಕೃಷ್ಣಪ್ಪ ಹಾಗೂ ಸನ್ಮಾನ್ಯ ಶಾಸಕರಾದ ಶ್ರೀ ಎಂ.ಶ್ರೀನಿವಾಸ್ ಹಾಗೂ ಮಾಜಿ ವಿಧಾನ ಪರಿಷತ್ ಸದಸ್ಯರಾದ ಶ್ರೀ ಎಚ್.ಹೊನ್ನಪ್ಪ ಸಂಘದ ಅಧ್ಯಕ್ಷರಾದ ಪ್ರೊ.ಜಯಪ್ರಕಾಶಗೌಡ ಮತ್ತಿತರರು ಉಪಸ್ಥಿತರಿದ್ದರು

೩೩. ೩ನೇ ವರ್ಷದ ಎಂ.ಶಿವಲಿಂಗಯ್ಯ ಸಮಾಜ ಸೇವಾ ಪ್ರಶಸ್ತಿ ಪ್ರದಾನ ಸಮಾರಂಭ : ದಿನಾಂಕ : ೧೪.೦೩.೨೦೨೦ರ ಶನಿವಾರ ಸಂಜೆ ೬.೦೦ ಗಂಟೆಗೆ ಕರ್ನಾಟಕ ಸಂಘದ ಆವರಣದಲ್ಲಿ ಮಾನ್ಯ ಶಾಸಕರೂ ಕರ್ನಾಟಕ ಸಂಘದ ಪ್ರಧಾನ ಪೋಷಕರೂ ಆದ ಶ್ರೀ ಎಂ.ಶ್ರೀನಿವಾಸ್ ಅವರ ಅಧ್ಯಕ್ಷತೆಯಲ್ಲಿ ನೆರವೇರಿತು. ಶ್ರೀರಂಗಪಟ್ಟಣದ ಜನಪ್ರಿಯ ವೈದ್ಯರೂ, ಗಾಂಧಿವಾದಿಗಳೂ ಆದ ಡಾ.ಬಿ.ಸುಜಯಕುಮಾರ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಮಾಜಿ ಶಾಸಕರಾದ ಶ್ರೀ ಜಿ.ಬಿ.ಶಿವಕುಮಾರ್ ಅವರು ಪ್ರಶಸ್ತಿ ಪ್ರದಾನ ಮಾಡಿದರು. ಕಾರ್ಯಕ್ರಮದಲ್ಲಿ ದತ್ತಿ ದಾನಿಗಳಾದ ಶ್ರೀಮತಿ ಎಂ.ಕೆ.ಲಕ್ಷಿ್ಮ ಅವರು ಉಪಸ್ಥಿತರಿದ್ದರು.